ಇದೇ ಫೆಬ್ರವರಿ 19ನೇ ತಾರೀಕಿನಂದು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು ಸನ್ಯಾಸ ಸ್ವೀಕರಿಸಿದ 405ನೇ ವರ್ಷದ ದಿವ್ಯಸ್ಮರಣೆಯ ದಿನವಾಗಿದೆ. ಕಲಿಯುಗದ ಕಲ್ಪವೃಕ್ಷ, ಕಾಮಧೇನು ಎಂದೇ ಖ್ಯಾತರಾದ ಶ್ರೀ ರಾಘವೇಂದ್ರ ತೀರ್ಥರು ಮಧ್ವ ಪರಂಪರೆಯ ಪೀಠವನ್ನು ಅಲಂಕರಿಸಿದ ಸುದಿನ. ಅಂದಹಾಗೆ, ರಾಘವೇಂದ್ರರು ಸನ್ಯಾಸ ಸ್ವೀಕರಿಸುವ ಮುನ್ನ ಆ ಮಠಕ್ಕೆ ಇದ್ಧ ಹೆಸರು ವಿಭುಧೇಂದ್ರ ತೀರ್ಥರ ಮೂಲ ಮಠ (ಕುಂಭಕೋಣಂ ಮಠ). ಆದರೆ ರಾಘವೇಂದ್ರ ಸ್ವಾಮಿಗಳು ಆ ಮಠಕ್ಕೆ ನೀಡಿದ ಕೊಡುಗೆ, ಸೆಳೆದಂಥ ಭಕ್ತರ ಪ್ರಮಾಣ ಹಾಗೂ ಇತರ ಆಧ್ಯಾತ್ಮಿಕ ಅಂಶಗಳಿಂದ ರಾಯರ ಹೆಸರೇ ಮಠಕ್ಕೆ ಆಯಿತು.
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ | ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||
ಇತಿಹಾಸದ ಹಿನ್ನೆಲೆ
1621 ರ ಫಾಲ್ಗುಣ ಮಾಸದ ಶುದ್ಧ ಸಪ್ತಮಿಯಂದು ಶ್ರೀ ಸುಧೀಂದ್ರ ತೀರ್ಥರು ತಮ್ಮ ನೆಚ್ಚಿನ ಶಿಷ್ಯರಾದ ವೆಂಕಟನಾಥರಿಗೆ ಸನ್ಯಾಸ ದೀಕ್ಷೆ ನೀಡಿ, “ಶ್ರೀ ರಾಘವೇಂದ್ರ ತೀರ್ಥ” ಎಂದು ನಾಮಕರಣ ಮಾಡಿದರು. ಅಂದಿನಿಂದ ರಾಯರು ಸನ್ಯಾಸಾಶ್ರಮದ ಪೀಠವನ್ನೇರಿ ಧರ್ಮ ಪ್ರಸಾರ ಮತ್ತು ಭಕ್ತರ ಉದ್ಧಾರಕ್ಕೆ ಶ್ರಮಿಸಿದರು.
ಪಟ್ಟಾಭಿಷೇಕದ ಮಹತ್ವ
ರಾಯರ ಪಟ್ಟಾಭಿಷೇಕದ ದಿನವನ್ನು ಮಂತ್ರಾಲಯದಲ್ಲಿ ಮತ್ತು ವಿಶ್ವಾದ್ಯಂತ ಇರುವ ರಾಯರ ಮಠಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದಿನದ ವಿಶೇಷತೆಗಳೆಂದರೆ:
- ಗುರು ಸ್ಮರಣೆ: ರಾಯರು ಕೇವಲ ಮಠದ ಅಧಿಪತಿಯಾಗಲಿಲ್ಲ, ಬದಲಿಗೆ ಕೋಟ್ಯಂತರ ಭಕ್ತರ ಬಾಳಿನ ಬೆಳಕಾದರು.
