ಯಾವುದೇ ಧರ್ಮವನ್ನು ತೆಗೆದುಕೊಂಡರೂ ದಾನದ ಮಹತ್ವ ಹೆಚ್ಚು. ಹಿಂದೂ ಧರ್ಮದ ಅಥವಾ ಸನಾತನ ಧರ್ಮದಲ್ಲಿಯೂ ದಾನಕ್ಕೆ ಪ್ರಾಶಸ್ತ್ಯ. ಸನಾತನ ಧರ್ಮದಲ್ಲಿ ಹೀಗೆ ಪದೇಪದೇ ಕಿವಿಯ ಮೇಲೆ ಬೀಳುವ ಪದ ‘ದಶದಾನ’. ಒಬ್ಬ ವ್ಯಕ್ತಿ ತೀರಿಕೊಂಡ ಸಂದರ್ಭದಲ್ಲಿಯೇ, ಕೆಲವರು ತೀರಿಕೊಳ್ಳುವ ಮುನ್ನ, ತೀರಿಕೊಂಡ ನಂತರದಲ್ಲಿ ಹನ್ನೊಂದು ಅಥವಾ ಹನ್ನೆರಡನೇ ದಾನ, ಮತ್ತೂ ಕೆಲವರಲ್ಲಿ ಪ್ರತಿನಿಧಿಸುವ ಸಮಾಜ- ಪ್ರಾದೇಶಿಕತೆ ಅನುಗುಣವಾಗಿ ದಶದಾನ ಮಾಡಲಾಗುತ್ತದೆ. ಏನು ಈ ದಾನದ ಮಹತ್ವ, ಹಿನ್ನೆಲೆ, ದಶ, ಅಂದರೆ ಹತ್ತು ಬಗೆಯ ದಾನಗಳು ಯಾವುದು ಎಂಬುದರ ವಿವರವಾದ ಲೇಖನ ಇದು. ಇಂದಿನ ದಿನಮಾನದಲ್ಲಿ ಹೇಗಾಗಿದೆ ಅಂದರೆ, ಆಯಾ ದಾನದ ಬದಲಿಗೆ ದಕ್ಷಿಣೆ ಇಟ್ಟುಕೊಟ್ಟು ಬಿಡಿ, ನಿತ್ಯವೂ ಇವೇ ವಸ್ತುಗಳು ಬಂದರೆ ಪಡೆದುಕೊಂಡವರು ಏನು ಮಾಡುತ್ತಾರೆ? ಈಗಂತೂ ಇದೇ ‘ಟ್ರೆಂಡ್” ಎಂದು ಮನವೊಲಿಕೆ ಆಗುವ ಧ್ವನಿಯಲ್ಲಿ ಮಾತನಾಡಿ, ದಶ ದಾನಗಳು ಎಲ್ಲದರ ಬದಲಿಗೆ ದಕ್ಷಿಣೆ ನೀಡುವ ಪರಿಪಾಠ ಬಂದಿದೆ. ಆದರೆ ಎಲ್ಲವನ್ನೂ ಹಾಗೇ ಮಾಡುವುದು ಒಪ್ಪತಕ್ಕುದಲ್ಲ. ಯಥಾಶಕ್ತಿ ಯಾವುದನ್ನೆಲ್ಲ ಆಯಾ ವಸ್ತುಗಳನ್ನು ನೀಡುವುದಕ್ಕೆ ಸಾಧ್ಯವೋ ಅದನ್ನೇ ನೀಡುವುದು ಉತ್ತಮ. ಅದಕ್ಕೆ ಕಾರಣ ಏನು ಎಂಬುದು ಈ ಲೇಖನವನ್ನು ಪೂರ್ಣವಾಗಿ ಓದಿ ಮುಗಿಸುವ ಹೊತ್ತಿಗೆ ಗೊತ್ತಾಗುತ್ತದೆ.
