Sri Gurubhyo Logo

2026ರ ವರ್ಷಭವಿಷ್ಯ: ಯಾರಿಗೆ ಅದೃಷ್ಟ? ಯಾರಿಗೆ ಸವಾಲು? ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳ ಆದಾಯ-ಖರ್ಚು ಮತ್ತು ಆರೋಗ್ಯದ ಸಂಪೂರ್ಣ ವಿವರ

2026 Yearly Horoscope Predictions for all 12 Zodiac Signs in Kannada by Srinivasa Mata
ಸಾಂದರ್ಭಿಕ ಚಿತ್ರ

ಯಾವುದೇ ಕ್ಯಾಲೆಂಡರ್ ವರ್ಷದಲ್ಲಿ ಜ್ಯೋತಿಷ್ಯದ ಬಗ್ಗೆ ಏನಾದರೂ ಕೇಳಿದರೆ, ನಮಗೆ ಈ ವರ್ಷ ಹೇಗಿದೆ, ಆರ್ಥಿಕ ಪರಿಸ್ಥಿತಿ ಹೇಗಿರುತ್ತದೆ, ಆರೋಗ್ಯ ಹೇಗಿರುತ್ತದೆ ಈ ರೀತಿ ಪ್ರಾಮುಖ್ಯದ ಆಧಾರದಲ್ಲಿ ಕೇಳುವುದುಂಟು. ಈ ಲೇಖನದಲ್ಲಿ ಮೇಷ ರಾಶಿಯಿಂದ ಮೀನ ರಾಶಿಯ ತನಕ ಯಾವ ರಾಶಿಯವರಿಗೆ ಆದಾಯ- ಖರ್ಚು, ಸಾಮಾಜಿಕ ಮನ್ನಣೆ- ಸವಾಲು ಹೇಗೆ ಇರುತ್ತದೆ ಎಂಬುದನ್ನು ವಿವರಿಸಲಾಗಿದೆ. ಇದರಲ್ಲಿ ಸಾಮಾನ್ಯ ನಿಯಮಗಳನ್ನು ಅನುಸರಿಸಲಾಗಿದೆ. ಒಬ್ಬ ವ್ಯಕ್ತಿ ಈ ವಿಚಾರಗಳಿಗೆ ಸಂಬಂಧಪಟ್ಟಂತೆ ಮುಖ್ಯವಾದ ತೀರ್ಮಾನ ತೆಗೆದುಕೊಳ್ಳಬೇಕು ಅಂತಾದರೆ ವೈಯಕ್ತಿಕ ಜಾತಕವನ್ನು ಜ್ಯೋತಿಷಿಗಳ ಬಳಿ ತೋರಿಸಿಕೊಳ್ಳಬೇಕು. ದಶಾ- ಭುಕ್ತಿ, ಜನ್ಮಜಾತಕದಲ್ಲಿನ ಯೋಗಗಳು ಇತ್ಯಾದಿಯನ್ನು ಸಮಗ್ರವಾಗಿ ವಿಶ್ಲೇಷಣೆ ಮಾಡಿದ ನಂತರವಷ್ಟೇ ದೊಡ್ಡ ತೀರ್ಮಾನಗಳನ್ನು ಆಖೈರು ಮಾಡಿಕೊಳ್ಳಿ. ಉಳಿದಂತೆ ಇಲ್ಲಿರುವ ಮಾಹಿತಿ ಮಾರ್ಗದರ್ಶಿ ಇದ್ದಂತೆ. ಒಳ್ಳೆಯದಾಗಲಿ, ಒಳ್ಳೆಯದೇ ಆಗಲಿ.

ಇನ್ನು 2026ನೇ ಇಸವಿಯು ಗ್ರಹ ಸಂಚಾರದ ಆಧಾರದ ಮೇಲೆ ಮುಖ್ಯ ಬೆಳವಣಿಗೆ ಆಗುತ್ತದೆ. ಈ ವರ್ಷ ಬೃಹಸ್ಪತಿಯು (ಗುರು) ತನ್ನ ಉಚ್ಚ ರಾಶಿಯಾದ ಕರ್ಕಾಟಕದಲ್ಲಿ ಸಂಚರಿಸುತ್ತಾ ಜಗತ್ತಿಗೆ ಶುಭವನ್ನು ನೀಡಲಿದ್ದಾನೆ. ಮತ್ತೊಂದೆಡೆ, ಶನೈಶ್ಚರನು ಮೀನ ರಾಶಿಯಲ್ಲಿ ಸಂಚರಿಸುತ್ತಾ ಕುಂಭ, ಮೀನ ಹಾಗೂ ಮೇಷ ರಾಶಿಯವರಿಗೆ ಸಾಡೇಸಾತಿಯ ಪ್ರಭಾವವನ್ನು ಬೀರುತ್ತಿದ್ದಾನೆ. ಈ ಗ್ರಹಗತಿಗಳ ಹಿನ್ನೆಲೆಯಲ್ಲಿ ಪ್ರತಿ ರಾಶಿಯವರ ಆರ್ಥಿಕ- ಆರೋಗ್ಯ- ಸಾಮಾಜಿಕ ಸ್ಥಿತಿಗತಿಗಳು ಹೀಗಿವೆ:

