Sri Gurubhyo Logo

2026ರಲ್ಲಿ ಧನುಸ್ಸು ರಾಶಿಗೆ ಅದೃಷ್ಟವೇ? ಗುರು–ಶನಿ–ರಾಹು ಗೋಚಾರ ಆಧಾರಿತ ಸಂಪೂರ್ಣ ವರ್ಷಭವಿಷ್ಯ

ಧನುಸ್ಸು ರಾಶಿ ವರ್ಷಭವಿಷ್ಯ 2026
ಧನುಸ್ಸು ರಾಶಿ ಚಿಹ್ನೆ

2026ನೇ ಇಸವಿಯ ವರ್ಷಭವಿಷ್ಯದಲ್ಲಿ ಧನುಸ್ಸು ರಾಶಿಯ ಫಲಾಫಲಗಳನ್ನು ಇಲ್ಲಿ ನೀಡಲಾಗಿದೆ. ಗ್ರಹಗತಿಗಳ ಬದಲಾವಣೆ ಮತ್ತು ಅವುಗಳ ಗೋಚಾರ ಸ್ಥಿತಿಯನ್ನು ಆಧರಿಸಿ ಈ ಭವಿಷ್ಯವನ್ನು ಸಿದ್ಧಪಡಿಸಲಾಗಿದೆ. ಈ ಫಲವು ಜನವರಿ 1, 2026ರಿಂದ ಡಿಸೆಂಬರ್ 31, 2026ರ ವರೆಗೆ ಅನ್ವಯಿಸುತ್ತದೆ.

2026ರ ಗ್ರಹ ಸಂಚಾರದ ವಿವರ:

ಶನಿ: ಇಡೀ ವರ್ಷ ಮೀನ ರಾಶಿಯಲ್ಲಿ (ಧನುಸ್ಸು ರಾಶಿಗೆ 4ನೇ ಮನೆಯಲ್ಲಿ) ಸಂಚರಿಸುತ್ತಾನೆ. ಇದು ಅರ್ಧಾಷ್ಟಮ ಶನಿ

ರಾಹು-ಕೇತು: ಡಿಸೆಂಬರ್ 5ರವರೆಗೆ ರಾಹು ಕುಂಭದಲ್ಲಿ (3ನೇ ಮನೆ) ಮತ್ತು ಕೇತು ಸಿಂಹದಲ್ಲಿ (9ನೇ ಮನೆ) ಇರುತ್ತಾರೆ. 

   ನಂತರ ರಾಹು ಮಕರಕ್ಕೂ (2ನೇ ಮನೆ), ಕೇತು (8ನೇ ಮನೆ) ಕರ್ಕಾಟಕಕ್ಕೂ ಪ್ರವೇಶಿಸುತ್ತಾರೆ.

ಗುರು: ಜೂನ್ 1ರವರೆಗೆ ಮಿಥುನದಲ್ಲಿ (7ನೇ ಮನೆ), ಅಕ್ಟೋಬರ್ 31ರ ವರೆಗೆ ಕರ್ಕಾಟಕದಲ್ಲಿ (8ನೇ ಮನೆ), ಆ ನಂತರ ವರ್ಷಾಂತ್ಯದವರೆಗೆ ಸಿಂಹ ರಾಶಿಯಲ್ಲಿ (9ನೇ ಮನೆ) ಸಂಚರಿಸುತ್ತಾನೆ.

ಧನುಸ್ಸು ರಾಶಿಯು ಮೂಲಾ ನಕ್ಷತ್ರದ ನಾಲ್ಕೂ ಪಾದಗಳು, ಪೂರ್ವಾಷಾಢ ನಕ್ಷತ್ರದ ನಾಲ್ಕೂ ಪಾದಗಳು ಮತ್ತು ಉತ್ತರಾಷಾಢ ನಕ್ಷತ್ರದ 1ನೇ ಪಾದವನ್ನು ಒಳಗೊಂಡಿದೆ. ಮೂಲಾ ನಕ್ಷತ್ರಕ್ಕೆ ಕೇತು ಗ್ರಹ ಅಧಿಪತಿ, ಪೂರ್ವಾಷಾಢಕ್ಕೆ ಶುಕ್ರ ಅಧಿಪತಿ ಹಾಗೂ ಉತ್ತರಾಷಾಢಕ್ಕೆ ರವಿ ಅಧಿಪತಿ. ಇನ್ನು ಧನುಸ್ಸು ರಾಶಿಯ ಅಧಿಪತಿ ಗುರು ಗ್ರಹ. ಇದು ಅಗ್ನಿ ತತ್ವದ ರಾಶಿಯಾಗಿದ್ದು, ಕಾಲಪುರುಷನ ಚಕ್ರದ ಒಂಬತ್ತನೇ ರಾಶಿಯಾಗಿದೆ.

ವೈಕುಂಠ ಏಕಾದಶಿ ಮಹತ್ವ: ಉಪವಾಸ, ವೈಕುಂಠ ದ್ವಾರ ಮತ್ತು ಆತ್ಮೋದ್ಧಾರದ ರಹಸ್ಯ

ಧನುಸ್ಸು ರಾಶಿ ವರ್ಷ ಭವಿಷ್ಯ 2026:

ಶನಿ ಗೋಚಾರ ಫಲ: ನಾಲ್ಕನೇ ಮನೆಯಲ್ಲಿ ಶನಿಯ ಸಂಚಾರ ಇರುವುದರಿಂದ ಇದನ್ನು ಅರ್ಧಾಷ್ಟಮ ಶನಿ ಎನ್ನಲಾಗುತ್ತದೆ. ಈ ಅವಧಿಯಲ್ಲಿ ಮನೆ ಅಥವಾ ಆಸ್ತಿ ವಿಚಾರದಲ್ಲಿ ಸಣ್ಣಪುಟ್ಟ ಅಡೆತಡೆಗಳು ಎದುರಾಗಬಹುದು. ತಾಯಿಯ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಉತ್ತಮ. ನಿಮ್ಮ ನೆಮ್ಮದಿಗೆ ಭಂಗ ತರುವಂತಹ ಸನ್ನಿವೇಶಗಳು ಎದುರಾದಾಗ ತಾಳ್ಮೆ ವಹಿಸಿ. ವಾಹನ ಚಾಲನೆಯಲ್ಲಿ ಜಾಗ್ರತೆ ಇರಲಿ. ವೃತ್ತಿಜೀವನದಲ್ಲಿ ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ, ಶ್ರಮಕ್ಕೆ ತಕ್ಕ ಫಲ ಸ್ವಲ್ಪ ವಿಳಂಬವಾಗಿ ದೊರೆಯಬಹುದು.

ರಾಹು-ಕೇತು ಗೋಚಾರ ಫಲ: ಮೂರನೇ ಮನೆಯಲ್ಲಿ ರಾಹುವಿನ ಸಂಚಾರ ಇರುವುದು ನಿಮಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ಕಿರಿಯ ಸಹೋದರ-ಸಹೋದರಿಯರೊಂದಿಗೆ ಸೌಹಾರ್ದತೆ ಇರಲಿ. ಧೈರ್ಯದಿಂದ ಹೊಸ ಕೆಲಸಗಳನ್ನು ಆರಂಭಿಸುವಿರಿ. ಒಂಬತ್ತನೇ ಮನೆಯಲ್ಲಿ ಕೇತು ಸಂಚರಿಸುವುದರಿಂದ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ದೂರದ ಪ್ರಯಾಣ ಅಥವಾ ತೀರ್ಥಯಾತ್ರೆ ಮಾಡುವ ಯೋಗವಿದೆ. ಆದರೆ ತಂದೆಯವರ ಆರೋಗ್ಯ ಅಥವಾ ಅವರೊಂದಿಗಿನ ವೈಚಾರಿಕ ಭಿನ್ನಾಭಿಪ್ರಾಯಗಳ ಬಗ್ಗೆ ಎಚ್ಚರಿಕೆ ಇರಲಿ.

ಗುರು ಗೋಚಾರ ಫಲ: ಜನವರಿ 1ರಿಂದ ಜೂನ್ 1ರವರೆಗೆ ಗುರು ಏಳನೇ ಮನೆಯಲ್ಲಿ ಇರುವುದರಿಂದ ವಿವಾಹ ವಯಸ್ಕ ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಿರುತ್ತದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಪ್ರವಾಸ ಅಥವಾ ವಿಶ್ರಾಂತಿಯ ಕ್ಷಣಗಳನ್ನು ಆನಂದಿಸುವಿರಿ. ಜೂನ್ 2ರಿಂದ ಅಕ್ಟೋಬರ್ 31ರ ತನಕ ಗುರು ಎಂಟನೇ ಮನೆಗೆ ಪ್ರವೇಶ ಮಾಡುವುದರಿಂದ ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ. ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಈ ಸಮಯದಲ್ಲಿ ಯಾವುದೇ ದೊಡ್ಡ ಹೂಡಿಕೆ ಮಾಡುವ ಮುನ್ನ ಅನುಭವಿಗಳು, ಪರಿಣತರ ಸಲಹೆ ಪಡೆಯಿರಿ. ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಒಂಬತ್ತನೇ ಮನೆಯಲ್ಲಿ ಗುರುವಿನ ಸಂಚಾರ ಶುಭ ಫಲಗಳನ್ನು ನೀಡಲಿದೆ. ಸ್ಥಗಿತಗೊಂಡಿದ್ದ ಕೆಲಸಗಳು ಪುನರಾರಂಭಗೊಳ್ಳಲಿವೆ. ಅದೃಷ್ಟದ ಬೆಂಬಲ ನಿಮಗೆ ಸಿಗಲಿದೆ. ಮನಸ್ಸಿಗೆ ನೆಮ್ಮದಿ ತರುವಂತಹ ಶುಭ ಸುದ್ದಿ ಕೇಳಿಬರಲಿವೆ.

ಪರಿಹಾರ: ಪ್ರತಿ ಶನಿವಾರ ಶನಿ ದೇವಸ್ಥಾನಕ್ಕೆ ಭೇಟಿ ನೀಡಿ ಅಥವಾ ಶನಿ ಸ್ತೋತ್ರ ಪಠಿಸಿ.ಗುರುವಾರ ದಕ್ಷಿಣಾಮೂರ್ತಿ ಅಥವಾ ರಾಘವೇಂದ್ರ ಸ್ವಾಮಿಗಳ ಆರಾಧನೆ ಮಾಡಿ.

ಲೇಖನ – ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts