ಈ ಲೇಖನದಲ್ಲಿ ನಿಮಗೆ ಬಹಳ ಆಸಕ್ತಿ ಹಾಗೂ ಕುತೂಹಲ ಮೂಡಿಸುವಂಥ ದೇವಾಲಯದ ಮಾಹಿತಿಯೊಂದನ್ನು ನೀಡುತ್ತಿದ್ದೇನೆ. ಈ ದೇವಾಲಯ ಇರುವುದು ಆಫ್ರಿಕಾ ಖಂಡದ ಉಗಾಂಡದಲ್ಲಿನ ರಾಜಧಾನಿ ಕಂಪಾಲದಲ್ಲಿ. ಇಲ್ಲಿನ ನಾಕಾಸಿರೋ ಮಾರುಕಟ್ಟೆಯಲ್ಲಿ ಸೋಮನಾಥನ ದೇವಾಲಯ ಇದೆ. ಇಲ್ಲಿನ ಭಾರತೀಯರು ಸೇರಿ ನಿರ್ಮಾಣ ಮಾಡಿದಂಥ ದೇವಾಲಯ ಇದು. ದೇಗುಲ ಉದ್ಘಾಟನೆಯಾಗಿ 64 ವರ್ಷಗಳೇ ಕಳೆದಿವೆ. ಸೋಮನಾಥ ಮಾತ್ರವಲ್ಲದೆ, ಅಂಬಾಜಿ ಮಾತಾ, ಲಕ್ಷ್ಮೀನಾರಾಯಣ, ಪರಿವಾರ ಸಮೇತನಾಗಿ ಶ್ರೀರಾಮ, ರಾಧಾಕೃಷ್ಣ, ಗಣಪತಿ ಹಾಗೂ ಹನುಮಂತನ ವಿಗ್ರಹ ಸಹ ಇದೆ. ಕಂಪಾಲದಲ್ಲಿ ಇರುವಂಥ ಸನಾತನ ಧರ್ಮ ಮಂಡಲದಿಂದ ಈ ದೇಗುಲದ ನಿರ್ವಹಣೆ ನಡೆಯುತ್ತಿದೆ. ಜೂನ್ 4, 1956ರಲ್ಲಿ ಈ ದೇಗುಲದ ಭೂಮಿ ಪೂಜೆ ನಡೆಯಿತು. ಇನ್ನು ಉದ್ಘಾಟನೆ ಅಥವಾ ದೇವಾಲಯದ ಆರಂಭವಾದದ್ದು ಡಿಸೆಂಬರ್ 21ರಿಂದ 26, 1961ರಲ್ಲಿ.
ದೇವಾಲಯದ ನಿರ್ಮಾಣ ಮತ್ತು ಸಮಯ
ಈ ದೇವಾಲಯದ ನಿರ್ಮಾಣ ಸಂಪೂರ್ಣವಾಗಿ ಕಲ್ಲಿನಿಂದಲೇ ಆಗಿದೆ. ಮತ್ತೂ ವಿಶೇಷ ಏನೆಂದರೆ, ಕಬ್ಬಿಣ- ಕಾಂಕ್ರೀಟ್ ಬಳಸದೆ ಮಾಡಿರುವಂಥ ದೇವಾಲಯ ಕಟ್ಟಡವಿದು. ಬೆಳಗ್ಗೆ 7ರಿಂದ ಮಧ್ಯಾಹ್ನ 12ರ ತನಕ ಹಾಗೂ ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯ ತನಕ ಈ ದೇವಸ್ಥಾನ ತೆರೆದಿರುತ್ತದೆ. ಹಬ್ಬ- ಹರಿದಿನಗಳಲ್ಲಿ, ವಾರಾಂತ್ಯದ ಸಂಜೆಗಳಲ್ಲಿ ಇಲ್ಲಿ ವಿಶೇಷ ಪೂಜೆ, ಭಜನೆಗಳು ನಡೆಯುತ್ತವೆ. ವಿಶೇಷ ದಿನಗಳಲ್ಲಿ ದೇವಸ‌್ಥಾನ ಕಾರ್ಯ ನಿರ್ವಹಿಸುವ ಅವಧಿ ಬದಲಾಗುತ್ತದೆ. ಸನಾತನ ಧರ್ಮ ಮಂಡಲದವರು ಬಹಳ ಶ್ರದ್ಧೆ- ಭಕ್ತಿಯಿಂದ ಈ ದೇವಾಲಯದಲ್ಲಿನ ನಿರ್ವಹಣೆ ಮಾಡುತ್ತಾ ಬಂದಿದ್ದಾರೆ.
