‘ಅಘೋರಿಗಳು’ ಎಂಬ ಪದ ಕಿವಿಯ ಮೇಲೆ ಬಿದ್ದರೆ ಗಾಬರಿ, ಕುತೂಹಲದಿಂದ ಕಣ್ಣರಳಿಸಿ ನೋಡುವವರೇ ಹೆಚ್ಚು. ಉತ್ತರ ಭಾರತದಲ್ಲಿ ಅಘೋರಿಗಳ ಬಗ್ಗೆ ಅನೇಕ ದಂತಕಥೆಗಳಿವೆ. ಅಘೋರಿಗಳ ಸಿಟ್ಟು, ದಯೆ, ಕಾರುಣ್ಯದ ಬಗ್ಗೆ ನಾನಾ ಕಥೆಗಳನ್ನು ಹೇಳುವವರು ಸಿಗುತ್ತಾರೆ. ಅಂಥ ಅಘೋರಿಗಳ ಬಗೆಗಿನ ಪರಿಚಯ ಮತ್ತು ಅವರ ಪವಿತ್ರ ಸ್ಥಳಗಳ ಬಗೆಗಿನ ವಿವರಣೆ ಇಲ್ಲಿದೆ. ಅಂದಹಾಗೆ ಅಘೋರ ಪಂಥದ ಉಗಮ ಮತ್ತು ಮೊಟ್ಟಮೊದಲ ಅಘೋರಿಗಳ ಆರಂಭದ ಬಿಂದು ಅತ್ಯಂತ ಪುರಾತನವಾದದ್ದು. ಇದು ಪುರಾಣ ಮತ್ತು ಐತಿಹಾಸಿಕ ದಾಖಲೆಗಳೆರಡರಲ್ಲೂ ಕಂಡುಬರುತ್ತದೆ.
ಅಘೋರ ಪಂಥದ ಮೂಲವನ್ನು ಮುಖ್ಯವಾಗಿ ಎರಡು ನೆಲೆಗಳಲ್ಲಿ ಗುರುತಿಸಬಹುದು:
ಪುರಾಣಗಳ ಹಿನ್ನೆಲೆ (ಶಿವನ ಸ್ವರೂಪ):
ಪುರಾಣಗಳ ಪ್ರಕಾರ, ಆ ಶಿವನ ಐದು ಮುಖಗಳಲ್ಲಿ ಒಂದಕ್ಕೆ ‘ಅಘೋರ’ ಎಂಬ ಹೆಸರಿದೆ. ಶಿವನ ಈ ಮುಖವು ಜ್ಞಾನ ಮತ್ತು ಸಂಹಾರದ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಅಘೋರಿಗಳ ಪ್ರಕಾರ, ಶಿವನೇ ಮೊದಲ ಅಘೋರಿ. ಶಿವನನ್ನು ‘ಮಹಾಕಾಲ’ ಮತ್ತು ‘ಅಘೋರನಾಥ’ ಎಂದು ಪೂಜಿಸುತ್ತಾರೆ. ಶಿವನು ಸ್ಮಶಾನದಲ್ಲಿ ವಾಸಿಸುವುದು, ಭಸ್ಮ ಲೇಪನ ಮಾಡುವುದು ಮತ್ತು ತಲೆಬುರುಡೆ ಧರಿಸುವುದು ಅಘೋರ ಸಂಪ್ರದಾಯದ ಮೂಲ ಪ್ರೇರಣೆಯಾಗಿದೆ.
ಗುರು ದತ್ತಾತ್ರೇಯರ ಪರಂಪರೆ:
ಅಘೋರಿಗಳು ಗುರು ದತ್ತಾತ್ರೇಯರನ್ನು ತಮ್ಮ ಸಂಪ್ರದಾಯದ ಆದಿಗುರು ಎಂದು ಪರಿಗಣಿಸುತ್ತಾರೆ. ದತ್ತಾತ್ರೇಯರು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಸಮ್ಮಿಲನವಾಗಿದ್ದು, ಅವರು ನೀಡಿದ ‘ಅವಧೂತ ಗೀತೆ’ ಅಘೋರ ತತ್ವಕ್ಕೆ ಅಡಿಪಾಯವಾಗಿದೆ.
