ಧನುರ್ಮಾಸದಲ್ಲಿ ಪೂಜಾ- ಕೈಂಕರ್ಯಗಳಿಗೆ ವಿಶೇಷ ಮಹತ್ವ. ಅದು ಈಶ್ವರನೇ ಇರಲಿ, ಮಹಾ ವಿಷ್ಣುವೇ ಇರಲಿ ದೇವರ ಆರಾಧನೆಯಿಂದ ಆಧ್ಯಾತ್ಮಿಕ ಹಾಗೂ ಲೌಕಿಕವಾದ ಅಭೀಪ್ಸೆಗಳು ಈಡೇರುತ್ತವೆ ಎಂಬುದು ನಂಬಿಕೆಯಾಗಿದೆ. ಧನುರ್ ಮಾಸ ಅಂದರೆ, ರವಿ ಗ್ರಹವು ಧನುಸ್ಸು ರಾಶಿಯಲ್ಲಿ ಸಂಚರಿಸುವಂಥ ಅವಧಿ. ಈ ಮಾಸದಲ್ಲಿ ಕಾವೇರಿ ನದಿ ತೀರದಲ್ಲಿ ನೆಲೆಸಿರುವ ಆದಿರಂಗ (ಶ್ರೀರಂಗಪಟ್ಟಣದಲ್ಲಿ ಇರುವ ಶ್ರೀರಂಗನಾಥ), ಮಧ್ಯರಂಗ (ಶಿವನಸಮುದ್ರದಲ್ಲಿ ಇರುವಂಥ ರಂಗನಾಥನ ಕ್ಷೇತ್ರ) ಈ ಎರಡೂ ಕರ್ನಾಟಕದಲ್ಲಿಯೇ ಇದೆ. ಮತ್ತು ಅಂತ್ಯರಂಗ (ತಮಿಳುನಾಡಿನ ತಿರುಚ್ಚಿಯಲ್ಲಿ ಇರುವ ರಂಗನಾಥನ ಕ್ಷೇತ್ರ) ಎಂಬ ಮೂರೂ ಕ್ಷೇತ್ರಗಳ ದರ್ಶನ ಮಾಡುವುದನ್ನು ‘ತ್ರಿರಂಗ ದರ್ಶನ’ ಎಂದು ಕರೆಯಲಾಗುತ್ತದೆ. ಒಂದೇ ದಿನದಲ್ಲಿ ಬೆಳಗ್ಗೆ ಸೂರ್ಯೋದಯದಿಂದ ಸೂರ್ಯಾಸ್ತದ ಒಳಗಾಗಿ ಈ ಮೂರು ರಂಗನಾಥ ಸ್ವಾಮಿ ದೇವಾಲಯ ದರ್ಶನ ಮಾಡಬೇಕು ಎಂಬುದು ನಂಬಿಕೆ. ಇದು ಕೇವಲ ತೀರ್ಥಯಾತ್ರೆ ಮಾತ್ರವಲ್ಲ, ಮುಕ್ತಿಯ ಮಾರ್ಗದಲ್ಲಿ ಸಾಗುವುದಕ್ಕೆ ಒಂದು ಆಧ್ಯಾತ್ಮಿಕ ಸಾಧನೆ ಎಂದು ಪುರಾಣಗಳಲ್ಲಿ ಉಲ್ಲೇಖ ಇದೆ.
ತ್ರಿರಂಗ ದರ್ಶನದ ಪೌರಾಣಿಕ ಹಿನ್ನೆಲೆ:
ಪದ್ಮಪುರಾಣ, ಬ್ರಹ್ಮಾಂಡಪುರಾಣ ಮತ್ತು ವೈಷ್ಣವ ಆಗಮಗಳಲ್ಲಿ ಕಾವೇರಿ ತೀರದ ಈ ಮೂರು ರಂಗಕ್ಷೇತ್ರಗಳ ವಿಶೇಷ ಮಹಿಮೆ ವಿವರಿಸಲಾಗಿದೆ. ಶಾಸ್ತ್ರಗಳಲ್ಲಿ ಹೇಳುವಂತೆ, “ತ್ರಯಾಣಾಂ ರಂಗನಾಥಾನಾಂ ದರ್ಶನಂ ಪಾಪನಾಶನಂ”. ಅಂದರೆ, ಆದಿರಂಗ–ಮಧ್ಯರಂಗ–ಅಂತ್ಯರಂಗ ಈ ಮೂರು ರಂಗನಾಥರ ದರ್ಶನ ಮಾಡಿದರೆ ಮಹಾಪಾಪಗಳೂ ನಾಶವಾಗುತ್ತವೆ. ಪುರಾಣದ ಪ್ರಕಾರ, ಆದಿರಂಗ – ಸೃಷ್ಟಿಯ ಸಂಕೇತ, ಮಧ್ಯರಂಗ – ಸ್ಥಿತಿಯ ಸಂಕೇತ, ಅಂತ್ಯರಂಗ – ಲಯ ಅಥವಾ ಮೋಕ್ಷದ ಸಂಕೇತ. ಈ ಮೂರು ಹಂತಗಳನ್ನು ದರ್ಶನ ಮಾಡುವುದೇ ಜೀವನಯಾತ್ರೆಯ ಪರಿಪೂರ್ಣತೆ ಎಂದು ನಂಬಲಾಗಿದೆ.

