ಲೇಖನ- ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ)
ಬಾಯಿದ್ದವನು ಎಲ್ಲಿಯಾದರೂ ಬದುಕುತ್ತಾನೆ ಎಂಬುದು ನಾಣ್ನುಡಿ. ಅಂದರೆ ಯಾವ ಸ್ಥಳ, ಯಾವ ವ್ಯಕ್ತಿ ಹಾಗೂ ಯಾವ ಸನ್ನಿವೇಶಕ್ಕೆ ಎಂಥ ಮಾತನಾಡಬೇಕು ಎಂಬುದು ಗೊತ್ತಿರುವವರಿಗೆ ಬದುಕು ಕಷ್ಟವಲ್ಲ. ಆದರೆ ನಮ್ಮ ನಡುವೆ ಕೆಲವರು ತುಂಬ ಅಸಂಬದ್ಧವಾಗಿ ಮಾತನಾಡುತ್ತಿರುತ್ತಾರೆ. ಅವರು ಮಾತನಾಡುವಾಗ ಎದುರಿಗಿರುವವರು ನಗುತ್ತಿದ್ದರೆ, ಅದು ತನ್ನ ಮಾತಿಗೆ ಸಿಕ್ಕ ಪ್ರಶಂಸೆ ಎಂದುಕೊಂಡು ಇನ್ನಷ್ಟು ಅಸಭ್ಯವಾಗಿ ವರ್ತಿಸುತ್ತಾರೆ. ಕೊನೆಗೆ ಒಂದು ದಿನ ಅದೇ ಮಾತುಗಳು ಅವರ ಪತನಕ್ಕೆ ಕಾರಣವಾಗುತ್ತವೆ. ಅದಕ್ಕೆ ಜ್ಯೋತಿಷ್ಯ ಕಾರಣಗಳು ಏನೇನು ಎಂಬುದನ್ನು ವಿವರಿಸುವ ಲೇಖನ ಇದು. ಅದಕ್ಕೂ ಮುನ್ನ ಪರಿಸ್ಥಿತಿಯನ್ನು ವಿವರಿಸಲು ಒಂದು ಕಥೆಯನ್ನು ಹೇಳಿಬಿಡ್ತೀನಿ.
ಕಪ್ಪೆ ಮತ್ತು ಹಾವಿನ ಕಥೆ
ಒಂದು ತಾಯಿ ಕಪ್ಪೆ ಮರ ಹತ್ತುತ್ತಿತ್ತು. ಮರದ ಮೇಲೊಂದು ಹಾವು ಹೊಂಚು ಹಾಕಿ ಕುಳಿತಿತ್ತು. ಇದನ್ನು ಗಮನಿಸಿದ ಕೆಳಗಿದ್ದ ಮರಿ ಕಪ್ಪೆಗಳು ಭಯದಿಂದ ಚೀರಾಡಿದವು, “ಅಮ್ಮಾ, ಮೇಲೆ ಹೋಗಬೇಡ! ಅಲ್ಲಿ ಹಾವಿದೆ, ಅಪಾಯವಿದೆ, ಬೇಗ ಕೆಳಗೆ ಇಳಿದುಬಿಡು!” ಎಂದು ಕೂಗಿದವು.
ಆದರೆ, ಎತ್ತರಕ್ಕೆ ಏರಿದ್ದ ತಾಯಿ ಕಪ್ಪೆಗೆ ಕೆಳಗಿನಿಂದ ಬಂದ ಶಬ್ದಗಳು ಸರಿಯಾಗಿ ಕೇಳಿಸಲಿಲ್ಲ. ಅದು “ಅಪಾಯ” ಎಂಬ ಎಚ್ಚರಿಕೆಯನ್ನು “ಅಬ್ಬಾ! ಏರಿ, ಏರಿ” ಎಂಬ ಪ್ರೋತ್ಸಾಹ ಎಂದು ತಪ್ಪಾಗಿ ಅರ್ಥೈಸಿಕೊಂಡಿತು. ತನ್ನ ಸಾಹಸಕ್ಕೆ ಎಲ್ಲರೂ ಚಪ್ಪಾಳೆ ತಟ್ಟುತ್ತಿದ್ದಾರೆಂದು ಭಾವಿಸಿ ಇನ್ನಷ್ಟು ವೇಗವಾಗಿ ಮೇಲೆ ಹೋಗಿ ಹಾವಿನ ಪಾಲಾಯಿತು.