1. ಮೇಷ ರಾಶಿ

• ಆಯ: 8, ವ್ಯಯ: 14 | ರಾಜಪೂಜ್ಯ: 2, ರಾಜಭಯ: 2

• ಆರ್ಥಿಕ ವಿಶ್ಲೇಷಣೆ: ಆಯಕ್ಕಿಂತ ವ್ಯಯದ ಪ್ರಮಾಣ ಹೆಚ್ಚಿದೆ. ಈ ವರ್ಷ ನೀವು ಹಣದ ಒಳ ಹರಿವಿಗಿಂತ ಹೊರಹರಿವಿನ ಬಗ್ಗೆ ಹೆಚ್ಚು ಚಿಂತಿಸಬೇಕಾಗುತ್ತದೆ. ಹೂಡಿಕೆ ಮಾಡುವಾಗ ನೂರು ಬಾರಿ ಯೋಚಿಸಿ.

ಆರೋಗ್ಯ: ಶನಿಯ ಪ್ರಭಾವದಿಂದಾಗಿ ರಕ್ತಹೀನತೆ ಅಥವಾ ನರಗಳ ದೌರ್ಬಲ್ಯ ಕಾಡಬಹುದು. ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ತಲೆನೋವು ಸಮಸ್ಯೆ ಅಧಿಕವಾಗಬಹುದು.

ತಿಂಗಳ ಆಧಾರದಲ್ಲಿ ವಿವರ:

ಜನವರಿಯಿಂದ ಮಾರ್ಚ್: ಕಠಿಣ ಪರಿಶ್ರಮದ ಕಾಲ. ಅನಿರೀಕ್ಷಿತ ಖರ್ಚುಗಳು ಎದುರಾಗುತ್ತವೆ.

ಏಪ್ರಿಲ್ ನಿಂದ ಜೂನ್: ಸ್ಥಿರಾಸ್ತಿ ಖರೀದಿ ಅಥವಾ ಮನೆ ನವೀಕರಣದ ಯೋಗವಿದೆ. ಜೂನ್ ತಿಂಗಳಲ್ಲಿ ಶುಭ ವಾರ್ತೆ ಕೇಳುವಿರಿ.

ಜುಲೈನಿಂದ ಸೆಪ್ಟೆಂಬರ್: ಉದ್ಯೋಗದಲ್ಲಿ ವರ್ಗಾವಣೆ ಅಥವಾ ಬದಲಾವಣೆ ಆಗಬಹುದು. ಮೇಲಧಿಕಾರಿಗಳೊಂದಿಗೆ ವಾಗ್ವಾದ ಬೇಡ.

ಅಕ್ಟೋಬರ್ ನಿಂದ ಡಿಸೆಂಬರ್: ವರ್ಷಾಂತ್ಯದಲ್ಲಿ ಸಾಲದ ಬಾಧೆ ತೀರಲಿದೆ. ಕೌಟುಂಬಿಕವಾಗಿ ಸುಖ ಇರಲಿದೆ.

2. ವೃಷಭ ರಾಶಿ

• ಆಯ: 2, ವ್ಯಯ: 8 | ರಾಜಪೂಜ್ಯ: 5, ರಾಜಭಯ: 5

ಆರ್ಥಿಕ ವಿಶ್ಲೇಷಣೆ: ಆಯದ ಸಂಖ್ಯೆ ಅತ್ಯಲ್ಪವಾಗಿದ್ದರೂ ಗುರು ಬಲ ಇರುವುದರಿಂದ ನಿಮಗೆ ಅಗತ್ಯವಿರುವ ಸಮಯದಲ್ಲಿ ಧನಸಹಾಯ ದೊರೆಯಲಿದೆ. ಅದೃಷ್ಟಕ್ಕಿಂತ ಶ್ರಮವನ್ನೇ ನಂಬಿಕೊಳ್ಳಿ.

ಆರೋಗ್ಯ: ಆಗಸ್ಟ್ ತಿಂಗಳಲ್ಲಿ ಫುಡ್ ಪಾಯಿಸನ್ ಆಗುವ ಸಾಧ್ಯತೆ ಇದೆ. ಹೊರಗಿನ ತಿಂಡಿ- ತಿನಿಸುಗಳ ಬಗ್ಗೆ ಜಾಗ್ರತೆ ಇರಲಿ.

ತಿಂಗಳ ಆಧಾರದಲ್ಲಿ ವಿವರ:

ಜನವರಿಯಿಂದ ಮಾರ್ಚ್: ಆದಾಯದ ಮೂಲಗಳು ಸೃಷ್ಟಿ ಆಗಲಿವೆ. ಫೆಬ್ರವರಿಯಲ್ಲಿ ಚಿನ್ನಾಭರಣ ಖರೀದಿ ಯೋಗವಿದೆ.

