ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ನಲ್ಲಮಲದ ದಟ್ಟ ಕಾಡಿನ ನಡುವೆ ಇರುವ ಆ ದೇವಿಯನ್ನು ‘ಇಷ್ಟಕಾಮೇಶ್ವರಿ’ ದೇವಿ ಎಂದು ಕರೆಯಲಾಗುತ್ತದೆ. ಶ್ರೀಶೈಲಂ ಮಲ್ಲಿಕಾರ್ಜುನ ಜ್ಯೋತಿರ್ಲಿಂಗದಿಂದ ಇಪ್ಪತ್ತು- ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿ, ದುರ್ಗಮವಾದ ಕಾಡಿನ ಹಾದಿಯಲ್ಲಿ ಸಾಗಿ ಹೋಗಬೇಕು ಆ ತಾಯಿಯ ದರ್ಶನಕ್ಕೆ. ಇಷ್ಟ+ಕಾಮ+ ಈಶ್ವರಿ ಈ ಮೂರು ಪದ ಸೇರಿ, ಆಕೆ ಇಷ್ಟಕಾಮೇಶ್ವರಿ ದೇವಿ ಆಗಿದ್ದಾಳೆ. ಇಷ್ಟ ಅಂದರೆ ಮನದ ಆಸೆ, ಕಾಮ ಅಂದರೆ ಕೋರಿಕೆ, ಈಶ್ವರಿ ಅಂದರೆ ದೇವತೆ. ಮನದಲ್ಲಿ ಇರುವ ಸದುದ್ದೇಶದ ಆಸೆಯ ಕೋರಿಕೆಯನ್ನು ಈಡೇರಿಸುವುದಕ್ಕೆ ಅನುಗ್ರಹ ನೀಡುವ ದೇವತೆ ಆಕೆ ಆದ್ದರಿಂದ ಇಷ್ಟಕಾಮೇಶ್ವರಿ ಎಂದು ಕರೆಯಲಾಗುತ್ತದೆ.
ಶಂಕರಾಚಾರ್ಯರು ಭೇಟಿ ನೀಡಿದ್ದರು:
ಪುರಾಣಗಳ ಪ್ರಕಾರ, ಲಲಿತಾ ತ್ರಿಪುರ ಸುಂದರಿ ದೇವಿಯ ಶಕ್ತಿಯುತ ರೂಪವೇ ಇಷ್ಟಕಾಮೇಶ್ವರಿದೇವಿ. ದೇವಿಯ ಕೈಯಲ್ಲಿ ಕಬ್ಬಿನ ದಂಡವಿದೆ, ಹೂವಿನ ಬಾಣವನ್ನು ಹಿಡಿದಿದ್ದಾಳೆ. ಈ ಹೋಲಿಕೆಯಲ್ಲಿ ಮನುಸ್ಯನ ಆಸೆಗಳನ್ನು ಕಬ್ಬಿನ ಬಿಲ್ಲು ಪ್ರತಿನಿಧಿಸುತ್ತದೆ. ಭಕ್ತರಿಗೆ ಅರಿವಿಲ್ಲದೆ ಮೂಡುವ ದುರಾಸೆಗಳನ್ನು ಹತೋಟಿಗೆ ತಂದು, ಅವರ ಹಿತಕ್ಕೆ ಪೂರಕವಾದ ‘ಇಷ್ಟಗಳನ್ನು’ ಮಾತ್ರ ಈ ತಾಯಿ ಕರಣಿಸುತ್ತಾಳೆ. ಆದಿ ಶಂಕರಾಚಾರ್ಯರು ಇಲ್ಲಿಗೆ ಭೇಟಿ ನೀಡಿದ್ದರು. ಅವರು ಶಿವಾನಂದ ಲಹರಿ ಬರೆದ ನಂತರದಲ್ಲಿ ಈ ಸ್ಥಳಕ್ಕೆ ಬಂದಿದ್ದರು ಎನ್ನಲಾಗುತ್ತದೆ. ಇನ್ನು ಈ ದಟ್ಟ ಕಾಡಿನಲ್ಲಿ ಅನೇಕ ಮುನಿಗಳು, ಸಿದ್ಧರು ತಪಸ್ಸನ್ನು ಮಾಡುತ್ತಿದ್ದರು. ಅವರಿಗೆ ಸಿದ್ಧಿಯನ್ನು ಕರುಣಿಸಿದವಳು ಇಷ್ಟಕಾಮೇಶ‌್ವರಿ ದೇವಿ ಅಂತಲೂ ಸ್ಥಳೀಯವಾಗಿ ವಾಸ ಇರುವಂಥ ಚೆಂಚು ಬುಡಕಟ್ಟಿನ ಜನರಿಗೆ ಈಕೆ ಕಾಡನ್ನು ರಕ್ಷಣೆ ಮಾಡುವ ಅಧಿದೇವತೆ ಅಂತಲೂ ಆಗಿದ್ದಾಳೆ.
ಕಾಕತೀಯ ರಾಜರು, ವಿಜಯನಗರದ ಅರಸರು:
ಮತ್ತೊಂದು ಹಿನ್ನೆಲೆ ಪ್ರಕಾರ, ಪರಮೇಶ್ವರನು ಮನ್ಮಥನ ದಹನ ಮಾಡಿದ ನಂತರದಲ್ಲಿ ಜಗತ್ತಿನಲ್ಲಿ ಪ್ರೇಮ ಹಾಗೂ ಸೃಷ್ಟಿಯ ಸಮತೋಲನ ಮಾಡುವುದಕ್ಕಾಗಿ ಶಿವ- ಶಕ್ತಿಯರು ‘ಕಾಮೇಶ್ವರ’- ‘ಕಾಮೇಶ್ವರಿ’ ರೂಪದಲ್ಲಿ ಅವತಾರ ಮಾಡಿದರು. ನಲ್ಲಮಲ ಕಾಡಿನ ಈ ಸ್ಥಳದಲ್ಲಿ ದೇವಿಯು ಸಿದ್ಧಿಧಾತ್ರಿಯಾಗಿ ನೆಲೆಸಿದ್ದರಿಂದಾಗಿಯೂ ಆಕೆಗೆ ‘ಇಷ್ಟಕಾಮೇಶ್ವರಿದೇವಿ’ ಎಂಬ ಹೆಸರು ಬಂದಿತು. ಇಲ್ಲಿಗೆ ಭೇಟಿ ನೀಡುವ ಭಕ್ತರ ಇಷ್ಟಕಾಮವನ್ನು ಆಕೆ ಅನುಗ್ರಹಿಸುತ್ತಾಳೆ ಎಂಬುದು ನಂಬಿಕೆಯಾಗಿದೆ. ಅಂದಹಾಗೆ ಈ ದೇವಸ್ಥಾನಕ್ಕೆ ಕಾಕತೀಯರು, ವಿಜಯನಗರದ ಅರಸರು ಭೇಟಿ ನೀಡಿದ್ದರು ಎಂಬ ಉಲ್ಲೇಖ ಸಹ ಇದೆ.
ಮನುಷ್ಯ ಚರ್ಮ ಸ್ಪರ್ಶದ ಅನುಭವ:
ಈ ಸ್ಥಳದಲ್ಲಿ ದೇವಿಯ ಶಿಲಾ ವಿಗ್ರಹ ಇಂದಿಗೂ ರಹಸ್ಯವಾಗಿ ಉಳಿದಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತರು ತಮ್ಮ ಮನೋಭೀಷ್ಟ ಈಡೇರಲಿ ಎಂದು ಪ್ರಾರ್ಥಿಸಿ, ದೇವಿಯ ಶಿಲಾ ವಿಗ್ರಹಕ್ಕೆ ಕುಂಕುಮವನ್ನು ಇಡುತ್ತಾರೆ. ಆಗ, ಮನುಷ್ಯ ಚರ್ಮವು ಸ್ಪರ್ಶ ಮಾಡಿದಾಗ ಅದೆಂಥ ಅನುಭವವನ್ನು ನೀಡುವುದೋ ಈ ಶಿಲಾ ವಿಗ್ರಹದ ಹಣೆಯ ಭಾಗವು ಅದೇ ಮೃದುತ್ವದ ಅನುಭವ ನೀಡುತ್ತದೆ. ಇಂಥ ಪರಿಸರದ ಮಧ್ಯೆ ಎಷ್ಟೇ ಕಠಿಣ ಸಂದರ್ಭಗಳ ನಡುವೆ, ಇಷ್ಟೆಲ್ಲ ಜನರ ಸ್ಪರ್ಶದ ನಂತರದಲ್ಲಿಯೂ ದೇವತೆಯ ವಿಗ್ರಹ ತನ್ನ ಮೃದುತ್ವವನ್ನು ಕಳೆದುಕೊಂಡಿಲ್ಲ. ಈ ವಿಚಾರದ ಹಿಂದಿನ ರಹಸ್ಯವನ್ನು ಇಂದಿಗೂ ಭೇದಿಸಲು ಸಾಧ್ಯವಾಗಿಲ್ಲ.
