ದೇವಿಯ ಆರಾಧನೆಯ ಉದ್ದೇಶ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಕೆಲವರು ಆಧ್ಯಾತ್ಮಿಕ ಸಾಧನೆಗಾಗಿ, ಮತ್ತೆ ಕೆಲವರು ಲೌಕಿಕ ಯಶಸ್ಸು ಅಥವಾ ಅಧಿಕಾರಕ್ಕಾಗಿ ದೇವಿಯನ್ನು ಸ್ತುತಿಸುತ್ತಾರೆ. ಅಂಥ ಸಕಲ ಕಾಮ್ಯಗಳನ್ನು ಪೂರೈಸುವ ಅದ್ಭುತ ಶಕ್ತಿಯೇ ರಾಜ ಶ್ಯಾಮಲಾ ದೇವಿ. ಈಕೆಯನ್ನು ರಾಜ ಮಾತಂಗಿ ಅಥವಾ ಮಹಾ ಮಂತ್ರಿಣಿ ಎಂದೂ ಕರೆಯಲಾಗುತ್ತದೆ.
ಮೂಲ ಮತ್ತು ಸ್ವರೂಪ:
ರಾಜ ಶ್ಯಾಮಲಾ ದೇವಿಯು ದಶಮಹಾವಿದ್ಯೆಗಳಲ್ಲಿ ಒಂಬತ್ತನೆಯವಳು ಮತ್ತು ಶ್ರೀವಿದ್ಯಾ ಉಪಾಸನೆಯಲ್ಲಿ ಅತ್ಯಂತ ಪ್ರಮುಖ ಸ್ಥಾನ ಹೊಂದಿದ್ದಾಳೆ.
ಪುರಾಣದ ಹಿನ್ನೆಲೆ:
ಬ್ರಹ್ಮಾಂಡ ಪುರಾಣದ ಪ್ರಕಾರ, ಲಲಿತಾ ಪರಮೇಶ್ವರಿಯು ಭಂಡಾಸುರನ ಸಂಹಾರಕ್ಕಾಗಿ ಯುದ್ಧಕ್ಕೆ ಹೊರಟಾಗ ತನ್ನ ಕಬ್ಬಿನ ಬಿಲ್ಲಿನಿಂದ ರಾಜ ಶ್ಯಾಮಲೆಯನ್ನು ಸೃಷ್ಟಿಸಿದಳು. ಈಕೆ ಲಲಿತಾಂಬಿಕೆಯ ಪ್ರಧಾನ ಮಂತ್ರಿ ಮತ್ತು ಸಲಹೆಗಾರ್ತಿಯಾಗಿದ್ದಾಳೆ.
ದೈವಿಕ ರೂಪ:
ದೇವಿಯು ಪಚ್ಚೆ ಹಸಿರು ಅಥವಾ ನೀಲಿ ವರ್ಣದವಳು (ಶ್ಯಾಮಲ ವರ್ಣ). ಮೂರು ಕಣ್ಣುಗಳನ್ನು ಹೊಂದಿರುವ ಈಕೆ, ಕೈಯಲ್ಲಿ ವೀಣೆ, ಕಬ್ಬಿನ ಬಿಲ್ಲು ಮತ್ತು ಹೂವಿನ ಬಾಣಗಳನ್ನು ಹಿಡಿದು, ಗಿಳಿಯೊಂದಿಗೆ ಕಂಗೊಳಿಸುತ್ತಾಳೆ. ಈಕೆಯನ್ನು ‘ವಾಗ್ದೇವಿ’ ಮತ್ತು ‘ವೇದ ಮಾತೆ’ ಎಂದು ಸಹ ಪೂಜಿಸಲಾಗುತ್ತದೆ.