ಜೀವನದಲ್ಲಿ ಅಧಿಕಾರ, ಹಣ ಅಥವಾ ಪ್ರಸಿದ್ಧಿ ಬಂದಾಗ ಮನುಷ್ಯನಿಗೂ ಹೀಗೆಯೇ ಆಗುತ್ತದೆ. ಸುತ್ತಲಿನವರು ತನ್ನ ಅಪ್ರಬುದ್ಧ ಮಾತನ್ನು ಕೇಳಿ ಆಡಿಕೊಳ್ಳುತ್ತಿದ್ದರೆ (Troll), ಅವನು ಅದನ್ನು “ತನ್ನ ಜನಪ್ರಿಯತೆ” ಎಂದು ತಪ್ಪಾಗಿ ಭಾವಿಸುತ್ತಾನೆ. ಇದಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವ ಗ್ರಹಗತಿಗಳು ಕಾರಣ? ಬನ್ನಿ ತಿಳಿಯೋಣ.
1. ಗುರು ಗ್ರಹ ಮತ್ತು ಆರನೇ ಮನೆಯ ಸಂಬಂಧ
ಜ್ಯೋತಿಷ್ಯದಲ್ಲಿ ‘ಗುರು’ ಎಂದರೆ ಜ್ಞಾನ ಮತ್ತು ವಿವೇಕದ ಸಂಕೇತ. ಆದರೆ ಜಾತಕದಲ್ಲಿ ಆರನೇ ಮನೆ (ಷಷ್ಠ ಭಾವ) ಎಂದರೆ ಶತ್ರು ಮತ್ತು ವಿವಾದಗಳ ಸ್ಥಾನದಲ್ಲಿ ಸ್ಥಿತವಾಗಿರುತ್ತದೆ. ಇಲ್ಲಿ ಇನ್ನೊಂದು ವಿಚಾರ ನೆನಪಿನಲ್ಲಿರಬೇಕು. ಲಗ್ನದಿಂದ ಆರನೇ ಮನೆ ಹೇಗೆ ಫಲ ನೀಡುತ್ತದೆಯೋ ಅದೇ ರೀತಿ ಚಂದ್ರ ಬಲಿಷ್ಠವಾಗಿರುವ ಜಾತಕಗಳಲ್ಲಿ ಚಂದ್ರನಿಂದ ಆರನೇ ಮನೆಯಲ್ಲಿ ಇರುವ ಗುರು ಗ್ರಹವು ಅದೇ ಫಲವನ್ನು ನೀಡುತ್ತಾನೆ (ಇಲ್ಲಿ ಗುರುವಿರುವುದು ಲಗ್ನಕ್ಕೆ ಕೇಂದ್ರ ಸ್ಥಾನವಾಗದಿದ್ದರೆ ‘ಶಕಟ’ ಯೋಗ ಎಂಬ ದುರ್ಯೋಗವೂ ಸೃಷ್ಟಿ ಆಗುತ್ತದೆ).
- ಒಂದು ವೇಳೆ ಗುರು ಗ್ರಹವು ಲಗ್ನಕ್ಕೆ ಆರನೇ ಮನೆಯ ಅಧಿಪತಿಯಾಗಿದ್ದರೆ ಅಥವಾ ಈ ಮನೆಯಲ್ಲಿದ್ದರೆ, ಆ ವ್ಯಕ್ತಿಗೆ ಸರಿಯಾದ ವಿವೇಚನೆ ಇರುವುದಿಲ್ಲ.
