ತ್ರೇತಾಯುಗದ ಉಲ್ಲೇಖ ಬರುವಂಥ ದೇಗುಲವೊಂದನ್ನು ಈ ಲೇಖನದಲ್ಲಿ ಪರಿಚಯಿಸಲಾಗುತ್ತಿದೆ. ಇದರ ಹೆಸರು ಕಡಂದಲೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ. ಇದು ಇರುವುದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನಲ್ಲಿ. ಮೂಡಬಿದ್ರೆ ತಾಲೂಕು ಕೇಂದ್ರದಿಂದ ಹದಿಮೂರು ಕಿಲೋಮೀಟರ್ ದೂರದಲ್ಲಿರುವ ಈ ಸುಬ್ರಹ್ಮಣ್ಯ ಸ್ವಾಮಿಯನ್ನು ರಾಮಾಯಣದಲ್ಲಿ ಬರುವಂಥ ವಾಲಿ ಸಹ ಪೂಜೆ ಮಾಡಿದ್ದನಂತೆ. ಸುಮಾರು ಮೂರು ಅಡಿ ಎತ್ತರದ ಸುಬ್ರಹ್ಮಣ್ಯ ಸ್ವಾಮಿ ಮೂರ್ತಿಯು ಬಹಳ ಸುಂದರವಾಗಿದೆ. ಶುಕ್ಲ ಪಕ್ಷದ ಷಷ್ಠಿ ತಿಥಿಯಂದು ಈ ದೇವಾಲಯದಲ್ಲಿ ಆಶ್ಲೇಷಾ ಬಲಿ ಪೂಜೆಯನ್ನು ಮಾಡಲಾಗುತ್ತದೆ.
ಚರ್ಮ ವ್ಯಾಧಿ ಇರುವವರು ಈ ದೇವರಲ್ಲಿ ಬಂದು ಬೇಡಿಕೊಂಡರೆ ನಿವಾರಣೆ ಆಗುತ್ತದೆ ಎಂಬುದು ಇಲ್ಲಿನ ಭಕ್ತರ ನಂಬಿಕೆ. ಅದೇ ರೀತಿ ಸರ್ಪ ದೋಷದಿಂದ ಆಗುವಂಥ ತೊಂದರೆಗಳಾದ ವಿವಾಹ ವಿಳಂಬ, ಸಂತಾನ ವಿಳಂಬ, ಕೆಲಸ- ಕಾರ್ಯಗಳಲ್ಲಿ ನಾನಾ ಅಡೆತಡೆಗಳು ಮೊದಲಾದ ಸಮಸ್ಯೆಗಳು ಇಲ್ಲಿನ ದೇವರಲ್ಲಿ ಬೇಡಿಕೊಂಡರೆ ನಿವಾರಣೆ ಆಗುತ್ತದೆ ಎಂದು ಹೇಳಲಾಗುತ್ತದೆ. ಈ ಪ್ರದೇಶದ ಮೇಲೆ ದಾಳಿ ಮಾಡಿದ್ದ ಬಹಮನಿ ಸುಲ್ತಾನರು, ಇಲ್ಲಿನ ದೇಗುಲವನ್ನು ನಾಶ ಮಾಡಿದ್ದರು ಎಂಬ ಉಲ್ಲೇಖ ಸಹ ಇದೆ. ಆ ನಂತರ ಸುಲ್ತಾನನು ದೇವತಾ ಮೂರ್ತಿಯನ್ನು ಅಲ್ಲಿಂದ ಬಿಸಾಡಿದ್ದನಂತೆ.
ಜೈನ ಸಾಮಂತ ಅರಸನಿಗೆ ಕನಸು
ಆ ನಂತರದಲ್ಲಿ ಇದೇ ಪ್ರದೇಶದಲ್ಲಿನ ಜೈನ ಸಾಮಂತ ಅರಸರೊಬ್ಬರಿಗೆ ಕನಸಾಗಿ, ನಾನು ಇಲ್ಲಿದ್ದೇನೆ ಎಂದು ಸುಬ್ರಹ್ಮಣ್ಯ ಸ್ವಾಮಿ ಹೇಳಿದಂತಾಯಿತಂತೆ. ಅದೇ ರೀತಿ ಕಸದ ಒಳಗೆ ಹುದುಗಿದ್ದ ಸುಬ್ರಹ್ಮಣ್ಯ ಸ್ವಾಮಿ ವಿಗ್ರಹವನ್ನು ಪತ್ತೆ ಹಚ್ಚಿ, ಇಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ.
