ಮದುವೆ, ಭೂಮಿ ಖರೀದಿ, ದೇಹದಲ್ಲಿ ರಕ್ತದ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳು ಹೀಗೆ ಹಲವು ಸಂಗತಿಗಳನ್ನು ಜನ್ಮ ಜಾತಕದಲ್ಲಿನ ಕುಜ ಗ್ರಹದ ಸ್ಥಿತಿ ಆಧಾರದಲ್ಲಿ ಪರಾಮರ್ಶೆ ಮಾಡಲಾಗುತ್ತದೆ. ಬಿಪಿ (ರಕ್ತದೊತ್ತಡ) ಏರುಪೇರು, ಚರ್ಮ ವ್ಯಾಧಿಗಳ ಹಿಂದಿನ ಜ್ಯೋತಿಷ್ಯದ ಕಾರಣವನ್ನು ಕುಜ ಗ್ರಹದ ಸ್ಥಿತಿ ಜನ್ಮ ಸಮಯದಲ್ಲಿ ಹೇಗಿತ್ತು ಎಂಬುದರ ಮೂಲಕವೇ ವಿಶ್ಲೇಷಣೆ ಮಾಡಲಾಗುತ್ತದೆ. ಇಂಥ ಪ್ರಬಲವಾದ ಕುಜನಿಗಾಗಿಯೇ ದೇವಸ್ಥಾನವೊಂದು ಇದೆ. ಬೆಂಗಳೂರಿನಿಂದ ಕೇವಲ ಎಪ್ಪತ್ತು ಕಿಲೋಮೀಟರ್ ದೂರದ ಶ್ರೀಕೃಷ್ಣ ನಗರದಲ್ಲಿ ಇದೆ. ಈ ರೀತಿ ಒಂದು ಗ್ರಹಕ್ಕೆ ಅಂತಲೇ ಪ್ರತ್ಯೇಕವಾಗಿ ಇರುವಂಥ ದೇವಸ್ಥಾನವನ್ನು ನೋಡುವುದು ಅಪರೂಪ. ತಮಿಳುನಾಡಿನಲ್ಲಿ ಇರುವಂಥ ವೈತೀಶ್ವರ ಕೋವಿಲ್ ಆ ಪೈಕಿ ಬಹಳ ಜನಪ್ರಿಯತೆ ಪಡೆದುಕೊಂಡ ಕ್ಷೇತ್ರ. ಅಲ್ಲಿ ಕುಜನ ಪಂಚಲೋಹ ವಿಗ್ರಹವನ್ನು ಇರಿಸಲಾಗಿದ್ದು, ಅದಕ್ಕೆ ಪೂಜೆ ಮಾಡಲಾಗುತ್ತದೆ.
ಅಂಗಾರಕನ ಮೂಲ ಸ್ಥಾನ ಉಜ್ಜಯಿನಿ:
ಭಾರತದಲ್ಲಿ ಅಂಗಾರಕನ ಮೂಲ ಸ್ಥಾನ ಅವಂತಿ ದೇಶ, ಅಂದರೆ ಈಗಿನ ಉಜ್ಜಯಿನಿ. ಅಲ್ಲಿ ಅಂಗಾರಕನನ್ನು ಈಶ್ವರ ರೂಪದಲ್ಲಿ ಪೂಜಿಸಲಾಗುತ್ತದೆ. ಮಂಗಳನಾಥ ಎಂದು ಆರಾಧಿಸಲಾಗುತ್ತದೆ. ಇನ್ನು ತುಮಕೂರಿನ ದೇವಾಲಯದ ವಿಚಾರಕ್ಕೆ ಬಂದರೆ ಕೆಂಪು ಶಿಲೆಯಲ್ಲಿ ಮೇಷಾರೂಢನಾದ (ಮೇಷ ಅಂದರೆ ಟಗರು) ಅಂಗಾರಕನ ವಿಗ್ರಹದ ಪ್ರತಿಷ್ಠಾಪನೆ ಮಾಡಲಾಗಿದೆ. ಈ ದೇವಾಲಯದಲ್ಲಿ ಶ್ರೀಕೃಷ್ಣನೇ ಪ್ರಧಾನ ದೇವರು. ಜೊತೆಗೆ ಗಣಪತಿ, ಮಹಾಲಕ್ಷ್ಮಿ, ಓಂಕಾರೇಶ್ವರ, ಪಾರ್ವತಾಂಬ ಹಾಗೂ ನವಗ್ರಹ ಸಹ ಪ್ರತಿಷ್ಠಾಪನೆ ಮಾಡಲಾಗಿದೆ. ಈ ದೇವಾಲಯದ ನಿರ್ಮಾಣ ಆಗಿದ್ದು 1965ನೇ ಇಸವಿಯಲ್ಲಿ, ಕೆನರಾ ಬ್ಯಾಂಕಿನ ಉದ್ಯೋಗಿ ಆಗಿದ್ದಂಥ ರಂಗಣ್ಣ ಅವರು ನಿರ್ಮಾಣ ಮಾಡಿದಂಥ ದೇವಾಲಯ ಇದು. ಪ್ರತಿಷ್ಠಾಪನೆಗೂ ಮುನ್ನ ಲಕ್ಷಾಂತರ ಸಂಖ್ಯೆಯಲ್ಲಿ ಅಂಗಾರಕನ ಜಪ ಮಾಡಿ, ವೈದಿಕವಾಗಿ ಶಾಸ್ತ್ರೋಕ್ತ ರೀತಿಯಲ್ಲಿ ಕ್ರಮಗಳನ್ನು ಅನುಸರಿಸಿ, ಶಕ್ತಿ ತುಂಬಿದಂಥ ಸ್ಥಳ ಇದಾಗಿದೆ.