- ತಾನು ಆಡುವ ಮಾತು ಸಮಾಜದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬ ಜ್ಞಾನ ಅವರಿಗೆ ಇರುವುದಿಲ್ಲ. ವಿವೇಕದ ಗ್ರಹವಾದ ಗುರು ದುರ್ಬಲನಾದಾಗ, ಮನುಷ್ಯ ಅಹಂಕಾರದಿಂದ ಅಸಂಬದ್ಧವಾಗಿ ಮಾತನಾಡತೊಡಗುತ್ತಾನೆ.
2. ವಾಕ್ ಸ್ಥಾನದಲ್ಲಿ ಕೇತು (ಮಾತಿನ ಮೇಲೆ ಹಿಡಿತವಿಲ್ಲದಿರುವುದು)
ನಮ್ಮ ಜಾತಕದ ಲಗ್ನಕ್ಕೆ ಎರಡನೇ ಮನೆಯನ್ನು ‘ವಾಕ್ ಸ್ಥಾನ’ ಎನ್ನಲಾಗುತ್ತದೆ. ಇಲ್ಲಿ ಕೇತು ಎಂಬ ಗ್ರಹವಿದ್ದರೆ, ಅಂತಹವರು ಎದುರಿಗಿರುವವರ ಭಾವನೆಗಳನ್ನು ಲೆಕ್ಕಿಸದೆ ಮಾತನಾಡುತ್ತಾರೆ. ಅವರಿಗೆ ತಾವು ಏನು ಮಾತನಾಡುತ್ತಿದ್ದೇವೆ ಎಂಬ ಅರಿವೇ ಇರುವುದಿಲ್ಲ (Ignoring tendency). ಇದು ಅವರ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆಯಾಗುತ್ತದೆ.
ಶ್ರೀದಧಿವಾಮನ ಸ್ತೋತ್ರಮ್: ಮನೆಯಲ್ಲಿ ಸದಾ ಅನ್ನ, ಐಶ್ವರ್ಯ ತುಂಬಿರಲು ಈ ಸಣ್ಣ ಸ್ತೋತ್ರ ದಿನವೂ ಪಠಿಸಿ
3. ಶನಿ ಗ್ರಹದ ದುರ್ಬಲತೆ (ಶಿಸ್ತಿನ ಕೊರತೆ)
ಶನಿ ಎಂದರೆ ಕರ್ಮ ಮತ್ತು ನ್ಯಾಯದ ದೇವತೆ. ಒಬ್ಬ ವ್ಯಕ್ತಿಯ ಆಲೋಚನೆ ಮತ್ತು ಕೆಲಸಗಳು ಸರಿಯಾದ ಹಾದಿಯಲ್ಲಿ ಇರಬೇಕಾದರೆ ಶನಿ ಬಲವಾಗಿರಬೇಕು. ಶನಿಯು ನೀಚನಾಗಿದ್ದರೆ ಅಥವಾ ದುರ್ಬಲನಾಗಿದ್ದರೆ, ಆ ವ್ಯಕ್ತಿಗೆ ಶಿಸ್ತು ಇರುವುದಿಲ್ಲ. ತಪ್ಪು ದಾರಿಯಲ್ಲಿ ನಡೆದರೂ ಅದು ಸರಿಯೆಂದು ವಾದಿಸುವ ಪ್ರವೃತ್ತಿ ಬೆಳೆಯುತ್ತದೆ.
4. ಲಗ್ನ ಮತ್ತು ಮನಸ್ಸಿನ ಅಸ್ಥಿರತೆ
ನಮ್ಮ ದೇಹ ಮತ್ತು ಮನಸ್ಸನ್ನು ಲಗ್ನ, ರವಿ ಮತ್ತು ಚಂದ್ರರು ಸೂಚಿಸುತ್ತಾರೆ. ಲಗ್ನ ಮತ್ತು ಲಗ್ನಾಧಿಪತಿಯು ಎರಡು, ಹನ್ನೆರಡರಲ್ಲಿದ್ದು, ಜಾತಕದಲ್ಲಿ ಲಗ್ನಾಧಿಪತಿಯು 6 ಅಥವಾ 8ನೇ ಮನೆಯ ಸಂಬಂಧ ಹೊಂದಿದ್ದರೆ ಮತ್ತು ರವಿ-ಚಂದ್ರರು ಕೂಡ 6-8ರ ಸಂಬಂಧದಲ್ಲಿದ್ದರೆ, ಆ ವ್ಯಕ್ತಿಯ ಮಾನಸಿಕ ಸ್ಥಿತಿ ಸ್ಥಿರವಾಗಿರುವುದಿಲ್ಲ. ಇವರು ಸಮಾಜದಲ್ಲಿ ನಗೆಪಾಟಲಿಗೀಡಾಗುವ ಕೆಲಸಗಳನ್ನೇ ಪದೇ ಪದೇ ಮಾಡುತ್ತಾರೆ.
