ಬ್ರಹ್ಮಚಾರಿ ಪೂಜೆಯು ಸನಾತನ ಧರ್ಮದಲ್ಲಿ, ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಅತ್ಯಂತ ಪವಿತ್ರ ಹಾಗೂ ಫಲಪ್ರದವಾದ ಆಚರಣೆಗಳಲ್ಲಿ ಒಂದಾಗಿದೆ. ಸುಬ್ರಹ್ಮಣ್ಯ ಸ್ವಾಮಿಯನ್ನು (ಕಾರ್ತಿಕೇಯ) ಪೂಜಿಸುವ ವಿಧಾನಗಳಲ್ಲಿ ಬ್ರಹ್ಮಚಾರಿ ಪೂಜೆಗೆ ಅಗ್ರಸ್ಥಾನವಿದೆ. ಇದರ ಅರ್ಥ, ವಿಧಾನ ಮತ್ತು ಫಲಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ಇಲ್ಲಿದೆ:
ಬ್ರಹ್ಮಚಾರಿ ಪೂಜೆ ಎಂದರೇನು?
ಬ್ರಹ್ಮಚಾರಿ ಪೂಜೆ ಎಂದರೆ ಉಪನಯನ ಆಗಿರುವ, ಇನ್ನೂ ಗೃಹಸ್ಥಾಶ್ರಮಕ್ಕೆ ಕಾಲಿಡದ ಚಿಕ್ಕ ವಯಸ್ಸಿನ ಬಾಲಕನನ್ನು ಸಾಕ್ಷಾತ್ ಸುಬ್ರಹ್ಮಣ್ಯ ಸ್ವಾಮಿಯ ಸ್ವರೂಪ ಎಂದು ಭಾವಿಸಿ ಮಾಡುವ ಪೂಜೆ. ಸುಬ್ರಹ್ಮಣ್ಯ ಸ್ವಾಮಿಯು ನಿತ್ಯ ಬ್ರಹ್ಮಚಾರಿಯಾಗಿ, ಜ್ಞಾನದ ಅಧಿದೇವತೆಯಾಗಿ ನೆಲೆಸಿರುವುದರಿಂದ, ಅವನನ್ನು ಒಲಿಸಿಕೊಳ್ಳಲು ಈ ಪೂಜೆ ಅತ್ಯಂತ ಪ್ರಶಸ್ತ.
ಯಾರು ಈ ಪೂಜೆಯನ್ನು ಮಾಡಬೇಕು?
ಈ ಪೂಜೆಯನ್ನು ಯಾರು ಬೇಕಾದರೂ ಮಾಡಬಹುದು, ಆದರೆ ಮುಖ್ಯವಾಗಿ ಈ ಕೆಳಗಿನ ಸಂದರ್ಭಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ:
- ಸಂತಾನ ಭಾಗ್ಯವಿಲ್ಲದವರು: ಸುಬ್ರಹ್ಮಣ್ಯ ಸ್ವಾಮಿಯು ಸಂತಾನ ಕಾರಕ. ಸಂತಾನ ಪ್ರಾಪ್ತಿಗಾಗಿ ಹಂಬಲಿಸುವ ದಂಪತಿ ಈ ಪೂಜೆ ಮಾಡುವುದು ಶ್ರೇಷ್ಠ.
- ಕುಜ ದೋಷ (ಮಂಗಳ ದೋಷ) ಇರುವವರು: ಜಾತಕದಲ್ಲಿ ಕುಜ ದೋಷದಿಂದ ವಿವಾಹ ವಿಳಂಬವಾಗುತ್ತಿದ್ದರೆ ಅಥವಾ ದಾಂಪತ್ಯದಲ್ಲಿ ಸಮಸ್ಯೆಗಳಿದ್ದರೆ ಈ ಪೂಜೆ ಪರಿಹಾರ ನೀಡುತ್ತದೆ.