ಯಾರಿಗೆ ಸರ್ಪ ದೋಷ ಇರುತ್ತದೆಯೋ ಹಾಗೂ ಈ ದೋಷದಿಂದ ಉಂಟಾಗುವ ಪರಿಣಾಮಗಳನ್ನು ಎದುರಿಸುತ್ತಿರುತ್ತಾರೋ ಅಂಥವರು ಕಡಂದಲೆ ಸುಬ್ರಹ್ಮಣ್ಯ ಸ್ವಾಮಿ ದೇಗುಲಕ್ಕೆ ಬಂದು, ದರ್ಶನ ಪಡೆದು, ಆ ದೈವ ಪ್ರೇರಣೆಯಿಂದ ಯಾವ ಸೇವೆ ಮಾಡಿಸಬೇಕು ಎಂದೆನಿಸುತ್ತದೋ ಅದನ್ನು ಮಾಡಿಸಿದಲ್ಲಿ ಶುಭವಾಗುತ್ತದೆ ಎಂಬುದು ಇಲ್ಲಿನ ಅನೇಕರ ಅನುಭವ. ಅಷ್ಟೇ ಅಲ್ಲ, ಇತರ ಧರ್ಮದವರು ಸಹ ಈ ದೇವರಿಗೆ ನಡೆದುಕೊಳ್ಳುತ್ತಾರೆ ಎಂಬುದು ಉಲ್ಲೇಖಿಸಬೇಕಾದ ಅಂಶ.
ಮಂಗಳೂರು ವಿಮಾನ ನಿಲ್ದಾಣ ಹತ್ತಿರ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇಲ್ಲಿಗೆ ಹತ್ತಿರವಾಗಿ ಇರುವಂಥ ವಿಮಾನ ನಿಲ್ದಾಣ ಆಗಿದೆ. ಮೂಡಬಿದ್ರೆಯಲ್ಲಿ ವಾಸ್ತವ್ಯ, ಊಟ- ತಿಂಡಿಗೆ ವ್ಯವಸ್ಥೆ ಚೆನ್ನಾಗಿದೆ. ಈ ದೇವಾಲಯವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುತ್ತದೆ. ದೇವಾಲಯವು ತುಂಬ ಸುಂದರವಾದ ಪರಿಸರದಲ್ಲಿದೆ. ದೇವಾಲಯದ ಹೊರ ಭಾಗದ ಪ್ರಾಕಾರದಲ್ಲಿ ನಿಂತರೆ ಅಥವಾ ದೇಗುಲದ ಒಳಗೆ ನವಿಲುಗಳ ಶಬ್ದ ಕೇಳುತ್ತದೆ. ಇಲ್ಲಿ ಕಲ್ಯಾಣಿ ಸಹ ಇದ್ದು, ಅದರ ಪಾವಿತ್ರ್ಯ ಕಾಯ್ದುಕೊಳ್ಳಬೇಕು ಎಂಬ ಉದ್ದೇಶದಿಂದ ಯಾರೂ ಬಳಕೆ ಮಾಡದಂತೆ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಇಲ್ಲಿ ನಾಗ ಬನ ಸಹ ಇದೆ.
ವಿಶೇಷ ದಿನಗಳನ್ನು ಹೊರತುಪಡಿಸಿದರೆ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರಿರುವುದಿಲ್ಲ. ಒಂದು ವೇಳೆ ಕಡಂದಲೆ ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನಕ್ಕೆ ಹೋಗಬೇಕು ಎಂದುಕೊಳ್ಳುವವರು ಒಮ್ಮೆ ಫೋನ್ ಕರೆ ಮಾಡಿ, ಆ ನಂತರ ತೆರಳುವುದು ಒಳ್ಳೆಯದು.