- ಪೂಜಾ ಕೈಂಕರ್ಯ: ಮಂತ್ರಾಲಯದಲ್ಲಿ ಈ ದಿನದಂದು ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ, ಕನಕಾಭಿಷೇಕ ಮತ್ತು ರಥೋತ್ಸವಗಳು ನಡೆಯುತ್ತವೆ.
- ಜ್ಞಾನದ ಹಾದಿ: ರಾಯರು ಪೀಠಾರೋಹಣ ಮಾಡಿದ ನಂತರ ಅಸಂಖ್ಯಾತ ಗ್ರಂಥಗಳನ್ನು ರಚಿಸಿ, ತತ್ತ್ವವಾದ ಸಿದ್ಧಾಂತವನ್ನು ಜನಸಾಮಾನ್ಯರಿಗೂ ತಲುಪಿಸಿದರು.
ಭಕ್ತರಿಗೇಕೆ ಇದು ವಿಶೇಷ?
“ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ” ಎಂದು ಪಠಿಸುವ ಭಕ್ತರಿಗೆ ಈ ದಿನ ಕೃತಜ್ಞತೆ ಸಲ್ಲಿಸುವ ಸುಸಂದರ್ಭ. ರಾಯರು ಸನ್ಯಾಸ ಸ್ವೀಕರಿಸಿದ ಈ ಕ್ಷಣವೇ ಅವರು ನಮ್ಮೆಲ್ಲರ ‘ಗುರುರಾಜ’ರಾಗಿ ಪರಿವರ್ತನೆಯಾದ ಪವಿತ್ರ ಘಳಿಗೆ.
“ರಾಯರ ಕರುಣೆ ಇದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ.”
ಶ್ರೀ ರಾಘವೇಂದ್ರ ಸ್ವಾಮಿಗಳ ಜೀವನ ವಿವರ
| ವಿಷಯ | ವಿವರಗಳು |
| ಜನನ (ಇಸವಿ) | 1595 |
| ಹುಟ್ಟಿದ ಸಂವತ್ಸರ | ಮನ್ಮಥ ಸಂವತ್ಸರ |
| ಹುಟ್ಟಿದ ಮಾಸ / ತಿಥಿ | ಫಾಲ್ಗುಣ ಮಾಸದ ಶುಕ್ಲ ಸಪ್ತಮಿ |
| ಪೂರ್ವಾಶ್ರಮದ ಹೆಸರು | ವೆಂಕಟನಾಥ |
| ಪೂರ್ವಾಶ್ರಮದ ಪತ್ನಿ | ಸರಸ್ವತಿ ಬಾಯಿ |
| ಪೂರ್ವಾಶ್ರಮದ ಪುತ್ರ | ಲಕ್ಷ್ಮೀನಾರಾಯಣಾಚಾರ್ಯ |
| ಗೋತ್ರ | ಗೌತಮ ಗೋತ್ರ |
| ಗುರುಗಳು | ಶ್ರೀ ಸುಧೀಂದ್ರ ತೀರ್ಥರು |
| ಮಠದ ಮೂಲ ಹೆಸರು | ಶ್ರೀ ವಿಭುಧೇಂದ್ರ ತೀರ್ಥರ ಮೂಲ ಮಠ (ಕುಂಭಕೋಣಂ ಮಠ) |
| ಸನ್ಯಾಸ ದೀಕ್ಷೆ | 1621 (ಫಾಲ್ಗುಣ ಮಾಸದ ಶುದ್ಧ ಸಪ್ತಮಿ – ಪಟ್ಟಾಭಿಷೇಕ ದಿನ) |
| ಬೃಂದಾವನ ಪ್ರವೇಶ | 1671 (ಶ್ರಾವಣ ಬಹುಳ ದ್ವಿತೀಯಾ) |
| ಬೃಂದಾವನ ಸ್ಥಳ | ಮಂತ್ರಾಲಯ |
| ಉತ್ತರಾಧಿಕಾರಿಗಳು | ಶ್ರೀ ಯೋಗೀಂದ್ರ ತೀರ್ಥರು |
ಲೇಖನ- ಶ್ರೀನಿವಾಸ ಮಠ





