Sri Gurubhyo Logo

Jupiter Transit In Taurus: ವೃಷಭ ರಾಶಿಗೆ ಗುರು ಗ್ರಹ ಪ್ರವೇಶ; ಮೇಷದಿಂದ ಮೀನ ರಾಶಿಯ ತನಕ ಏನು ಫಲ?

Jupiter Planet
ಗುರು ಗ್ರಹ

ಇದೇ ಮೇ ತಿಂಗಳ ಒಂದನೇ ತಾರೀಕು ಗುರು ಗ್ರಹ ವೃಷಭ ರಾಶಿಗೆ ಪ್ರವೇಶ ಮಾಡುತ್ತಿದೆ. ವೃಷಭ ರಾಶಿಯಲ್ಲಿ ಗುರು ಗ್ರಹ ಸಂಚಾರ ಮಾಡುವ ತನಕ ಮೇಷದಿಂದ ಮೀನದ ತನಕ ಯಾವ ರಾಶಿಯವರಿಗೆ ಏನು ಫಲ ಎಂದು ವಿವರಿಸುವಂಥ ಲೇಖನ ಇಲ್ಲಿದೆ. ಅದಕ್ಕೂ ಮುನ್ನ ಕೆಲವು ಸಾಮಾನ್ಯ ಮಾಹಿತಿಗಳು ತಿಳಿದುಕೊಂಡು ಬಿಡಿ. ಧನುಸ್ಸು ಹಾಗೂ ಮೀನ ರಾಶಿಗಳು ಗುರು ಗ್ರಹಕ್ಕೆ ಸ್ವ ಕ್ಷೇತ್ರವಾಗುತ್ತದೆ. ಕರ್ಕಾಟಕದಲ್ಲಿ ಗುರು ಉಚ್ಚ ಸ್ಥಾನದಲ್ಲಿ ಇರುತ್ತದೆ. ಮಕರ ರಾಶಿಯಲ್ಲಿ ಗುರುವಿದ್ದಲ್ಲಿ ಅದು ನೀಚ ಸ್ಥಾನವಾಗುತ್ತದೆ. 

ಸಾಮಾನ್ಯವಾಗಿ ಒಂದು ರಾಶಿಯಲ್ಲಿ ಹನ್ನೆರಡು ತಿಂಗಳು ಅಥವಾ ಒಂದು ವರ್ಷ ಗುರು ಗ್ರಹ ಇರುತ್ತದೆ. ತಾನು ಇರುವ ಸ್ಥಾನದಿಂದ ಐದು, ಏಳು ಹಾಗೂ ಒಂಬತ್ತನೇ ಮನೆಯನ್ನು ವೀಕ್ಷಣೆ ಮಾಡುತ್ತದೆ.

ಉಪನಯನ, ಮದುವೆ ಮೊದಲಾದ ಶುಭ ಕಾರ್ಯಗಳಿಗೆ ಗುರು ಬಲವನ್ನು ಪರಿಗಣಿಸಲಾಗುತ್ತದೆ. ಜನ್ಮ ಜಾತಕದಲ್ಲಿ ಚಂದ್ರನಿರುವ ರಾಶಿಯಿಂದ ಎರಡು, ಐದು, ಏಳು, ಒಂಬತ್ತು ಅಥವಾ ಹನ್ನೊಂದನೇ ಮನೆಯಲ್ಲಿ ಗುರು ಸಂಚರಿಸುವಾಗ ಗುರುಬಲ ಎನ್ನಲಾಗುತ್ತದೆ. ವೃಷಭ ರಾಶಿಗೆ ಗುರು ಪ್ರವೇಶಿಸಿದ ಮೇಲೆ ಮೇಷ, ಕರ್ಕಾಟಕ, ಕನ್ಯಾ, ವೃಶ್ಚಿಕ, ಮಕರ ರಾಶಿಯವರಿಗೆ ಗುರು ಬಲ ಬಂದಂತಾಗುತ್ತದೆ. ಅದೇ ರೀತಿ ಜನ್ಮ ರಾಶಿಗೆ ಗುರು ಪ್ರವೇಶ ಆಗುವಂಥ ವೃಷಭ ಹಾಗೂ ವ್ಯಯ ಸ‌್ಥಾನ ಆಗುವಂಥ ಮಿಥುನ ಮತ್ತು ಅಷ್ಟಮ ಸ್ಥಾನ ಆಗುವಂಥ ತುಲಾ ರಾಶಿಯವರು ಬಹಳ ಜಾಗ್ರತೆಯಿಂದ ಇರಬೇಕು ಹಾಗೂ ಜನ್ಮ ಜಾತಕದಲ್ಲಿ ಗುರುವಿನ ಸ್ಥಾನ, ಕಾರಕತ್ವ ಹಾಗೂ ಬಲಾಬಲವನ್ನು ಒಮ್ಮೆ ತೋರಿಸಿಕೊಳ್ಳಬೇಕು.

Kadandale Subrahmanya Swamy Temple: ತ್ರೇತಾಯುಗದ ವಾಲಿಯಿಂದ ಪೂಜೆ ಆಗಿರುವ ಕಡಂದಲೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಗ್ಗೆ ಇಲ್ಲಿದೆ ಮಾಹಿತಿ

ಇನ್ನು ದ್ವಾದಶ ರಾಶಿಗಳ ಮೇಲೆ ವೃಷಭ ರಾಶಿಯಲ್ಲಿನ ಗುರು ಸಂಚಾರದ ಪ್ರಭಾವ ಹೇಗಿರುತ್ತದೆ ಎಂಬುದನ್ನು ತಿಳಿಯಿರಿ.

