ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಐತಿಹಾಸಿಕ ಮತ್ತು ಪುಣ್ಯಕ್ಷೇತ್ರವಾದ ಮೇಲುಕೋಟೆಯಲ್ಲಿ ಪ್ರತಿವರ್ಷ ನಡೆಯುವ ‘ವೈರಮುಡಿ ಬ್ರಹ್ಮೋತ್ಸವ’ ಕರ್ನಾಟಕದ ಅತಿದೊಡ್ಡ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ. ಇದನ್ನು ‘ದಕ್ಷಿಣ ಬದರಿ’ ಮತ್ತು ‘ಭೂವೈಕುಂಠ’ ಎಂದೂ ಕರೆಯಲಾಗುವ ಈ ಕ್ಷೇತ್ರದಲ್ಲಿ 2026ರ ಸಾಲಿನ ವೈರಮುಡಿ ಉತ್ಸವದ ಸಂಪೂರ್ಣ ವಿವರ ಹಾಗೂ ಇತಿಹಾಸ ಇಲ್ಲಿದೆ.
2026ರ ವೈರಮುಡಿ ಬ್ರಹ್ಮೋತ್ಸವದ ಪ್ರಮುಖ ದಿನಾಂಕಗಳು
ಮೇಲುಕೋಟೆಯ ವೈರಮುಡಿ ಬ್ರಹ್ಮೋತ್ಸವವು ಪ್ರತಿವರ್ಷ ಫಾಲ್ಗುಣ ಮಾಸದ ಶುಕ್ಲ ಪಕ್ಷದ ಪುಷ್ಯ ನಕ್ಷತ್ರದ ಶುಭ ದಿನದಂದು ನಡೆಯುತ್ತದೆ. ಸಾಮಾನ್ಯವಾಗಿ ಈ ದಿನವು ಫಾಲ್ಗುಣ ಮಾಸದ ಶುಕ್ಲ ಪಕ್ಷದ ಅಷ್ಟಮಿ ಅಥವಾ ನವಮಿ ತಿಥಿಯಂದು ಬರುತ್ತದೆ. ಪುರಾಣಗಳ ಪ್ರಕಾರ, ಶ್ರೀವೈಷ್ಣವ ಸಂಪ್ರದಾಯದಂತೆ ಈ ದೈವಿಕ ಉತ್ಸವವನ್ನು ಪುಷ್ಯ ನಕ್ಷತ್ರಕ್ಕೆ ಪ್ರಾಧಾನ್ಯ ನೀಡಿ ಆಚರಿಸಲಾಗುತ್ತದೆ. ಈ ವರ್ಷ ಅಂದರೆ 2026ರಲ್ಲಿ, ವೈರಮುಡಿ ಕಿರೀಟ ಧಾರಣಾ ಮಹೋತ್ಸವವು ಮಾರ್ಚ್ 28, ಶನಿವಾರದಂದು ನಡೆಯಲಿದೆ. ಆ ದಿನ ಫಾಲ್ಗುಣ ಮಾಸದ ಶುಕ್ಲ ಪಕ್ಷದ ದಶಮಿ ತಿಥಿ ಇದೆ.
2026ನೇ ಸಾಲಿನ ಮೇಲುಕೋಟೆ ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವವು ಮಾರ್ಚ್ 23ರಿಂದ ಏಪ್ರಿಲ್ 4ರವರೆಗೆ ಅತ್ಯಂತ ವೈಭವದಿಂದ ನಡೆಯಲಿದೆ. ಉತ್ಸವದ ಪ್ರಮುಖ ಆಕರ್ಷಣೆಯಾದ ವೈರಮುಡಿ ಕಿರೀಟ ಧಾರಣೆಯು ಮಾರ್ಚ್ 28ರಂದು ಆಗಲಿದೆ.
