2026ನೇ ಇಸವಿಯ ವರ್ಷಭವಿಷ್ಯದಲ್ಲಿ ಕುಂಭ ರಾಶಿಯ ಫಲಾಫಲಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. 2026ರ ಜನವರಿ 1ನೇ ತಾರೀಕಿನಿಂದ ಡಿಸೆಂಬರ್ 31ರ ತನಕ ಗ್ರಹಗಳ ಗೋಚಾರ ಸ್ಥಿತಿಯನ್ನು ಆಧರಿಸಿ ಈ ಭವಿಷ್ಯವನ್ನು ಸಿದ್ಧಪಡಿಸಲಾಗಿದೆ.
2026ರ ಗ್ರಹ ಸಂಚಾರದ ವಿವರ:
ಶನಿ: ಇಡೀ ವರ್ಷ ಮೀನ ರಾಶಿಯಲ್ಲಿ (ಕುಂಭಕ್ಕೆ 2ನೇ ಮನೆಯಲ್ಲಿ) ಸಂಚರಿಸುತ್ತಾನೆ.
ರಾಹು-ಕೇತು: ಜನವರಿ ಒಂದರಿಂದ ಡಿಸೆಂಬರ್ 5ರ ವರೆಗೆ ರಾಹು ನಿಮ್ಮದೇ ರಾಶಿಯಲ್ಲಿ (ಜನ್ಮ ರಾಶಿ- 1ನೇ ಮನೆ) ಮತ್ತು ಕೇತು ಸಿಂಹ ರಾಶಿಯಲ್ಲಿ (7ನೇ ಮನೆ) ಇರುತ್ತಾರೆ.
ಆ ನಂತರ ರಾಹು ಹನ್ನೆರಡನೇ ಮನೆಗೆ (ಮಕರ) ಹಾಗೂ ಕೇತು ಆರನೇ ಮನೆಗೆ (ಧನುಸ್ಸು) ಪ್ರವೇಶಿಸುತ್ತದೆ.
ಗುರು: ಜೂನ್ 1ರವರೆಗೆ ಮಿಥುನದಲ್ಲಿ (5ನೇ ಮನೆ), ಅಕ್ಟೋಬರ್ 31ರವರೆಗೆ ಕರ್ಕಾಟಕದಲ್ಲಿ (6ನೇ ಮನೆ), ಆ ನಂತರ ವರ್ಷಾಂತ್ಯದವರೆಗೆ ಸಿಂಹ ರಾಶಿಯಲ್ಲಿ (7ನೇ ಮನೆ) ಸಂಚರಿಸುತ್ತಾನೆ.
ಕುಂಭ ರಾಶಿಯು ಧನಿಷ್ಠಾ ನಕ್ಷತ್ರದ 3 ಮತ್ತು 4ನೇ ಪಾದ, ಶತಭಿಷಾ ನಕ್ಷತ್ರದ ನಾಲ್ಕೂ ಪಾದಗಳು ಹಾಗೂ ಪೂರ್ವಾಭಾದ್ರ ನಕ್ಷತ್ರದ 1, 2 ಮತ್ತು 3ನೇ ಪಾದಗಳನ್ನು ಒಳಗೊಂಡಿದೆ. ಧನಿಷ್ಠಾ ನಕ್ಷತ್ರಕ್ಕೆ ಕುಜ, ಶತಭಿಷ ನಕ್ಷತ್ರಕ್ಕೆ ರಾಹು ಹಾಗೂ ಪೂರ್ವಾಭಾದ್ರ ನಕ್ಷತ್ರಕ್ಕೆ ಗುರು ಅಧಿಪತಿ. ಕುಂಭ ರಾಶಿಯ ಅಧಿಪತಿ ಶನಿ ಗ್ರಹ. ಇದು ವಾಯು ತತ್ವದ, ಸ್ಥಿರ ರಾಶಿಯಾಗಿದ್ದು, ಕಾಲಪುರುಷನ ಚಕ್ರದ ಹನ್ನೊಂದನೇ ರಾಶಿಯಾಗಿದೆ.
Sade Sati Shani: ಸಾಡೇಸಾತ್ ಶನಿ ಎಂದರೇನು, ಈ ಅವಧಿಯಲ್ಲಿ ತೆಗೆದುಕೊಳ್ಳಬೇಕಾದ 7 ಮುಂಜಾಗ್ರತೆಗಳೇನು?
ಕುಂಭ ರಾಶಿ ವರ್ಷ ಭವಿಷ್ಯ 2026:
ಶನಿ ಗೋಚಾರ ಫಲ: ನಿಮ್ಮ ರಾಶ್ಯಾಧಿಪತಿಯಾದ ಶನಿಯು ಈ ವರ್ಷ ಪೂರ್ತಿ ಎರಡನೇ ಮನೆಯಲ್ಲಿ (ಧನ ಸ್ಥಾನ) ಸಂಚರಿಸುತ್ತಾನೆ. ಕುಂಭ ರಾಶಿಯವರಿಗೆ ಸಾಡೇಸಾತಿಯ ಎರಡನೇ ಘಟ್ಟ (ಜನ್ಮ ಶನಿ) ಮುಗಿದು ಈಗ ಅಂತ್ಯ ಪಾದದ ಸಾಡೇಸಾತಿ ನಡೆಯುತ್ತಿದೆ. ಇದು ಆರ್ಥಿಕ ವಿಚಾರದಲ್ಲಿ ಮಿಶ್ರಫಲ ನೀಡಲಿದೆ. ಹಣದ ಒಳಹರಿವು ಇದ್ದರೂ ಅಷ್ಟೇ ವೇಗವಾಗಿ ಖರ್ಚುಗಳು ಎದುರಾಗಬಹುದು. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಲಿವೆ. ಮಾತಿನ ಮೇಲೆ ಸಂಯಮವಿರಲಿ, ಇಲ್ಲದಿದ್ದರೆ ಆಪ್ತರೊಂದಿಗೆ ಮನಸ್ತಾಪ ಉಂಟಾಗಬಹುದು. ದಂಪತಿ ಮಧ್ಯೆ ಅಭಿಪ್ರಾಯ ಭೇದ- ಮನಸ್ತಾಪ ಆಗುತ್ತದೆ. ನಿಮಗೆ ಬರಬೇಕಾದ ಹಣವು ಸಮಯಕ್ಕೆ ಸರಿಯಾಗಿ ನಿಮ್ಮ ಕೈ ಸೇರುವುದಿಲ್ಲ. ಒಂದಲ್ಲಾ ಒಂದು ಚಿಂತೆ ಕಾಡುತ್ತದೆ. ಹೊಸ ಹೂಡಿಕೆ ಮಾಡುವ ಮುನ್ನ ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ, ಮುಂದಕ್ಕೆ ಹೆಜ್ಜೆ ಇಡಿ.