ತೊಗರಿಕಾಳು, ಕೆಂಪು ವಸ್ತ್ರ ಸಮರ್ಪಣೆ:
ಈ ದೇವಾಲಯದಲ್ಲಿ ಮಂಗಳವಾರದ ದಿನ ಭಕ್ತರ ಸಂಖ್ಯೆ ಬಹಳ ಹೆಚ್ಚಾಗಿರುತ್ತದೆ. ಆ ದಿನ ಕುಜನಿಗೆ ವಿಶೇಷ ಪೂಜೆ ನಡೆಯುತ್ತದೆ. ತೊಗರಿ ಬೇಳೆ ಅಥವಾ ತೊಗರಿ ಕಾಳು, ಕೆಂಪು ವಸ್ತ್ರ, ಕೆಂಪು ಹೂವಿನ ಸಮರ್ಪಣೆ ಮಾಡಲಾಗುತ್ತದೆ. ಜನ್ಮ ಜಾತಕದಲ್ಲಿ ಕುಜ ದೋಷ ಇರುವವರು ಈ ಕ್ಷೇತ್ರಕ್ಕೆ ಬಂದು, ಶಾಂತಿ ಪೂಜೆ, ಹೋಮ- ಹವನ ಮಾಡಿಸಿಕೊಳ್ಳುತ್ತಾರೆ. ಈ ದೇವಾಲಯದ ನಿವರ್ಹಣೆಗಾಗಿಯೇ ಸಮಿತಿಯೂ ಸಹ ಇದೆ. ವಿವಾಹ ಅಂತಷ್ಟೇ ಅಲ್ಲದೆ, ಭೂಮಿ ದೋಷ ನಿವಾರಣೆಗೆ, ಜಮೀನು- ಸೈಟುಗಳ ವ್ಯಾಜ್ಯಗಳ ಪರಿಹಾರಕ್ಕೆ, ಕುಜ ದೋಷದ ಕಾರಣಕ್ಕೆ ದಂಪತಿ ಮಧ್ಯೆ ಇರುವಂಥ ಕಲಹ- ವೈಮನಸ್ಯ ನಿವಾರಣೆಗೆ, ಚರ್ಮ ವ್ಯಾಧಿ ನಿವಾರಣೆಗೆ, ಸಂತಾನಕ್ಕಾಗಿ, ಅಧಿಕ ರಕ್ತದೊತ್ತಡದ ನಿರ್ವಹಣೆಗೆ, ಇತ್ಯಾದಿ ಕುಜ ಗ್ರಹಕ್ಕೆ ಸಂಬಂಧಿಸಿದ ದೋಷ- ಬಾಧೆ ನಿವಾರಣೆಗೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.