ಆರಾಧನೆಯ ಫಲಗಳು:
ರಾಜ ಶ್ಯಾಮಲಾ ದೇವಿಯ ಅನುಗ್ರಹದಿಂದ ಭಕ್ತರಿಗೆ ಬಹುಮುಖಿ ಪ್ರಯೋಜನಗಳು ಲಭಿಸುತ್ತವೆ:
• ವಾಕ್ ಸಿದ್ಧಿ ಹಾಗೂ ಬುದ್ಧಿವಂತಿಕೆ: ಮಾತು ಪ್ರಭಾವಿಯಾಗಲು, ಪಾಂಡಿತ್ಯ ವೃದ್ಧಿಸಲು ಮತ್ತು ಸಾರ್ವಜನಿಕವಾಗಿ ಗೌರವ ಗಳಿಸಲು ಈಕೆಯ ಕೃಪೆ ಅತ್ಯಗತ್ಯ.
• ಕಲಾ ಪ್ರೌಢಿಮೆ: ಸಂಗೀತ, ನೃತ್ಯ ಮತ್ತು ಲಲಿತಕಲೆಗಳಲ್ಲಿ ಸಿದ್ಧಿ ಪಡೆಯಲು ಕಲಾವಿದರು ಈಕೆಯನ್ನು ಆರಾಧಿಸುತ್ತಾರೆ.
• ವೃತ್ತಿ ಪ್ರಗತಿ: ಉದ್ಯೋಗದಲ್ಲಿ ಬಡ್ತಿ, ವ್ಯಾಪಾರದಲ್ಲಿ ಲಾಭ ಮತ್ತು ಹೊಸ ಅವಕಾಶಗಳ ಪ್ರಾಪ್ತಿಗೆ ಈಕೆಯ ಆರಾಧನೆ ಮಾಡುವುದರಿಂದ ಬದಲಾವಣೆ ತರುತ್ತದೆ.
• ಅಡೆತಡೆಗಳ ನಿವಾರಣೆ: ಸರ್ಕಾರಿ ಕೆಲಸಗಳಲ್ಲಿನ ತೊಡಕುಗಳು, ಲೌಕಿಕ ಅಡೆತಡೆಗಳು ಅಥವಾ ಶತ್ರು ಬಾಧೆಗಳಿಂದ ಈಕೆ ರಕ್ಷಣೆ ನೀಡುತ್ತಾಳೆ.
ರಾಜಕೀಯ ಮಹತ್ವ ಮತ್ತು ಯಶಸ್ಸು:
ರಾಜಕೀಯ ಕ್ಷೇತ್ರದಲ್ಲಿ ಯಶಸ್ಸು ಮತ್ತು ಅಧಿಕಾರವನ್ನು ಪಡೆಯಲು ‘ರಾಜ ಶ್ಯಾಮಲಾ ಯಾಗ’ ಅತ್ಯಂತ ಶಕ್ತಿಶಾಲಿ ಎಂದು ನಂಬಲಾಗಿದೆ. ರಾಜಕಾರಣಕ್ಕೆ ಬೇಕಾದ ಸಮ್ಮೋಹನ ಶಕ್ತಿ, ವಾಗ್ಝರಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಈ ದೇವಿ ಕರುಣಿಸುತ್ತಾಳೆ. ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ಅವರು ಚುನಾವಣಾ ವಿಜಯಕ್ಕಾಗಿ ಬೃಹತ್ ಪ್ರಮಾಣದಲ್ಲಿ ರಾಜ ಶ್ಯಾಮಲಾ ಯಾಗಗಳನ್ನು ಮಾಡಿದ್ದಾರೆ. ಹಾಗೆಯೇ ಆಂಧ್ರದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮತ್ತು ಇತರೆ ಪ್ರಭಾವಿ ನಾಯಕರು ವಿಶಾಖ ಶಾರದಾ ಪೀಠದಲ್ಲಿ ಈ ದೇವಿಯ ವಿಶೇಷ ಪೂಜೆ ಸಲ್ಲಿಸುವುದು ಸಾರ್ವಜನಿಕವಾಗಿಯೇ ಲಭ್ಯವಿರುವ ಮಾಹಿತಿಯಾಗಿದೆ.
