Sri Gurubhyo Logo

ಮಿಥುನ ರಾಶಿ ಯುಗಾದಿ ಫಲ 2026: ಜೂನ್ ನಂತರ ನಿಮ್ಮ ಆರ್ಥಿಕ ಸ್ಥಿತಿ ಬದಲಾಗುವುದು ಖಚಿತ!

Traditional Indian art style depiction of Gemini zodiac sign represented by two women holding musical instruments, standing on an astrological wheel under glowing planets.
ಮಿಥುನ ರಾಶಿ ವಿದ್ಯೆ, ಬುದ್ಧಿವಂತಿಕೆ ಮತ್ತು ಸಂಗೀತದ ಪ್ರತೀಕ.

2026ರ ಮಾರ್ಚ್ 19ರಿಂದ ಆರಂಭ ಆಗಲಿರುವ ‘ಪರಾಭವ ನಾಮ ಸಂವತ್ಸರ’ವು ಮಿಥುನ ರಾಶಿಯವರಿಗೆ ಹೊಸ ಭರವಸೆಗಳನ್ನು ತರಲಿದೆ. ಈ ವರ್ಷ ಶನೈಶ್ಚರ ದಶಮ ಸ್ಥಾನದಲ್ಲಿ ಸಂಚರಿಸುವುದು ನಿಮ್ಮ ವೃತ್ತಿ ಬದುಕಿನ ಮೇಲೆ ಯಾವ ಪರಿಣಾಮ ಬೀರಲಿದ್ದಾನೆ? ವರ್ಷವಿಡೀ ಬದಲಾಗುವ ಗುರುವಿನ ಸಂಚಾರವು ನಿಮ್ಮ ಆರ್ಥಿಕ ಸ್ಥಿತಿಯನ್ನು ಹೇಗೆ ಬದಲಿಸಲಿದೆ? ರಾಹು-ಕೇತುಗಳ ಸಂಚಾರದಿಂದ ಲಾಭ ಯಾರಿಗೆ? ನಿಮ್ಮ ಜೀವನದ ಏರಿಳಿತಗಳು, ಆರೋಗ್ಯ ಮತ್ತು ಯಶಸ್ಸಿನ ಮಂತ್ರಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ನಿಮ್ಮ ಈ ಸಂವತ್ಸರದ ರಾಶಿ ಭವಿಷ್ಯವನ್ನು ಈಗಲೇ ಓದಿರಿ.

ಮಿಥುನ ರಾಶಿಯವರ ಗುಣ ಸ್ವಭಾವ

ಮಿಥುನ ರಾಶಿಯವರು ಮೃಗಶಿರ (3, 4ನೇ ಪಾದ), ಆರಿದ್ರಾ ಮತ್ತು ಪುನರ್ವಸು ನಕ್ಷತ್ರದ ಮೊದಲ ಮೂರು ಪಾದಗಳಲ್ಲಿ ಜನಿಸಿದವರು. ಬುಧ ರಾಶ್ಯಾಧಿಪತಿ ಆಗಿರುವುದರಿಂದ ಇವರು ಅತ್ಯಂತ ಬುದ್ಧಿವಂತರು, ವಾಕ್ಚತುರರು ಮತ್ತು ಸಮಯಪ್ರಜ್ಞೆ ಹೊಂದಿದವರು. ಯಾವುದೇ ವಿಷಯವನ್ನು ಬೇಗನೆ ಗ್ರಹಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಸಮಾಜದಲ್ಲಿ ಎಲ್ಲರೊಂದಿಗೂ ಬೆರೆಯುವ ಇವರು, ಉತ್ತಮ ಹಾಸ್ಯ ಪ್ರಜ್ಞೆ ಹೊಂದಿರುತ್ತಾರೆ. ಒಂದೇ ಸಮಯದಲ್ಲಿ ಹಲವು ಕೆಲಸಗಳನ್ನು ಮಾಡುವ ಕೌಶಲ ಇವರದ್ದಾಗಿದ್ದು, ಸದಾ ಹೊಸ ವಿಷಯಗಳನ್ನು ಕಲಿಯಲು ಉತ್ಸುಕರಾಗಿರುತ್ತಾರೆ. ಕೆಲವೊಮ್ಮೆ ದ್ವಂದ್ವ ಮನಸ್ಥಿತಿ ಕಾಡಬಹುದು.