ರಾಹು-ಕೇತು ಗೋಚಾರ ಫಲ: ಜನ್ಮ ರಾಶಿಯಲ್ಲಿ ರಾಹುವಿನ ಸಂಚಾರ ಇರುವುದರಿಂದ ಮಾನಸಿಕವಾಗಿ ಸ್ವಲ್ಪ ಗೊಂದಲ ಅಥವಾ ಅನಿಶ್ಚಿತತೆ ಕಾಡಬಹುದು. ಹೊಸ ಯೋಜನೆಗಳನ್ನು ಆರಂಭಿಸುವಾಗ ಆತುರ ಬೇಡ. ಅತ್ಯುತ್ಸಾಹದಿಂದಾಗಿ ಕೆಲವು ತೊಂದರೆಗಳನ್ನು ನೀವಾಗಿಯೇ ಸಮಸ್ಯೆಗಳನ್ನು ಮಾಡಿಕೊಳ್ಳುತ್ತೀರಿ. ಆಪ್ತರಿಂದ ದೂರ ಆಗುತ್ತೀರಿ. ಏಳನೇ ಮನೆಯಲ್ಲಿ ಕೇತು ಸಂಚರಿಸುವುದರಿಂದ ದಾಂಪತ್ಯ ಜೀವನದಲ್ಲಿ ಅಥವಾ ಪಾಲುದಾರಿಕೆ ವ್ಯವಹಾರದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ, ವಿಶೇಷವಾಗಿ ತಲೆನೋವು ಅಥವಾ ನಿದ್ರಾಹೀನತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಗುರು ಗೋಚಾರ ಫಲ: ನಿಮ್ಮ ರಾಶಿಗೆ ಲಾಭ ಸ್ಥಾನ ಮತ್ತು ಧನ ಸ್ಥಾನದ ಅಧಿಪತಿಯಾದ ಗುರುವು ಜೂನ್ 1ನೇ ತಾರೀಕಿನವರೆಗೆ ಐದನೇ ಮನೆಯಲ್ಲಿ (ಪಂಚಮ ಸ್ಥಾನ) ಇರುವುದು ಅತ್ಯಂತ ಶುಭದಾಯಕ. ಈ ಅವಧಿಯಲ್ಲಿ ಸಂತಾನ ಭಾಗ್ಯ, ಉನ್ನತ ವ್ಯಾಸಂಗದಲ್ಲಿ ಯಶಸ್ಸು ಮತ್ತು ಆದಾಯದಲ್ಲಿ ವೃದ್ಧಿಯಾಗಲಿದೆ. ಜೂನ್ 2ರಿಂದ ಅಕ್ಟೋಬರ್ 31ರವರೆಗೆ ಆರನೇ ಮನೆಯಲ್ಲಿ ಗುರು ಸಂಚರಿಸುವುದರಿಂದ ಗುಪ್ತ ಶತ್ರುಗಳ ಬಗ್ಗೆ ಎಚ್ಚರವಿರಲಿ ಮತ್ತು ಸಾಲ ಮಾಡುವಾಗ ಯೋಚಿಸಿ ನಿರ್ಧಾರ ಮಾಡಿ. ಆದರೆ, ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಏಳನೇ ಮನೆಗೆ ಗುರುವಿನ ಪ್ರವೇಶವಾಗುವುದರಿಂದ ಸಕಲ ಅಡೆತಡೆಗಳು ನಿವಾರಣೆಯಾಗಿ ವಿವಾಹಾದಿ ಮಂಗಳ ಕಾರ್ಯಗಳು ನಡೆಯಲಿವೆ.
ಪರಿಹಾರ: ಪ್ರತಿ ಶನಿವಾರ ಶನಿ ದೇವಸ್ಥಾನಕ್ಕೆ ಭೇಟಿ ನೀಡಿ ಎಳ್ಳೆಣ್ಣೆ ದೀಪ ಹಚ್ಚಿ. ದುರ್ಗಾ ಸಪ್ತಶತಿ ಪಠಣ ಅಥವಾ ದುರ್ಗಾ ದೇವಿಯ ಆರಾಧನೆ ಮಾಡಿಕೊಳ್ಳಿ. ಗುರುವಾರಗಳಂದು ದಕ್ಷಿಣಾಮೂರ್ತಿ ಅಥವಾ ರಾಘವೇಂದ್ರ ಸ್ವಾಮಿಗಳ ಪ್ರಾರ್ಥನೆ ಮಾಡುವುದು ಉತ್ತಮ.
ಲೇಖನ: ಶ್ರೀನಿವಾಸ ಮಠ