ಪ್ರಸಾದ ಮತ್ತು ಅನ್ನದಾನದ ವ್ಯವಸ್ಥೆ
ಸಾಮಾನ್ಯವಾಗಿ ಶನಿವಾರ- ಭಾನುವಾರದ ವಾರಾಂತ್ಯಗಳಲ್ಲಿ ಪ್ರಸಾದ ಭೋಜನದ ವ್ಯವಸ್ಥೆ ಇರುತ್ತದೆ. ವಿಶೇಷ ಪೂಜೆ ಆದ ಮೇಲೆ ಭಕ್ತರಿಗೆ ‘ಮಹಾಪ್ರಸಾದ’ ಅಥವಾ ‘ಅನ್ನದಾನ’ದ ವ್ಯವಸ್ಥೆ ಮಾಡಲಾಗಿರುತ್ತದೆ. ಸ್ಥಳೀಯ ಭಾರತೀಯ ಮೂಲದ ಕುಟುಂಬಗಳು ಮನೆಗಳಲ್ಲಿ ಜನ್ಮದಿನ, ವಿವಾಹ ವಾರ್ಷಿಕೋತ್ಸವ ಸೇರಿದಂತೆ ಶುಭ ದಿನಗಳಲ್ಲಿ ಇಲ್ಲಿನ ಊಟದ ವ್ಯವಸ್ಥೆಯ ಪ್ರಾಯೋಜಕತ್ವವನ್ನು ಸಹ ಮಾಡುತ್ತಾರೆ. ಅದರ ಜೊತೆಗೆ ತಮ್ಮ ಹಿರಿಯರು ಗತಿಸಿದ ದಿನದ ಪುಣ್ಯಸ್ಮರಣೆಯಲ್ಲಿ ಕೂಡ ಅನ್ನ ಸಂತರ್ಪಣೆಯನ್ನು ಆಯೋಜಿಸುತ್ತಾರೆ. ಆದರೆ ನಿಯಮ ಏನೆಂದರೆ, ದೇವಸ್ಥಾನದ ಕಚೇರಿಯಲ್ಲಿ ಮುಂಚಿತವಾಗಿಯೇ ಮಾಹಿತಿ ನೀಡಿ, ಪ್ರಸಾದದ ವ್ಯವಸ್ಥೆಗೆ ಸೇವೆಯನ್ನು ನೀಡಬೇಕಾಗುತ್ತದೆ. ಪ್ರತಿ ತಿಂಗಳ ನಾಲ್ಕನೇ ಶನಿವಾರ ಇಲ್ಲಿನ ಮಹಾಪ್ರಸಾದ ವ್ಯವಸ್ಥೆಯನ್ನು ಪ್ರಸಿದ್ಧ ಉದ್ಯಮಿ ಸುಧೀರ್ ರೂಪರೇಲಿಯಾ ಅವರು ಮಾಡುತ್ತಾರೆ. ಸುಧೀರ್ ಅವರ ಮಾಲೀಕತ್ವದಲ್ಲಿ ಇರುವಂಥ ಸ್ಪೀಕ್ ಹೋಟೆಲ್ ನಿಂದ ಅಡುಗೆ ಬರುತ್ತದೆ.
ಸಾಮಾನ್ಯವಾಗಿ ಅನ್ನಪ್ರಸಾದ ವ್ಯವಸ್ಥೆ ಏನೇನು ಇರುತ್ತದೆ?