ಮೇಷ

ನಿಮ್ಮ ರಾಶಿಗೆ ಎರಡನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಆಗುವಾಗ ಮಾತಿನಲ್ಲಿ ಒಂದು ಆಕರ್ಷಣೆ ಬರುತ್ತದೆ. ಸಂಸಾರದಲ್ಲಿ ಕಲಹಗಳು ಏನಾದರೂ ಇದ್ದಲ್ಲಿ ನಿವಾರಣೆ ಆಗಲಿದೆ. ನಿಮಗೆ ಬರಬೇಕಾದ ಹಣಕ್ಕೆ ಅಡೆತಡೆ ಆಗುತ್ತಿದ್ದಲ್ಲಿ, ಒಂದು ವೇಳೆ ಸರ್ಕಾರದಿಂದ ಅಥವಾ ಪ್ರತಿಷ್ಠಿತ ಸಂಸ್ಥೆಗಳಿಂದ ಬರಬೇಕಾದ ಹಣಕ್ಕೆ ಅಲ್ಲಿನ ಅಧಿಕಾರಿಗಳು ತಡೆ ಒಡ್ಡುತ್ತಿದ್ದಲ್ಲಿ ಅಂತಹ ಸಮಸ್ಯೆಗಳು ನಿವಾರಣೆ ಆಗಲಿವೆ.  ದೊಡ್ಡ ಮಟ್ಟದ ನಷ್ಟ ಆಗಬಹುದು ಎಂದುಕೊಂಡಿದ್ದ ವ್ಯವಹಾರಗಳಲ್ಲಿ ನಷ್ಟವೇ ಆಗದಿರುವಂಥ ಅಥವಾ ನಷ್ಟದ ಪ್ರಮಾಣ ಕಡಿಮೆ ಆಗುವಂಥ ಯೋಗ ಸಹ ಇದೆ. ಅದೃಷ್ಟದ ಬಲದ ಮೇಲೆ ಆಗಬೇಕಿದ್ದ ಕೆಲಸಗಳು ಆಗಲಿವೆ. ತಂದೆ ಅಥವಾ ತಂದೆ ಸಮಾನರಾದವರಿಂದ ಹಣಕಾಸಿನ ಅನುಕೂಲಗಳು ಒದಗಿಬರಲಿವೆ. ಉದ್ಯೋಗದಲ್ಲಿ ಬಡ್ತಿ, ವೇತನ ಹೆಚ್ಚಳ, ವಿದೇಶ ಪ್ರಯಾಣ ಮೊದಲಾದ ಶುಭ ಫಲಗಳನ್ನು ಕಾಣಬಹುದು. ಸಂತಾನ ನಿರೀಕ್ಷೆಯಲ್ಲಿ ಇರುವವರ ಸಹ ಶುಭ ವಾರ್ತೆಯನ್ನು ಕೇಳಲಿದ್ದೀರಿ. ಮದುವೆಗೆ ಪ್ರಯತ್ನ ಮಾಡುತ್ತಿರುವ ವಿವಾಹ ವಯಸ್ಕರಿಗೆ ಸೂಕ್ತ ಸಂಬಂಧಗಳು ದೊರೆಯಲಿವೆ.

ವೃಷಭ

ನಿಮ್ಮ ಜನ್ಮ ರಾಶಿಯಲ್ಲೇ ಗುರು ಸಂಚರಿಸಲಿದ್ದು, ಇದರಿಂದ ಆರೋಗ್ಯ ವಿಚಾರದಲ್ಲಿ ನಾನಾ ಸಮಸ್ಯೆಗಳು ಎದುರಾಗುತ್ತವೆ. ನಿಮ್ಮ ಆರೋಗ್ಯ ಮಾತ್ರವಲ್ಲ, ಮಕ್ಕಳ ಆರೋಗ್ಯ, ಶಿಕ್ಷಣ, ಭವಿಷ್ಯ ಹಾಗೂ ಮದುವೆ ಹೀಗೆ ಒಂದಿಲ್ಲೊಂದು ವಿಚಾರಕ್ಕೆ ಚಿಂತೆಗೆ ಗುರಿ ಆಗುವಂತೆ ಸನ್ನಿವೇಶ ಉದ್ಭವಿಸುತ್ತದೆ. ಈಗಾಗಲೇ ವಿವಾಹ ನಿಶ್ಚಿತಾರ್ಥ ಆಗಿದೆ ಅಂತಾದಲ್ಲಿ ಮಾತುಕತೆಯಲ್ಲಿ ಹತೋಟಿಯನ್ನು ಇರಿಸಿಕೊಳ್ಳಿ. ಅತಿಯಾದ ಸಲುಗೆ ಬೇಡ. ಪ್ರೀತಿ- ಪ್ರೇಮದಲ್ಲಿ ಇರುವಂಥವರು ಮನೆಯಲ್ಲಿ ಈ ವಿಚಾರ ಪ್ರಸ್ತಾವ ಮಾಡಬೇಕು ಅಂದುಕೊಂಡರೆ ಸುಲಭಕ್ಕೆ ಸಮ್ಮತಿ ಸಿಗುವುದಿಲ್ಲ. ಇದಕ್ಕಾಗಿ ಬಹಳ ಕಷ್ಟ ಪಡಬೇಕಾಗುತ್ತದೆ. ಮೂರನೇ ವ್ಯಕ್ತಿಗಳ ಚಾಡಿ ಮಾತಿನಿಂದಲೋ ಅಥವಾ ಹಸ್ತಕ್ಷೇಪದಿಂದಲೋ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಲಿದೆ. ರಿಯಲ್ ಎಸ್ಟೇಟ್, ಡೇರಿ ವ್ಯವಹಾರ ಅಥವಾ ಲೇವಾದೇವಿ ವ್ಯವಹಾರಗಳನ್ನು ಮಾಡುತ್ತಿರುವವರು ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳಬೇಡಿ. ಯಾವುದೇ ಹೊಸದಾದ ಹೂಡಿಕೆಯನ್ನು ಮಾಡದಿರುವುದು ಕ್ಷೇಮ. ಕಾಗದ- ಪತ್ರ, ದಾಖಲಾತಿಗಳನ್ನು ಒಳಗೊಂಡ ವ್ಯವಹಾರ ಇದ್ದಲ್ಲಿ ಕಾನೂನು ತಜ್ಞರ ಸಲಹೆ ಪಡೆದುಕೊಳ್ಳಿ.

