ಯಾವ ದಿಕ್ಕಿಗೆ ತಲೆ ಹಾಕಿ ಮಲಗಬೇಕು ಎಂಬುದು ಸಾಮಾನ್ಯವಾಗಿ ಕೇಳಿಬರುವ ವಾಸ್ತು- ಧಾರ್ಮಿಕ ಹಿನ್ನೆಲೆಯ ಪ್ರಶ್ನೆ. ಸನಾತನ ಧರ್ಮ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ನಾವು ಮಲಗುವ ದಿಕ್ಕು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಭಾರಿ ಪ್ರಭಾವ ಬೀರುತ್ತದೆ. ಭೂಮಿಯ ಕಾಂತೀಯ ವಲಯ (Magnetic field) ಮತ್ತು ನಮ್ಮ ದೇಹದ ಶಕ್ತಿಯ ಮಧ್ಯೆ ಸಮತೋಲನ ಇರಲಿ ಎಂಬುದು ಇದರ ಹಿಂದಿನ ವೈಜ್ಞಾನಿಕ ಕಾರಣವಾಗಿದೆ. ಯಾವ ದಿಕ್ಕಿಗೆ ತಲೆ ಇರುವಂತೆ ಮಲಗಬೇಕು ಮತ್ತು ಅದರ ಫಲಗಳೇನು ಎಂಬ ವಿವರವಾದ ಮಾಹಿತಿ ಇಲ್ಲಿದೆ:
ಪೂರ್ವ ದಿಕ್ಕು (East) – ಅತ್ಯಂತ ಶ್ರೇಷ್ಠ
ಪೂರ್ವ ದಿಕ್ಕಿಗೆ ತಲೆ ಹಾಕಿ ಮಲಗುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ. ಸೂರ್ಯನು ಈ ದಿಕ್ಕಿನಲ್ಲಿ ಉದಯಿಸುವುದರಿಂದ ಇದು ಜ್ಞಾನ ಮತ್ತು ಶಕ್ತಿಯ ಸಂಕೇತವಾಗಿದೆ.
- ಫಲ: ಜ್ಞಾಪಕ ಶಕ್ತಿ ಹೆಚ್ಚುತ್ತದೆ, ಏಕಾಗ್ರತೆ ಸಿದ್ದಿಸುತ್ತದೆ ಮತ್ತು ಉತ್ತಮ ಆರೋಗ್ಯ ಲಭಿಸುತ್ತದೆ.
- ಯಾರಿಗೆ ಉತ್ತಮ?: ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಆಧ್ಯಾತ್ಮಿಕ ಚಿಂತನೆ ಮಾಡುವವರಿಗೆ ಇದು ಸೂಕ್ತ.
ದಕ್ಷಿಣ ದಿಕ್ಕು (South) – ಆರೋಗ್ಯದಾಯಕ
ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣಕ್ಕೆ ತಲೆ ಹಾಕಿ ಮಲಗುವುದು ತುಂಬಾ ಒಳ್ಳೆಯದು. ಇದು ಯಮಧರ್ಮನ ದಿಕ್ಕಾದರೂ ಕಾಂತೀಯ ಶಕ್ತಿಯ ದೃಷ್ಟಿಯಿಂದ ಇದು ದೇಹಕ್ಕೆ ಪೂರಕವಾಗಿದೆ.
- ಫಲ: ದೀರ್ಘಾಯುಷ್ಯ, ಮಾನಸಿಕ ಶಾಂತಿ ಮತ್ತು ಸಂಪತ್ತು ವೃದ್ಧಿಯಾಗುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಪಶ್ಚಿಮ ದಿಕ್ಕು (West) – ಮಧ್ಯಮ
ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗುವುದು ಸಾಧಾರಣ ಫಲವನ್ನು ನೀಡುತ್ತದೆ.
- ಫಲ: ಈ ದಿಕ್ಕಿನಲ್ಲಿ ಮಲಗುವುದರಿಂದ ಹೆಸರು ಮತ್ತು ಪ್ರಖ್ಯಾತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಇದು ಅಶಾಂತಿಗೂ ಕಾರಣವಾಗಬಹುದು.
ಉತ್ತರ ದಿಕ್ಕು (North) – ಮಲಗಬಾರದು
ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗುವುದು ಸಂಪೂರ್ಣ ನಿಷಿದ್ಧ.
