ಇದೇ ಮಾರ್ಚ್ 3, 2026ರಂದು ಸಂಭವಿಸಲಿರುವ ಗ್ರಸ್ತೋದಯ ಕೇತುಗ್ರಸ್ತ ಚಂದ್ರಗ್ರಹಣವು ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಈ ಪೂರ್ಣಗ್ರಾಸ ಗ್ರಹಣವು ಫಾಲ್ಗುಣ ಶುಕ್ಲ ಪೂರ್ಣಿಮೆಯಂದು ಸಿಂಹ ರಾಶಿ ಮತ್ತು ಪೂರ್ವ ಫಲ್ಗುಣಿ ನಕ್ಷತ್ರದಲ್ಲಿ ಸಂಭವಿಸುತ್ತಿದ್ದು, ಭಾರತದಲ್ಲಿ ಗೋಚರಿಸುವುದರಿಂದ ಸೂತಕದ ನಿಯಮಗಳು ಅನ್ವಯಿಸುತ್ತವೆ. ಮಧ್ಯಾಹ್ನ 03:09ಕ್ಕೆ ಪ್ರಾರಂಭವಾಗಿ ಸಂಜೆ 06:43ಕ್ಕೆ ಮೋಕ್ಷವಾಗುವ ಈ ಪರ್ವಕಾಲದಲ್ಲಿ ದೋಷ ನಿವಾರಣೆಗಾಗಿ ಜಪ, ತಪ ಮತ್ತು ದಾನಗಳಿಗೆ ವಿಶೇಷ ಪ್ರಾಶಸ್ತ್ಯವಿದೆ. ವಿಶೇಷವಾಗಿ ಕೇತು ದೋಷ ಶಾಂತಿಗಾಗಿ ಹುರುಳಿಕಾಳು, ಮಿಶ್ರ ವರ್ಣದ ವಸ್ತ್ರ ಮತ್ತು ನಾಗ ಪ್ರತಿಮೆಯ ದಾನವನ್ನು ಶಾಸ್ತ್ರಗಳಲ್ಲಿ ಸೂಚಿಸಲಾಗಿದೆ. ಈ ಲೇಖನವು ಗ್ರಹಣದ ನಿಖರ ಸಮಯ, ರಾಶಿ ಫಲಗಳು ಮತ್ತು ಆಚರಿಸಬೇಕಾದ ಶಾಂತಿ ಕ್ರಮಗಳ ಸಮಗ್ರ ಮಾಹಿತಿಯನ್ನು ಒಳಗೊಂಡಿದೆ.
ಗ್ರಹಣದ ಪ್ರಮುಖ ಸಮಯ:
- ಗ್ರಹಣ ಸ್ಪರ್ಶ (ಆರಂಭ): 03-09 p.m.
- ಸಮ್ಮೀಲನ (ಪೂರ್ಣಗ್ರಹಣ ಆರಂಭ): 04-40 p.m.
- ಗ್ರಹಣ ಮಧ್ಯ ಕಾಲ: 04-56 p.m.
- ಉನ್ಮೀಲನ (ಪೂರ್ಣಗ್ರಹಣ ಅಂತ್ಯ): 05-29 p.m.
- ಗ್ರಹಣ ಮೋಕ್ಷ (ಮುಕ್ತಾಯ): 06-43 p.m.
- ಒಟ್ಟು ಪುಣ್ಯಕಾಲ: 03 ಗಂಟೆ 34 ನಿಮಿಷಗಳು
ಈ ಗ್ರಹಣವು ಭಾರತ ಸೇರಿದಂತೆ ಏಷ್ಯಾ, ಆಸ್ಟ್ರೇಲಿಯಾ ಮತ್ತು ಅಮೆರಿಕದ ಕೆಲವು ಭಾಗಗಳಲ್ಲಿ ಗೋಚರಿಸುತ್ತದೆ. ಭಾರತದಲ್ಲಿ ಗೋಚರವಿರುವುದರಿಂದ ಈ ಗ್ರಹಣದ ಆಚರಣೆ ಮತ್ತು ಆಚರಣೆ ನಿಯಮಗಳು ನಮಗೆ ಅನ್ವಯಿಸುತ್ತವೆ.
ಕೇತುಗ್ರಸ್ತ ಚಂದ್ರ ಗ್ರಹಣ ಮಾರ್ಚ್ ಮೂರಕ್ಕೆ ಸಿಂಹ ರಾಶಿಯಲ್ಲಿ; ಮೇಷದಿಂದ ಮೀನದ ತನಕ ಯಾರಿಗೆ ಏನು ಫಲ?