ಪುರಾಣ- ಇತಿಹಾಸ ಎರಡೂ ಹಿನ್ನೆಲೆ ಇದೆ
ಈ ದೇವಸ್ಥಾನಕ್ಕೆ ಪುರಾಣ ಹಾಗೂ ಇತಿಹಾಸ ಎರಡರ ಹಿನ್ನೆಲೆಯೂ ಇದೆ. ಎಂಟು ಅಥವಾ ಒಂಬತ್ತನೇ ಶತಮಾನದಲ್ಲಿ ಆದಂಥ ಘಟನೆ ಬಗ್ಗೆ ಇಲ್ಲಿನ ಶಾಸನದಲ್ಲಿ ಪ್ರಸ್ತಾವ ಇದೆ. ಐತಿಹಾಸಿಕವಾಗಿ ಸಾವಿರ ವರ್ಷಗಳಿಗೂ ಹಿಂದಿನ ದೇವಾಲಯ ಇದು ಎಂದೆನಿಸಿದರೆ, ವಾಲಿಯಿಂದ ಪೂಜೆ ಆಗಿರುವಂಥ ದೇವರ ವಿಗ್ರಹವಾದ ಇದಕ್ಕೆ ಯುಗಯುಗದ ಹಿನ್ನೆಲೆಯಿದೆ. ದೇವಾಲಯದ ಪ್ರಾಕಾರದಲ್ಲಿ ಅರ್ಚಕರಾದ ಕೆ.ರಾಘವೇಂದ್ರ ಭಟ್ ಅವರ ಸಂಪರ್ಕ ಸಂಖ್ಯೆ ಇತ್ತು. ಅವರ ಮೊಬೈಲ್ ಫೋನ್ ಸಂಖ್ಯೆ 9845662717.
ನಾಗಪಂಚಮಿ, ಸಿಂಹ ಸಂಕ್ರಮಣ, ತೆನೆ ಹಬ್ಬ, ಗಣೇಶ ಚತುರ್ಥಿ, ಆಶ್ಲೇಷಾ ಬಲಿ ಸೇವೆ, ಚಂಡಿಕಾ ಹೋಮ, ಉಪಾಕರ್ಮ, ದೀಪಾವಳಿ, ಷಷ್ಠಿ ಜಾತ್ರೆ, ಸ್ಕಂದ ಪರಿಚಯ, ಚಂಪಾ ಷಷ್ಠಿ, ಕೆರೆ ದೀಪೋತ್ಸವ, ಭೂತ ಬಲಿ, ಅವಭೃತ, ಸಂಪ್ರೋಕ್ಷಣೆ ಮಂತ್ರಾಕ್ಷತೆ, ಕಿರು ಷಷ್ಠಿ ಇವೇ ಮೊದಲಾದವು ಇಲ್ಲಿನ ವಿಶೇಷ ದಿನಗಳಾಗಿವೆ.
ದೇವಾಲಯದ ಸಮಯ
ದೇವಾಲಯದ ಸಮಯ ಎಂದು ಬೆಳಗ್ಗೆ 6.30ರಿಂದ ಮಧ್ಯಾಹ್ನ 12ರ ತನಕ ಮತ್ತು ಸಂಜೆ 4.50ರಿಂದ ರಾತ್ರಿ 7.15ರ ವರೆಗೆ ಎಂಬ ವೇಳಾಪಟ್ಟಿ ಇದೆ. ಆದರೂ ದೂರದ ಊರುಗಳಿಂದ ತೆರಳುವವರು ಒಮ್ಮೆ ಕರೆ ಮಾಡಿಕೊಂಡು ತೆರಳಿದರೆ ಉತ್ತಮ.
ಇನ್ನು ಈ ದೇವಾಲಯದ ಹೊರ ಭಾಗದಲ್ಲಿಯಾಗಲೀ ಅಥವಾ ಒಳ ಭಾಗದಲ್ಲಿಯಾಗಲೀ ಸ್ವಚ್ಛತೆ ಮತ್ತು ನಿಶ್ಶಬ್ದ ಕಾಪಾಡಿಕೊಳ್ಳಿ. ಏಕೆಂದರೆ ಈ ದೇವಾಲಯದ ಶಕ್ತಿ ಅನುಭವಕ್ಕೆ ಬಂದವರು ಹೇಳುವ ಮೊದಲ ಎಚ್ಚರಿಕೆಯ ಮಾತು ಇದಾಗಿರುತ್ತದೆ. ಸರ್ಪ ಸಂಚಾರ ಇರುವಂಥ ಸುಬ್ರಹ್ಮಣ್ಯ ಸ್ವಾಮಿಯ ಕ್ಷೇತ್ರ ಇದು. ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾದಂತೆ ಪಾವಿತ್ರ್ಯ, ಸ್ವಚ್ಛತೆ ಕಾಪಾಡಿಕೊಳ್ಳುವುದು ಸವಾಲಾದ ಸಂಗತಿ ಆಗಿರುತ್ತದೆ. ಅದೇ ಭಕ್ತಾದಿಗಳೇ ಮುನ್ನೆಚ್ಚರಿಕೆ ವಹಿಸಿ, ಕಾಳಜಿಯಿಂದ ವರ್ತಿಸಿದರೆ ಸ್ಥಳದ ಪಾವಿತ್ರ್ಯ ಕಾಪಾಡಲು ಸಹಾಯ ಆಗುತ್ತದೆ.