ಶನಿ ಸಂಚಾರ

ಈ ಸಂವತ್ಸರದಲ್ಲಿ ಶನಿ ಗ್ರಹವು ನಿಮ್ಮ ರಾಶಿಯಿಂದ ಹತ್ತನೇ ಮನೆಯಾದ ಮೀನ ರಾಶಿಯಲ್ಲಿ ಸಂಚರಿಸಲಿದೆ. ದಶಮ ಸ್ಥಾನದಲ್ಲಿ ಶನಿಯ ಸಂಚಾರವು ವೃತ್ತಿ ಕ್ಷೇತ್ರದಲ್ಲಿ ‘ಕರ್ಮಫಲ’ವನ್ನು ನೀಡಲಿದೆ. ಕೆಲಸದಲ್ಲಿ ಹೆಚ್ಚಿನ ಜವಾಬ್ದಾರಿಗಳು ಹೆಗಲೇರಲಿವೆ. ಕಠಿಣ ಪರಿಶ್ರಮಕ್ಕೆ ತಕ್ಕ ಮನ್ನಣೆ ದೊರೆಯಲಿದ್ದು, ನಿರುದ್ಯೋಗಿಗಳಿಗೆ ಹೊಸ ಕೆಲಸ ಲಭಿಸಲಿದೆ. ಸ್ವಂತ ಉದ್ಯಮ ಮಾಡುತ್ತಿರುವವರಿಗೆ ಲಾಭದ ಪ್ರಮಾಣ ಸಾಧಾರಣವಾಗಿ ಇರಲಿದೆ. ಆದರೆ ಶನಿಯ ಈ ಸ್ಥಾನವು ಕೆಲಸದ ಸ್ಥಳದಲ್ಲಿ ಶಿಸ್ತು ಮತ್ತು ತಾಳ್ಮೆಯನ್ನು ಬಯಸುತ್ತದೆ. ರಾಜಕೀಯ ಅಥವಾ ಆಡಳಿತ ರಂಗದಲ್ಲಿ ಇರುವವರಿಗೆ ಸಮಾಜದಲ್ಲಿ ಗೌರವ ಹೆಚ್ಚಲಿದೆ.

ಗುರು ಸಂಚಾರ

ಈ ಸಂವತ್ಸರದಲ್ಲಿ ಗುರುವಿನ ಸಂಚಾರವು ನಿಮಗೆ ಅತ್ಯಂತ ಲಾಭದಾಯಕವಾಗಿದೆ. ಜೂನ್ 1ರ ತನಕ ಗುರುವು ನಿಮ್ಮ ರಾಶಿಯಲ್ಲೇ ಇರುವುದರಿಂದ ಸ್ವಲ್ಪ ಮಟ್ಟದ ಗೊಂದಲವಿರಬಹುದು. ಆದರೆ ಜೂನ್ 2ರಿಂದ ಅಕ್ಟೋಬರ್ 31ರ ತನಕ ಗುರುವು 2ನೇ ಮನೆಗೆ (ಕರ್ಕಾಟಕ) ಪ್ರವೇಶಿಸುವುದರಿಂದ ಧನಯೋಗ ಉಂಟಾಗಲಿದೆ. ಈ ಅವಧಿಯಲ್ಲಿ ಆರ್ಥಿಕ ಸಂಕಷ್ಟಗಳು ದೂರವಾಗಿ, ಹಣದ ಒಳಹರಿವು ಹೆಚ್ಚಲಿದೆ. ಕುಟುಂಬದಲ್ಲಿ ಮದುವೆ, ಮುಂಜಿಗಳಂತಹ ಶುಭ ಕಾರ್ಯಗಳು ಜರುಗಲಿವೆ. ನವೆಂಬರ್ 1ರಿಂದ ಜನವರಿ 24ರ ತನಕ ಗುರುವು 3ನೇ ಮನೆಗೆ (ಸಿಂಹ) ಬರುವುದರಿಂದ ಧೈರ್ಯ ಮತ್ತು ಸಾಹಸ ಮನೋಭಾವ ಹೆಚ್ಚಲಿದೆ. ಜನವರಿ 25ರ ನಂತರ ಪುನಃ ಗುರುವು 2ನೇ ಮನೆಗೆ ಬರುವುದರಿಂದ ಉಳಿತಾಯ ಅಥವಾ ಹೂಡಿಕೆ ಮಾಡಿದಂ ಧನವು ವೃದ್ಧಿಯಾಗಲಿದೆ.