ತ್ರಿರಂಗ ಯಾತ್ರೆಯ ಸಾಂಪ್ರದಾಯಿಕ ಮಾರ್ಗ ಮತ್ತು ಅಂತರ:
ತ್ರಿರಂಗ ದರ್ಶನವನ್ನು ಸಾಮಾನ್ಯವಾಗಿ ಕಾವೇರಿ ನದಿಯ ಹರಿವಿನ ದಿಕ್ಕಿನಲ್ಲಿ, ಅಂದರೆ ಮೇಲಿನಿಂದ ಕೆಳಗೆ ಮಾಡುವುದೇ ಸಂಪ್ರದಾಯ.
ಆದಿರಂಗ – ಶ್ರೀರಂಗಪಟ್ಟಣ (ಮಂಡ್ಯ)
ಬೆಂಗಳೂರಿನಿಂದ ಸುಮಾರು 125 ಕಿ.ಮೀ
ಕಾವೇರಿ ತೀರದಲ್ಲಿರುವ ಮೊದಲ ರಂಗಕ್ಷೇತ್ರ
ಮಧ್ಯರಂಗ – ಶಿವನಸಮುದ್ರ (ಚಾಮರಾಜನಗರ)
ಶ್ರೀರಂಗಪಟ್ಟಣದಿಂದ ಸುಮಾರು 80 ಕಿ.ಮೀ
ಅಪರೂಪದ ಮತ್ತು ಶಾಂತ ವಾತಾವರಣದ ಕ್ಷೇತ್ರ
ಅಂತ್ಯರಂಗ – ಶ್ರೀರಂಗಂ (ತಮಿಳುನಾಡು)
ಶಿವನಸಮುದ್ರದಿಂದ ಸುಮಾರು 260ರಿಂದ 300 ಕಿ.ಮೀ
108 ದಿವ್ಯದೇಶಗಳಲ್ಲಿ ಪ್ರಮುಖ ಸ್ಥಾನ ಪಡೆದ ಕ್ಷೇತ್ರ
2026 ನ್ಯೂಮರಾಲಜಿ ಭವಿಷ್ಯ: ಮದುವೆ, ಉದ್ಯೋಗ, ಹಣಕಾಸು, ಆರೋಗ್ಯ – ಜನ್ಮಸಂಖ್ಯೆ 1ರಿಂದ 9ರವರೆಗೆ
ಧನುರ್ಮಾಸದಲ್ಲಿ ತ್ರಿರಂಗ ದರ್ಶನದ ವಿಶೇಷ ಫಲಗಳು:
ಧನುರ್ಮಾಸದಲ್ಲಿ ತ್ರಿರಂಗ ದರ್ಶನ ಮಾಡಿದರೆ ಅದರಿಂದ ದೊರೆಯುವ ಧಾರ್ಮಿಕ ಫಲ ದ್ವಿಗುಣ ಆಗುತ್ತದೆ ಎಂಬುದು ನಂಬಿಕೆ.
ಪಾಪ ವಿಮೋಚನೆ: ಅಜ್ಞಾನದಿಂದ ಅಥವಾ ತಿಳಿದು ಮಾಡಿದ ಪಾಪಗಳಿಂದ ಮುಕ್ತಿ ದೊರೆಯುತ್ತದೆ.
ಮೋಕ್ಷ ಪ್ರಾಪ್ತಿ: ಜನನ–ಮರಣ ಚಕ್ರದಿಂದ ಮುಕ್ತಿ ಪಡೆದು ವೈಕುಂಠ ಪ್ರಾಪ್ತಿಗೆ ದಾರಿ ತೆರೆದುಕೊಳ್ಳುತ್ತದೆ.
ಮಾನಸಿಕ ಶಾಂತಿ ಮತ್ತು ಆರೋಗ್ಯ: ಕಾವೇರಿ ತೀರದ ಪ್ರಶಾಂತ ವಾತಾವರಣ, ರಂಗನಾಥನ ಶಯನಮುದ್ರೆ ದರ್ಶನವು ಮನಸ್ಸಿಗೆ ಶಾಂತಿ ನೀಡುತ್ತದೆ.
ಕುಟುಂಬ ಸುಖ ಮತ್ತು ಐಶ್ವರ್ಯ: ಲಕ್ಷ್ಮೀವಲ್ಲಭನಾದ ಶ್ರೀರಂಗನಾಥನ ಆರಾಧನೆಯಿಂದ ಆರ್ಥಿಕ ಸ್ಥಿರತೆ, ಸಂತಾನ ಭಾಗ್ಯ ಮತ್ತು ಸಮೃದ್ಧಿ ಲಭಿಸುತ್ತದೆ.
ತ್ರಿರಂಗ ದರ್ಶನಕ್ಕೆ ಪಾಲಿಸಬೇಕಾದ ನಿಯಮಗಳು:
ಪೂರ್ಣ ಫಲಪ್ರಾಪ್ತಿಗಾಗಿ ಈ ನಿಯಮಗಳನ್ನು ಪಾಲಿಸುವುದು ಅಗತ್ಯ. ಬ್ರಾಹ್ಮಿ ಮುಹೂರ್ತ ದರ್ಶನ – ಬೆಳಿಗ್ಗೆ 4 ರಿಂದ 6 ಗಂಟೆಯೊಳಗೆ ಧನುರ್ಮಾಸ ಪೂಜೆ ಶ್ರೇಷ್ಠ. ಸಂಕಲ್ಪ– ಯಾತ್ರೆ ಆರಂಭಿಸುವ ಮೊದಲು ತ್ರಿರಂಗ ದರ್ಶನ ಸಂಕಲ್ಪ ಮಾಡಬೇಕು. ಸಾಂಪ್ರದಾಯಿಕ ವಸ್ತ್ರಧಾರಣೆ- ಪುರುಷರು ಪಂಚೆ–ಶಲ್ಯ, ಮಹಿಳೆಯರು ಸೀರೆ ಅಥವಾ ಸರಳ ಭಾರತೀಯ ಉಡುಗೆ.
ಮಂತ್ರ ಜಪ – “ಓಂ ನಮೋ ನಾರಾಯಣಾಯ” ಅಥವಾ ವಿಷ್ಣು ಸಹಸ್ರನಾಮ ಪಠಣ. ದಾನಧರ್ಮ– ಅನ್ನದಾನ ಅಥವಾ ವಸ್ತ್ರದಾನ ಮಾಡಿದರೆ ಯಾತ್ರೆಯ ಪುಣ್ಯ ಮತ್ತೂ ಹೆಚ್ಚಾಗುತ್ತದೆ.
ರಾಜ ಶ್ಯಾಮಲಾ ದೇವಿ: ಜ್ಞಾನ, ವಾಕ್ ಸಿದ್ಧಿ, ಕಲೆ ಮತ್ತು ರಾಜಕೀಯ ಯಶಸ್ಸಿನ ಶಕ್ತಿದೇವತೆ
ಯಾತ್ರಾರ್ಥಿಗಳಿಗೆ ಉಪಯುಕ್ತ ಸೂಚನೆಗಳು:
ಒಂದೇ ದಿನದಲ್ಲಿ ದರ್ಶನ ಮಾಡುವವರು ಮುಂಜಾನೆ ಆದಿರಂಗದಿಂದ ಪ್ರಾರಂಭಿಸುವುದು ಸೂಕ್ತ. ಸಾತ್ವಿಕ ಆಹಾರ ಸೇವನೆಗೆ ಆದ್ಯತೆ ನೀಡಿ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಇರಬೇಕು. ಧಾರ್ಮಿಕವಾಗಿ ಫಲ ದೊರೆಯಬೇಕು ಎಂಬ ಕಾರಣಕ್ಕೆ ವೇಗದ ಚಾಲನೆ ಒಳ್ಳೆಯದಲ್ಲ.
ಕಾವೇರಿ ತಾಯಿಯ ಮಡಿಲಲ್ಲಿ ನೆಲೆಸಿರುವ ಈ ಮೂರು ರಂಗನಾಥರು ಮನುಷ್ಯರ ಜೀವನದ ಸೃಷ್ಟಿ–ಸ್ಥಿತಿ–ಲಯದ ಸಂಕೇತ. ಧನುರ್ಮಾಸದ ಪವಿತ್ರ ಕಾಲದಲ್ಲಿ ತ್ರಿರಂಗ ದರ್ಶನ ಮಾಡುವುದರಿಂದ ದೈವಿಕ ಅನುಗ್ರಹ ಮತ್ತು ಮಾನಸಿಕಶಾಂತಿ ಲಭಿಸುತ್ತದೆ.
ಲೇಖನ- ಶ್ರೀನಿವಾಸ ಮಠ