ಸಿಹಿ, ಮೆಣಸಿನಕಾಯಿ ಬಜ್ಜಿ, ಆಲೂ ಬೋಂಡಾ, ಸಂಡಿಗೆ, ಪೂರಿ- ಸಬ್ಜಿ, ಉಪ್ಪಿನಕಾಯಿ, ಉಪ್ಪು ಹಚ್ಚಿ ಕರಿದ ಹಸಿರು ಮೆಣಸಿನಕಾಯಿ, ಅನ್ನ, ಮಜ್ಜಿಗೆಯಲ್ಲಿ ಮಾಡಿದಂಥ ಸಾರಿನಂಥದ್ದು ಮತ್ತು ಮಜ್ಜಿಗೆ ಇರುತ್ತದೆ.

ವಿಶೇಷ ಪೂಜೆ ಮತ್ತು ಕಾರ್ಯಕ್ರಮಗಳು
ಈ ದೇವಾಲಯದಲ್ಲಿ ಪ್ರತಿದಿನ ಬೆಳಗ್ಗೆ- ಸಂಜೆ ಆರತಿ ನಡೆಯುತ್ತದೆ. ಅದರಲ್ಲೂ ಸಂಜೆಯ ಆರತಿ ಬಹಳ ವಿಶೇಷವಾದ ಅನುಭವ ದೊರಕಿಸುತ್ತದೆ. ಇನ್ನು ಪ್ರತಿ ಶನಿವಾರ ಸಂಜೆ ಹನುಮಾನ್ ಚಾಲೀಸಾ ಪಠಣ ಹಾಗೂ ವಿಶೇಷ ಭಜನೆಗಳು ಸಹ ನಡೆಯುತ್ತವೆ. ಈ ಸಮಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆ. ದೀಪಾವಳಿ, ಕೃಷ್ಣ ಜನ್ಮಾಷ್ಟಮಿ, ರಾಮನವಮಿ, ಶಿವರಾತ್ರಿ ದಿನದಂದು ದೇಗುಲದಲ್ಲಿನ ಅಲಂಕಾರ ಅದ್ಭುತವಾಗಿರುತ್ತದೆ. ಅದರ ಜೊತೆಗೆ ಸಾರ್ವಜನಿಕರಿಗೆ ಮಹಾಪ್ರಸಾದದ ವ್ಯವಸ್ಥೆಯನ್ನು ತುಂಬ ದೊಡ್ಡ ಮಟ್ಟದಲ್ಲಿ ಮಾಡಲಾಗುತ್ತದೆ. ಇಲ್ಲಿನ ಸಭಾಂಗಣದಲ್ಲಿ ಆಗಾಗ ಧಾರ್ಮಿಕ ಪ್ರವಚನಗಳು, ಯೋಗ ತರಗತಿಗಳು ಮೊದಲಾದವು ನಡೆಯುತ್ತವೆ.
ಸ್ಥಳ ಖರೀದಿ ನೂರು ವರ್ಷ
ಶ್ರೀ ಸನಾತನ ಧರ್ಮ ಮಂಡಲ ಉಗಾಂಡದ ನೋಂದಣಿ ಆಗಿರುವುದು 1925ರಲ್ಲಿ. ಅದೇ ವರ್ಷ ಈಗ ದೇವಸ್ಥಾನ ಇರುವ ಸ್ಥಳವನ್ನು ಖರೀದಿಯನ್ನು ಮಾಡಲಾಯಿತು. ಅದರ ನೆನಪಿಗಾಗಿ ಕಳೆದ ವರ್ಷ ಶತಮಾನೋತ್ಸವ ಸಂಭ್ರಮಾಚರಣೆ ಏಳು ದಿನಗಳ ಕಾಲ ಅದ್ಧೂರಿಯಾಗಿ ನಡೆಯಿತು.
ಶನಿ ದೋಷವೇ? ಆರ್ಥಿಕ ಸಂಕಷ್ಟವೇ? ನಿಮ್ಮ ರಾಶಿಗೆ ಅನುಗುಣವಾಗಿ ಈ ದೇವಸ್ಥಾನಗಳಿಗೆ ಹೋದರೆ ಶುಭ!