2026ರ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವದ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ:
| ದಿನಾಂಕ | ಧಾರ್ಮಿಕ ಕಾರ್ಯಕ್ರಮಗಳು ಮತ್ತು ಉತ್ಸವಗಳು |
| ಮಾರ್ಚ್ 23, 2026 | ಬ್ರಹ್ಮೋತ್ಸವದ ಆರಂಭ, ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳು |
| ಮಾರ್ಚ್ 24, 2026 | ಸಂಜೆ 5 ರಿಂದ 10 ರವರೆಗೆ ಶ್ರೀಸ್ವಾಮಿಯ ಕಲ್ಯಾಣೋತ್ಸವ |
| ಮಾರ್ಚ್ 25, 2026 | ಬೆಳಗ್ಗೆ ಗರುಡಧ್ವಜಾರೋಹಣ, ಮಂಟಪ ವಾಹನೋತ್ಸವ; ರಾತ್ರಿ ಹಂಸವಾಹನೋತ್ಸವ |
| ಮಾರ್ಚ್ 26, 2026 | ಶ್ರೀ ರಾಮಾನುಜಾಚಾರ್ಯರಿಗೆ ವಿಶೇಷ ಅಭಿಷೇಕ; ರಾತ್ರಿ ಶೇಷವಾಹನೋತ್ಸವ |
| ಮಾರ್ಚ್ 27, 2026 | ಶ್ರೀರಾಮನವಮಿ ವಿಶೇಷ ಪೂಜೆ, ನಾಗವಲ್ಲಿ ಮಹೋತ್ಸವ; ರಾತ್ರಿ ಚಂದ್ರಮಂಡಲ ವಾಹನೋತ್ಸವ |
| ಮಾರ್ಚ್ 28, 2026 | ವಿಶ್ವವಿಖ್ಯಾತ ವೈರಮುಡಿ ಬ್ರಹ್ಮೋತ್ಸವ (ವೈರಮುಡಿ ಕಿರೀಟ ಧಾರಣೆ ಮತ್ತು ಉತ್ಸವ) |
| ಮಾರ್ಚ್ 29, 2026 | ರಾತ್ರಿ ಗರುಡವಾಹನೋತ್ಸವ |
| ಮಾರ್ಚ್ 30, 2026 | ಗಜೇಂದ್ರಮೋಕ್ಷ ಉತ್ಸವ; ರಾತ್ರಿ ಗಜ ಮತ್ತು ಅಶ್ವವಾಹನೋತ್ಸವ |
| ಮಾರ್ಚ್ 31, 2026 | ಬೆಳಗ್ಗೆ 7.30ಕ್ಕೆ ಮಹಾರಥೋತ್ಸವ (ತೇರು); ರಾತ್ರಿ ಬಂಗಾರದ ಪಲ್ಲಕ್ಕಿ ಉತ್ಸವ |
| ಏಪ್ರಿಲ್ 1, 2026 | ರಾತ್ರಿ ಕಲ್ಯಾಣಿಯಲ್ಲಿ ತೆಪ್ಪೋತ್ಸವ ಮತ್ತು ಕುದುರೆ ವಾಹನೋತ್ಸವ |
| ಏಪ್ರಿಲ್ 2, 2026 | ಬೆಳಗ್ಗೆ ತೀರ್ಥಸ್ನಾನ (ಅವಭೃತ ಸ್ನಾನ), ಸಂಜೆ ಪಟ್ಟಾಭಿಷೇಕ ಮತ್ತು ಸಮರಭೂಪಾಲ ವಾಹನ |