ಡಯಾಬಿಟೀಸ್ ನಿಯಂತ್ರಣಕ್ಕೆ ನಂಬಿಕೆಯ ದೇಗುಲ: ಸಾವಿರ ವರ್ಷಗಳ ಇತಿಹಾಸದ ಕರುಂಬೇಶ್ವರರ್ ದೇವಾಲಯ
ಕುಜ ದೋಷ ನಿವಾರಣೆಗೆ ಪವಿತ್ರ ಕ್ಷೇತ್ರ:
ವೈಕುಂಠ ಏಕಾದಶಿಯಂದು, ಅಂಗಾರಕ ಜಯಂತಿಯಂದು ಇಲ್ಲಿ ವಿಶೇಷ ಪೂಜೆ- ಪುನಸ್ಕಾರಗಳು ನಡೆಯುತ್ತವೆ. ಇದರ ಜೊತೆಗೆ ಪ್ರತಿ ತಿಂಗಳು ಪ್ರದೋಷ ಪೂಜೆ, ಸತ್ಯನಾರಾಯಣ ವ್ರತ, ಸಂಕಷ್ಟಹರ ಗಣಪತಿ ವ್ರತ ಇತರ ಪೂಜಾ ಕೈಂಕರ್ಯಗಳು ನೇಮ- ನಿಷ್ಠೆಯಿಂದ ನಡೆಯುತ್ತವೆ. ಜನ್ಮ ಜಾತಕದಲ್ಲಿ ದೋಷಗಳು ಇರುವುದು ಸೇರಿದಂತೆ ವಿವಾಹ ವಿಳಂಬ ಹಾಗೂ ನಾನಾ ಅಡೆತಡೆಗಳು ನಿವಾರಣೆ ಮಾಡಿಕೊಳ್ಳಲು ಶಿವಮೊಗ್ಗ, ಚಿತ್ರದುರ್ಗ, ಬೆಂಗಳೂರು, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೀಗೆ ನಾನಾ ಭಾಗಗಳಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ಸಾಮಾನ್ಯವಾಗಿ ಬೆಳಗ್ಗೆ ಏಳೂ ಮೂವತ್ತರಿಂದ ಹತ್ತು ಗಂಟೆ ತನಕ ಹಾಗೂ ಸಂಜೆ ಆರು ಗಂಟೆಯಿಂದ ರಾತ್ರಿ ಹತ್ತು ಗಂಟೆ ತನಕ ದೇವಾಲಯ ತೆರೆದಿರುತ್ತದೆ. ಮಂಗಳವಾರದ ದಿನ ಬೆಳಗ್ಗೆ ಏಳು ಗಂಟೆಯಿಂದ ಹನ್ನೊಂದು ಗಂಟೆ ತನಕ ತೆರೆದಿರುತ್ತದೆ. ಇನ್ನು ಧನುರ್ಮಾಸದಲ್ಲಿ ಬೆಳಗ್ಗೆ ನಾಲ್ಕೂವರೆಯಿಂದ ಎಂಟು ಗಂಟೆವರೆಗೆ ಇರುತ್ತದೆ.

ಸಂಪರ್ಕ ಮಾಹಿತಿ:
ಋಣ, ರೋಗ, ದಾರಿದ್ರ್ಯ ನಿವಾರಣೆಗೆ ಕುಜ- ಅಂಗಾರಕನ ಆರಾಧನೆ ಪರಿಣಾಮಕಾರಿ. ತುಮಕೂರಿಗೆ ರಾಜ್ಯದ ನಾನಾ ಭಾಗಗಳಿಂದ ಬಸ್ಸು ವ್ಯವಸ್ಥೆ ಚೆನ್ನಾಗಿದೆ. ಅಷ್ಟೇ ಅಲ್ಲ, ರೈಲು ವ್ಯವಸ್ಥೆಯೂ ಇದೆ. ಇಲ್ಲಿನ ಪ್ರಧಾನ ಅರ್ಚಕರಾದ ವಿನಯ್ ಅವರ ಸಂಪರ್ಕ ಸಂಖ್ಯೆ 80888 41412. ಈ ಸಂಖ್ಯೆಗೆ ಕರೆ ಮಾಡಿದಲ್ಲಿ ಇನ್ನಷ್ಟು ಮಾಹಿತಿಗಳನ್ನು ಅವರು ಒದಗಿಸುತ್ತಾರೆ. ಇನ್ನು ಈ ಕ್ಷೇತ್ರದಲ್ಲಿ ಕುಜ ದೋಷ ಶಾಂತಿ ಸೇರಿದಂತೆ ಇತರೆ ಪೂಜೆ- ಪುನಸ್ಕಾರಗಳನ್ನು ಮಾಡಿಸಬೇಕು ಎಂದಿದ್ದರೂ ಈ ಮೇಲ್ಕಂಡ ಮೊಬೈಲ್ ಫೋನ್ ಸಂಖ್ಯೆಗೆ ಕರೆ ಮಾಡಿ, ಮಾಹಿತಿ ಪಡೆಯಬಹುದು.
ಲೇಖನ- ಶ್ರೀನಿವಾಸ ಮಠ