ದಶದಾನ ಎನ್ನುವುದು ಹಿಂದೂ ಧರ್ಮದ ಸಂಸ್ಕಾರಗಳಲ್ಲಿ, ಅದರಲ್ಲೂ ವಿಶೇಷವಾಗಿ ಶ್ರಾದ್ಧ ಕರ್ಮಗಳಲ್ಲಿ ಮತ್ತು ಜೀವನದ ಅಂತಿಮ ಘಟ್ಟದಲ್ಲಿ ಮಾಡುವ ಅತ್ಯಂತ ಪವಿತ್ರವಾದ ಹತ್ತು ದಾನಗಳು. ‘ದಶ’ ಎಂದರೆ ಹತ್ತು, ‘ದಾನ’ ಎಂದರೆ ಅರ್ಪಿಸುವುದು. ಈ ದಾನಗಳನ್ನು ಮಾಡುವುದರಿಂದ ಮನುಷ್ಯನ ಜನ್ಮಜನ್ಮಾಂತರದ ಪಾಪಗಳು ತೊಳೆಯುತ್ತವೆ ಮತ್ತು ಮರಣಾನಂತರ ಸದ್ಗತಿ ದೊರೆಯುತ್ತದೆ ಎಂಬ ಬಲವಾದ ನಂಬಿಕೆಯಿದೆ.
ದಶದಾನದ ವೈದಿಕ ಮತ್ತು ಪೌರಾಣಿಕ ಹಿನ್ನೆಲೆ
ಸನಾತನ ಧರ್ಮ ಶಾಸ್ತ್ರಗಳ ಪ್ರಕಾರ, ಮನುಷ್ಯನು ಮರಣ ಹೊಂದಿದ ನಂತರ ‘ಯಮಲೋಕ’ಕ್ಕೆ ಹೋಗುವ ಹಾದಿ ಅತ್ಯಂತ ಕಠಿಣವಾಗಿರುತ್ತದೆ. ಈ ಹಾದಿಯಲ್ಲಿ ವೈತರಣಿ ನದಿ ಸೇರಿದಂತೆ ಅನೇಕ ಅಡೆತಡೆಗಳು ಎದುರಾಗುತ್ತವೆ. ಈ ಹಾದಿಯನ್ನು ಸುಗಮಗೊಳಿಸಲು ಮತ್ತು ಜೀವಿಯು ಅನುಭವಿಸಬಹುದಾದ ಯಾತನೆಗಳನ್ನು ಕಡಿಮೆ ಮಾಡಲು ಬದುಕಿರುವಾಗ ಅಥವಾ ಮರಣದ ನಂತರ ‘ದಶದಾನ’ ಮಾಡಬೇಕು ಎಂದು ಗರುಡ ಪುರಾಣವು ವಿವರಿಸುತ್ತದೆ.
- ಗರುಡ ಪುರಾಣದ ಉಲ್ಲೇಖ: ಶ್ರೀಹರಿಯು ಗರುಡನಿಗೆ ಮರಣಾನಂತರದ ಗತಿಯ ಬಗ್ಗೆ ವಿವರಿಸುವಾಗ, ದಶದಾನದ ಮಹಿಮೆಯನ್ನು ಸಾರುತ್ತಾನೆ. “ಯಾರು ಶ್ರದ್ಧೆಯಿಂದ ಈ ಹತ್ತು ದಾನಗಳನ್ನು ಮಾಡುತ್ತಾರೋ ಅವರು ವೈತರಣಿ ನದಿಯನ್ನು ಸುಲಭವಾಗಿ ದಾಟಿ ಯಮಪುರಿಯನ್ನು ಸೇರುತ್ತಾರೆ” ಎಂದು ಹೇಳಲಾಗಿದೆ.
ದಶದಾನದಲ್ಲಿ ಒಳಗೊಂಡಿರುವ ಹತ್ತು ದಾನಗಳು
ಸಂಪ್ರದಾಯದಂತೆ ಈ ಕೆಳಗಿನ ಹತ್ತು ವಸ್ತುಗಳನ್ನು ದಕ್ಷಿಣೆಯೊಂದಿಗೆ ದಾನ ನೀಡಲಾಗುತ್ತದೆ:
- ಗೋ ದಾನ (ಹಸು): ಎಲ್ಲ ದಾನಗಳಲ್ಲಿ ಶ್ರೇಷ್ಠವಾದುದು. ಇದು ವೈತರಣಿ ನದಿಯನ್ನು ದಾಟಲು ಸಹಕಾರಿ. (ಸದ್ಯಕ್ಕೆ ಗೋವಿನ ಬದಲಿಗೆ ಸಂಕಲ್ಪಪೂರ್ವಕ ಹಣವನ್ನು ನೀಡುವುದೂ ರೂಢಿಯಲ್ಲಿದೆ).
- ಭೂ ದಾನ: ಜಾಗ ಅಥವಾ ಭೂಮಿಯನ್ನು ದಾನ ಮಾಡುವುದು. ಇದು ಜೀವನದ ಅಸ್ಥಿರತೆಯನ್ನು ಹೋಗಲಾಡಿಸಿ ಪರಲೋಕದಲ್ಲಿ ಸ್ಥಾನ ನೀಡುತ್ತದೆ ಎಂಬ ನಂಬಿಕೆಯಿದೆ.
- ತಿಲ ದಾನ (ಎಳ್ಳು): ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ಯಮಧರ್ಮನ ಪ್ರೀತಿ ಲಭಿಸುತ್ತದೆ ಮತ್ತು ಪಿತೃದೋಷಗಳು ನಿವಾರಣೆಯಾಗುತ್ತವೆ.
- ಹಿರಣ್ಯ ದಾನ (ಚಿನ್ನ): ಚಿನ್ನವು ಪವಿತ್ರ ಧಾತು. ಇದರ ದಾನವು ಅಜ್ಞಾನ ಮತ್ತು ಅಶುದ್ಧತೆಯನ್ನು ದೂರ ಮಾಡುತ್ತದೆ.
- ಘೃತ ದಾನ (ತುಪ್ಪ): ಶುದ್ಧ ಹಸುವಿನ ತುಪ್ಪದ ದಾನವು ದೇವತೆಗಳಿಗೆ ಪ್ರಿಯವಾದುದು. ಇದು ಆರೋಗ್ಯ ಮತ್ತು ಸಮೃದ್ಧಿಯ ಸಂಕೇತ.
- ವಸ್ತ್ರ ದಾನ: ಹೊಚ್ಚ ಹೊಸದಾದ ಬಟ್ಟೆಗಳನ್ನು ದಾನ ಮಾಡುವುದು. ಮರಣಾನಂತರ ಆತ್ಮಕ್ಕೆ ರಕ್ಷಣೆ ನೀಡುವ ಉದ್ದೇಶ ಹೊಂದಿದೆ.
- ಧಾನ್ಯ ದಾನ (ಅಕ್ಕಿ/ಗೋಧಿ): ಹಸಿವನ್ನು ನೀಗಿಸುವ ಧಾನ್ಯಗಳ ದಾನವು ಪುಣ್ಯಪ್ರದ. ಇದು ಅನ್ನಪೂರ್ಣೇಶ್ವರಿಯ ಅನುಗ್ರಹಕ್ಕೆ ಕಾರಣ.
- ಗುಡ ದಾನ (ಬೆಲ್ಲ): ಸಿಹಿಯಾದ ಬೆಲ್ಲದ ದಾನವು ಜೀವನದ ಕಹಿ ಘಟನೆಗಳ ಪ್ರಭಾವವನ್ನು ತಗ್ಗಿಸುತ್ತದೆ.
- ರಜತ ದಾನ (ಬೆಳ್ಳಿ): ಚಂದ್ರನಿಗೆ ಪ್ರಿಯವಾದ ಬೆಳ್ಳಿಯನ್ನು ದಾನ ಮಾಡುವುದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ ಮತ್ತು ಪಿತೃಗಳ ಆಶೀರ್ವಾದ ಸಿಗುತ್ತದೆ.
- ಲವಣ ದಾನ (ಉಪ್ಪು): ಉಪ್ಪಿನ ದಾನವು ಮರಣ ಯಾತನೆಯನ್ನು ಕಡಿಮೆ ಮಾಡುತ್ತದೆ ಮತ್ತು ಮೃತ ವ್ಯಕ್ತಿಯ ಆತ್ಮಕ್ಕೆ ನೆಮ್ಮದಿ ನೀಡುತ್ತದೆ ಎಂದು ಗರುಡ ಪುರಾಣ ಹೇಳುತ್ತದೆ.
ದಶದಾನವನ್ನು ಯಾವಾಗ ಮಾಡಲಾಗುತ್ತದೆ?
ದಶದಾನವನ್ನು ಮುಖ್ಯವಾಗಿ ಮೂರು ಸಂದರ್ಭಗಳಲ್ಲಿ ಮಾಡಲಾಗುತ್ತದೆ:
- ಮರಣ ಕಾಲ ಸಮೀಪ: ವ್ಯಕ್ತಿಯು ಮರಣ ಹೊಂದುವ ಮುನ್ನ ಅರಿವಿರುವಾಗಲೇ ಆತನ ಕೈಯಿಂದ ಈ ದಾನಗಳನ್ನು ಮಾಡಿಸಲಾಗುತ್ತದೆ. ಇದನ್ನು ‘ಮುಕ್ತಿ ದಾನ’ ಎಂದೂ ಕರೆಯುತ್ತಾರೆ.
- ಶ್ರಾದ್ಧ ಕರ್ಮಗಳು: ಮರಣದ ನಂತರದ 11 ಅಥವಾ 12ನೇ ದಿನದ ಕರ್ಮಗಳಲ್ಲಿ (ವೈಕುಂಠ ಸಮಾರಾಧನೆ) ಮೃತರ ಆತ್ಮದ ಶಾಂತಿಗಾಗಿ ಈ ದಾನ ಮಾಡುತ್ತಾರೆ.
- ಜೀವಂತ ದಾನ: ಕೆಲವರು ತಮ್ಮ ಜೀವಿತಾವಧಿಯಲ್ಲೇ ಪುಣ್ಯ ಸಂಪಾದನೆಗಾಗಿ ತಮ್ಮ ಜನ್ಮದಿನದಂದು ಅಥವಾ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿದಾಗ ದಶದಾನ ಮಾಡುತ್ತಾರೆ.
- ಸರ್ಪಸಂಸ್ಕಾರ: ಸರ್ಪ ದೋಷ ನಿವಾರಣೆಗಾಗಿ ಸರ್ಪಸಂಸ್ಕಾರ ಮಾಡಿಸುವಂಥವರು ಸಹ ದಶದಾನವನ್ನು ಮಾಡುತ್ತಾರೆ.
ದಶದಾನದ ಪ್ರಾಮುಖ್ಯ ಮತ್ತು ಫಲ
- ಪಾಪ ವಿಮೋಚನೆ: ಮನುಷ್ಯನು ತಿಳಿದೋ ತಿಳಿಯದೆಯೋ ಮಾಡಿದ ಪಂಚ ಮಹಾಪಾಪಗಳಿಗೆ ದಶದಾನವು ಪ್ರಾಯಶ್ಚಿತ್ತದಂತೆ ಕೆಲಸ ಮಾಡುತ್ತದೆ.
- ಯಮ ಭಯ ನಿವಾರಣೆ: ಮರಣದ ನಂತರ ಯಮಧರ್ಮರಾಜನ ಶಿಕ್ಷೆಗಳಿಂದ ಪಾರಾಗಲು ಮತ್ತು ಶಾಂತಯುತ ಹಾದಿಗಾಗಿ ಇದು ಅವಶ್ಯಕ.