ಕುಜ ದೋಷ, ವಿವಾಹ ವಿಳಂಬ, ಭೂಮಿ ವ್ಯಾಜ್ಯಕ್ಕೆ ಪರಿಹಾರ ನೀಡುವ ಅಪರೂಪದ ಅಂಗಾರಕ ದೇವಾಲಯ – ತುಮಕೂರಿನ ಶ್ರೀಕೃಷ್ಣ ನಗರ
ಭಾರತದ ಪ್ರಮುಖ ರಾಜ ಶ್ಯಾಮಲಾ ದೇವಾಲಯಗಳು:
ಭಾರತದಾದ್ಯಂತ ಈ ದೇವಿಯ ಶಕ್ತಿಯನ್ನು ಸ್ತುತಿಸುವ ಹಲವಾರು ಪವಿತ್ರ ಕ್ಷೇತ್ರಗಳಿವೆ.
• ಮಧುರೈ ಮೀನಾಕ್ಷಿ ದೇವಾಲಯ (ತಮಿಳುನಾಡು): ಸಾಕ್ಷಾತ್ ಮೀನಾಕ್ಷಿ ದೇವಿಯೇ ರಾಜ ಶ್ಯಾಮಲೆಯ ಸ್ವರೂಪ. ಕೈಯಲ್ಲಿ ಗಿಳಿಯನ್ನು ಹಿಡಿದಿರುವ ದೇವಿಯ ರೂಪವು ರಾಜ ಮಾತಂಗಿಯ ಸಂಕೇತವಾಗಿದೆ.
• ವಿಶಾಖ ಶಾರದಾ ಪೀಠಂ (ಆಂಧ್ರಪ್ರದೇಶ): ರಾಜಕಾರಣಿಗಳ ಪಾಲಿನ ಅತ್ಯಂತ ಪ್ರಮುಖ ಶಕ್ತಿ ಕೇಂದ್ರವಿದು. ಇಲ್ಲಿ ರಾಜ ಶ್ಯಾಮಲಾ ದೇವಿಗೆ ಅತ್ಯಂತ ಶಕ್ತಿಶಾಲಿ ವಿಗ್ರಹ ಮತ್ತು ಯಂತ್ರಗಳಿವೆ.
• ರಾಜಶ್ಯಾಮಲಾ ಪೀಠಂ, ನಿರ್ಮಲ್ (ತೆಲಂಗಾಣ): ಇಲ್ಲಿ ದೇವಿಯು ಅಪರೂಪದ ಮರಕತ (ಪಚ್ಚೆ) ಶಿಲೆಯ ವಿಗ್ರಹದ ರೂಪದಲ್ಲಿ ನೆಲೆಸಿದ್ದಾಳೆ.
• ಕಾಮಾಖ್ಯ ದೇವಾಲಯ (ಅಸ್ಸಾಂ): ದಶಮಹಾವಿದ್ಯೆಗಳ ಪೀಠವಾಗಿರುವ ಇಲ್ಲಿ ದೇವಿಯನ್ನು ಮಾತಂಗಿಯ ರೂಪದಲ್ಲಿ ತಾಂತ್ರಿಕವಾಗಿ ಆರಾಧಿಸಲಾಗುತ್ತದೆ.
• ಶ್ಯಾಮಲಾ ದೇವಿ ದೇವಾಲಯ, ಶಿಮ್ಲಾ (ಹಿಮಾಚಲ ಪ್ರದೇಶ): ಶಿಮ್ಲಾ ನಗರಕ್ಕೆ ಈ ಹೆಸರು ಬಂದಿದ್ದೇ ಈ ದೇವಿಯಿಂದ. ಇಲ್ಲಿ ದೇವಿಯನ್ನು ಪರ್ವತಗಳ ರಕ್ಷಕಿಯಾಗಿ ಪೂಜಿಸಲಾಗುತ್ತದೆ.