ಬಾಬಾ ಕೀನಾರಾಮ್:
ಮೊಟ್ಟಮೊದಲ ಅಘೋರಿಗಳು ಮತ್ತು ಇತಿಹಾಸದ ಪ್ರಮುಖರು ಅಂತ ಹುಡುಕುವಾಗ ಸಿಗುವ ಪ್ರಖರವಾದ ಹೆಸರು ಬಾಬಾ ಕೀನಾರಾಮ್. ಇವರನ್ನು ಆಧುನಿಕ ಪಂಥದ ಪಿತಾಮಹ ಅಂತಲೂ ಕರೆಯಲಾಗುತ್ತದೆ. ಇತಿಹಾಸದಲ್ಲಿ ಅಘೋರ ಪಂಥವನ್ನು ವ್ಯವಸ್ಥಿತವಾಗಿ ರೂಪಿಸಿದವರು ಇವರೇ. ಹದಿನೇಳನೇ ಶತಮಾನದಲ್ಲಿ ಜೀವಿಸಿದ್ದ ಬಾಬಾ ಕೀನಾರಾಮ್ ಕಾಶಿಯಲ್ಲಿ ನೆಲೆಸಿ, ಸಮಾಜದಿಂದ ದೂರವಿದ್ದ ಅಘೋರಿಗಳನ್ನು ಒಗ್ಗೂಡಿಸಿ ಒಂದು ಸಂಘಟಿತ ರೂಪ ನೀಡಿದರು. ಅವರು ಕಾಶಿಯಲ್ಲಿ ಸ್ಥಾಪಿಸಿದ ‘ಕೀನಾರಾಮ್ ಆಶ್ರಮ’ ಇಂದಿಗೂ ಅಘೋರಿಗಳ ಅತ್ಯಂತ ಪವಿತ್ರ ಕೇಂದ್ರವಾಗಿದೆ. ಅವರು ಸುಮಾರು 170 ವರ್ಷಗಳ ಕಾಲ ಬದುಕಿದ್ದರು ಎಂದು ನಂಬಲಾಗುತ್ತದೆ.
ಕಾಪಾಲಿಕ ಮತ್ತು ಪಾಶುಪತ ಸಂಪ್ರದಾಯ:
ಪ್ರಾಚೀನ ಕಾಲದಲ್ಲಿ ಅಘೋರಿಗಳನ್ನು ‘ಕಾಪಾಲಿಕರು’ ಎಂದು ಕರೆಯಲಾಗುತ್ತಿತ್ತು. ಎಂಟನೇ ಶತಮಾನದ ಶಂಕರಾಚಾರ್ಯರ ಕಾಲದ ದಾಖಲೆಗಳಲ್ಲಿ ಕಾಪಾಲಿಕರ ಬಗ್ಗೆ ಉಲ್ಲೇಖವಿದೆ. ಇವರು ತಲೆಬುರುಡೆಯನ್ನು (ಕಪಾಲ) ಹಿಡಿದು ಸಂಚರಿಸುತ್ತಿದ್ದರು. ಇದಕ್ಕೂ ಮೊದಲು ‘ಪಾಶುಪತ’ ಎಂಬ ಪಂಥವಿತ್ತು, ಇದು ಸನಾತನ ಧರ್ಮದ ಅತ್ಯಂತ ಹಳೆಯ ಶೈವ ಪಂಥವಾಗಿದ್ದು, ಇದರಿಂದಲೇ ಅಘೋರ ಪಂಥವು ಕವಲೊಡೆದು ಬಂದಿದೆ.
ಬಾಬಾ ಬಾಮಕ್ಷೇಪ (ತಾರಾಪೀಠ):
ಬಂಗಾಳದ ತಾರಾಪೀಠದಲ್ಲಿ ಸಿದ್ಧಿ ಪಡೆದ ಇವರು ಹದಿನೆಂಟನೇ ಶತಮಾನದ ಪ್ರಖ್ಯಾತ ಅಘೋರಿ ಸಾಧು ಬಾಬಾ ಬಾಮಕ್ಷೇಪ. ಇವರು ಕಾಳಿ ಮಾತೆಯನ್ನು ಸಾಕ್ಷಾತ್ಕಾರ ಮಾಡಿಕೊಂಡಿದ್ದರು ಮತ್ತು ಅಘೋರ ಪಂಥದ ವಾಮಾಚಾರ ಪದ್ಧತಿಯನ್ನು ಉತ್ತುಂಗಕ್ಕೆ ಕೊಂಡೊಯ್ದರು.