- ಪಿತೃಗಳ ಸಂತೃಪ್ತಿ: ನಮ್ಮ ಪೂರ್ವಜರು (ಪಿತೃಗಳು) ನರಕಾದಿ ಲೋಕಗಳಲ್ಲಿದ್ದರೆ, ಅವರ ಹೆಸರಿನಲ್ಲಿ ಮಾಡುವ ದಶದಾನವು ಅವರಿಗೆ ಮುಕ್ತಿ ನೀಡಿ ಉನ್ನತ ಲೋಕಕ್ಕೆ ಕರೆದೊಯ್ಯುತ್ತದೆ.
- ವೈತರಣಿ ತರಣ: ಗರುಡ ಪುರಾಣದ ಪ್ರಕಾರ, ಭೀಕರವಾದ ವೈತರಣಿ ನದಿಯನ್ನು ದಾಟಲು ಗೋವಿನ ಬಾಲ ಹಿಡಿಯಬೇಕೆಂದರೆ, ಗೋ ದಾನವೂ ಸೇರಿ ದಶದಾನಗಳು ಮಾಡಿದಲ್ಲಿ ಸಹಾಯ ದೊರೆಯುತ್ತದೆ.
ವೈಜ್ಞಾನಿಕ ಅಥವಾ ತಾತ್ವಿಕ ದೃಷ್ಟಿಕೋನ
ದಾನ ಎನ್ನುವುದು ಕೇವಲ ಧಾರ್ಮಿಕ ಕ್ರಿಯೆಯಲ್ಲ, ಬದಲಿಗೆ ಅದು ನಮ್ಮಲ್ಲಿರುವ ‘’ಮೋಹ’ವನ್ನು ತ್ಯಜಿಸುವ ಪ್ರಕ್ರಿಯೆ. ಭೂಮಿ, ಚಿನ್ನ, ಅನ್ನ, ಬಟ್ಟೆಗಳ ಮೇಲಿರುವ ಅತಿಯಾದ ಆಸೆಯನ್ನು ಬಿಟ್ಟಾಗ ಮಾತ್ರ ಆತ್ಮವು ಹಗುರವಾಗಿ ಪರಮಾತ್ಮನಲ್ಲಿ ಲೀನವಾಗಲು ಸಾಧ್ಯ ಎಂಬುದು ಇದರ ಹಿಂದಿನ ತತ್ವ.
ದಶದಾನ ಎನ್ನುವುದು ಹಿಂದೂ ಜೀವನ ಪದ್ಧತಿಯಲ್ಲಿ ಅತ್ಯಂತ ಗೌರವಯುತವಾದ ವಿಧಿ. ಇದು ಕೇವಲ ಮೃತರ ಆತ್ಮಕ್ಕಷ್ಟೇ ಅಲ್ಲ, ಅದನ್ನು ಮಾಡುವವರಿಗೂ ಮಾನಸಿಕ ಶಾಂತಿ ಮತ್ತು ಸಮಾಜದ ಬಡವರಿಗೆ ಅಥವಾ ಅರ್ಹರಿಗೆ ನೆರವಾಗುವ ಸಂಪ್ರದಾಯ ಇದಾಗಿದೆ. ಹಾಗಂತ ಆರ್ಥಿಕವಾಗಿ ಅನುಕೂಲ ಇಲ್ಲದವರು ಸಹ ಮಾಡಲೇಬೇಕು ಎಂಬ ಒತ್ತಡದ ರೀತಿಯ ಲೇಖನ ಇದಲ್ಲ. ಇಲ್ಲಿ ನೀಡಿರುವುದು ಧರ್ಮಶಾಸ್ತ್ರದಲ್ಲಿನ ಮಾಹಿತಿ ಮಾತ್ರ.
ಲೇಖನ- ಶ್ರೀನಿವಾಸ ಮಠ