| ಏಪ್ರಿಲ್ 3, 2026 | ಚೆಲುವನಾರಾಯಣಸ್ವಾಮಿಗೆ ಮಹಾಭಿಷೇಕ ಮತ್ತು ಹನುಮಂತ ವಾಹನೋತ್ಸವ |
| ಏಪ್ರಿಲ್ 4, 2026 | ಬೆಟ್ಟದ ಶ್ರೀ ಯೋಗನರಸಿಂಹಸ್ವಾಮಿ ಮತ್ತು ಮಹಾಲಕ್ಷ್ಮೀ ಅಮ್ಮನವರಿಗೆ ಮಹಾಭಿಷೇಕ |
ವೈರಮುಡಿಯ ಇತಿಹಾಸ ಮತ್ತು ಪುರಾಣ
ವೈರಮುಡಿ ಎಂಬುದು ವಜ್ರಖಚಿತವಾದ ಅತ್ಯಮೂಲ್ಯ ಕಿರೀಟ. ಪುರಾಣಗಳ ಪ್ರಕಾರ, ಈ ಕಿರೀಟವು ಶ್ರೀಮನ್ನಾರಾಯಣನಿಗೆ ಸೇರಿದ್ದು. ಒಮ್ಮೆ ವಿರೋಚನ ಎಂಬ ರಾಕ್ಷಸನು ನಾರಾಯಣನ ಈ ಕಿರೀಟವನ್ನು ಕದ್ದು ಪಾತಾಳಕ್ಕೆ ಒಯ್ದಾಗ, ಗರುಡನು ಅವನೊಂದಿಗೆ ಯುದ್ಧ ಮಾಡಿ ಕಿರೀಟವನ್ನು ಮರಳಿ ತರುತ್ತಾನೆ. ಭೂಲೋಕಕ್ಕೆ ಬರುವ ದಾರಿಯಲ್ಲಿ ಶ್ರೀಕೃಷ್ಣನ ಅವತಾರವಿದ್ದಾಗ, ಕೃಷ್ಣನಿಗೆ ಈ ಕಿರೀಟವನ್ನು ಅರ್ಪಿಸಿದನೆಂದು ಹೇಳಲಾಗುತ್ತದೆ. ನಂತರ ಶ್ರೀಕೃಷ್ಣನು ಇದನ್ನು ಮೇಲುಕೋಟೆಯ ಚೆಲುವನಾರಾಯಣಸ್ವಾಮಿಗೆ ಅರ್ಪಿಸಿದನು ಎಂಬುದು ಭಕ್ತರ ನಂಬಿಕೆ.
ಮತ್ತೊಂದು ಐತಿಹಾಸಿಕ ಹಿನ್ನೆಲೆಯೆಂದರೆ, ಮೈಸೂರು ಅರಸರಾದ ರಾಜ ಒಡೆಯರ್ ಅವರು ಸಮರ್ಪಿಸಿದ ‘ರಾಜಮುಡಿ’ ಕಿರೀಟವೂ ವೈರಮುಡಿ ಉತ್ಸವದಷ್ಟೇ ಮಹತ್ವ ಪಡೆದಿದೆ. ಈ ಎರಡು ಕಿರೀಟಗಳನ್ನು ವರ್ಷಕ್ಕೊಮ್ಮೆ ಮಾತ್ರ ಸಾರ್ವಜನಿಕರ ದರ್ಶನಕ್ಕೆ ತರಲಾಗುತ್ತದೆ.
ಉತ್ಸವದ ವಿಶೇಷ
- ಕಿರೀಟ ತರುವ ಪ್ರಕ್ರಿಯೆ: ವೈರಮುಡಿ ಮತ್ತು ರಾಜಮುಡಿ ಕಿರೀಟಗಳನ್ನು ಮಂಡ್ಯದ ಜಿಲ್ಲಾ ಖಜಾನೆಯಲ್ಲಿ ಅತ್ಯಂತ ಭದ್ರತೆಯೊಂದಿಗೆ ಇಡಲಾಗುತ್ತದೆ. ಉತ್ಸವದ ದಿನದಂದು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಇವುಗಳನ್ನು ಹೊರತೆಗೆದು, ವಿಶೇಷ ವಾಹನದಲ್ಲಿ ಮೇಲುಕೋಟೆಗೆ ತರಲಾಗುತ್ತದೆ. ದಾರಿಯುದ್ದಕ್ಕೂ ಭಕ್ತರು ಪೂಜೆ ಸಲ್ಲಿಸುತ್ತಾರೆ.