ಮಿಥುನ

ನಿಮ್ಮ ರಾಶಿಗೆ ಹನ್ನೆರಡನೇ ಮನೆಯಲ್ಲಿ ಗುರುವಿನ ಸಂಚಾರ ಆಗುತ್ತದೆ. ಇದು ವ್ಯಯ ಸ್ಥಾನ. ಅಂದರೆ ಖರ್ಚುಗಳು ವಿಪರೀತ ಆಗುತ್ತವೆ. ಹತ್ತು ರೂಪಾಯಿಯಲ್ಲಿ ಮುಗಿಯುವಂಥದ್ದಕ್ಕೆ ನಲವತ್ತು ರೂಪಾಯಿ ಆಗುತ್ತದೆ. ಈ ಅವಧಿಯಲ್ಲಿ ಮನೆಯ ನವೀಕರಣ, ವಾಹನಗಳ ರಿಪೇರಿ ಮೊದಲಾದವುಗಳು ಮಾಡಿಸಬೇಕು ಎಂದುಕೊಂಡಲ್ಲಿ ಮೊದಲಿಗೇ ಎಷ್ಟು ಖರ್ಚಾಗಬಹುದು ಎಂಬ ಸರಿಯಾದ ಲೆಕ್ಕಾಚಾರದೊಂದಿಗೆ ಮುಂದುವರಿಯುವುದು ಒಳ್ಳೆಯದು. ಉದ್ಯೋಗ ಸ್ಥಳದಲ್ಲಿ ನಿಮ್ಮ ವಿರುದ್ಧ ದೂರುಗಳನ್ನು ಕೆಲವರು ನೀಡಬಹುದು. ತೀಕ್ಷ್ಣವಾದ ಮಾತುಗಳನ್ನು ಆಡುವ ಮೂಲಕ ನೀವೇ ಕೆಲವರನ್ನು ವಿರೋಧಿಗಳನ್ನಾಗಿ ಮಾಡಿಕೊಳ್ಳಲಿದ್ದೀರಿ. ಇನ್ನು ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವಂಥ ಅನಾರೋಗ್ಯ ಸಮಸ್ಯೆಗಳು ಉಲ್ಬಣವಾಗಿ, ವೈದ್ಯಕೀಯ- ಔಷಧೋಪಚಾರಗಳಿಗೆ ಹೆಚ್ಚಿನ ಖರ್ಚಾಗಲಿದೆ. ಸ್ನೇಹಿತರು- ಸಂಬಂಧಿಕರು ತೆಗೆದುಕೊಂಡು ಬರುವಂಥ ಹೂಡಿಕೆ ಆಲೋಚನೆಗಳಿಂದ ದೂರ ಉಳಿಯುವುದು ಉತ್ತಮ. ಸಂಕೋಚಕ್ಕೆ ಬಿದ್ದು, ಒಪ್ಪಿಕೊಂಡರೆ ಕೈಯಿಂದ ಹಣವನ್ನು ಕಳೆದುಕೊಳ್ಳುವಂತೆ ಆಗುತ್ತದೆ. ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದಕ್ಕೆ ಅಂತಲೇ ಹೆಚ್ಚಿನ ಖರ್ಚಾಗಲಿದೆ.

ಕರ್ಕಾಟಕ

ನಿಮ್ಮ ರಾಶಿಗೆ ಹನ್ನೊಂದನೇ ಮನೆಯಲ್ಲಿ ಗುರುವಿನ ಸಂಚಾರ ಆಗುತ್ತದೆ. ಇದು ಲಾಭ ಸ‌್ಥಾನವಾಗಿದೆ. ವಾಹನ ಲಾಭ, ಭೂಮಿ ಲಾಭ, ಉತ್ತಮ ಸ್ಥಾನಗಳಿಗೆ ನಿಮ್ಮನ್ನು ಆಯ್ಕೆ ಮಾಡುವುದು ಹೀಗೆ ಶುಭ ಫಲಗಳನ್ನು ಕಾಣಲಿದ್ದೀರಿ. ಹೆಸರು- ಕೀರ್ತಿ, ಪ್ರತಿಷ್ಠೆಗಳು ಹೆಚ್ಚಾಗುವಂಥ ಸಮಯ ಇದು. ಈ ಹಿಂದೆ ನೀವು ಶ್ರಮಪಟ್ಟು ಮಾಡಿದ್ದ ಕೆಲಸಗಳಿಗೆ ಈಗ ನಿಮ್ಮನ್ನು ಗುರುತಿಸುವಂಥ ಕೆಲಸ ಆಗುತ್ತದೆ. ಸೋದರ- ಸೋದರಿಯರ ಮಧ್ಯೆ ಭಿನ್ನಾಭಿಪ್ರಾಯಗಳು ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಕಟ್ಟಿರುವ ಮನೆಯನ್ನು ಖರೀದಿ ಮಾಡಬೇಕು ಎಂದು ಪ್ರಯತ್ನ ಮಾಡುತ್ತಿರುವವರಿಗೆ ಅದು ಸಾಧ್ಯವಾಗಲಿದೆ. ವಿವಾಹ ಪ್ರಯತ್ನಗಳನ್ನು ಮಾಡುತ್ತಿರುವವರಿಗೆ ಸೂಕ್ತ ಸಂಬಂಧಗಳು ಹುಡುಕಿಕೊಂಡು ಬರಲಿವೆ. ವಿವಾಹ ನಿಶ್ಚಿತಾರ್ಥಗಳು ಆಗಬಹುದು. ನಿಮ್ಮಲ್ಲಿ ಕೆಲವರಿಗೆ ವಿದೇಶಕ್ಕೆ ತೆರಳುವಂಥ ಯೋಗಗಳಿವೆ. ಉದ್ಯೋಗ ಸ್ಥಳದಲ್ಲಿ ಪ್ರಾಜೆಕ್ಟ್ ಮೇಲೆ ಕೆಲ ಸಮಯಕ್ಕಾದರೂ ವಿದೇಶಕ್ಕೆ ತೆರಳಬೇಕಾಗಬಹುದು. ವ್ಯಾಪಾರ- ವ್ಯವಹಾರಗಳಲ್ಲಿ ಇಷ್ಟು ಸಮಯ ನಷ್ಟ ಕಾಣುತ್ತಾ ಬಂದಿದ್ದಲ್ಲಿ ಅದು ಈಗ ಲಾಭದಾಯಕವಾಗಿ ಬದಲಾಗುತ್ತದೆ.

ಸಿಂಹ

ನಿಮ್ಮ ರಾಶಿಗೆ ಹತ್ತನೇ ಮನೆಯಲ್ಲಿ ಗುರು ಗ್ರಹ ಸಂಚರಿಸುತ್ತದೆ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಉಂಟಾಗುತ್ತದೆ. ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ಆಕ್ಷೇಪಣೆಗಳು ಕೇಳಿಬರಲಿವೆ. ಎಷ್ಟೇ ಪ್ರಯತ್ನಿಸಿದರೂ ಕೆಲಸದಲ್ಲಿ ಆಸಕ್ತಿ ಕುದುರುವುದು ಕಷ್ಟವಾಗಲಿದೆ. ನಿಮ್ಮ ಪಾಲಿನ ಜವಾಬ್ದಾರಿಯನ್ನು ಬೇರೆಯವರಿಗೆ ವರ್ಗಾಯಿಸಬೇಡಿ. ಅದೇ ರೀತಿ ಗಡುವಿನೊಳಗಾಗಿ ಕೆಲಸ ಮಾಡಿದರಾಯಿತು ಎಂದುಕೊಂಡು ಕೆಲಸವನ್ನು ಮುಂದಕ್ಕೆ ಹಾಕಬೇಡಿ. ಹೀಗೆ ಮಾಡುವುದರಿಂದ ಒಂದೋ ನಿಗದಿತ ಅವಧಿಯೊಳಗೆ ಮುಗಿಸುವುದು ಕಷ್ಟವಾಗಲಿದೆ ಅಥವಾ ಏಕಕಾಲಕ್ಕೆ ಹಲವು ಮುಖ್ಯ ಜವಾಬ್ದಾರಿಗಳನ್ನು ಮುಗಿಸಬೇಕಾಗಿ ಬಂದು, ಒತ್ತಡ ಸೃಷ್ಟಿ ಆಗಲಿದೆ. ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯ ನೀಡಬೇಕು. ವೈದ್ಯಕೀಯ ಚಿಕಿತ್ಸೆ, ಪರೀಕ್ಷೆಗಳಿಗೆ ತೆರಳುವವರ ಜತೆಗೆ ನೀವೂ ಹೋಗುವುದು ಉತ್ತಮ. ಭಾವನಾತ್ಮಕವಾಗಿ ಯಾರ ಮೇಲೆ ನೀವು ಹೆಚ್ಚು ಅವಲಂಬಿತರಾಗಿ ಇರುತ್ತೀರೋ ಅಂಥವರಿಂದ ದೂರ ಆಗಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ವೈಮನಸ್ಯ, ಅಭಿಪ್ರಾಯ ಭೇದಗಳು ಉದ್ಭವಿಸುತ್ತದೆ.