ಭಕ್ತರ ಅನುಭವ
ಉಗಾಂಡದಲ್ಲಿಯೇ ಶ್ರೀಮಂತರಾದ- ಭಾರತೀಯ ಮೂಲದ ಸುಧೀರ್ ರೂಪರೇಲಿಯಾ ಅವರದು ದೊಡ್ಡ ವ್ಯಾಪಾರ ಸಾಮ್ರಾಜ್ಯ ಇದೆ. ಅವರಿಗೆ ಸೇರಿದ ಕಂಪಾಲದಲ್ಲಿ ಪ್ರತಿಷ್ಠಿತ ಹೋಟೆಲ್ ವೊಂದರಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವ, ಬೆಂಗಳೂರಿನ ಬನಶಂಕರಿ ಮೂರನೇ ಹಂತದ ನಿವಾಸಿ ಶ್ರೀಹರ್ಷ ಅವರು ಈ ದೇವಸ್ಥಾನದ ಬಗ್ಗೆ ‘ಶ್ರೀಗುರುಭ್ಯೋ.ಕಾಮ್’ ಜೊತೆಗೆ ಮಾತನಾಡಿ, ಕಂಪಾಲದ ವಾತಾವರಣ ಬಹಳ ಚೆನ್ನಾಗಿದೆ. ಇಲ್ಲಿನ ಪರಿಸರ, ಹೆಚ್ಚಿನ ಬಿಸಿಲು ಇಲ್ಲದ ತಣ್ಣನೆ ವಾತಾವರಣ ನನಗೆ ತೊಂಬತ್ತರ ದಶಕದ ಬೆಂಗಳೂರನ್ನು ನೆನಪಿಸುತ್ತದೆ. ನಾನಂತೂ ಈ ದೇವಸ್ಥಾನಕ್ಕೆ ಆಗಿಂದಾಗ ಬರುತ್ತಲೇ ಇರುತ್ತೇನೆ. ಈ ಸ್ಥಳದಲ್ಲಿ ದೈವಿಕವಾದ ಅನುಭವ ಗಮನಕ್ಕೆ ಬರುತ್ತದೆ. ಇಲ್ಲಿನ ಪ್ರಸಾದ, ವಾತಾವರಣ, ದೇವಾಲಯದ ವಾಸ್ತುಶಿಲ್ಪ ಇವೆಲ್ಲ ಸೇರಿ ಭಾರತದಲ್ಲಿಯೇ ಇದ್ದೀನೇನೋ ಎಂಬ ಮಧುರ ಭಾವವೊಂದನ್ನು ತರುತ್ತದೆ. ದೇವಾಲಯದ ಬಗ್ಗೆ ಹೇಳುವುದು ಅಂದರೆ, ಪ್ರಸಾದವನ್ನು ಬಿಟ್ಟು ಮಾತನಾಡುವುದು ಹೇಗೆ? ವಾರಾಂತ್ಯದಲ್ಲಿ ಇಲ್ಲಿನ ಅನ್ನದಾನ ವ್ಯವಸ್ಥೆ ಬಹಳ ಚೆನ್ನಾಗಿರುತ್ತದೆ. ಸನಾತನ ಧರ್ಮ ಮಂಡಲ ಹಾಗೂ ಕಂಪಾಲದಲ್ಲಿ ಇರುವ ಭಾರತೀಯರು ಸೇರಿಕೊಂಡು ಮಾಡುತ್ತಿರುವ ಅತ್ಯುತ್ತಮ ಕೆಲಸ ಇದು. ಹೇಳುವುದಕ್ಕೆ ಸಾವಿರಾರು ನೆನಪುಗಳು ಈ ದೇವಾಲಯದ ಜೊತೆಗೆ ಇದೆ; ಆದರೆ ನಾನು ಹೇಳುವುದೇನೆಂದರೆ, ಉಗಾಂಡಕ್ಕೆ ಬಂದಾಗ ಒಂದು ಸಲ ದೇವಸ್ಥಾನಕ್ಕೆ ಭೇಟಿ ಕೊಡಿ ಎಂದು ತಮ್ಮ ಮಾತು ಮುಗಿಸಿದರು.