- ಕಿರೀಟವನ್ನು ನೇರವಾಗಿ ನೋಡಬಾರದು: ಅರ್ಚಕರು ಈ ವೈರಮುಡಿಯನ್ನು ದೇವರಿಗೆ ಧಾರಣೆ ಮಾಡುವಾಗ ತಮ್ಮ ಕಣ್ಣುಗಳಿಗೆ ರೇಷ್ಮೆ ಬಟ್ಟೆಯನ್ನು ಕಟ್ಟಿಕೊಳ್ಳುತ್ತಾರೆ. ದೈವಿಕ ಶಕ್ತಿ ಇರುವ ಈ ಕಿರೀಟವನ್ನು ನೇರವಾಗಿ ನೋಡುವುದು ನಿಷಿದ್ಧ ಎಂಬ ಸಂಪ್ರದಾಯ ಇಂದಿಗೂ ನಡೆದುಕೊಂಡು ಬರುತ್ತಿದೆ.
- ಲಕ್ಷಾಂತರ ಭಕ್ತರ ಸಮಾಗಮ: ವೈರಮುಡಿ ಉತ್ಸವದ ರಾತ್ರಿ ಚೆಲುವನಾರಾಯಣಸ್ವಾಮಿಯು ವೈರಮುಡಿ ಧರಿಸಿ ಗರುಡಾರೂಢನಾಗಿ ಬೀದಿಗಳಲ್ಲಿ ಸಂಚರಿಸುವಾಗ ಲಕ್ಷಾಂತರ ಭಕ್ತರು ‘ಗೋವಿಂದ ಗೋವಿಂದ’ ಎನ್ನುತ್ತಾ ಪುನೀತರಾಗುತ್ತಾರೆ.
ಕ್ಷೇತ್ರದ ಮಹತ್ವ
ಮೇಲುಕೋಟೆಯು ಶ್ರೀ ರಾಮಾನುಜಾಚಾರ್ಯರ ಕರ್ಮಭೂಮಿಯಾಗಿದ್ದು, ಇಲ್ಲಿ 101 ದೇಗುಲಗಳು ಹಾಗೂ 101 ಕಲ್ಯಾಣಿಗಳಿವೆ. ಇಲ್ಲಿನ ಚೆಲುವನಾರಾಯಣಸ್ವಾಮಿ ದೇವಸ್ಥಾನದ ಜೊತೆಗೆ ಬೆಟ್ಟದ ಮೇಲಿರುವ ಯೋಗನರಸಿಂಹ ಸ್ವಾಮಿ ದೇವಸ್ಥಾನವೂ ಭಕ್ತರ ಆಕರ್ಷಣೀಯ ತಾಣ. ಈ ಕ್ಷೇತ್ರವು ಕೇವಲ ಧಾರ್ಮಿಕವಷ್ಟೇ ಅಲ್ಲದೆ, ತನ್ನ ಸುಂದರ ಶಿಲ್ಪಕಲೆ ಮತ್ತು ಐತಿಹಾಸಿಕ ಹಿನ್ನೆಲೆಯಿಂದಾಗಿ ವಿಶ್ವಪ್ರಸಿದ್ಧವಾಗಿದೆ.
ಕೊನೆ ಮಾತು: ಈ ವರ್ಷ ವೈರಮುಡಿ ಮತ್ತು ರಥೋತ್ಸವದ ದಿನಗಳು ರಜಾ ದಿನಗಳಲ್ಲಿ ಬರುವುದರಿಂದ ಅಪಾರ ಜನಸ್ತೋಮ ಸೇರುವ ನಿರೀಕ್ಷೆಯಿದೆ. ಸರ್ಕಾರ ಮತ್ತು ಜಿಲ್ಲಾಡಳಿತವು ಭಕ್ತರಿಗೆ ವಿಶೇಷ ಬಸ್ ಸೌಕರ್ಯ, ಕುಡಿಯುವ ನೀರು ಮತ್ತು ಭದ್ರತಾ ವ್ಯವಸ್ಥೆಗಳನ್ನು ಮಾಡಿದೆ.
ಲೇಖನ- ಶ್ರೀನಿವಾಸ ಮಠ