- ಸರ್ಪ ದೋಷ ಇರುವವರು: ನಾಗ ದೋಷ ಅಥವಾ ಕಾಲಸರ್ಪ ದೋಷದ ಶಾಂತಿಗಾಗಿ ಈ ಪೂಜೆ ಮಾಡಲಾಗುತ್ತದೆ.
- ಆರೋಗ್ಯ ಮತ್ತು ಜ್ಞಾನದ ಹಂಬಲ ಉಳ್ಳವರು: ಚರ್ಮವ್ಯಾಧಿ ನಿವಾರಣೆಗೆ ಮತ್ತು ಮಕ್ಕಳ ಬುದ್ಧಿಶಕ್ತಿ ಹೆಚ್ಚಲು ಪೋಷಕರು ಈ ಪೂಜೆ ಮಾಡಿಸಬಹುದು.
ಷಷ್ಠಿ ಅಥವಾ ಮಂಗಳವಾರದ ಮಹತ್ವ
ಬ್ರಹ್ಮಚಾರಿ ಪೂಜೆಯನ್ನು ಯಾವುದೇ ದಿನ ಮಾಡಬಹುದಾದರೂ ಷಷ್ಠಿ ತಿಥಿ ಮತ್ತು ಮಂಗಳವಾರ ಅತ್ಯಂತ ಶ್ರೇಷ್ಠವಾದುದು.
- ಷಷ್ಠಿ: ಸುಬ್ರಹ್ಮಣ್ಯ ಸ್ವಾಮಿಯು ತಾರಕಾಸುರನನ್ನು ಸಂಹರಿಸಿದ ಪವಿತ್ರ ತಿಥಿ. ಹಾಗಾಗಿ ಮಾರ್ಗಶಿರ ಶುದ್ಧ ಷಷ್ಠಿ (ಸುಬ್ರಹ್ಮಣ್ಯ ಷಷ್ಠಿ) ಅಥವಾ ಪ್ರತಿ ತಿಂಗಳ ಶುಕ್ಲ ಪಕ್ಷದ ಷಷ್ಠಿಯಂದು ಪೂಜೆ ಮಾಡುವುದು ವಿಶೇಷ.
- ಮಂಗಳವಾರ: ಸುಬ್ರಹ್ಮಣ್ಯನು ಮಂಗಳ ಗ್ರಹದ (ಕುಜ) ಅಧಿದೇವತೆ. ಮಂಗಳವಾರದಂದು ಪೂಜೆ ಮಾಡುವುದರಿಂದ ಕುಜ ದೋಷದ ತೀವ್ರತೆ ಕಡಿಮೆಯಾಗುತ್ತದೆ.
ಪೂಜಾ ವಿಧಾನ (ಸಂಕ್ಷಿಪ್ತವಾಗಿ)
- ಬ್ರಹ್ಮಚಾರಿಯ ಆಯ್ಕೆ: ಉಪನಯನವಾದ (ಮುಂಜಿ ಆಗಿರುವ), ಸದಾಚಾರ ಸಂಪನ್ನನಾದ ಬಾಲಕನನ್ನು ಆಹ್ವಾನಿಸಬೇಕು.
- ಪಾದಪೂಜೆ: ಬಾಲಕನನ್ನು ಮನೆಗೆ ಆಹ್ವಾನಿಸಿ, ಮಣೆಯ ಮೇಲೆ ಕೂರಿಸಿ, ಕಾಲು ತೊಳೆದು ಪೂಜಿಸಬೇಕು.
- ಅಭ್ಯಂಜನ ಮತ್ತು ವಸ್ತ್ರದಾನ: ಬಾಲಕನಿಗೆ ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸಿ (ಅಥವಾ ಪ್ರೋಕ್ಷಣೆ ಮಾಡಿ), ಹೊಸ ವಸ್ತ್ರಗಳನ್ನು (ಧೋತರ ಮತ್ತು ಶಲ್ಯ) ನೀಡಬೇಕು.