5. ರಾಜಯೋಗವಿದ್ದರೂ ಅಪಹಾಸ್ಯಕ್ಕೀಡಾಗುವುದು ಏಕೆ?
ಕೆಲವರ ಜಾತಕದಲ್ಲಿ ಗಜಕೇಸರಿ ಯೋಗ, ಲಕ್ಷ್ಮೀ ಯೋಗ ಅಥವಾ ನಿಪುಣ ಯೋಗಗಳಂತಹ (ರವಿ ಮತ್ತು ಬುಧ ಲಗ್ನಕ್ಕೆ ಐದು ಅಥವಾ ಹನ್ನೊಂದನೇ ಮನೆಯಲ್ಲಿ ಇದ್ದರೆ) ಉತ್ತಮ ಅಧಿಕಾರ ಯೋಗಗಳಿರುತ್ತವೆ. ಇವರು ಶ್ರೀಮಂತರಾಗಿರುತ್ತಾರೆ, ಉನ್ನತ ಸ್ಥಾನದಲ್ಲಿರುತ್ತಾರೆ. ಆದರೆ, ಇವರು ಕರ್ಕಾಟಕ ಅಥವಾ ತುಲಾ ಲಗ್ನದವರಾಗಿದ್ದು, ಮೇಲೆ ಹೇಳಿದಂತೆ ಗುರು ಷಷ್ಠಾಧಿಪತಿಯಾಗಿ ದುರ್ಬಲನಾಗಿದ್ದರೆ, ಇಷ್ಟೆಲ್ಲಾ ಅಧಿಕಾರವಿದ್ದರೂ ಇವರು ಆಡುವ ‘ಹಗುರವಾದ ಮಾತು’ಗಳಿಂದಾಗಿ ಸಮಾಜದಲ್ಲಿ ಟ್ರೋಲ್ ಆಗುತ್ತಾರೆ.
ಗುಡಿಮಲ್ಲಂ ಪರಶುರಾಮೇಶ್ವರ ದೇವಾಲಯ: 60 ವರ್ಷಕ್ಕೊಮ್ಮೆ ಗರ್ಭಗುಡಿ ತುಂಬುವ ಜಲವಿಸ್ಮಯ!
ಕೊನೆ ಮಾತು:
ಹಣ, ಅಧಿಕಾರ ಬಂದಾಗ ಮನುಷ್ಯ ಎಚ್ಚರಿಕೆಯಿಂದ ಇರಬೇಕು. ಜಾತಕದಲ್ಲಿ ಗ್ರಹಗತಿಗಳು ಸರಿಯಿಲ್ಲದಿದ್ದಾಗ, ಮನುಷ್ಯ ತನ್ನ ಅಹಂಕಾರದಿಂದ ತಾನೇ ಹಾವಿನ ಬಾಯಿಗೆ (ಸಂಕಷ್ಟಕ್ಕೆ) ಸಿಲುಕುವ ಕಪ್ಪೆಯಂತಾಗುತ್ತಾನೆ. ವಿವೇಕವಿಲ್ಲದ ಮಾತು ಎಷ್ಟೇ ಪ್ರಸಿದ್ಧಿ ತಂದರೂ ಅದು ದೀರ್ಘಕಾಲ ಉಳಿಯುವುದಿಲ್ಲ.
ನಿರೂಪಣೆ- ಶ್ರೀನಿವಾಸ ಮಠ