ಕನ್ಯಾ

ನಿಮ್ಮ ರಾಶಿಗೆ ಒಂಬತ್ತನೇ ಮನೆಯಲ್ಲಿ ಗುರು ಸಂಚಾರ ಆಗುತ್ತದೆ. ವಿಲಾಸಿ ಜೀವನ ನಡೆಸುವುದಕ್ಕೆ ಬೇಕಾದ ಸವಲತ್ತು- ಸೌಕರ್ಯಗಳು ಒದಗಿಬರಲಿವೆ. ಈ ಹಿಂದೆಂದಿಗಿಂತ ಹೆಚ್ಚು ಕ್ರಿಯೇಟಿವ್ ಆಗಿ ಆಲೋಚನೆ ಮಾಡುವುದಕ್ಕೆ ಸಾಧ್ಯವಾಗಲಿದೆ.ಸ್ವಭಾವತಃ ಚುರುಕು ನಿರ್ಣಯ ಮಾಡಬಲ್ಲಂಥ ನಿಮಗೆ ಗುರುವಿನ ಅನುಗ್ರಹದ ಕಾರಣಕ್ಕೆ ಇನ್ನೂ ಹೆಚ್ಚು ಪರಿಣಾಮಕಾರಿ ಮತ್ತು ಲಾಭ ಜಾಸ್ತಿ ಮಾಡಿಕೊಳ್ಳುವುದಕ್ಕೆ ಬೇಕಾದಂಥ ತೀರ್ಮಾನ ಮಾಡುವುದಕ್ಕೆ ಆಗುತ್ತದೆ. ಪಿತ್ರಾರ್ಜಿತ ಆಸ್ತಿ ಬರಬೇಕು ಎಂಬ ನಿರೀಕ್ಷೆಯಲ್ಲಿ ಇರುವಂಥವರಿಗೆ ಅಂದುಕೊಂಡಂತೆಯೇ ಬೆಳವಣಿಗೆಗಳು ಆಗಲಿವೆ. ಇಲ್ಲಿಯ ತನಕ ಏನಾದರೂ ನಿಮ್ಮ ತಂದೆಯವರ ಜತೆಗೆ ಅಥವಾ ತಂದೆ ಸಮಾನರಾದವರೊಂದಿಗೆ ಅಭಿಪ್ರಾಯ ಭೇದ, ಮನಸ್ತಾಪ ಇದ್ದಲ್ಲಿ ಅದನ್ನು ನಿವಾರಿಸಿಕೊಳ್ಳುವುದಕ್ಕೆ ವೇದಿಕೆ ದೊರೆಯಲಿದೆ. ಹೊಸ ಕಾರು ಖರೀದಿ ಮಾಡಬಹುದು, ಮನೆ ನಿರ್ಮಾಣ ಮಾಡಬಹುದು. ಒಂದು ವೇಳೆ ಬಾಡಿಗೆ ಮನೆಯಲ್ಲಿ ಇದ್ದೀರಿ ಅಂತಾದಲ್ಲಿ ದೊಡ್ಡದಾದ ಬಾಡಿಗೆ ಮನೆಗಾದರೂ ತೆರಳುವಿರಿ. ಇಷ್ಟು ಸಮಯ ಮನೆಯನ್ನು ಭೋಗ್ಯಕ್ಕೆ ಹಾಕಿಕೊಳ್ಳಬೇಕು ಎಂದು ಪ್ರಯತ್ನ ಮಾಡುತ್ತಾ ಇದ್ದಲ್ಲಿ ಅದು ಸಾಧ್ಯವಾಗಲಿದೆ. ಇನ್ನು ಸಂಗಾತಿ ಕಡೆಯಿಂದ ಧನಲಾಭ ಆಗಲಿದೆ.  

ತುಲಾ

ನಿಮ್ಮ ರಾಶಿಗೆ ಎಂಟನೇ ಮನೆಯಲ್ಲಿ ಗುರು ಸಂಚರಿಸಲಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯ ನೀಡಿ. ದೈವಾರಾಧನೆಯನ್ನು ಹೆಚ್ಚು ಮಾಡುವುದು ಕ್ಷೇಮ. ಹಿರಿಯರ ಬಗ್ಗೆ ಉದಾಸೀನದ ಮಾತುಗಳನ್ನು ಆಡಬೇಡಿ. ಕುಟುಂಬದ ವಿಚಾರಕ್ಕಾಗಿ ಅಥವಾ ಪಿತ್ರಾರ್ಜಿತ ಆಸ್ತಿ ಕಾರಣಕ್ಕಾಗಿ ಪೊಲೀಸ್ ಠಾಣೆ, ಕೋರ್ಟ್- ಕಚೇರಿ ಮೆಟ್ಟಿಲು ಏರುವಂತಾಗುತ್ತದೆ. ಯಾವುದೇ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ.  ನಿಮ್ಮ ವರ್ಚಸ್ಸಿಗೆ ಹಾನಿ ಆಗಲಿದೆ. ಈ ಹಿಂದಿನ ನಿಮ್ಮ ಸಾಧನೆಯನ್ನು ಯಾರು ಹಾಡಿ ಹೊಗಳಿದರೋ ಅವರೇ ಆಕ್ಷೇಪ- ಆರೋಪಗಳನ್ನು ಮಾಡಲಿದ್ದಾರೆ. ದೇಹದ ತೂಕ ವಿಪರೀತ ಹೆಚ್ಚಾಗುವುದು ಅಥವಾ ಕಡಿಮೆ ಆಗುವುದು ಈ ರೀತಿ ಸಮಸ್ಯೆಗಳನ್ನು ಎದುರಿಸಲಿದ್ದೀರಿ. ಸಂಸಾರದಲ್ಲಿ ಕಲಹ ಅಥವಾ ಅಭಿಪ್ರಾಯ ಭೇದಗಳು ಕಾಣಿಸಿಕೊಂಡು, ಈ ಹಿಂದಿನ ಘಟನೆಗಳನ್ನು ಎತ್ತಾಡುತ್ತಾ ಆರೋಪ- ಪ್ರತ್ಯಾರೋಪಗಳಲ್ಲಿ ಹೆಚ್ಚಿನ ಸಮಯ ಕಳೆಯುವಂತಾಗುತ್ತದೆ. ಈ ಅವಧಿಯಲ್ಲಿ ಗುರುವಿನ ದುಷ್ಪರಿಣಾಮವನ್ನು ಕಡಿಮೆ ಮಾಡಿಕೊಳ್ಳುವುದಕ್ಕಾಗಿ ಗುರು ಗ್ರಹ ಜಪ, ಹೋಮವನ್ನು ಮಾಡಿಕೊಳ್ಳಿ ಅಥವಾ ಗುರುಗಳಾಗಿ ಭಾವಿಸುವಂಥವರಿಗೆ ವಸ್ತ್ರ, ಫಲ ಸಮರ್ಪಣೆಯನ್ನು ಮಾಡಿ.

ವೃಶ್ಚಿಕ

ನಿಮ್ಮ ರಾಶಿಗೆ ಏಳನೇ ಮನೆಯಲ್ಲಿ ಗುರು ಸಂಚಾರ ಆಗಲಿದೆ. ಕಳೆದ ಒಂದು ವರ್ಷದಿಂದ ನೀವು ಎದುರಿಸುತ್ತಾ ಬಂದಂಥ ಸಮಸ್ಯೆಗಳು ನಿವಾರಣೆ ಆಗುತ್ತಾ ಬರುತ್ತದೆ. ಯಾರು ವಿವಾಹವಯಸ್ಕರು ಇದ್ದೀರಿ, ಮತ್ತು ಮದುವೆಗಾಗಿ ಪ್ರಯತ್ನವನ್ನು ಮಾಡುತ್ತಿದ್ದೀರಿ ಅಂಥವರಿಗೆ ಮನಸ್ಸಿಗೆ ಒಪ್ಪುವಂಥ ಸಂಬಂಧ ದೊರೆಯಲಿದೆ. ಇನ್ನು ನಿಮ್ಮಲ್ಲಿ ಯಾರು ಪಾರ್ಟನರ್ ಷಿಪ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದೀರಿ ಅಂಥವರಿಗೆ ಲಾಭದ ಪ್ರಮಾಣದಲ್ಲಿ ಹೆಚ್ಚಾಗಲಿದೆ. ಒಂದು ವೇಳೆ ಈಗ ಹೊಸದಾಗಿ ಪಾರ್ಟನರ್ ಷಿಪ್ ವ್ಯವಹಾರ ಮಾಡಬೇಕು ಎಂದುಕೊಂಡಿದ್ದೀರಿ ಅಂಥವರಿಗೆ ಪಾಲುದಾರರು ದೊರೆಯಲಿದ್ದು, ಉತ್ತಮ ಲಾಭ ದೊರೆಯಲಿದೆ. ಸಾಂಸಾರಿಕವಾಗಿ ಬಹಳ ಸಂತೋಷದಿಂದ ಸಮಯ ಕಳೆಯುತ್ತೀರಿ. ನಿಮ್ಮ ಮಾತಿನ ಮೂಲಕ ಇತರರ ಮೇಲೆ ಪ್ರಭಾವ ಬೀರುವಂಥ ಶಕ್ತಿ ನಿಮಗಿರುತ್ತದೆ. ಸಂತಾನಕ್ಕಾಗಿ ಪ್ರಯತ್ನವನ್ನು ಮಾಡುತ್ತಿರುವವರಿಗೆ ಶುಭ ಸುದ್ದಿ ಕೇಳುವಂಥ ಯೋಗ ಇದೆ. ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿರುವವರ ಉದ್ಯೋಗ ಕಾಯಂ ಆಗುವ ಅವಕಾಶಗಳು ಹೆಚ್ಚಿವೆ. ಈ ಹಿಂದೆ ನೀವು ಪಟ್ಟ ಶ್ರಮಕ್ಕೆ ಈಗ ಪ್ರತಿಫಲ ದೊರೆಯಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ.

ಧನುಸ್ಸು

ನಿಮ್ಮ ರಾಶಿಗೆ ಆರನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಆಗಲಿದೆ. ನೀವಾಗಿಯೇ ಕೆಲವರ ಶತ್ರುತ್ವವನ್ನು ಕಟ್ಟಿಕೊಳ್ಳಲಿದ್ದೀರಿ. ಆರ್ಥಿಕವಾಗಿ, ದೈಹಿಕವಾಗಿ ಹಾಗೂ ಪ್ರಭಾವದ ದೃಷ್ಟಿಯಿಂದ ಬಲಿಷ್ಠರಾದವರನ್ನು ಎದುರು ಹಾಕಿಕೊಳ್ಳಬೇಡಿ. ಈ ಹಿಂದಿನ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದಲ್ಲಿ ಈ ಅವಧಿಯಲ್ಲಿ ಉಲ್ಬಣವಾಗಲಿದೆ. ಮನೆ ಅಥವಾ ಸೈಟು ಖರೀದಿ ಮಾಡಬೇಕು ಎಂದಿರುವವರು ಕಾನೂನಿಗೆ ಸಂಬಂಧಿಸಿದ ಸಂಗತಿಗಳ ಕಡೆಗೆ ಹೆಚ್ಚಿನ ಗಮನವನ್ನು ನೀಡಿ. ಯಾರನ್ನಾದರೂ ಅತಿಯಾಗಿ ನಂಬಿ, ಹಣ ಹೂಡುವುದಕ್ಕೆ ಮುಂದಾದಲ್ಲಿ ಆ ನಂತರ ಪರಿತಪಿಸುವಂತೆ ಆಗುತ್ತದೆ. ಖರ್ಚಿನ ಪ್ರಮಾಣವು ಹೆಚ್ಚಾಗಲಿದೆ. ವೈದ್ಯಕೀಯ ಪರೀಕ್ಷೆಗಳನ್ನು ಮತ್ತೆ ಮತ್ತೆ ಮಾಡಿದರೂ ಸಮಸ್ಯೆ ಏನು ಎಂಬುದನ್ನು ಪತ್ತೆ ಹಚ್ಚುವುದಕ್ಕೆ ಸಾಧ್ಯವಾಗುವುದಿಲ್ಲ. ಇತರರ ವೈಯಕ್ತಿಕ ವಿಚಾರಗಳಲ್ಲಿ ತಲೆ ಹಾಕುವುದಕ್ಕೆ ಹೋಗಬೇಡಿ. ನಿಮ್ಮಲ್ಲಿ ಕೆಲವರು ಪ್ರತ್ಯೇಕವಾದ ವಾಸ್ತವ್ಯ ಮಾಡಬೇಕಾದ ಸನ್ನಿವೇಶ ಎದುರಾಗಲಿದೆ. ಪೋಷಕರ ಮಾತುಗಳಿಂದ ಮನಸ್ಸಿಗೆ ಬೇಸರ ಆಗುತ್ತದೆ. ಸೆಕೆಂಡ್ ಹ್ಯಾಂಡ್ ವಾಹನವನ್ನು ಖರೀದಿಸಬೇಕು ಎಂದಿರುವವರು ಅದರ ತಂಟೆಗೆ ಹೋಗಬೇಡಿ. 

ಮಕರ

ನಿಮ್ಮ ರಾಶಿಗೆ ಐದನೇ ಮನೆಯಲ್ಲಿ ಗುರು ಸಂಚರಿಸಲಿದೆ. ಇಷ್ಟು ಸಮಯದ ವಿಪರೀತ ಖರ್ಚು, ನಷ್ಟ ಕಾಣುತ್ತಿದ್ದದ್ದು ಕಡಿಮೆ ಆಗಲಿದೆ ಅಥವಾ ನಿಲ್ಲಲಿದೆ. ಎಷ್ಟು ಶ್ರಮ ಪಟ್ಟರೂ ಅದಕ್ಕೆ ತಕ್ಕಂತೆ ಫಲಿತಾಂಶ ದೊರೆಯುತ್ತಿಲ್ಲ ಎಂದು ಬೇಸರ ಪಟ್ಟುಕೊಂಡವರಿಗೆ ಇನ್ನು ಮುಂದೆ ಈ ರೀತಿ ಚಿಂತಿಸುವ ಅಗತ್ಯ ಇರುವುದಿಲ್ಲ.  ಯಾವುದೇ ವೃತ್ತಿ, ಉದ್ಯೋಗ ಅಥವಾ ವ್ಯಾಪಾರ- ವ್ಯವಹಾರದಲ್ಲಿ ಇದ್ದರೂ ಸಾಮಾಜಿಕವಾಗಿ ಮಾನ- ಸಮ್ಮಾನಗಳು ಆಗಲಿದೆ. ಸೋದರ- ಸೋದರಿಯರ ಜತೆಗೆ ಮನಸ್ತಾಪ- ಅಭಿಪ್ರಾಯ ಭೇದಗಳು ಇದ್ದಲ್ಲಿ ನಿವಾರಿಸಿಕೊಳ್ಳುವುದಕ್ಕೆ ವೇದಿಕೆ ಸಿದ್ಧವಾಗಲಿದೆ. ಖಾಸಗಿ ಉದ್ಯೋಗಿಗಳಿಗೆ ಈಗಿರುವುದರ ಜತೆಗೆ ಹೆಚ್ಚುವರಿ ಜವಾಬ್ದಾರಿ, ಅದೇ ರೀತಿ ಉತ್ತಮ ಹುದ್ದೆಗಳು ದೊರೆಯಲಿವೆ. ವೇತನ ಹೆಚ್ಚಳ, ಬೋನಸ್ ದೊರೆಯುವುದು, ಅಲ್ಪಾವಧಿಗಾದರೂ ವಿದೇಶಕ್ಕೆ ತೆರಳುವಂಥ ಯೋಗ ಕಂಡುಬರುತ್ತದೆ. ಕಳೆದ ಕೆಲ ಸಮಯದಿಂದ ಉದ್ಯೋಗದಲ್ಲಿ ಇಲ್ಲ ಅಥವಾ ಉತ್ತಮವಾದ ಕೆಲಸದಲ್ಲಿ ಇಲ್ಲ ಎಂದಾದಲ್ಲಿ ಪ್ರತಿಷ್ಠಿತ ಸಂಸ್ಥೆಗಳಿಂದ ಆಫರ್ ಬರಲಿದೆ. ಇನ್ನು ಸ್ವಂತ ಉದ್ಯೋಗ ಅಥವಾ ವೃತ್ತಿ ಮಾಡುತ್ತಿರುವವರಿಗೆ ಆದಾಯ ಹಾಗೂ ಆದಾಯದ ಮೂಲಗಳು ಹೆಚ್ಚಾಗಲಿವೆ.

ಕುಂಭ

ನಿಮ್ಮ ರಾಶಿಗೆ ನಾಲ್ಕನೇ ಮನೆಯಲ್ಲಿ ಗುರು ಗ್ರಹ ಸಂಚರಿಸಲಿದೆ. ಈ ಅವಧಿಯಲ್ಲಿ ನಿಮ್ಮ ಆಪ್ತರಿಂದ ದೂರವಾಗಲಿದ್ದೀರಿ. ಅನುಮಾನದ ಕಾರಣಕ್ಕೋ ಅಥವಾ ಬೇಸರದಿಂದಲೋ ಆಪ್ತ ಸ್ನೇಹಿತರ ಜತೆಗೆ ಕಲಹ- ಮನಸ್ತಾಪಗಳನ್ನು ಮಾಡಿಕೊಂಡು, ಆ ನಂತರ ಅವರಿಂದ ದೂರವಾಗಲಿದ್ದೀರಿ. ಇತರರಿಗೆ ಸಾಲ ನೀಡುವುದಕ್ಕೆ ಹೋಗಬೇಡಿ. ಅಥವಾ ಬ್ಯಾಂಕ್- ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಸಾಲ ದೊರಕಿಸಿಕೊಡುವುದಕ್ಕೆ ಜಾಮೀನಾಗಿ ನಿಂತುಕೊಂಡಲ್ಲಿ ಮಾನಸಿಕ ನೆಮ್ಮದಿ ಹಾಳಾಗಲಿದೆ.  ನಿಮ್ಮ ಕೈ ಸೇರದ ಹಣವನ್ನು ನೆಚ್ಚಿಕೊಂಡು, ಹಣ ನೀಡುವುದಾಗಿ ಬೇರೆಯವರಿಗೆ ಮಾತು ನೀಡುವುದಕ್ಕೆ ಹೋಗಬೇಡಿ. ಮನೆ- ವಾಹನ ದುರಸ್ತಿಗೆ ಅಂತ ನಿರ್ಧಾರ ಮಾಡುವುದಕ್ಕೆ ಮುನ್ನ ಎಷ್ಟು ಹಣ ಖರ್ಚಾಗಬಹುದು ಎಂಬ ಬಗ್ಗೆ ಸರಿಯಾದ ಬಜೆಟ್ ಲೆಕ್ಕಾಚಾರ ಹಾಕಿಕೊಳ್ಳುವುದು ಮುಖ್ಯವಾಗುತ್ತದೆ. ತಾಯಿ ಅಥವಾ ತಾಯಿ ಸಮಾನರಾದವರ ಆರೋಗ್ಯ ವಿಚಾರ ಚಿಂತೆಗೆ ಕಾರಣ ಆಗಬಹುದು. ಇನ್ನು ಯಾರಿಗೆ ಮಧುಮೇಹ (ಶುಗರ್) ಇದೆಯೋ ಅಂಥವರು ಸರಿಯಾಗಿ ಫಾಲೋಅಪ್ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸುವುದು ಮುಖ್ಯವಾಗುತ್ತದೆ.