ಅಘೋರ ಪಂಥದ ಉದ್ದೇಶ:
ಅಘೋರಿಗಳ ಮೂಲ ಉದ್ದೇಶವು ‘ಅಹಂ’ ಅನ್ನು ಸುಟ್ಟು ಹಾಕುವುದು. ಅಘೋರಿಗಳು ತಾವು ಅಶುದ್ಧವೆಂದು ಯಾವುದನ್ನೂ ಪರಿಗಣಿಸುತ್ತಿರಲಿಲ್ಲ. ಸಾವು ಮತ್ತು ಬದುಕಿನ ಮಧ್ಯೆ ಅಂತರವನ್ನು ಅಳಿಸಿಹಾಕುವುದೇ ಅವರ ಸಾಧನೆಯಾಗಿತ್ತು. ಸನಾತನ ಧರ್ಮದ ಅತ್ಯಂತ ನಿಗೂಢ ಮತ್ತು ಕಠೋರ ಅಂದರೆ ಅದು ಅಘೋರ ಪಂಥ. ಲೌಕಿಕ ಜಗತ್ತು ಯಾವುದನ್ನು ‘ಅಶುದ್ಧ’ ಅಥವಾ ‘ಭಯಾನಕ’ ಎಂದು ಕರೆಯುತ್ತದೆಯೋ ಅಘೋರಿಗಳು ಅದರಲ್ಲಿಯೇ ದೈವತ್ವವನ್ನು ಕಾಣುತ್ತಾರೆ. ಮನುಷ್ಯನ ಅಹಂಕಾರ ಮತ್ತು ಮೃತ್ಯುವಿನ ಭಯವನ್ನು ಸುಟ್ಟು ಹಾಕುವುದೇ ಈ ಪಥದ ಅಂತಿಮ ಗುರಿ. ‘ಅಘೋರ’ ಎಂದರೆ ಭಯವಿಲ್ಲದವನು ಅಥವಾ ಕತ್ತಲೆ ಇಲ್ಲದವನು. ಅಘೋರಿಗಳ ಪ್ರಕಾರ, ಈ ಬ್ರಹ್ಮಾಂಡದಲ್ಲಿ ಪ್ರತಿಯೊಂದೂ ಶಿವಮಯ. ಸುಂದರವಾದ ಹೂವು ಮತ್ತು ಸುಟ್ಟು ಹೋದ ಹೆಣದ ಬೂದಿಯ ಮಧ್ಯೆ ಯಾವ ವ್ಯತ್ಯಾಸವಿಲ್ಲ ಎಂಬುದು ಅವರ ಅದ್ವೈತ ಸಿದ್ಧಾಂತ. ಸಮಾಜದ ಕಟ್ಟುಪಾಡುಗಳಿಂದ ಮುಕ್ತರಾಗಿ ಜೀವನದ ಕಹಿ ಸತ್ಯಗಳನ್ನು (ಸಾವನ್ನು) ಅವರು ಆರಾಧಿಸುತ್ತಾರೆ.
ವಿಷ್ಣು ಸಹಸ್ರನಾಮ ಫಲ: ಜಪದ ಮೂಲಕ ಸಕಲ ಸಂಕಷ್ಟ ನಿವಾರಣೆ ಮತ್ತು ಜೀವನ ಸುಧಾರಣೆ
ಅಘೋರಿಗಳ ಸಾಧನೆಯ 20 ದಿವ್ಯ ಕ್ಷೇತ್ರಗಳು:
ಅಘೋರಿಗಳು ತಮ್ಮ ಸಿದ್ಧಿಗಾಗಿ ಆರಿಸಿಕೊಳ್ಳುವ ಸ್ಥಳಗಳು ವಿಶೇಷ ಶಕ್ತಿ ಕೇಂದ್ರಗಳಾಗಿರುತ್ತವೆ; ಅವುಗಳ ವಿವರ ಇಲ್ಲಿದೆ:
ಕಾಶಿ (ವಾರಾಣಸಿ), ಉತ್ತರ ಪ್ರದೇಶ: ಅಘೋರಿಗಳ ಪಾಲಿಗೆ ಕಾಶಿಯೇ ಸರ್ವಸ್ವ. ಅಲ್ಲಿನ ಮಣಿಕರ್ಣಿಕಾ ಘಾಟ್ ಎಂದಿಗೂ ಆರದ ಚಿತೆಗಳಿಗೆ ಹೆಸರುವಾಸಿ. ಬಾಬಾ ಕೀನಾರಾಮ್ ಅವರ ಪ್ರಧಾನ ಪೀಠವೂ ಇಲ್ಲಿದೆ. ಅಘೋರಿಗಳು ಇಲ್ಲಿ ಗಂಗಾ ತೀರದಲ್ಲಿ ಕುಳಿತು ಶವಗಳ ಬೂದಿಯ ಮೇಲೆ ಧ್ಯಾನ ಮಾಡುತ್ತಾರೆ.
ಗಿರ್ನಾರ್ ಪರ್ವತ, ಗುಜರಾತ್: ಇದು ಗುರು ದತ್ತಾತ್ರೇಯರ ನೆಲೆ. ಅಘೋರಿಗಳು ದತ್ತಾತ್ರೇಯರನ್ನು ತಮ್ಮ ಆದಿಗುರು ಎಂದು ಪೂಜಿಸುತ್ತಾರೆ. ಇಲ್ಲಿನ ಅಖಂಡ ಏಕಾಂತವು ತೀವ್ರತರವಾದ ಸಾಧನೆಗೆ ಪ್ರೇರಣೆ ನೀಡುತ್ತದೆ.
ತಾರಾಪೀಠ, ಪಶ್ಚಿಮ ಬಂಗಾಳ: ಇಲ್ಲಿನ ಸ್ಮಶಾನವು ಅಘೋರಿಗಳಿಗೆ ಅತ್ಯಂತ ಪವಿತ್ರ. ಸತಿ ದೇವಿಯ ಕಣ್ಣಿನ ಪಾಪೆ ಬಿದ್ದ ಈ ಶಕ್ತಿಪೀಠದಲ್ಲಿ ತಾರಾ ಮಾತೆಯ ಆರಾಧನೆ ನಡೆಯುತ್ತದೆ. ಬಾಬಾ ಬಾಮಕ್ಷೇಪ ಇಲ್ಲಿ ಸಿದ್ಧಿ ಪಡೆದ ಪ್ರಮುಖ ಸಾಧು.
ಕಾಮಾಖ್ಯ ದೇವಾಲಯ, ಅಸ್ಸಾಂ: ತಂತ್ರವಿದ್ಯೆಯ ಕೇಂದ್ರವಾದ ಇಲ್ಲಿ ‘ಯೋನಿ ಪೀಠ’ವಿದೆ. ಅಂಬುಬಾಚಿ ಮೇಳದ ಸಮಯದಲ್ಲಿ ಸಾವಿರಾರು ಅಘೋರಿಗಳು ಇಲ್ಲಿ ಸೇರಿ ಪ್ರಕೃತಿಯ ಸೃಜನಶೀಲ ಶಕ್ತಿಯನ್ನು ಆರಾಧಿಸುತ್ತಾರೆ.
ಪಶುಪತಿನಾಥ ದೇವಾಲಯ, ನೇಪಾಳ: ಬಾಗ್ಮತಿ ನದಿಯ ದಡದಲ್ಲಿರುವ ಈ ಕ್ಷೇತ್ರವು ಶಿವನ ಪಶುಪತಿ ರೂಪಕ್ಕೆ ಅರ್ಪಿತವಾಗಿದೆ. ಇಲ್ಲಿನ ಘಾಟ್‌ಗಳಲ್ಲಿ ಅಘೋರಿಗಳು ಮೃತ್ಯುಂಜಯ ಜಪವನ್ನು ಮಾಡುತ್ತಾರೆ.
ಉಜ್ಜಯಿನಿ ಮಹಾಕಾಲೇಶ್ವರ, ಮಧ್ಯಪ್ರದೇಶ: ಕಾಲದ ಒಡೆಯನಾದ ಮಹಾಕಾಲನ ನೆಲೆ. ಇಲ್ಲಿನ ‘ಚಕ್ರತೀರ್ಥ’ ಸ್ಮಶಾನವು ತಾಂತ್ರಿಕ ಸಿದ್ಧಿಗೆ ಹೆಸರಾಗಿದೆ. ಭಸ್ಮ ಆರತಿಯಲ್ಲಿ ಪಾಲ್ಗೊಳ್ಳುವುದು ಅಘೋರಿಗಳ ಪರಮ ಗುರಿ.
ಜ್ವಾಲಾಮುಖಿ ದೇವಾಲಯ, ಹಿಮಾಚಲ ಪ್ರದೇಶ: ಭೂಮಿಯಿಂದ ಹೊರಬರುವ ಪವಿತ್ರ ಜ್ವಾಲೆಗಳನ್ನು ಅಘೋರಿಗಳು ಅಗ್ನಿರೂಪಿಣಿ ದೇವಿಯೆಂದು ಪೂಜಿಸುತ್ತಾರೆ. ಇದು ಶುದ್ಧೀಕರಣದ ಸಂಕೇತ.
ಕೇದಾರನಾಥ, ಉತ್ತರಾಖಂಡ: ಹಿಮಾಲಯದ ಮಂಜಿನ ಬೆಟ್ಟಗಳಲ್ಲಿ ಅಘೋರಿಗಳು ತೀವ್ರ ಚಳಿಯನ್ನೂ ಲೆಕ್ಕಿಸದೆ ಶಿವನ ‘ಹೋಮ’ ಮತ್ತು ‘ಧ್ಯಾನ’ದಲ್ಲಿ ನಿರತರಾಗಿರುತ್ತಾರೆ.
ದಕ್ಷಿಣೇಶ್ವರ ಕಾಳಿ ದೇವಾಲಯ, ಪಶ್ಚಿಮ ಬಂಗಾಳ: ಕಾಳಿ ಮಾತೆಯ ಉಗ್ರ ರೂಪವು ಅಘೋರಿಗಳಿಗೆ ರಕ್ಷಣೆ ಮತ್ತು ಶಕ್ತಿ ನೀಡುತ್ತದೆ. ಇಲ್ಲಿ ಅಘೋರ ಪಂಥದ ಗುಪ್ತ ಶಾಖೆಗಳು ಸಾಧನೆ ಮಾಡುತ್ತವೆ.
ಹೃಷಿಕೇಶ ಮತ್ತು ಹರಿದ್ವಾರ, ಉತ್ತರಾಖಂಡ: ಗಂಗಾ ನದಿಯು ಪರ್ವತದಿಂದ ಸಮತಟ್ಟಾದ ಭೂಮಿಗೆ ಬರುವ ಈ ಸ್ಥಳವು ಶುದ್ಧೀಕರಣಕ್ಕೆ ಹೆಸರಾಗಿದೆ. ಇಲ್ಲಿನ ನೀಲಕಂಠ ಪರ್ವತದ ಗುಹೆಗಳಲ್ಲಿ ಅಘೋರಿಗಳು ನೆಲೆಸಿರುತ್ತಾರೆ.
ಓಂಕಾರೇಶ್ವರ, ಮಧ್ಯಪ್ರದೇಶ: ನರ್ಮದಾ ನದಿ ತೀರದ ಈ ಜ್ಯೋತಿರ್ಲಿಂಗವು ಅಘೋರಿಗಳಿಗೆ ಅತ್ಯಂತ ಪ್ರಿಯ. ನರ್ಮದೆಯ ದರ್ಶನದಿಂದಲೇ ಸಿದ್ಧಿ ಲಭಿಸುತ್ತದೆ ಎಂಬುದು ಅವರ ನಂಬಿಕೆ.
2026 ನ್ಯೂಮರಾಲಜಿ ಭವಿಷ್ಯ: ಮದುವೆ, ಉದ್ಯೋಗ, ಹಣಕಾಸು, ಆರೋಗ್ಯ – ಜನ್ಮಸಂಖ್ಯೆ 1ರಿಂದ 9ರವರೆಗೆ
ಅಮರನಾಥ ಗುಹೆ, ಜಮ್ಮು ಮತ್ತು ಕಾಶ್ಮೀರ: ನೈಸರ್ಗಿಕ ಹಿಮಲಿಂಗವಿರುವ ಈ ಗುಹೆಯು ಶಿವನ ವೈರಾಗ್ಯದ ಸಂಕೇತ. ಇಲ್ಲಿ ಸಾಧನೆ ಮಾಡುವುದು ಅತ್ಯಂತ ಕಠಿಣವೆಂದು ಪರಿಗಣಿಸಲಾಗುತ್ತದೆ.