ಏಪ್ರಿಲ್ ನಿಂದ ಜೂನ್: ಶತ್ರುಗಳ ಬಾಧೆ ಹೆಚ್ಚಾಗಬಹುದು. ಅದರಲ್ಲೂ ಕಣ್ಣಿಗೆ ಕಾಣದ, ಯಾರು ಎಂದು ಗೊತ್ತಾಗದ ಗುಪ್ತ ಶತ್ರುಗಳ ಬಗ್ಗೆ ಎಚ್ಚರವಿರಲಿ.

ಜುಲೈನಿಂದ ಸೆಪ್ಟೆಂಬರ್: ಮಕ್ಕಳ ಶಿಕ್ಷಣದ ಬಗ್ಗೆ ಚಿಂತೆ ಕಾಡಬಹುದು. ಸೆಪ್ಟೆಂಬರ್‌ನಲ್ಲಿ ಹಿರಿಯರಿಂದ ಆಸ್ತಿ ಸಿಗುವ ಸಾಧ್ಯತೆ ಇದೆ.

ಅಕ್ಟೋಬರ್ ನಿಂದ ಡಿಸೆಂಬರ್: ದೂರದ ಪ್ರಯಾಣಗಳು ಲಾಭ ತರಲಿವೆ. ವಾರಾಂತ್ಯಗಳಲ್ಲಿ ಕುಟುಂಬದೊಂದಿಗೆ ಕಾಲ ಕಳೆಯುವಿರಿ.

3. ಮಿಥುನ ರಾಶಿ 

• ಆಯ: 5, ವ್ಯಯ: 5 | ರಾಜಪೂಜ್ಯ: 1, ರಾಜಭಯ: 1

ಆರ್ಥಿಕ ವಿಶ್ಲೇಷಣೆ: ನಿಮ್ಮ ಜೀವನ ಈ ವರ್ಷ ‘ಸಮತೋಲನ’ದ ಮೇಲೆ ನಿಂತಿರುತ್ತದೆ. ಎಷ್ಟು ಗಳಿಸುವಿರೋ ಅಷ್ಟೇ ವೆಚ್ಚವಾಗಲಿದೆ. ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ. 

ಆರೋಗ್ಯ: ಶೀತ ಮತ್ತು ಕಫ ಸಂಬಂಧಿ ಸಮಸ್ಯೆಗಳು ಕಾಡಬಹುದು. ನವೆಂಬರ್ ತಿಂಗಳಲ್ಲಿ ಎಚ್ಚರವಿರಲಿ.

ತಿಂಗಳ ಆಧಾರದಲ್ಲಿ ವಿವರ:

ಜನವರಿಯಿಂದ ಮಾರ್ಚ್: ಹೊಸ ಉದ್ಯಮ ಆರಂಭಿಸಲು ಪೂರಕವಾದ ಕಾಲ. ಮಾರ್ಚ್‌ನಲ್ಲಿ ಗೌರವ ಪ್ರಾಪ್ತಿ.

ಏಪ್ರಿಲ್ ನಿಂದ ಜೂನ್: ಮಾತು ಬೆಳ್ಳಿ, ಮೌನ ಬಂಗಾರ. ಅನಗತ್ಯ ಮಾತುಗಳಿಂದ ವಿವಾದಕ್ಕೆ ಸಿಲುಕುವಿರಿ.

ಜುಲೈನಿಂದ ಸೆಪ್ಟೆಂಬರ್: ಆಗಸ್ಟ್‌ನಲ್ಲಿ ವೃತ್ತಿ ಕ್ಷೇತ್ರದಲ್ಲಿ ಬಡ್ತಿ ಸಿಗಬಹುದು. ಸೆಪ್ಟೆಂಬರ್‌ನಲ್ಲಿ ಮಿತ್ರರಿಂದ ವಂಚನೆ ಆಗುವ ಸಂಭವವಿದೆ. 

ಅಕ್ಟೋಬರ್ ನಿಂದ ಡಿಸೆಂಬರ್: ವರ್ಷದ ಕೊನೆಯಲ್ಲಿ ಆಧ್ಯಾತ್ಮಿಕ ಒಲವು ಹೆಚ್ಚಾಗಲಿದೆ. ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.

4. ಕರ್ಕಾಟಕ ರಾಶಿ 

• ಆಯ: 14, ವ್ಯಯ: 2 | ರಾಜಪೂಜ್ಯ: 4, ರಾಜಭಯ: 4

ಆರ್ಥಿಕ ವಿಶ್ಲೇಷಣೆ: ಈ ವರ್ಷದಲ್ಲಿ ಆರ್ಥಿಕವಾಗಿ ಅತ್ಯುತ್ತಮ ಸಂಖ್ಯೆ ಕಾಣಿಸುತ್ತಿದೆ. ಗರಿಷ್ಠ ಆಯ ಮತ್ತು ಕನಿಷ್ಠ ವ್ಯಯವು ಇರುವುದರಿಂದ ಹಳೇ ಹೂಡಿಕೆಗಳು ಲಾಭ ತರಲಿವೆ.

ಆರೋಗ್ಯ: ಅತ್ಯುತ್ತಮ ಆರೋಗ್ಯವಿರುತ್ತದೆ. ಜುಲೈನಲ್ಲಿ ಸಣ್ಣ ಪ್ರಮಾಣದ ಕಣ್ಣಿನ ದೋಷ ಹೊರತುಪಡಿಸಿದರೆ ಉಳಿದಂತೆ ನಿಶ್ಚಿಂತೆ.

ತಿಂಗಳ ಆಧಾರದಲ್ಲಿ ವಿವರ:

  ಜನವರಿಯಿಂದ ಮಾರ್ಚ್: ವ್ಯಾಪಾರದಲ್ಲಿ ಯಶಸ್ಸು. ಕಳೆದುಹೋದ ವಸ್ತುಗಳು ಮರಳಿ ಸಿಗಲಿವೆ.

  ಏಪ್ರಿಲ್ ನಿಂದ ಜೂನ್: ಮದುವೆ ಅಥವಾ ಸಂತಾನ ಭಾಗ್ಯದಂತಹ ಮಂಗಳ ಕಾರ್ಯಗಳು ಆಗಲಿವೆ.

  ಜುಲೈನಿಂದ ಸೆಪ್ಟೆಂಬರ್: ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಲಿದೆ. ಅನಿರೀಕ್ಷಿತವಾಗಿ ಪ್ರಶಸ್ತಿಗಳು ಒಲಿದು ಬರಬಹುದು.

  ಅಕ್ಟೋಬರ್ ನಿಂದ ಡಿಸೆಂಬರ್: ಹಳೆಯ ಸಾಲಗಳಿಂದ ಮುಕ್ತಿ. ಹೊಸ ವಾಹನ ಖರೀದಿ ಯೋಗವಿದೆ.

5. ಸಿಂಹ ರಾಶಿ 

• ಆಯ: 2, ವ್ಯಯ: 11 | ರಾಜಪೂಜ್ಯ: 7, ರಾಜಭಯ: 7

ಆರ್ಥಿಕ ವಿಶ್ಲೇಷಣೆ: ಆರ್ಥಿಕ ಪರಿಸ್ಥಿತಿ ಸಂಕಷ್ಟಮಯವಾಗಿರಲಿದೆ. ಹಠಾತ್ ಖರ್ಚುಗಳು ನಿಮ್ಮ ಬಜೆಟ್ ಅನ್ನು ಏರುಪೇರು ಮಾಡುತ್ತವೆ.

ಆರೋಗ್ಯ: ಜೂನ್ ತಿಂಗಳಲ್ಲಿ ಹೃದಯ ಅಥವಾ ಬೆನ್ನು ಸಂಬಂಧಿ ಸಮಸ್ಯೆಗಳಿದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ.

ತಿಂಗಳ ಆಧಾರದಲ್ಲಿ ವಿವರ:

 ಜನವರಿಯಿಂದ ಮಾರ್ಚ್: ಸರ್ಕಾರಿ ಅಧಿಕಾರಿಗಳೊಂದಿಗೆ ವ್ಯವಹರಿಸುವಾಗ ಸಂಯಮ ಇರಲಿ. 

 ಏಪ್ರಿಲ್ ನಿಂದ ಜೂನ್: ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ವಿಳಂಬವಾಗಬಹುದು. ಧೃತಿಗೆಡಬೇಡಿ.

 ಜುಲೈನಿಂದ ಸೆಪ್ಟೆಂಬರ್: ಸೆಪ್ಟೆಂಬರ್ ನಂತರ ಪರಿಸ್ಥಿತಿ ತಿಳಿಯಾಗಲಿದೆ. ಹಿರಿಯರ ಆರೋಗ್ಯ ಸುಧಾರಿಸಲಿದೆ.

 ಅಕ್ಟೋಬರ್ ನಿಂದ ಡಿಸೆಂಬರ್: ನವೆಂಬರ್‌ನಲ್ಲಿ ಸ್ವಲ್ಪ ಮಟ್ಟಿನ ಆರ್ಥಿಕ ನೆಮ್ಮದಿ ದೊರೆಯಲಿದೆ. ದಾನ- ಧರ್ಮದತ್ತ ಮನಸ್ಸು ಹೊರಳಲಿದೆ.

6. ಕನ್ಯಾ ರಾಶಿ

• ಆಯ: 5, ವ್ಯಯ: 5 | ರಾಜಪೂಜ್ಯ: 3, ರಾಜಭಯ: 3

ಆರ್ಥಿಕ ವಿಶ್ಲೇಷಣೆ: ಹಣಕಾಸಿನ ವಿಚಾರದಲ್ಲಿ ಜಾಣತನ ಪ್ರದರ್ಶಿಸುವಿರಿ. ದೈನಂದಿನ ಖರ್ಚಿಗೆ ಕೊರತೆ ಆಗದು.

ಆರೋಗ್ಯ: ಮೇ ಮತ್ತು ಜೂನ್ ತಿಂಗಳಲ್ಲಿ ಅತಿಯಾದ ಒತ್ತಡದಿಂದಾಗಿ ಮಾನಸಿಕ ಕಿರಿಕಿರಿ ಉಂಟಾಗುತ್ತದೆ.

ತಿಂಗಳ ಆಧಾರದಲ್ಲಿ ವಿವರ:

 ಜನವರಿಯಿಂದ ಮಾರ್ಚ್: ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳುವಿರಿ. ಜನವರಿಯಲ್ಲಿ ಅದೃಷ್ಟ ಒಲಿಯಲಿದೆ.

 ಏಪ್ರಿಲ್ ನಿಂದ ಜೂನ್: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಆದರೆ ಒಪ್ಪಂದಗಳಿಗೆ ಸಹಿ ಹಾಕುವಾಗ ಜಾಗ್ರತೆ.

 ಜುಲೈನಿಂದ ಸೆಪ್ಟೆಂಬರ್: ಕೌಟುಂಬಿಕವಾಗಿ ಸುಖ ಇರಲಿದೆ. ಆಗಸ್ಟ್‌ನಲ್ಲಿ ಪ್ರವಾಸದ ಯೋಗವಿದೆ.

 ಅಕ್ಟೋಬರ್ ನಿಂದ ಡಿಸೆಂಬರ್: ಕೆಲಸದಲ್ಲಿ ಸ್ಥಿರತೆ ಇರಲಿದೆ. ಡಿಸೆಂಬರ್‌ನಲ್ಲಿ ಆಕಸ್ಮಿಕ ಹಣ ಲಾಭದ ಮುನ್ಸೂಚನೆ ಇದೆ.

Astrology birth stars: ಅಶ್ವಿನಿಯಿಂದ ರೇವತಿ ತನಕ ಇಪ್ಪತ್ತೇಳು ನಕ್ಷತ್ರಗಳ ಗುಣ- ಸ್ವಭಾವದ ವಿವರಣೆ ಇಲ್ಲಿದೆ

7. ತುಲಾ ರಾಶಿ 

• ಆಯ: 2, ವ್ಯಯ: 8 | ರಾಜಪೂಜ್ಯ: 6, ರಾಜಭಯ: 6

ಆರ್ಥಿಕ ವಿಶ್ಲೇಷಣೆ: ಆರ್ಥಿಕವಾಗಿ ಹರಿವು, ಪ್ರಗತಿಯಲ್ಲಿ ಮಂದಗತಿ ಕಾಣಿಸಲಿದೆ. ವಿವಾಹಾದಿ ಶುಭ ಕಾರ್ಯಗಳಿಗೆ ಹೆಚ್ಚಿನ ಹಣ ವ್ಯಯವಾಗಲಿದೆ.

ಆರೋಗ್ಯ: ಸೆಪ್ಟೆಂಬರ್‌ನಲ್ಲಿ ಮೂತ್ರಪಿಂಡ ಅಥವಾ ಗುಪ್ತ ಅಂಗಗಳ ಸಮಸ್ಯೆಗಳ ಬಗ್ಗೆ ಜಾಗ್ರತೆ ವಹಿಸಿ.

ತಿಂಗಳ ಆಧಾರದಲ್ಲಿ ವಿವರ:

 ಜನವರಿಯಿಂದ ಮಾರ್ಚ್: ಆಪ್ತರಿಂದ ಮೋಸವಾಗುವ ಸಂಭವವಿದೆ. ಯಾರನ್ನೂ ಅತಿಯಾಗಿ ನಂಬಬೇಡಿ.

 ಏಪ್ರಿಲ್ ನಿಂದ ಜೂನ್: ಜೂನ್ ತಿಂಗಳಲ್ಲಿ ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.

 ಜುಲೈನಿಂದ ಸೆಪ್ಟೆಂಬರ್: ಸ್ತ್ರೀಯರಿಂದ ಲಾಭ. ನಿಮ್ಮ ಕಲಾತ್ಮಕ ಕೆಲಸಗಳಿಗೆ ಮಾನ್ಯತೆ ದೊರೆಯಲಿದೆ.

 ಅಕ್ಟೋಬರ್ ನಿಂದ ಡಿಸೆಂಬರ್: ಅಕ್ಟೋಬರ್ ನಂತರ ಭಾಗ್ಯೋದಯ. ಸಮಾಜದಲ್ಲಿ ನಿಮ್ಮ ಪ್ರಭಾವ ಹೆಚ್ಚಲಿದೆ.

8. ವೃಶ್ಚಿಕ ರಾಶಿ 

• ಆಯ: 14, ವ್ಯಯ: 14 | ರಾಜಪೂಜ್ಯ: 2, ರಾಜಭಯ: 2

ಆರ್ಥಿಕ ವಿಶ್ಲೇಷಣೆ: ಅತಿ ವೇಗವಾಗಿ ಹಣ ಬರುತ್ತದೆ ಮತ್ತು ಅಷ್ಟೇ ವೇಗವಾಗಿ ಕರಗುತ್ತದೆ. ಉಳಿತಾಯದ ಕಡೆಗೆ ಗಮನ ಹರಿಸಿ.

ಆರೋಗ್ಯ: ಮಾರ್ಚ್ ಮತ್ತು ನವೆಂಬರ್‌ನಲ್ಲಿ ಅಪಘಾತದ ಸಂಭವವಿದೆ. ವಾಹನ ಚಾಲನೆ ಮಾಡುವಾಗ ಜಾಗ್ರತೆ ಬೇಕು.

ತಿಂಗಳ ಆಧಾರದಲ್ಲಿ ವಿವರ:

 ಜನವರಿಯಿಂದ ಮಾರ್ಚ್: ಉದ್ಯೋಗದಲ್ಲಿ ಕಿರಿಕಿರಿ. ಸಹೋದ್ಯೋಗಿಗಳೊಂದಿಗೆ ಸ್ಪರ್ಧೆ ಹೆಚ್ಚಾಗಲಿದೆ.

 ಏಪ್ರಿಲ್ ನಿಂದ ಜೂನ್: ಮೇ ತಿಂಗಳಲ್ಲಿ ಶತ್ರುಗಳ ಮೇಲೆ ವಿಜಯ ಸಾಧಿಸುವಿರಿ. ಹಳೆಯ ಕೋರ್ಟ್ ಕೇಸುಗಳು ಇತ್ಯರ್ಥವಾಗಲಿವೆ.

 ಜುಲೈನಿಂದ ಸೆಪ್ಟೆಂಬರ್: ಆಗಸ್ಟ್ ತಿಂಗಳು ಧನವೃಷ್ಟಿಯ ಕಾಲ. ವ್ಯಾಪಾರ ವಿಸ್ತರಣೆಗೆ ಸಕಾಲ.

 ಅಕ್ಟೋಬರ್ ನಿಂದ ಡಿಸೆಂಬರ್: ಕೌಟುಂಬಿಕ ಅಶಾಂತಿ ಸಾಧ್ಯತೆ. ತಾಳ್ಮೆ ಮತ್ತು ಸಮಾಧಾನದಿಂದ ಸಮಸ್ಯೆ ಬಗೆಹರಿಸಿಕೊಳ್ಳಿ.

9. ಧನು ರಾಶಿ 

• ಆಯ: 11, ವ್ಯಯ: 5 | ರಾಜಪೂಜ್ಯ: 5, ರಾಜಭಯ: 5

ಆರ್ಥಿಕ ವಿಶ್ಲೇಷಣೆ: ನಿಮಗೆ ಈ ವರ್ಷ ಸಮೃದ್ಧಿಯ ವರ್ಷ. ಹೂಡಿಕೆ ಮಾಡಿದ ಹಣವು ದುಪ್ಪಟ್ಟು ಲಾಭ ತರಲಿದೆ.

ಆರೋಗ್ಯ: ಪಚನ- ಜೀರ್ಣ ಶಕ್ತಿ ಕುಂಠಿತ ಆಗಬಹುದು. ಆಗಸ್ಟ್‌ನಲ್ಲಿ ಆಹಾರ ಪಥ್ಯದ ಬಗ್ಗೆ ಗಮನವಿರಲಿ.

ತಿಂಗಳ ಆಧಾರದಲ್ಲಿ ವಿವರ:

 ಜನವರಿಯಿಂದ ಮಾರ್ಚ್: ವಿದೇಶ ಯಾನದ ಕನಸು ನನಸಾಗಲಿದೆ. ಉನ್ನತ ವ್ಯಾಸಂಗ ಮಾಡುವವರಿಗೆ ಶುಭ ಕಾಲ.

 ಏಪ್ರಿಲ್ ನಿಂದ ಜೂನ್: ಸರ್ಕಾರದಿಂದ ನಿರೀಕ್ಷಿಸಿದ ಸವಲತ್ತುಗಳು ದೊರೆಯಲಿವೆ. ಅಧಿಕಾರ ಪ್ರಾಪ್ತಿ.

 ಜುಲೈನಿಂದ ಸೆಪ್ಟೆಂಬರ್: ಆಸ್ತಿ ವಿವಾದಗಳು ಸುಲಭವಾಗಿ ಬಗೆಹರಿಯಲಿವೆ. ಸೆಪ್ಟೆಂಬರ್‌ನಲ್ಲಿ ನೆಮ್ಮದಿ ಹೆಚ್ಚಲಿದೆ.

 ಅಕ್ಟೋಬರ್ ನಿಂದ ಡಿಸೆಂಬರ್: ವರ್ಷದ ಕೊನೆಯಲ್ಲಿ ಸತ್ಕಾರ್ಯಗಳಿಗಾಗಿ ಹಣ ವಿನಿಯೋಗಿಸುವಿರಿ. ಕುಟುಂಬದಲ್ಲಿ ಸುಖ.

ಅರವತ್ತನಾಲ್ಕು ಬಗೆಯ ಭಕ್ಷ್ಯ-ಭೋಜ್ಯಗಳು: ದಕ್ಷಿಣ ಭಾರತದ ಸಾಂಪ್ರದಾಯಿಕ ಅಡುಗೆ ಮತ್ತು ವೈದಿಕ ಹಿನ್ನೆಲೆಯ ಸಂಪೂರ್ಣ ಮಾಹಿತಿ

10. ಮಕರ ರಾಶಿ 

• ಆಯ: 14, ವ್ಯಯ: 14 | ರಾಜಪೂಜ್ಯ: 1, ರಾಜಭಯ: 1

ಆರ್ಥಿಕ ವಿಶ್ಲೇಷಣೆ: ಸ್ಥಿರವಾದ ಆರ್ಥಿಕತೆ ಇರಲಿದೆ. ಉದ್ಯೋಗದಲ್ಲಿನ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.

ಆರೋಗ್ಯ: ಜನವರಿ ಮತ್ತು ಫೆಬ್ರವರಿಯಲ್ಲಿ ಶೀತ ಸಂಬಂಧಿ ಕಾಯಿಲೆಗಳಿಂದ ಬಳಲುವ ಸಾಧ್ಯತೆ ಇದೆ.

ತಿಂಗಳ ಆಧಾರದಲ್ಲಿ ವಿವರ:

ಜನವರಿಯಿಂದ ಮಾರ್ಚ್: ಕೆಲಸದಲ್ಲಿ ಅತಿಯಾದ ಜವಾಬ್ದಾರಿಗಳು ಹೆಗಲೇರಲಿವೆ. ದಣಿವು ಅಧಿಕವಾಗುವುದು.

ಏಪ್ರಿಲ್ ನಿಂದ ಜೂನ್: ಏಪ್ರಿಲ್‌ನಲ್ಲಿ ದೊಡ್ಡ ಯೋಜನೆಯೊಂದು ಕೈಗೂಡಲಿದೆ. ವ್ಯಾಪಾರಿಗಳಿಗೆ ಉತ್ತಮ ಕಾಲ.

ಜುಲೈನಿಂದ ಸೆಪ್ಟೆಂಬರ್: ಮಗ ಅಥವಾ ಮಗಳ ವಿವಾಹ ನಿಶ್ಚಯವಾಗಬಹುದು. ಮನೆಯಲ್ಲಿ ಸಂಭ್ರಮದ ವಾತಾವರಣ.

ಅಕ್ಟೋಬರ್ ನಿಂದ ಡಿಸೆಂಬರ್: ನವೆಂಬರ್‌ನಲ್ಲಿ ಮಾನಸಿಕವಾಗಿ ಸ್ವಲ್ಪ ಜಡತ್ವ ಉಂಟಾಗಬಹುದು. ಕೇತು- ಗುರು ಗ್ರಹದ ಆರಾಧನೆ ಅಗತ್ಯ.

11. ಕುಂಭ ರಾಶಿ 

• ಆಯ: 14, ವ್ಯಯ: 14 | ರಾಜಪೂಜ್ಯ: 4, ರಾಜಭಯ: 4

• ಆರ್ಥಿಕ ವಿಶ್ಲೇಷಣೆ: ಆರ್ಥಿಕ ಏರಿಳಿತಗಳು ಕಾಣಿಸಲಿವೆ. ಶನಿ ಪ್ರಭಾವದಿಂದ ಹಠಾತ್ ಧನ ಹಾನಿ ಆಗಬಹುದು, ಜಾಗ್ರತೆ ವಹಿಸಿ.

• ಆರೋಗ್ಯ: ಜೂನ್ ತಿಂಗಳಲ್ಲಿ ಮೂಳೆ ಅಥವಾ ಕೀಲು ನೋವಿನ ಸಮಸ್ಯೆ ಕಾಡಬಹುದು.

ತಿಂಗಳ ಆಧಾರದಲ್ಲಿ ವಿವರ:

ಜನವರಿಯಿಂದ ಮಾರ್ಚ್: ಮೊದಲ ಮೂರು ತಿಂಗಳು ಸಂಯಮದಿಂದ ಇರಬೇಕು. ಆರ್ಥಿಕವಾಗಿ ವಿಪರೀತ ಪ್ರಯೋಗಕ್ಕೆ ಇಳಿದಲ್ಲಿ ಸೋಲಾಗುವ ಸಂಭವವಿದೆ.