ರಾಶಿಗಳ ಮೇಲಿನ ಪ್ರಭಾವ (ಗ್ರಹಣ ಫಲ)
ಈ ಗ್ರಹಣವು ಸಿಂಹ ರಾಶಿ ಮತ್ತು ಪೂರ್ವ ಫಲ್ಗುಣಿ (ಪುಬ್ಬ) ನಕ್ಷತ್ರದಲ್ಲಿ ನಡೆಯಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿವಿಧ ರಾಶಿಗಳಿಗೆ ಈ ಕೆಳಗಿನ ಫಲಗಳಿವೆ:
| ಫಲ | ರಾಶಿಗಳು |
| ಶುಭ ಫಲ | ತುಲಾ, ವೃಶ್ಚಿಕ, ಮೀನ, ಮಿಥುನ |
| ಮಿಶ್ರ ಫಲ | ಧನಸ್ಸು, ಕುಂಭ, ಮೇಷ, ಕಟಕ |
| ಅಶುಭ ಫಲ | ಸಿಂಹ, ಕನ್ಯಾ, ಮಕರ, ವೃಷಭ |
ಆಹಾರ ಮತ್ತು ದಿನಚರಿಯ ನಿಯಮಗಳು
- ಭೋಜನ ವಿಚಾರ: ಸೂರ್ಯೋದಯದಿಂದಲೇ ವೇಧ ಆರಂಭವಾಗುವುದರಿಂದ ಹಗಲಿನಲ್ಲಿ ಭೋಜನ ನಿಷಿದ್ಧ. ಆದರೆ ಮಕ್ಕಳು, ಗರ್ಭಿಣಿಯರು, ವಯೋವೃದ್ಧರು ಮತ್ತು ಅಶಕ್ತರು ಹಗಲು 11 ವರೆಗೆ ಆಹಾರ ಸೇವಿಸಬಹುದು. ಗ್ರಹಣದ ಮೋಕ್ಷದ ನಂತರ ಶುದ್ಧ ಬಿಂಬದ ದರ್ಶನ ಮಾಡಿ, ಆಹಾರ ಸೇವಿಸಬೇಕು.
- ಸ್ನಾನ ಮತ್ತು ತರ್ಪಣ: ಗ್ರಹಣ ಆರಂಭವಾದಾಗ ಮತ್ತು ಮುಕ್ತಾಯದ ನಂತರ ಉಟ್ಟ ಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು. ಗ್ರಹಣದ ಮಧ್ಯ ಕಾಲದ ನಂತರ ಮತ್ತು ಮೋಕ್ಷಕ್ಕೆ ಮೊದಲು ತರ್ಪಣಾದಿಗಳನ್ನು ನಡೆಸಬಹುದು.
- ನಿರ್ಬಂಧಗಳು: ಗ್ರಹಣ ಸಮಯದಲ್ಲಿ ಕೋಪಗೊಳ್ಳಬಾರದು, ದೈಹಿಕ ಸಂಬಂಧ ಹೊಂದಬಾರದು, ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಾರದು ಮತ್ತು ನಿರ್ಜನ ಪ್ರದೇಶಗಳಿಗೆ ಹೋಗಬಾರದು.
ದೋಷ ನಿವಾರಣೆಗೆ ಪರಿಹಾರಗಳು
ಗ್ರಹಣದ ದೋಷದಿಂದ ಮುಕ್ತಿ ಪಡೆಯಲು ಮತ್ತು ಮನಶ್ಶಾಂತಿಗಾಗಿ ಈ ಕೆಳಗಿನ ಮಂತ್ರಗಳನ್ನು ಪಠಿಸುವುದು ಉತ್ತಮ:
- ಚಂದ್ರ ಬೀಜ ಮಂತ್ರ: ‘ಓಂ ಶ್ರಾಂ ಶ್ರೀಂ ಶೌಂ ಸಃ ಚಂದ್ರಾಯ ನಮಃ’.
- ಚಂದ್ರ ಗಾಯತ್ರಿ ಮಂತ್ರ: ‘ಓಂ ಕ್ಷೀರಪುತ್ರಾಯ ವಿದ್ಮಹೇ ಅಮೃತತತ್ವಾಯ ಧೀಮಹೀ ತನ್ನೊ ಸೋಮಃ ಪ್ರಚೋದಯಾತ್’.
- ಸ್ತೋತ್ರಗಳು: ಲಲಿತಾ ಸಹಸ್ರನಾಮ, ಶಿವ ಅಥವಾ ವಿಷ್ಣು ಸಹಸ್ರನಾಮಗಳನ್ನು ಪಠಿಸುವುದು ಶುಭಕರ.