ಮೀನ

ನಿಮ್ಮ ರಾಶಿಗೆ ಮೂರನೇ ಮನೆಯಲ್ಲಿ ಗುರು ಗ್ರಹ ಸಂಚಾರ ಆಗಲಿದೆ. ಸೋದರ- ಸೋದರಿಯರ ಜತೆಗೆ ಮನಸ್ತಾಪ- ಹಣಕಾಸು ವಿಚಾರಕ್ಕೆ ಜಗಳ- ಕಲಹ ಆಗಲಿದೆ. ನಿಮಗೆ ಬರಬೇಕಾದ ಹೆಸರು, ಶ್ರೇಯಸ್ಸು ಬೇರೆಯವರ ಪಾಲಾಗಲಿದೆ. ಉದ್ಯೋಗ ಸ್ಥಳದಲ್ಲಿ ನಾನಾ ರೀತಿಯಲ್ಲಿ ಕಿರಿಕಿರಿ ಆಗಲಿದೆ. ಈ ಅವಧಿಯಲ್ಲಿ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುವಾಗ ಪದೇಪದೇ ವೈದ್ಯರನ್ನು ಬದಲಾವಣೆ ಮಾಡುವುದಕ್ಕೆ ಹೋಗಬೇಡಿ. ಮೇಲಧಿಕಾರಿಗೆ ನೀವು ಕಳಿಸುವ ಅಥವಾ ತಿಳಿಸುವ ಮಾಹಿತಿಗೆ ಸರಿಯಾದ ಸಂವಹನ ಮಾರ್ಗವನ್ನು ಅನುಸರಿಸಿ. ನೀವು ಒದಗಿಸುವಂಥ ದಾಖಲಾತಿಗಳಿಗೆ ಸಾಕ್ಷಿಯನ್ನು ಇಟ್ಟುಕೊಂಡಲ್ಲಿ ಉತ್ತಮ. ಹಣಕಾಸು ವಿಚಾರಕ್ಕೆ ಹೆಸರನ್ನು ಹಾಳು ಮಾಡಿಕೊಳ್ಳುತ್ತೀರಿ. ಯಾವುದೇ ಜವಾಬ್ದಾರಿಯನ್ನು ಪೂರ್ತಿಯಾಗಿ ನಿಮ್ಮ ಹೆಗಲ ಮೇಲೆ ಹಾಕಿಕೊಂಡಾಗ ಕೆಲಸ ಪೂರ್ತಿ ಆದ ಮೇಲೆ ಅದರ ಬಗ್ಗೆ ಅಪ್ ಡೇಟ್ ನೀಡಿದರಾಯಿತು ಎಂದು ಆಲೋಚಿಸಬೇಡಿ. ಆಯಾ ಸಮಯಕ್ಕೆ ತಕ್ಕಂತೆ ಆಗಿರುವ ಬೆಳವಣಿಗೆಗಳ ಬಗ್ಗೆ ಸಂಬಂಧಪಟ್ಟ ವ್ಯಕ್ತಿಗಳಿಗೆ ತಿಳಿಸಿ. ಆಪ್ತರು ರಹಸ್ಯ ಎಂದು ನಿಮ್ಮ ಬಳಿ ಹಂಚಿಕೊಂಡ ವಿಚಾರವನ್ನು ಇತರರ ಬಳಿ ಅಪ್ಪಿತಪ್ಪಿಯೂ ಹೇಳಿಕೊಳ್ಳಬೇಡಿ.

(ಲೇಖಕರು- ವಿದ್ವಾನ್ ಮಂಜುನಾಥ್ ಭಾರದ್ವಾಜ್ (ಜ್ಯೋತಿಷಿಗಳು- ಪುರೋಹಿತರು), ಜಾತಕಗಳನ್ನು ಮಾಡಿಸಲು, ಪೌರೋಹಿತ್ಯಕ್ಕೆ ಹಾಗೂ ಜ್ಯೋತಿಷಕ್ಕೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಭೇಟಿ ಮಾಡುವುದಕ್ಕೆ ಮೊಬೈಲ್ ಫೋನ್ ಸಂಖ್ಯೆ- 8050789904, 9980300790 ಸಂಪರ್ಕಿಸಿ.) 

Latest News

Related Posts