ರಾಹು-ಕೇತು ಸಂಚಾರ

ವರ್ಷದ ಆರಂಭದಿಂದ ಡಿಸೆಂಬರ್ 5ರ ತನಕ ರಾಹುವು ನಿಮ್ಮ ರಾಶಿಯಿಂದ 9ನೇ ಮನೆಯಲ್ಲಿ (ಕುಂಭ) ಮತ್ತು ಕೇತುವು 3ನೇ ಮನೆಯಲ್ಲಿ (ಸಿಂಹ)ಇರುತ್ತಾರೆ. ಇದು ಭಾಗ್ಯೋದಯದ ಕಾಲವಾಗಿದೆ. ವಿದೇಶ ಪ್ರಯಾಣದ ಯೋಗವಿದೆ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ. ಕೇತು 3ನೇ ಮನೆಯಲ್ಲಿ ಇರುವುದರಿಂದ ಸಹೋದರರಿಂದ ಸಹಕಾರ ಮತ್ತು ಕೀರ್ತಿ ಲಭಿಸಲಿದೆ. ಆದರೆ ಡಿಸೆಂಬರ್ 5ರ ನಂತರ ರಾಹುವು 8ನೇ ಮನೆಗೆ (ಮಕರ)ಮತ್ತು ಕೇತುವು 2ನೇ ಮನೆಗೆ (ಕರ್ಕಾಟಕ) ಪ್ರವೇಶಿಸುತ್ತಾರೆ. ಈ ಸಮಯದಲ್ಲಿ ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ಕುಟುಂಬದ ಸದಸ್ಯರೊಂದಿಗೆ ಮಾತನಾಡುವಾಗ ಸಂಯಮ ಇರಲಿ ಮತ್ತು ಅನಗತ್ಯ ವಿವಾದಗಳಿಂದ ದೂರವಿರಿ.

ಪರಿಹಾರಗಳು

  • ಬುಧ ಶಾಂತಿ: ಪ್ರತಿ ಬುಧವಾರ ವಿಷ್ಣು ಸಹಸ್ರನಾಮ ಪಠಿಸಿ ಅಥವಾ ತುಳಸಿ ಗಿಡಕ್ಕೆ ನೀರು ಹಾಕಿ. 
  • ಗುರು ಸೇವೆ: ಗುರುವಾರಗಳಂದು ಹಳದಿ ಬಣ್ಣದ ಹಣ್ಣುಗಳನ್ನು ದಾನ ಮಾಡಿ.
  • ಶನಿ ಸೇವೆ: ಶನಿವಾರ ಹನುಮಾನ್ ಚಾಲೀಸಾ ಪಠಿಸುವುದರಿಂದ ಕೆಲಸದಲ್ಲಿನ ಅಡೆತಡೆಗಳು ದೂರವಾಗಲಿವೆ.
  • ಮಂತ್ರ: ಪ್ರತಿದಿನ ‘ಓಂ ಬಂ ಬುಧಾಯ ನಮಃ’ ಮಂತ್ರವನ್ನು 108 ಬಾರಿ ಜಪಿಸಿ.

ಉದ್ಯೋಗವೋ ಅಥವಾ ವ್ಯಾಪಾರವೋ? ಈ 4 ರಾಶಿಯವರಿಗೆ ವೃತ್ತಿ ಜೀವನದಲ್ಲಿ ಸದಾ ಗೊಂದಲ!

ಕೊನೆಮಾತು “ವರ್ಷದ ದ್ವಿತೀಯಾರ್ಧದಲ್ಲಿ ಆರ್ಥಿಕವಾಗಿ ಉತ್ತಮ ಲಾಭವಿದ್ದರೂ ಮಾತಿನ ಮೇಲೆ ನಿಗಾ ಇರುವುದು ಬಹಳ ಮುಖ್ಯ.”

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts