2026ನೇ ಇಸವಿಯ ಆರಂಭದಲ್ಲಿ ಗ್ರಹಗಳ ಸಂಚಾರದಲ್ಲಿ ಮತ್ತೊಂದು ದೊಡ್ಡ ಬದಲಾವಣೆ ಸಂಭವಿಸುತ್ತಿದೆ. ಜನವರಿ 15ರಿಂದ ಫೆಬ್ರವರಿ 23ರ ತನಕ ಮಕರ ರಾಶಿಯಲ್ಲಿ ಕುಜ ಗ್ರಹ ಸಂಚಾರ ಆಗಲಿದೆ. ಶಕ್ತಿ, ಧೈರ್ಯ ಮತ್ತು ಭೂಮಿಗೆ ಕಾರಕನಾದ ಮಂಗಳ ಗ್ರಹವು ತನ್ನ ಉಚ್ಚ ರಾಶಿಯಾದ ಮಕರಕ್ಕೆ ಪ್ರವೇಶಿಸುತ್ತಿದ್ದಾನೆ. ಮೇಷ- ವೃಶ್ಚಿಕ ರಾಶಿಯು ಕುಜನಿಗೆ ಸ್ವಕ್ಷೇತ್ರವಾದರೆ, ಮಕರ ರಾಶಿಯು ಉಚ್ಚ ಕ್ಷೇತ್ರ ಹಾಗೂ ಕರ್ಕಾಟಕ ರಾಶಿಯು ನೀಚ ಕ್ಷೇತ್ರವಾಗುತ್ತದೆ. ಮೃಗಶಿರಾ, ಚಿತ್ತಾ ಹಾಗೂ ಧನಿಷ್ಠಾ ನಕ್ಷತ್ರಗಳ ಅಧಿಪತಿ ಕುಜ ಗ್ರಹ ಆಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳನನ್ನು ‘ಗ್ರಹಗಳ ಸೇನಾಪತಿ’ ಎಂದು ಕರೆಯಲಾಗುತ್ತದೆ. ಅಂತಹ ಮಂಗಳನು ಶನಿಯ ಸ್ವಕ್ಷೇತ್ರವಾದ ಮಕರ ರಾಶಿಯಲ್ಲಿ ಉಚ್ಚ ಸ್ಥಿತಿಯನ್ನು ತಲುಪುತ್ತಾನೆ. 2026ರ ಈ ಅವಧಿಯಲ್ಲಿ ಮಂಗಳನ ಸಂಚಾರವು ವ್ಯಕ್ತಿಗಳಲ್ಲಿ ಅದಮ್ಯ ಉತ್ಸಾಹ, ಕಾರ್ಯಕ್ಷಮತೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಮಕರವು ಶಿಸ್ತಿನ ರಾಶಿಯಾದ್ದರಿಂದ, ಇಲ್ಲಿ ಮಂಗಳನು ತನ್ನ ಶಕ್ತಿಯನ್ನು ಪೋಲು ಮಾಡದೆ ಅತ್ಯಂತ ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಾನೆ.
ಹನ್ನೆರಡು ರಾಶಿಗಳ ಮೇಲೆ ಈ ‘ಉಚ್ಚ ಮಂಗಳ’ನ ಪ್ರಭಾವ ಹೀಗಿದೆ:
1. ಮೇಷ ರಾಶಿ (Aries)
ನಿಮ್ಮ ರಾಶ್ಯಾಧಿಪತಿ ಮಂಗಳನು ಹತ್ತನೇ ಮನೆಯಲ್ಲಿ ಉಚ್ಚನಾಗುತ್ತಿರುವುದರಿಂದ ವೃತ್ತಿ ಬದುಕಿನಲ್ಲಿ ದೊಡ್ಡ ಕ್ರಾಂತಿ ಸಂಭವಿಸಲಿದೆ. ಹೊಸ ಉದ್ಯೋಗ, ಬಡ್ತಿ ಅಥವಾ ಅಧಿಕಾರ ಪ್ರಾಪ್ತಿಯಾಗಲಿದೆ. ಸಮಾಜದಲ್ಲಿ ನಿಮ್ಮ ಪ್ರಭಾವ ಹೆಚ್ಚಲಿದೆ.
2. ವೃಷಭ ರಾಶಿ (Taurus)
ಭಾಗ್ಯ ಸ್ಥಾನದಲ್ಲಿ ಮಂಗಳನ ಸಂಚಾರವು ಆಸ್ತಿ ಖರೀದಿಗೆ ಸುಸಮಯವನ್ನು ನೀಡಲಿದೆ. ತಂದೆಯ ಕಡೆಯಿಂದ ಧನಲಾಭವಾಗಬಹುದು. ಕಾನೂನು ಹೋರಾಟಗಳಲ್ಲಿ ಜಯ ಸಿಗಲಿದೆ. ದೂರದ ಪ್ರಯಾಣಗಳು ಲಾಭದಾಯಕವಾಗಿರಲಿವೆ.
3. ಮಿಥುನ ರಾಶಿ (Gemini)
ಎಂಟನೇ ಮನೆಯಲ್ಲಿ ಮಂಗಳ ಸಂಚಾರವಿರುವುದರಿಂದ ವಾಹನ ಚಾಲನೆಯಲ್ಲಿ ಅತೀವ ಜಾಗರೂಕತೆ ಇರಲಿ. ಶಸ್ತ್ರಚಿಕಿತ್ಸೆ ಅಥವಾ ಸಣ್ಣ ಪುಟ್ಟ ಗಾಯಗಳಾಗುವ ಸಂಭವವಿದೆ. ಯಾರೊಂದಿಗೂ ವಾದಕ್ಕಿಳಿಯಬೇಡಿ, ನಿಮ್ಮ ರಹಸ್ಯಗಳನ್ನು ಕಾಪಾಡಿಕೊಳ್ಳಿ.
4. ಕಟಕ ರಾಶಿ (Cancer)
ಸಪ್ತಮ ಸ್ಥಾನದಲ್ಲಿ ಮಂಗಳನು ದಾಂಪತ್ಯ ಜೀವನದ ಮೇಲೆ ಪ್ರಭಾವ ಬೀರುತ್ತಾನೆ. ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಅವಸರ ಬೇಡ. ತಾಳ್ಮೆಯೇ ನಿಮ್ಮ ಬಲವಾಗಲಿದೆ.
5. ಸಿಂಹ ರಾಶಿ (Leo)
ಆರನೇ ಮನೆಯಲ್ಲಿ ಮಂಗಳನು ಅದ್ಭುತ ಫಲಗಳನ್ನು ನೀಡಲಿದ್ದಾನೆ. ಶತ್ರುಗಳು ನಿಮ್ಮ ಮುಂದೆ ತಲೆಬಾಗುವರು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅನಿರೀಕ್ಷಿತ ಯಶಸ್ಸು ಸಿಗಲಿದೆ. ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ದೊರೆಯಲಿದೆ.
6. ಕನ್ಯಾ ರಾಶಿ (Virgo)
ಪಂಚಮ ಸ್ಥಾನದಲ್ಲಿ ಮಂಗಳನ ಸಂಚಾರವು ಬುದ್ಧಿವಂತಿಕೆಯನ್ನು ಚುರುಕುಗೊಳಿಸಲಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ಎಚ್ಚರದಿಂದಿರಿ. ಮಕ್ಕಳ ಆರೋಗ್ಯದ ಕಡೆಗೆ ಗಮನವಿರಲಿ. ಕ್ರೀಡಾಪಟುಗಳಿಗೆ ಇದು ಉತ್ತಮ ಕಾಲ.
ಚಂದ್ರ ರಾಶಿ ಮತ್ತು ವೃತ್ತಿ ಭವಿಷ್ಯ: ನಿಮ್ಮ ಜನ್ಮರಾಶಿಗೆ ಸರಿಹೊಂದುವ ಉದ್ಯೋಗ-ವ್ಯವಹಾರ ಯಾವುದು?
7. ತುಲಾ ರಾಶಿ (Libra)
ನಾಲ್ಕನೇ ಮನೆಯಲ್ಲಿ ಮಂಗಳ ಸಂಚಾರದಿಂದ ಭೂಮಿ ಅಥವಾ ಮನೆ ಖರೀದಿಯ ಯೋಗವಿದೆ. ಆದರೆ ಮನೆಯಲ್ಲಿ ಅಶಾಂತಿ ತಲೆದೋರದಂತೆ ನೋಡಿಕೊಳ್ಳಿ. ತಾಯಿಯ ಆರೋಗ್ಯದಲ್ಲಿ ಏರುಪೇರಾಗಬಹುದು, ಜಾಗರೂಕರಾಗಿರಿ.
8. ವೃಶ್ಚಿಕ ರಾಶಿ (Scorpio)
ನಿಮ್ಮ ರಾಶ್ಯಾಧಿಪತಿ ಮಂಗಳನು ತೃತೀಯ ಸ್ಥಾನದಲ್ಲಿ ಉಚ್ಚನಾಗುತ್ತಿರುವುದು ನಿಮ್ಮ ಧೈರ್ಯವನ್ನು ಇಮ್ಮಡಿಗೊಳಿಸಲಿದೆ. ಸಣ್ಣ ಪ್ರಯಾಣಗಳಿಂದ ಹೆಚ್ಚಿನ ಲಾಭವಾಗಲಿದೆ. ಸಹೋದರರೊಂದಿಗೆ ಬಾಂಧವ್ಯ ಸುಧಾರಿಸಲಿದ್ದು, ಅವರ ನೆರವು ಸಿಗಲಿದೆ.
9. ಧನು ರಾಶಿ (Sagittarius)
ದ್ವಿತೀಯ ಸ್ಥಾನದಲ್ಲಿ ಮಂಗಳನು ಆರ್ಥಿಕ ಲಾಭ ತರಲಿದ್ದಾನೆ. ಆದರೆ ಮಾತಿನ ಮೇಲೆ ಹಿಡಿತವಿರಲಿ. ಕಟುವಾದ ಮಾತುಗಳಿಂದ ಕುಟುಂಬದಲ್ಲಿ ಬಿರುಕು ಮೂಡಬಹುದು. ಕಣ್ಣಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.
10. ಮಕರ ರಾಶಿ (Capricorn)
ನಿಮ್ಮದೇ ರಾಶಿಯಲ್ಲಿ ಮಂಗಳನು ಉಚ್ಚನಾಗುತ್ತಿರುವುದರಿಂದ ನಿಮ್ಮಲ್ಲಿ ಅಪಾರ ಶಕ್ತಿ ತುಂಬಲಿದೆ. ಆಡಳಿತಾತ್ಮಕ ಕೆಲಸಗಳಲ್ಲಿ ಜಯ ಸಿಗಲಿದೆ. ಆದರೆ ರಕ್ತದೊತ್ತಡ ಅಥವಾ ಅತಿಯಾದ ಕೋಪದ ಬಗ್ಗೆ ಎಚ್ಚರಿಕೆ ಇರಲಿ.
11. ಕುಂಭ ರಾಶಿ (Aquarius)
ಹನ್ನೆರಡನೇ ಮನೆಯಲ್ಲಿ ಮಂಗಳ ಸಂಚಾರವಿರುವುದರಿಂದ ಖರ್ಚುಗಳು ದುಪ್ಪಟ್ಟಾಗಲಿವೆ. ಆಸ್ಪತ್ರೆ ಅಥವಾ ಕೋರ್ಟ್ ಕೆಲಸಗಳಿಗಾಗಿ ಹಣ ವ್ಯಯವಾಗಬಹುದು. ವಿದೇಶಕ್ಕೆ ಹೋಗುವ ಪ್ರಯತ್ನದಲ್ಲಿರುವವರಿಗೆ ಯಶಸ್ಸು ಸಿಗಲಿದೆ.
12. ಮೀನ ರಾಶಿ (Pisces)
ಲಾಭ ಸ್ಥಾನದಲ್ಲಿ ಮಂಗಳನ ಸಂಚಾರವು ಅತ್ಯುತ್ತಮ ಕಾಲವನ್ನು ತರಲಿದೆ. ಹಳೆಯ ಹೂಡಿಕೆಗಳಿಂದ ಭಾರಿ ಲಾಭವಾಗಲಿದೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿರುವವರಿಗೆ ಅನಿರೀಕ್ಷಿತ ಧನಯೋಗವಿದೆ. ಸ್ನೇಹಿತರ ಬೆಂಬಲ ಸಿಗಲಿದೆ.
ಲೇಖನ- ಶ್ರೀನಿವಾಸ ಮಠ