ದಾನದ ಮಹತ್ವ: ಗ್ರಹಣದ ನಂತರ ಬಿಳಿ ಬಣ್ಣದ ವಸ್ತುಗಳಾದ ಹಾಲು, ಅಕ್ಕಿ, ಸಕ್ಕರೆ ಅಥವಾ ಬಿಳಿ ಬಟ್ಟೆಗಳನ್ನು ದಾನ ಮಾಡುವುದು ಅತ್ಯಂತ ಫಲಪ್ರದ. ಆರೋಗ್ಯ ಸಮಸ್ಯೆ ಇರುವವರು ಬೆಳ್ಳಿ ನಾಣ್ಯ ಮತ್ತು ನೀರನ್ನು ಬಳಸಿ ಪರಿಹಾರ ಮಾಡಿಕೊಳ್ಳಬಹುದು. ನಾಗ ಪ್ರತಿಮೆ (ನಾಗಪ್ಪ) ಮತ್ತು ಚಂದ್ರಬಿಂಬವನ್ನು ತುಪ್ಪದಿಂದ ತುಂಬಿದ ತಾಮ್ರ ಅಥವಾ ಕಂಚಿನ ಪಾತ್ರೆಯ ಮೇಲಿಟ್ಟು ದಾನ ಮಾಡಬೇಕು.
ಕೇತು ಶಾಂತಿ ಮಂತ್ರಗಳು
ಗ್ರಹಣದ ಸಮಯದಲ್ಲಿ ಕೇತುವಿಗೆ ಸಂಬಂಧಿಸಿದ ಮಂತ್ರ ಅಥವಾ ಸ್ತೋತ್ರಗಳನ್ನು ಜಪಿಸುವುದು ದೋಷ ನಿವಾರಣೆಗೆ ಸಹಕಾರಿ. ವಿಶೇಷವಾಗಿ ಈ ಕೆಳಗಿನ ಮಂತ್ರಗಳನ್ನು ಪಠಿಸಬಹುದು:
ಗ್ರಹಣ ಶಾಂತಿ ಮಂತ್ರ: “ಇಂದ್ರೆ ನಲೋ ದಂಢಧರಶ್ಮಿ ಕಾಲಃ, ಪಾಶಾಯುಧೋ ವಾಯುಧನೇಶರುದ್ರಃ | ಮಜ್ಜನ್ಮಋಗೊ ಮಮ ರಾಶಿ ಸಂಸ್ಮಾ, ಕುರ್ವಂತು ಚಂದ್ರಗ್ರಹದೋಷಶಾಂತಿಂ ||”.
ದಾನ ಸಂಕಲ್ಪ ಮಂತ್ರ: “ವಿಧುಂತುದ ನಮಸ್ತುಭ್ಯಂ ಸಿಂಹಿಕಾನಂದನಾಚ್ಯುತ | ದಾನೇನಾನೇನ ನಾಗಸ್ಯ ರಕ್ಷಮಾಂ ವೇಧಜಾದ್ಮಯಾತ್ |”.
ಧಾನ್ಯ ಮತ್ತು ವಸ್ತ್ರ: ಚಿತ್ರ (ಮಿಶ್ರ) ಬಣ್ಣದ ವಸ್ತ್ರ ಮತ್ತು ಹುರುಳಿಕಾಳನ್ನು ದಕ್ಷಿಣೆಯ ಸಮೇತ ದಾನ ಮಾಡಬೇಕು.
ಈ ಮಂತ್ರಗಳನ್ನು ಜಪಿಸುವುದರಿಂದ ಗ್ರಹಣದ ನಕಾರಾತ್ಮಕ ಪರಿಣಾಮಗಳು ದೂರವಾಗಿ ಮನಸ್ಸಿಗೆ ಶಾಂತಿ ದೊರೆಯುತ್ತದೆ.
ವಿಶೇಷ ಸೂಚನೆ: ಹವಾಮಾನ ವೈಪರೀತ್ಯದಿಂದ ಒಂದು ವೇಳೆ ಗ್ರಹಣವು ಕಣ್ಣಿಗೆ ಕಾಣಿಸದಿದ್ದರೂ ಗ್ರಹಣವಿರುವುದರಿಂದ ಕರ್ಮಾನುಷ್ಠಾನಗಳನ್ನು ಮಾಡಬೇಕು.
ಗ್ರಹಣ ಮುಗಿದ ನಂತರ ಮನೆಯನ್ನು ಶುದ್ಧೀಕರಿಸಿ ದಾನ-ಧರ್ಮಗಳನ್ನು ಮಾಡುವುದರಿಂದ ಜೀವನದಲ್ಲಿ ಸುಖ-ಸಮೃದ್ಧಿ ಉಂಟಾಗುತ್ತದೆ.
ಲೇಖನ- ಶ್ರೀನಿವಾಸ ಮಠ