ಡಯಾಬಿಟೀಸ್ ನಿಯಂತ್ರಣಕ್ಕೆ ನಂಬಿಕೆಯ ದೇಗುಲ: ಸಾವಿರ ವರ್ಷಗಳ ಇತಿಹಾಸದ ಕರುಂಬೇಶ್ವರರ್ ದೇವಾಲಯ
ಬೆಂಗಳೂರಿನಲ್ಲಿರುವ ರಾಜ ಶ್ಯಾಮಲಾ ಸನ್ನಿಧಿಗಳು:
ಬೆಂಗಳೂರಿನಲ್ಲೂ ರಾಜ ಶ್ಯಾಮಲಾ ದೇವಿಯ ಆರಾಧನೆಗೆ ಪ್ರಶಸ್ತವಾದ ಸ್ಥಳಗಳಿವೆ.
• ಶ್ರೀ ರಾಜಮಾತಾ ಉಚ್ಚಂಗಿ ದೇವಿ ಮತ್ತು ಮಾತಂಗಿ ದೇವಿ ದೇವಾಲಯ (ದಾಸರಹಳ್ಳಿ): ಇಲ್ಲಿ ದೇವಿಯನ್ನು ಮಾತಂಗಿ ರೂಪದಲ್ಲಿ ಪೂಜಿಸಲಾಗುತ್ತದೆ, ಇದು ಭಕ್ತರ ನಂಬಿಕೆಯ ಶಕ್ತಿಶಾಲಿ ಕೇಂದ್ರವಾಗಿದೆ.
• ಶ್ರೀ ರಾಜರಾಜೇಶ್ವರಿ ದೇವಾಲಯ (ಆರ್.ಆರ್ ನಗರ): ಇಲ್ಲಿ ಲಲಿತಾ ಪರಮೇಶ್ವರಿಯ ಸನ್ನಿಧಿಯಲ್ಲಿ ರಾಜ ಶ್ಯಾಮಲಾ ದೇವಿಯನ್ನು ‘ಮಂತ್ರಿಣಿ’ಯ ರೂಪದಲ್ಲಿ ಶ್ರೀವಿದ್ಯಾ ಪದ್ಧತಿಯಲ್ಲಿ ಆರಾಧಿಸಲಾಗುತ್ತದೆ.
• ಶ್ರೀ ಬಾಲಾಂಬಿಕಾ ದೇವಾಲಯ (ಮಾಲೂರು): ಬೆಂಗಳೂರಿನ ಸಮೀಪವಿರುವ ಈ ಕ್ಷೇತ್ರದಲ್ಲಿ ರಾಜ ಶ್ಯಾಮಲಾ ಮತ್ತು ವಾರಾಹಿ ದೇವಿಯರ ಅಪರೂಪದ ವಿಗ್ರಹಗಳನ್ನು ಕಾಣಬಹುದು.
ವಿಶೇಷ ಆರಾಧನೆ; ಶ್ಯಾಮಲಾ ನವರಾತ್ರಿ:
ಪ್ರತಿ ವರ್ಷ ಮಾಘ ಮಾಸದಲ್ಲಿ (ಜನವರಿ-ಫೆಬ್ರವರಿ) ‘ಶ್ಯಾಮಲಾ ನವರಾತ್ರಿ’ ಅಥವಾ ‘ಗುಪ್ತ ನವರಾತ್ರಿ’ಯನ್ನು ಆಚರಿಸಲಾಗುತ್ತದೆ. ಮಹಾಕವಿ ಕಾಳಿದಾಸನು ಈ ದೇವಿಯ ಪರಮ ಭಕ್ತನಾಗಿದ್ದು, ಈಕೆಯ ಅನುಗ್ರಹದಿಂದಲೇ ಪ್ರಖ್ಯಾತ ‘ಶ್ಯಾಮಲಾ ದಂಡಕಂ’ ರಚಿಸಿದನು ಎಂದು ನಂಬಲಾಗಿದೆ.
ಲೇಖನ- ಶ್ರೀನಿವಾಸ ಮಠ