ಏಪ್ರಿಲ್ ನಿಂದ ಜೂನ್: ಜೂನ್ ನಂತರ ಪರಿಸ್ಥಿತಿ ನಿಮ್ಮ ಪರವಾಗಿ ತಿರುಗಲಿದೆ. ಬಂಧುಗಳ ನೆರವು ಸಿಗಲಿದೆ.

ಜುಲೈನಿಂದ ಸೆಪ್ಟೆಂಬರ್: ಆಗಸ್ಟ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಹೋಗಬೇಡಿ. ಶ್ರಮವನ್ನೇ ನೆಚ್ಚಿಕೊಳ್ಳಿ.

ಅಕ್ಟೋಬರ್ ನಿಂದ ಡಿಸೆಂಬರ್: ತೀರ್ಥಯಾತ್ರೆ ಮಾಡುವ ಯೋಗವಿದೆ. ಪುಣ್ಯಕ್ಷೇತ್ರಗಳ ದರ್ಶನದಿಂದ ಮನಸ್ಸಿಗೆ ಶಾಂತಿ.

12. ಮೀನ ರಾಶಿ 

• ಆಯ: 5, ವ್ಯಯ: 2 | ರಾಜಪೂಜ್ಯ: 7, ರಾಜಭಯ: 7

ಆರ್ಥಿಕ ವಿಶ್ಲೇಷಣೆ: ಆರ್ಥಿಕವಾಗಿ ಸದೃಢರಾಗುವಿರಿ. ಉಳಿತಾಯದ ಪ್ರಮಾಣ ಹೆಚ್ಚಾಗಲಿದೆ.

ಆರೋಗ್ಯ: ಸಾಡೇಸಾತಿಯ ಪ್ರಭಾವದಿಂದಾಗಿ ಪದೇ ಪದೇ ಸಣ್ಣಪುಟ್ಟ ಕಾಯಿಲೆಗಳು ಕಾಡಬಹುದು. ಮಾರ್ಚ್ ಮತ್ತು ಸೆಪ್ಟೆಂಬರ್‌ನಲ್ಲಿ ಜಾಗ್ರತೆ.

ತಿಂಗಳ ಆಧಾರದಲ್ಲಿ ವಿವರ:

ಜನವರಿಯಿಂದ ಮಾರ್ಚ್: ಅತಿ ಹೆಚ್ಚಿನ ಗೌರವ ಪ್ರಾಪ್ತಿಯಾಗಲಿದೆ. ಆದರೆ ವಿರೋಧಿಗಳು ಹುಟ್ಟಿಕೊಳ್ಳಬಹುದು.

ಏಪ್ರಿಲ್ ನಿಂದ ಜೂನ್: ಮೇ ತಿಂಗಳಲ್ಲಿ ದೊಡ್ಡ ಹೂಡಿಕೆ ಮಾಡುವಿರಿ. ಜೂನ್‌ನಲ್ಲಿ ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಲಾಭ ಸಿಗಬಹುದು.

ಜುಲೈನಿಂದ ಸೆಪ್ಟೆಂಬರ್: ಆಡಳಿತ ವರ್ಗದೊಂದಿಗೆ ಕಲಹ ಬೇಡ. ಸೆಪ್ಟೆಂಬರ್‌ನಲ್ಲಿ ಮಾನಸಿಕ ಶಾಂತಿಗಾಗಿ ಯೋಗಾಭ್ಯಾಸ ಮಾಡಿ.

ಅಕ್ಟೋಬರ್ ನಿಂದ ಡಿಸೆಂಬರ್: ವರ್ಷದ ಕೊನೆಯಲ್ಲಿ ಕಳೆದುಹೋದ ಸಂಪತ್ತು ಮರಳಿ ಬರುವ ಯೋಗವಿದೆ. ಕುಟುಂಬದಲ್ಲಿ ಪರಸ್ಪರ ಪ್ರೀತಿ ಹೆಚ್ಚಲಿದೆ.

2026ರ ವರ್ಷ ಫಲ:

2026ನೇ ಇಸವಿಯು ‘ಪರಿವರ್ತನೆ’ಯ ವರ್ಷವಾಗಿದೆ. ಕರ್ಕಾಟಕ, ಧನು ಮತ್ತು ಮೀನ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಸಿಂಹ ಮತ್ತು ಮೇಷ ರಾಶಿಯವರು ಆರ್ಥಿಕವಾಗಿ ಹೆಚ್ಚಿನ ಜಾಗ್ರತೆ ವಹಿಸಬೇಕು. ಯಾವುದೇ ರಾಶಿಯವರಾದರೂ ಕಠಿಣ ಪರಿಶ್ರಮ ಮತ್ತು ದೈವಭಕ್ತಿ ಇರಲಿ, ಈ ವರ್ಷದ ಸವಾಲುಗಳನ್ನು ಎದುರಿಸಿ ಸುಖವಾಗಿ ಜೀವನ ನಡೆಸಬಹುದು.

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts