ಜನ್ಮಜಾತಕ ಅಂದಾಕ್ಷಣ, ಅದು ಎಲ್ಲಿಂದ ಹುಡುಕಿಕೊಳ್ಳುವುದು ಎಂದು ಕೆಲವರಾದರೂ ಆಲೋಚಿಸುತ್ತಾರೆ. ಇನ್ನು ಮಗುವಿನ ಜನನ ಕಾಲದ ಸಮಯ ಇದೆ, ಆ ವಿವರವನ್ನು ಕೊಟ್ಟು, ನಕ್ಷತ್ರ, ರಾಶಿ, ಲಗ್ನ ಈ ಎಲ್ಲವನ್ನು ಯಾರಿಂದ ತಿಳಿದುಕೊಳ್ಳುವುದು ಎಂದು ಸಹ ಚಿಂತೆ ಮಾಡುತ್ತಾರೆ. ಈ ಲೇಖನದಲ್ಲಿ ಒಂದು ವೆಬ್ ಸೈಟ್ ಲಿಂಕ್ ಕೊಡಲಾಗುತ್ತಿದೆ. ಇದರ ಮೂಲಕ ಒಬ್ಬ ವ್ಯಕ್ತಿಯ ಜನನ ದಿನಾಂಕ, ಸಮಯ ಹಾಗೂ ಜನ್ಮ ಸ್ಥಳದ ಮಾಹಿತಿಯನ್ನು ಒದಗಿಸಿ, ನಕ್ಷತ್ರ, ರಾಶಿ ಹಾಗೂ ಲಗ್ನವನ್ನು ತಿಳಿದುಕೊಳ್ಳಬಹುದು. ಯಾವ ಗ್ರಹ ಯಾವ ನಕ್ಷತ್ರದ, ಯಾವ ಪಾದದಲ್ಲಿ ಇದೆ ಎಂಬುದು ಸಹ ಗೊತ್ತಾಗುತ್ತದೆ. ಈ ವೆಬ್ ಸೈಟ್ ವಿಶೇಷ ಏನೆಂದರೆ, ಯಾವ ನಕ್ಷತ್ರದಲ್ಲಿ ಗ್ರಹಗಳು ಇವೆ ಎಂಬುದಷ್ಟಕ್ಕೇ ನಿಲ್ಲದೆ, ಎಷ್ಟು ಡಿಗ್ರಿಯಲ್ಲಿದೆ ಎಂಬುದು ನಿಖರವಾಗಿ ತಿಳಿಸುತ್ತದೆ. ಹೀಗೆ ಡಿಗ್ರಿ ಸಹಿತ ತಿಳಿಯುವುದು ಜ್ಯೋತಿಷ್ಯದ ದೃಷ್ಟಿಯಿಂದ ಬಹಳ ಮುಖ್ಯವಾದದ್ದು. ಇನ್ನು ಆಯಾ ಗ್ರಹಗಳ ದೃಷ್ಟಿ ಯಾವ ರಾಶಿಯ ಮೇಲೆ ಇರುತ್ತದೆ, ಗ್ರಹಯುದ್ಧ, ಗ್ರಹ ಅಸ್ತ ಇಂಥವುಗಳನ್ನೆಲ್ಲ ತುಂಬ ಸುಲಭವಾಗಿ ತಿಳಿದುಕೊಳ್ಳಬಹುದು.