ವೈದ್ಯನಾಥ ಜ್ಯೋತಿರ್ಲಿಂಗ, ಜಾರ್ಖಂಡ್: ರಾವಣನು ಶಿವನನ್ನು ಆರಾಧಿಸಿದ ಈ ಸ್ಥಳವು ತಾಂತ್ರಿಕ ಶಕ್ತಿಗಳಿಗೆ ಪ್ರಶಸ್ತವಾಗಿದೆ. ಇಲ್ಲಿನ ಪರಿಸರವು ಅಘೋರಿಗಳಿಗೆ ಸಿದ್ಧಿ ನೀಡುತ್ತದೆ.
ಬಾಬಾ ಬುಡನ್ ಗಿರಿ (ದತ್ತ ಪೀಠ), ಕರ್ನಾಟಕ: ಕರ್ನಾಟಕದ ಪ್ರಮುಖ ಸಿದ್ಧ ಕ್ಷೇತ್ರ. ಇಲ್ಲಿನ ಗುಹೆಗಳಲ್ಲಿ ದತ್ತಾತ್ರೇಯರ ಅಂಶವಿದೆ ಎಂದು ಅಘೋರಿಗಳು ನಂಬುತ್ತಾರೆ.
ಶ್ರೀಶೈಲ ಮಲ್ಲಿಕಾರ್ಜುನ, ಆಂಧ್ರಪ್ರದೇಶ: ನಲ್ಲಮಲ ಅರಣ್ಯದ ಮಧ್ಯೆ ಇರುವ ಈ ಕ್ಷೇತ್ರವು ಅಘೋರಿಗಳ ಪ್ರಾಚೀನ ನೆಲೆಗಳಲ್ಲಿ ಒಂದು. ಇಲ್ಲಿನ ಪಾತಾಳ ಗಂಗೆಯು ಸಾಧಕರಿಗೆ ಶಕ್ತಿ ನೀಡುತ್ತದೆ.
ರಾಮೇಶ್ವರಂ, ತಮಿಳುನಾಡು: ಜನನ-ಮರಣದ ಚಕ್ರದಿಂದ ಮುಕ್ತಿ ಪಡೆಯಲು ದಕ್ಷಿಣದ ಈ ಸಮುದ್ರ ತೀರಕ್ಕೆ ಅಘೋರಿಗಳು ಭೇಟಿ ನೀಡುತ್ತಾರೆ.
ಬಿಂಧುಧಾಮ್, ಬಿಹಾರ: ಗಂಗಾ ನದಿಯ ದಡದಲ್ಲಿರುವ ಈ ಪ್ರದೇಶವು ಸಿದ್ಧ ಪುರುಷರ ಗುಪ್ತ ನೆಲೆಯಾಗಿದೆ. ಇಲ್ಲಿನ ತಂತ್ರ ಪೂಜೆಗಳು ಅತ್ಯಂತ ಗೋಪ್ಯವಾಗಿರುತ್ತವೆ.
ಪಂಚಮಢಿ ಗುಹೆಗಳು, ಮಧ್ಯಪ್ರದೇಶ: ಇಲ್ಲಿನ ಸತ್ಪುರ ಪರ್ವತ ಶ್ರೇಣಿಯ ಗುಹೆಗಳು ಏಕಾಂತ ವಾಸಕ್ಕೆ ಅತ್ಯಂತ ಸೂಕ್ತವಾಗಿವೆ.
ಹರಿಶ್ಚಂದ್ರ ಸ್ಮಶಾನ, ವಿವಿಧೆಡೆ: ಸತ್ಯಕ್ಕಾಗಿ ಸ್ಮಶಾನ ಕಾಯ್ದ ಹರಿಶ್ಚಂದ್ರನ ಹೆಸರಿರುವ ಸ್ಥಳಗಳನ್ನು ಅಘೋರಿಗಳು ಆದರ್ಶವಾಗಿ ಪೂಜಿಸುತ್ತಾರೆ.
ಕೈಲಾಸ ಮಾನಸಸರೋವರ: ಇದು ಅಘೋರಿಗಳ ಪಾಲಿಗೆ ಬ್ರಹ್ಮಾಂಡದ ಕೇಂದ್ರ ಮತ್ತು ಶಿವನ ಮೂಲ ಮನೆ. ಇಲ್ಲಿಗೆ ತಲುಪುವುದು ಪ್ರತಿಯೊಬ್ಬ ಅಘೋರಿಯ ಅಂತಿಮ ಕನಸು.
ಲೇಖನ- ಶ್ರೀನಿವಾಸ ಮಠ