ರುದ್ರಾಭಿಷೇಕದ ಮಹತ್ವ ಮತ್ತು ಫಲಗಳು: ಧನುರ್ಮಾಸದಲ್ಲಿ ಈಶ್ವರನ ಅಭಿಷೇಕದಿಂದ ಸಕಲ ಕಷ್ಟ ನಿವಾರಣೆ
ವಿವಾಹ- ಸಂತಾನ ವಿಳಂಬ ಇತ್ಯಾದಿ ತಡೆ ನಿವಾರಣೆ:
ಇಲ್ಲಿಗೆ ಭೇಟಿ ನೀಡುವ ಭಕ್ತರು ತಮ್ಮ ಇಷ್ಟಾರ್ಥಗಳ ಸಿದ್ಧಿಗಾಗಿ ತಮ್ಮ ಕಷ್ಟಗಳ ನಿವಾರಣೆ ಹಾಗೂ ಬಯಕೆಗಳು ಈಡೇರಬೇಕು ಎಂದು ಮನಸ್ಸಿನಲ್ಲಿ ಪ್ರಾರ್ಥನೆ ಮಾಡಿಕೊಂಡು, ಸಂಕಲ್ಪ ಸಹಿತವಾಗಿ ದೇವಿಯ ಹಣೆಗೆ ಕುಂಕುಮ ಇಟ್ಟು ಬೇಡಿಕೊಳ್ಳುತ್ತಾರೆ. ಮದುವೆ ವಿಳಂಬ ಆಗುತ್ತಿರುವುದು, ಸಂತಾನ ವಿಳಂಬ- ಅಡೆತಡೆ ಆಗುತ್ತಿದ್ದಲ್ಲಿ, ಮಾನಸಿಕ ನೆಮ್ಮದಿ, ಉದ್ಯೋಗ, ಆರೋಗ್ಯ ಹೀಗೆ ನಾನಾ ಪ್ರಾರ್ಥನೆಗಳನ್ನು ಆ ದೇವಿಗೆ ಸಲ್ಲಿಸುತ್ತಾರೆ.
ಬೆಳಗ್ಗೆ ಎಂಟರಿಂದ ಮಧ್ಯಾಹ್ನ ಮೂರು:
ಇಷ್ಟಕಾಮೇಶ್ವರಿ ದೇವಸ್ಥಾನ ತುಂಬ ಆಡಂಬರದ್ದೇನಲ್ಲ. ಜತೆಗೆ ಪ್ರವಾಸೋದ್ಯಮ ಸವಲತ್ತುಗಳನ್ನು ಸಹ ಇಲ್ಲಿಗೆ ಭೇಟಿ ನೀಡುವವರು ನಿರೀಕ್ಷೆ ಮಾಡಬಾರದು. ಅತ್ಯಂತ ಸರಳವಾಗಿ ಮಂಟಪದ ರಚನೆಯಲ್ಲಿ ಇದ್ದು, ಅದರೊಳಗೆ ದೇವಿಯ ವಿಗ್ರಹ ಇದೆ. ಆಕೆ ಚತುರ್ಭುಜವನ್ನು ಹೊಂದಿದ್ದು, ಮುಖದಲ್ಲಿ ಶಾಂತ ಹಾಗೂ ಕರುಣಾಪೂರಿತವಾದ ಭಾವ ಇದೆ. ಕಾಡಿನ ಮಧ್ಯೆ ಇರುವ ದೇಗುಲವಾದ್ದರಿಂದ ಸಹಜವಾಗಿಯೇ ಪ್ರಶಾಂತವಾದ ವಾತಾವರಣ ರೂಪುಗೊಂಡಿದೆ. ಇಲ್ಲಿಗೆ ತೆರಳುವುದಕ್ಕೆ ನಿಯಮಾವಳಿಗಳು ಇವೆ. ಬೆಳಗ್ಗೆ ಎಂಟು ಗಂಟೆಯಿಂದ ಮಧ್ಯಾಹ್ನ ಮೂರು ಗಂಟೆ ದೇವಿಯ ದರ್ಶನ ಮಾಡಬಹುದು. ಸಂಜೆ ನಾಲ್ಕು ಗಂಟೆ ಹೊತ್ತಿಗೆ ಅಲ್ಲಿಂದ ಹೊರಬರಬೇಕು. ಅಂದಹಾಗೆ ಇತ್ತೀಚೆಗೆ ಆಗಿರುವಂಥ ದರ್ಶನ ವ್ಯವಸ್ಥೆಗೆ ಸಂಬಂಧಿಸಿದ ಬದಲಾವಣೆಗಳು ಹಾಗೂ ಅಲ್ಲಿನ ವ್ಯವಸ್ಥೆಯನ್ನು ವಿಚಾರಿಸಿಕೊಂಡು, ಆ ನಂತರ ಅಲ್ಲಿಗೆ ತೆರಳಿ.
ವಿಷ್ಣು ಸಹಸ್ರನಾಮ ಫಲ: ಪಠಣದ ಮೂಲಕ ಸಕಲ ಸಂಕಷ್ಟ ನಿವಾರಣೆ ಮತ್ತು ಜೀವನ ಸುಧಾರಣೆ
ಕಾಡಿನ ಹಾದಿಗೆ ಜೀಪು ಬಾಡಿಗೆಗೆ:
ಸಂಜೆಯಾಗುತ್ತಾ ಬಂದಂತೆ ವನ್ಯಜೀವಿಗಳ ಸಂಚಾರ ಇರುತ್ತದಾದ್ದರಿಂದ ಪ್ರವೇಶ ನಿಷಿದ್ಧ. ಇನ್ನು ಶ್ರೀಶೈಲಂನಿಂದ ಜೀಪುಗಳು ಬಾಡಿಗೆಗೆ ದೊರೆಯುವುದು. ಅದರ ಮೂಲಕವೇ ತೆರಳುವುದು ಉತ್ತಮ ಆಯ್ಕೆ. ದೈಹಿಕವಾದ ಸವಾಲುಗಳು ಇರುವವರು, ಬೆನ್ನು ನೋವು ಇತ್ಯಾದಿ ಸಮಸ್ಯೆ ಇರುವವರು, ಗರ್ಭಿಣಿಯರು ಇಲ್ಲಿಗೆ ಭೇಟಿ ನೀಡುವ ಮುನ್ನ ಸಾಗುವ ಹಾದಿಯ ಸವಾಲುಗಳನ್ನು ಅರಿತುಕೊಳ್ಳಬೇಕು. ಇಲ್ಲಿ ಪರಿಸರವನ್ನು ಅದೇ ರೀತಿಯಲ್ಲಿ ಇರುವುದಕ್ಕೆ ಬಿಡುವುದು ಅದು ಸಹ ಆ ದೇವಿಯ ಪೂಜೆಗೆ ಸಮಾನವೇ. ಆದ್ದರಿಂದ ಉಪಾಹಾರ- ಊಟ ತೆಗೆದುಕೊಂಡು ಹೋದರೂ ಎಲ್ಲಿಯೂ ಚೆಲ್ಲದಂತೆ, ಪ್ಲಾಸ್ಟಿಕ್ ಬಾಟಲು ಇತ್ಯಾದಿಗಳನ್ನು ಎಲ್ಲೆಂದರಲ್ಲಿ ಬಿಸಾಡದಂತೆ ನೋಡಿಕೊಳ್ಳಿ.
ಲೇಖನ- ಶ್ರೀನಿವಾಸ ಮಠ