- ಕಾರಣ: ಭೂಮಿಯ ಕಾಂತೀಯ ಧ್ರುವ ಉತ್ತರದಲ್ಲಿದೆ. ನಮ್ಮ ದೇಹದ ತಲೆಯ ಭಾಗವೂ ಉತ್ತರ ಧ್ರುವದಂತೆ ವರ್ತಿಸುತ್ತದೆ. ಎರಡು ಉತ್ತರ ಧ್ರುವಗಳು ಸಂಧಿಸಿದಾಗ ರಕ್ತ ಪರಿಚಲನೆಯಲ್ಲಿ ವ್ಯತ್ಯಯ ಉಂಟಾಗಿ, ಮೆದುಳಿನ ಮೇಲೆ ಒತ್ತಡ ಬೀಳುತ್ತದೆ.
- ಫಲ: ತಲೆನೋವು, ದುಸ್ವಪ್ನಗಳು, ಮಾನಸಿಕ ಒತ್ತಡ, ಅಕಾಲಿಕ ಮೃತ್ಯುವಿನ ಭಯ ಉಂಟಾಗಬಹುದು.
ಕರುಂಗಾಲಿ ಮಾಲೆ ಧರಿಸಿದರೆ ಸಿಗುವ ಲಾಭಗಳೇನು? ದಿಂಡಿಗಲ್ ಪಾತಾಳ ಮುರುಗನ್ ದೇವಸ್ಥಾನದ ವಿಶೇಷತೆ, ನಂಬಿಕೆಗಳು
ಶ್ಲೋಕಗಳ ಉಲ್ಲೇಖ
ವಿಷ್ಣು ಪುರಾಣ ಮತ್ತು ಆಚಾರ ಮಯೂಖಗಳಲ್ಲಿ ಮಲಗುವ ದಿಕ್ಕಿನ ಬಗ್ಗೆ ಹೀಗೆ ಹೇಳಲಾಗಿದೆ:
ಪ್ರಾಚ್ಯಾಂ ವಿದ್ಯಾ ಮತಿರ್ಜ್ಞಾನಂ ಪ್ರದಕ್ಷಿಣೇ ತು ದೀರ್ಘಾಯುಷ್ಯಮ್ | ಪಶ್ಚಿಮೇ ಪ್ರಬಲಾ ಚಿಂತಾ ಉತ್ತರ ತೇ ಹಾನಿ ಮೃತ್ಯುಮ್ ||
ಅರ್ಥ:
- ಪ್ರಾಚ್ಯಾಂ (ಪೂರ್ವ): ವಿದ್ಯಾ ಮತ್ತು ಜ್ಞಾನ ವೃದ್ಧಿ.
- ದಕ್ಷಿಣೇ (ದಕ್ಷಿಣ): ದೀರ್ಘಾಯುಷ್ಯ ಮತ್ತು ಆರೋಗ್ಯ.
- ಪಶ್ಚಿಮೇ (ಪಶ್ಚಿಮ): ಅತಿಯಾದ ಚಿಂತೆ ಮತ್ತು ಆತಂಕ.
- ಉತ್ತರ (ಉತ್ತರ): ಹಾನಿ ಮತ್ತು ಮೃತ್ಯು ಸಮಾನವಾದ ಕಷ್ಟಗಳು.
ನೆನಪಿರಲಿ – ಪ್ರಮುಖ ನಿಯಮಗಳು
- ಸ್ವಂತ ಮನೆ: ಸ್ವಂತ ಮನೆಯಲ್ಲಿ ಪೂರ್ವ ಅಥವಾ ದಕ್ಷಿಣಕ್ಕೆ ತಲೆ ಹಾಕಿ ಮಲಗಿ.
- ಅತ್ತೆ-ಮಾವನ ಮನೆ: ಅತ್ತೆ-ಮಾವನ ಮನೆಯಲ್ಲಿ ಮಲಗುವಾಗ ದಕ್ಷಿಣಕ್ಕೆ ತಲೆ ಹಾಕುವುದು ಉತ್ತಮ ಎಂಬ ನಂಬಿಕೆಯಿದೆ.
- ಪ್ರಯಾಣ: ಪ್ರಯಾಣದ ಸಮಯದಲ್ಲಿ ಪಶ್ಚಿಮಕ್ಕೆ ತಲೆ ಹಾಕಬಹುದು.
- ಸಂಜೆ ವೇಳೆ: ಸೂರ್ಯಾಸ್ತದ ಸಮಯದಲ್ಲಿ ಅಥವಾ ಸಂಧ್ಯಾಕಾಲದಲ್ಲಿ ಮಲಗುವುದು ದಾರಿದ್ರ್ಯಕ್ಕೆ ಕಾರಣವಾಗುತ್ತದೆ.
ಲೇಖನ- ಶ್ರೀನಿವಾಸ ಮಠ