- ಷೋಡಶೋಪಚಾರ ಪೂಜೆ: ಬಾಲಕನಿಗೆ ಗಂಧ-ಅಕ್ಷತೆ ಹಚ್ಚಿ, ಹೂವಿನ ಹಾರ ಹಾಕಿ, ಸುಬ್ರಹ್ಮಣ್ಯ ಅಷ್ಟೋತ್ತರಗಳನ್ನು ಪಠಿಸುತ್ತಾ ಪೂಜಿಸಬೇಕು.
- ಭೋಜನ: ಸ್ವಾಮಿಗೆ ಪ್ರಿಯವಾದ ಪಂಚಾಮೃತ, ಪಾಯಸ ಹಾಗೂ ಸಾತ್ತ್ವಿಕ ಭೋಜನವನ್ನು ಬ್ರಹ್ಮಚಾರಿಗೆ ಮಾಡಿಸಬೇಕು.
- ದಕ್ಷಿಣೆ: ಭೋಜನದ ನಂತರ ತಾಂಬೂಲದೊಂದಿಗೆ ಯಥಾಶಕ್ತಿ ದಕ್ಷಿಣೆ ನೀಡಿ, ಬಾಲಕನ ಪಾದಕ್ಕೆ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು.
ಚರ್ಮ ವ್ಯಾಧಿ ನಿವಾರಿಸುವ ಅಪರೂಪದ ಗಂಧ ಪ್ರಸಾದ: ಮುಗ್ವಾ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅದ್ಭುತ ಮಹಿಮೆ ಇಲ್ಲಿದೆ
ಬ್ರಹ್ಮಚಾರಿ ಪೂಜೆಯ ಫಲಗಳು
- ವಂಶೋದ್ಧಾರ: ಸಂತಾನ ಹಂಬಲಿಸುವವರಿಗೆ ಸುಗುಣವಂತ ಮಕ್ಕಳ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯಿದೆ.
- ದೋಷ ಮುಕ್ತಿ: ಜಾತಕದಲ್ಲಿನ ಕುಜ ದೋಷ, ನಾಗ ದೋಷ ಮತ್ತು ವಿವಾಹಕ್ಕಿರುವ ಅಡೆತಡೆಗಳು ನಿವಾರಣೆಯಾಗುತ್ತವೆ.
- ಆರೋಗ್ಯ ಭಾಗ್ಯ: ದೀರ್ಘಕಾಲದ ಅನಾರೋಗ್ಯ, ವಿಶೇಷವಾಗಿ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ವಾಸಿಯಾಗುತ್ತವೆ.
- ಶತ್ರು ನಾಶ: ಜೀವನದಲ್ಲಿ ಎದುರಾಗುವ ಗುಪ್ತ ಶತ್ರುಗಳ ಬಾಧೆ ಮತ್ತು ಕೋರ್ಟ್-ಕಚೇರಿ ವ್ಯವಹಾರಗಳಲ್ಲಿ ಜಯ ಸಿಗುತ್ತದೆ.
- ಮನಶ್ಶಾಂತಿ: ಮನೆಯಲ್ಲಿನ ನಕಾರಾತ್ಮಕ ಶಕ್ತಿ ದೂರವಾಗಿ ಶಾಂತಿ, ನೆಮ್ಮದಿ ನೆಲೆಸುತ್ತದೆ.
“ಬ್ರಹ್ಮಚಾರಿ ರೂಪದಲ್ಲಿರುವ ಕಾರ್ತಿಕೇಯನನ್ನು ಪೂಜಿಸುವುದು ಎಂದರೆ ಜ್ಞಾನ ಮತ್ತು ಶಕ್ತಿಯನ್ನು ಏಕಕಾಲದಲ್ಲಿ ಆರಾಧಿಸಿದಂತೆ.”
ಲೇಖನ- ಶ್ರೀನಿವಾಸ ಮಠ