ಉಗಾಂಡದ ಕಂಪಾಲ ಸೋಮನಾಥ ದೇವಾಲಯ: ಪ್ರಮುಖ ಮಾಹಿತಿಗಳು
| ವಿವರ | ಮಾಹಿತಿ |
| ದೇವಾಲಯದ ಹೆಸರು | ಸೋಮನಾಥ ದೇವಾಲಯ |
| ಸ್ಥಳ | ನಾಕಾಸಿರೋ ಮಾರುಕಟ್ಟೆ, ಕಂಪಾಲ (ಉಗಾಂಡದ ರಾಜಧಾನಿ) |
| ನಿರ್ವಹಣೆ | ಶ್ರೀ ಸನಾತನ ಧರ್ಮ ಮಂಡಲ (ಸ್ಥಾಪನೆ: 1925) |
| ಪ್ರತಿಷ್ಠಾಪಿತ ದೇವತೆಗಳು | ಸೋಮನಾಥ, ಅಂಬಾಜಿ ಮಾತಾ, ಲಕ್ಷ್ಮೀನಾರಾಯಣ, ಶ್ರೀರಾಮ ಪರಿವಾರ, ರಾಧಾಕೃಷ್ಣ, ಗಣಪತಿ ಮತ್ತು ಹನುಮಂತ |
| ನಿರ್ಮಾಣದ ವಿಶೇಷತೆ | ಸಂಪೂರ್ಣ ಶಿಲೆಗಳಿಂದ ನಿರ್ಮಿತ (ಕಬ್ಬಿಣ ಮತ್ತು ಕಾಂಕ್ರೀಟ್ ಬಳಸಲಾಗಿಲ್ಲ) |
| ಪ್ರಮುಖ ದಿನಾಂಕಗಳು | ಭೂಮಿ ಪೂಜೆ: ಜೂನ್ 4, 1956
ಉದ್ಘಾಟನೆ: ಡಿಸೆಂಬರ್ 21-26, 1961 |
| ದರ್ಶನದ ಸಮಯ | ಬೆಳಗ್ಗೆ 7:00 ರಿಂದ 12:00
ಸಂಜೆ 4:00 ರಿಂದ ರಾತ್ರಿ 8:00 |
| ವಿಶೇಷ ಸೇವೆಗಳು | ಪ್ರತಿದಿನ ಆರತಿ, ಶನಿವಾರ ಹನುಮಾನ್ ಚಾಲೀಸಾ ಪಠಣ ಮತ್ತು ಭಜನೆ |
| ಮಹಾಪ್ರಸಾದ | ವಾರಾಂತ್ಯದಲ್ಲಿ ಅನ್ನದಾನ; ಪ್ರತಿ ತಿಂಗಳ 4ನೇ ಶನಿವಾರ ಉದ್ಯಮಿ ಸುಧೀರ್ ರೂಪರೇಲಿಯಾ ಅವರಿಂದ ಸೇವೆ |
| ಪ್ರಸಾದದ ಮೆನು | ಸಿಹಿ, ಬಜ್ಜಿ, ಬೋಂಡಾ, ಸಂಡಿಗೆ, ಪೂರಿ-ಸಬ್ಜಿ, ಉಪ್ಪಿನಕಾಯಿ, ಅನ್ನ, ಸಾರು ಮತ್ತು ಮಜ್ಜಿಗೆ |
| ಇತರ ಚಟುವಟಿಕೆಗಳು | ಧಾರ್ಮಿಕ ಪ್ರವಚನಗಳು, ಯೋಗ ತರಗತಿಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು |
ಲೇಖನ– ಶ್ರೀನಿವಾಸ ಮಠ