ಇನ್ನು ನೈಜ ಸಮಯದಲ್ಲಿ (ರಿಯಲ್ ಟೈಮ್) ಯಾವ ಗ್ರಹ ಯಾವ ರಾಶಿಯಲ್ಲಿ, ಎಷ್ಟು ಡಿಗ್ರಿ ಇದೆ ಎಂಬುದನ್ನು ತ್ರಿಡಿ (3D) ರೂಪದಲ್ಲಿ ನೋಡಬಹುದು. ಬಾಹ್ಯಾಕಾಶದ ಬಗ್ಗೆ ಕುತೂಹಲಿಗಳಿಗೂ ಸಹಾಯ ಆಗುವಂಥ ವೆಬ್ ಸೈಟ್ ಇದು. ಹಲವು ವರ್ಷಗಳ ಹಿಂದಿನ ಹಾಗೂ ಹಲವು ವರ್ಷಗಳ ಮುಂದಿನ ಗ್ರಹ ಸ್ಥಿತಿಗಳನ್ನು ತಿಳಿಯಬಹುದು. ಅದೇ ವೇಳೆ ನೀವು ಬಯಸುವ ನಿರ್ದಿಷ್ಟ ಸಮಯದ ಕುಂಡಲಿ (ದಕ್ಷಿಣ ಭಾರತೀಯ ಹಾಗೂ ಉತ್ತರ ಭಾರತೀಯ) ಎರಡೂ ಶೈಲಿಯಲ್ಲೂ ಪಿಡಿಎಫ್ ಫಾರ್ಮಾಟ್ ನಲ್ಲಿ ಪಡೆದುಕೊಳ್ಳಬಹುದು. ಈ ವೆಬ್ ಸೈಟ್ ಅನ್ನು ರೂಪಿಸಿರುವವರು ಕಿಶೋರ್ ನಾರಾಯಣ್. ಅವರು ಬೆಂಗಳೂರಿನಲ್ಲಿಯೇ ವಾಸವಿದ್ದಾರೆ. ಅಂತಾರಾಷ್ಟ್ರೀಯ ವಿದ್ಯಮಾನಗಳು, ಜಿಯೋ ಪಾಲಿಟಿಕ್ಸ್, ವಿವಿಧ ದೇಶಗಳ ರಾಜತಾಂತ್ರಿಕ ನೀತಿಗಳು ಇವುಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡುವಂಥ ಜ್ಞಾನ ಹಾಗೂ ಅನುಭವ ಇರುವಂಥವರು. ಈ ವೆಬ್ ಸೈಟ್ ಮೂಲಕವಾಗಿ ಯಾವುದೇ ಲಾಭಾಪೇಕ್ಷೆ ಇಲ್ಲದೆ ಜನರಿಗೆ ಮಾಹಿತಿ ಒದಗಿಸಬೇಕು ಎಂಬುದು ಅವರ ಉದ್ದೇಶ. ಇನ್ನು ಕಿಶೋರ್ ಅವರು ವಿವಿಧ ಪತ್ರಿಕೆಗಳು, ಡಿಜಿಟಲ್ ಮಾಧ್ಯಮ ಸೇರಿ ವಿವಿಧ ಮಾಧ್ಯಮ ಪ್ರಕಾರ ಹಾಗೂ ಸಂಸ್ಥೆಗಳಲ್ಲಿ ಅಂಕಣಕಾರರಾಗಿ, ಹವ್ಯಾಸಿ ಬರಹಗಾರರಾಗಿ, ವಿಶ್ಲೇಷಕರಾಗಿಯೂ ಕಾಣಿಸಿಗುತ್ತಾರೆ.
ಇನ್ನು ಮುಂಬರುವ ದಿನಗಳಲ್ಲಿ ರಾಶಿ ಕುಂಡಲಿ, ನವಾಂಶ ಕುಂಡಲಿ, ಷೋಡಶವರ್ಗ, ಅಷ್ಟಕವರ್ಗ ಇತ್ಯಾದಿ ವಿಚಾರಗಳನ್ನು ಒಳಗೊಂಡಂತೆ ಜಾತಕವು ಅತ್ಯಂತ ಕಡಿಮೆ ಬೆಲೆಗೆ ಎಲ್ಲರಿಗೂ ದೊರೆಯುವಂತೆ ಮಾಡಬೇಕು ಎಂಬ ಉದ್ದೇಶವನ್ನು ಕಿಶೋರ್ ಇರಿಸಿಕೊಂಡಿದ್ದಾರೆ.
ವೆಬ್ ಸೈಟ್ ಲಿಂಕ್: https://kishornarayan.github.io/3d-vedic-sky-explorer/index.html
ಈ ವೆಬ್ ಸೈಟ್ ಅನ್ನು ಡೆಸ್ಕ್ ಟಾಪ್ ಅಥವಾ ಲ್ಯಾಪ್ ಟಾಪ್ ನಲ್ಲಿ ಬಳಸುವುದು ಸುಲಭ. ಒಂದು ವೇಳೆ ಮೊಬೈಲ್ ಫೋನ್ ನಲ್ಲಿ ಬಳಸುತ್ತೀರಿ ಅಂತಾದಲ್ಲಿ ‘ಲ್ಯಾಂಡ್ ಸ್ಕೇಪ್’ ಮೋಡ್ ನಲ್ಲಿ ಬಳಸಿ. ಅಂದರೆ ಮೊಬೈಲ್ ಅನ್ನು ಅಡ್ಡಡ್ಡ- ಅಗಲವಾಗಿ ಕಂಟೆಂಟ್ ಕಾಣಿಸುವ ರೀತಿಯಲ್ಲಿ ಕೈಯಲ್ಲಿ ಹಿಡಿದುಕೊಂಡರೆ ವೀಕ್ಷಣೆ ಹಾಗೂ ಮಾಹಿತಿ ಪಡೆಯುವುದು ಸಲೀಸು.
ಇನ್ನು ಈ ವೆಬ್ ಸೈಟ್ ಈಗಿನ್ನೂ ಅಭಿವೃದ್ಧಿ ಪಡಿಸುತ್ತಿರುವುದಾಗಿದೆ. ಇದರಲ್ಲಿ ಒಂದು ವೇಳೆ ಏನಾದರೂ ‘ಬಗ್’, ಲೋಪ ಅಥವಾ ದೋಷಗಳೇನಾದರೂ ಕಂಡುಬಂದಲ್ಲಿ ಅದರ ಬಗ್ಗೆ ಮಾಹಿತಿಯನ್ನು ಇಮೇಲ್ ಐಡಿ- kishor.narayan@gmail.com ಇದಕ್ಕೆ ಕಳುಹಿಸಬಹುದು.
ಈಗೆಲ್ಲ ಆನ್ ಲೈನ್ ನಲ್ಲಿ ಜಾತಕ ಹಾಗೂ ಗ್ರಹ ಸ್ಥಿತಿಗಳನ್ನು ತಿಳಿಯುವ ಎಷ್ಟೋ ವೆಬ್ ಸೈಟ್- ಆ್ಯಪ್ ಗಳು ಬಂದಿವೆ. ಅವುಗಳನ್ನು ಬಳಸಬೇಕು ಎಂದಾದಲ್ಲಿ ಲಾಗಿನ್ ಐಡಿ, ಪಾಸ್ ವರ್ಡ್ ಹಾಗೂ ಫೋನ್ ನಂಬರ್ ಹೀಗೇ ಏನೇನೋ ಮಾಹಿತಿ ನೀಡಬೇಕಾಗುತ್ತದೆ. ಆದರೆ ಇಂಥದ್ದು ಯಾವುದೂ ಕಿಶೋರ್ ನಾರಾಯಣ್ ಅವರ ವೆಬ್ ಸೈಟ್ ನಲ್ಲಿ ಕೇಳಲ್ಲ.
ನೆನಪಿನಲ್ಲಿಡಿ, ಈ ವೆಬ್ ಸೈಟ್ ಅಭಿವೃದ್ಧಿ ಪಡಿಸಿದ ಕೋಡಿಂಗ್ ಸಹ ವೆಬ್ ಸೈಟ್ ಕೊನೆಯಲ್ಲಿ ಲಭ್ಯವಿದೆ. ಅದನ್ನು ಬಳಸಿಕೊಂಡು ತಮ್ಮದೇ ವೆಬ್ ಸೈಟ್ ಮಾಡಿಕೊಳ್ಳಲು ಬಯಸುವವರು ಖಂಡಿತಾ ಬಳಕೆ ಮಾಡಿಕೊಳ್ಳಬಹುದು ಎಂದು ಸಹ ‘ಶ್ರೀಗುರುಭ್ಯೋ.ಕಾಮ್’ ವೆಬ್ ಸೈಟ್ ಜೊತೆಗೆ ಮಾತನಾಡುವಾಗ ಹೇಳಿದರು.
ಇನ್ನುಳಿದಂತೆ ಒಮ್ಮೆ ವೆಬ್ ಸೈಟ್ ಒಳಹೊಕ್ಕು ನೋಡಿ. ಹೇಗಿದೆ, ನಿಮಗೆ ಏನನ್ನಿಸಿತು ಈ ಎಲ್ಲವನ್ನೂ ಕಿಶೋರ್ ನಾರಾಯಣ್ ಅವರಿಗೆ ಒಂದು ಮೇಲ್ ಕಳಿಸಿ.
ಲೇಖನ- ಶ್ರೀನಿವಾಸ ಮಠ





