2026ನೇ ಇಸವಿಯ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳ ಜ್ಯೋತಿಷ್ಯ ರೀತಿಯಾದ ವರ್ಷಭವಿಷ್ಯವನ್ನು ನೀಡಲಾಗುತ್ತಿದೆ. ಇದಕ್ಕಾಗಿ ಗ್ರಹಗಳ ಗೋಚಾರ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಅದರಲ್ಲಿಯೂ ದೀರ್ಘಕಾಲ ಒಂದೇ ರಾಶಿಯಲ್ಲಿ ಇರುವಂಥ ಗ್ರಹಗಳಾದ ಶನಿ, ರಾಹು- ಕೇತು ಹಾಗೂ ಗುರು ಗ್ರಹದ ಸಂಚಾರವನ್ನು ಆಧರಿಸಿ, ಇಲ್ಲಿನ ಫಲಾಫಲವನ್ನು ತಿಳಿಸಲಾಗಿದೆ. ಇಲ್ಲಿ ನೀಡಲಾಗಿರುವ ವರ್ಷಫಲವು 2026ನೇ ಇಸವಿಯ ಜನವರಿ 1ನೇ ತಾರೀಕಿನಿಂದ ಡಿಸೆಂಬರ್ 31ನೇ ತಾರೀಕಿನ ತನಕ ಅನ್ವಯ ಆಗುತ್ತದೆ. ನೆನಪಿನಲ್ಲಿಡಿ, ಇದು ಯುಗಾದಿ ಸಂವತ್ಸರ ಫಲ ಅಥವಾ ಯುಗಾದಿ ಭವಿಷ್ಯ ಅಲ್ಲ, ಇದು ಹೆಚ್ಚು ಜನಪ್ರಿಯ ಆಗಿರುವ ಜನವರಿಯಿಂದ ಡಿಸೆಂಬರ್ ತನಕದ ಕ್ಯಾಲೆಂಡರ್ ವರ್ಷ ಭವಿಷ್ಯ.
ಗ್ರಹ ಸಂಚಾರದ ವಿವರ ಹೀಗಿದೆ:
ಶನಿ ಗ್ರಹ ಇಡೀ ವರ್ಷ ಮೀನ ರಾಶಿಯಲ್ಲಿ ಸಂಚರಿಸುತ್ತದೆ.
ರಾಹು- ಕೇತು: ಜನವರಿಯಿಂದ ಡಿಸೆಂಬರ್ 5ನೇ ತಾರೀಕಿನ ತನಕ ರಾಹು ಕುಂಭ ರಾಶಿಯಲ್ಲಿ, ಕೇತು ಸಿಂಹ ರಾಶಿಯಲ್ಲಿ ಇರುತ್ತದೆ. ಆ ನಂತರ ವರ್ಷಾಂತ್ಯದ ತನಕ ರಾಹು ಮಕರ ರಾಶಿಯಲ್ಲೂ ಕೇತು ಕರ್ಕಾಟಕ ರಾಶಿಯಲ್ಲಿ ಇರುತ್ತದೆ.
ಗುರು: ಜನವರಿಯಿಂದ ಜೂನ್ ಒಂದನೇ ತಾರೀಕಿನ ತನಕ ಗುರು ಗ್ರಹ ಮಿಥುನ ರಾಶಿಯಲ್ಲಿ ಸಂಚರಿಸುತ್ತದೆ. ಆ ನಂತರ ಅಕ್ಟೋಬರ್ 31ನೇ ತಾರೀಕಿನ ತನಕ ಕರ್ಕಾಟಕ ರಾಶಿಯಲ್ಲಿ ಬೃಹಸ್ಪತಿ ಸಂಚರಿಸುತ್ತದೆ, ಆ ಮೇಲೆ ವರ್ಷಾಂತ್ಯದ ತನಕ ಸಿಂಹ ರಾಶಿಯಲ್ಲಿ ಗುರು ಸಂಚಾರ ಇರುತ್ತದೆ.
ಮೇಷ ರಾಶಿ ವರ್ಷ ಭವಿಷ್ಯ ಹೀಗಿದೆ:
ಮೇಷ- ಅಶ್ವಿನಿ ನಕ್ಷತ್ರದ ನಾಲ್ಕೂ ಪಾದ, ಭರಣಿ ನಕ್ಷತ್ರದ ನಾಲ್ಕೂ ಪಾದ, ಕೃತ್ತಿಕಾ ನಕ್ಷತ್ರ ಒಂದನೇ ಪಾದ ಸೇರಿ ಮೇಷ ರಾಶಿ ಆಗುತ್ತದೆ. ಅಶ್ವಿನಿ ನಕ್ಷತ್ರದ ಅಧಿಪತಿ ಕೇತು, ಭರಣಿಗೆ ಶುಕ್ರ ಹಾಗೂ ಕೃತ್ತಿಕಾಗೆ ರವಿ ಅಧಿಪತಿ ಆಗುತ್ತಾನೆ. ಇನ್ನು ರಾಶ್ಯಾಧಿಪತಿ ಕುಜ ಆಗುತ್ತದೆ. ಚರ ರಾಶಿ, ಅಗ್ನಿ ತತ್ವದ ಕಾಲಪುರುಷನ ಚಕ್ರದ ಮೊದಲನೇ ರಾಶಿ ಮೇಷ.
ಶನಿ ಗೋಚಾರ ಫಲ: ನಿಮ್ಮ ರಾಶಿಗೆ ಕರ್ಮ ಸ್ಥಾನ ಹಾಗೂ ಲಾಭ ಸ್ಥಾನ ಎರಡಕ್ಕೂ ಅಧಿಪತಿ ಆದಂಥ ಶನೈಶ್ಚರನು ವ್ಯಯ ಸ್ಥಾನವಾದ ಹನ್ನೆರಡನೇ ಮನೆಯಲ್ಲಿ ಸಂಚರಿಸುತ್ತದೆ. ಇದು ಆಯಾ ಭಾವಕ್ಕೆ ನಷ್ಟವನ್ನು ಸೂಚಿಸುತ್ತದೆ. ಅಂದರೆ ಉದ್ಯೋಗ ನಷ್ಟ, ವೃತ್ತಿ ನಷ್ಟ, ಕರ್ಮ ನಷ್ಟ. ಆದ್ದರಿಂದ ನೀವಾಗಿಯೇ ಕೆಲಸ ಬಿಡುವುದಕ್ಕೆ ಹೋಗಬೇಡಿ. ನಿಮ್ಮನ್ನು ಕೆಲಸದಿಂದ ತೆಗೆದುಹಾಕಿದಲ್ಲಿ ಹೆಚ್ಚು ಶ್ರಮ ಪಟ್ಟು ಮತ್ತೆ ಉದ್ಯೋಗ ದಕ್ಕಿಸಿಕೊಳ್ಳಬೇಕಾಗುತ್ತದೆ. ಅಂದುಕೊಂಡಂತೆ ವ್ಯವಹಾರ- ವ್ಯಾಪಾರ ಕೈ ಹಿಡಿಯುವುದಿಲ್ಲ. ಅದರಲ್ಲಿಯೂ ನಷ್ಟದ ಅನುಭವ ಆಗುತ್ತದೆ. ಕಾಂಟ್ರಾಕ್ಟ್ ಕೆಲಸ ಮಾಡಿಸುವಂಥವರು ಪೂರ್ತಿ ಹಣವನ್ನು ವಸೂಲಿ ಮಾಡುವುದೇ ಸವಾಲಾಗಿ ಬಿಡುತ್ತದೆ. ವಿರೋಧಿಗಳಿಂದ ಹಣವನ್ನು ಕಳೆದುಕೊಳ್ಳುವಂತೆ ಆಗಲಿದೆ. ಅನಾರೋಗ್ಯ ಸಮಸ್ಯೆಗಳಿಗೆ ಸೂಕ್ತ ಔಷಧೋಪಚಾರ ದೊರೆಯದೆ ಮಾನಸಿಕ ಚಿಂತೆ ಕಾಡುತ್ತದೆ. ಇದು ಸಾಡೇಸಾತ್ ಶನಿಯ ಆರಂಭದ ಹಂತ. ನಿಮ್ಮ ಸಾಮರ್ಥ್ಯಕ್ಕೆ ಮೀರಿದ ಹಾಗೂ ಇನ್ನೂ ನಿಮ್ಮ ಕೈ ಸೇರದ ಹಣವನ್ನು ಲೆಕ್ಕ ಹಾಕಿಕೊಂಡು ಸಾಲ ಮಾಡುವುದಕ್ಕೆ ಹೋಗಬೇಡಿ.
Astrology birth stars: ಅಶ್ವಿನಿಯಿಂದ ರೇವತಿ ತನಕ ಇಪ್ಪತ್ತೇಳು ನಕ್ಷತ್ರಗಳ ಗುಣ- ಸ್ವಭಾವದ ವಿವರಣೆ ಇಲ್ಲಿದೆ
ರಾಹು- ಕೇತು ಗೋಚಾರ ಫಲ: ಹನ್ನೊಂದನೇ ಮನೆಯಲ್ಲಿ ರಾಹು ಸಂಚರಿಸುವಾಗ ಜನಪ್ರಿಯತೆ ದೊರೆಯುತ್ತದೆ. ಭೂಮಿ ವ್ಯವಹಾರದಲ್ಲಿ ಲಾಭ ಆಗುತ್ತದೆ. ವ್ಯವಹಾರದ ಸಲುವಾಗಿ ವಿದೇಶ ಪ್ರಯಾಣದ ಯೋಗ ಇರುತ್ತದೆ. ದಿಢೀರ್ ಹಣಕಾಸಿನ ಲಾಭ ಆಗುತ್ತದೆ. ಪಂಚಮದಲ್ಲಿ ಕೇತು ಗ್ರಹ ಇರುವುದರಿಂದ ಮಕ್ಕಳ ಬಗ್ಗೆ ಚಿಂತೆ ವಿಪರೀತ ಕಾಡುತ್ತದೆ. ಸಂತಾನಕ್ಕೆ ಪ್ರಯತ್ನಿಸುತ್ತಾ ಇರುವವರಿಗೆ ನಾನಾ ಅಡೆತಡೆಗಳು ಎದುರಾಗುತ್ತವೆ. ಈ ಹಿಂದೆ ನಿಮ್ಮಿಂದ ಅವಮಾನ ಅನುಭವಿಸಿದ್ದವರು ತಮ್ಮ ಪ್ರತೀಕಾರವನ್ನು ತೀರಿಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳಿಗೆ ವಿಪರೀತ ಮರೆವಿನ ಸಮಸ್ಯೆ ಕಾಡುತ್ತದೆ.
ಗುರು ಗೋಚಾರ ಫಲ: ಮೇ ತಿಂಗಳ ಕೊನೆ ತನಕ ಮೇಲಿಂದ ಮೇಲೆ ಆಸ್ಪತ್ರೆಗಳಿಗೆ ಖರ್ಚಾಗುತ್ತದೆ. ಸೋದರ- ಸೋದರಿಯರಿಂದ ಕಿರಿಕಿರಿ ಅನುಭವಿಸುತ್ತೀರಿ. ನೀವು ಉಳಿಸಿಕೊಂಡು ಬಂದಿದ್ದ ಹೆಸರು ಹಾಳು ಮಾಡಿಕೊಳ್ಳುವಂತೆ ಆಗುತ್ತದೆ. ಜೂನ್ ನಿಂದ ಅಕ್ಟೋಬರ್ ಮಧ್ಯೆ ಸ್ನೇಹಿತರನ್ನು ದೂರ ಮಾಡಿಕೊಳ್ಳುವಿರಿ, ತಾಯಿಯ ಆರೋಗ್ಯ ಚಿಂತೆಗೆ ಕಾರಣ ಆಗಲಿದೆ. ಆಸ್ತಿ ಖರೀದಿಗೆ ಸಾಲ ಮಾಡುವಂತೆ ಆಗಲಿದೆ. ನವೆಂಬರ್- ಡಿಸೆಂಬರ್ ಎರಡು ತಿಂಗಳು ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಆಸಕ್ತಿಯಿಂದ ಮಾಡಿದ ಕೆಲಸಗಳಲ್ಲಿ ಲಾಭ, ಖ್ಯಾತಿ, ಹಲವಾರು ಅನುಕೂಲಗಳು ಇವೆ.
ಪರಿಹಾರ: ಕರಿ ಎಳ್ಳು- ನೀಲಿ ವಸ್ತ್ರವನ್ನು ಶನಿವಾರ, ಹುರುಳಿಯನ್ನು ವಿವಿಧ ಬಣ್ಣ ಇರುವಂಥ ವಸ್ತ್ರಗಳ ಸಹಿತ ಮಂಗಳವಾರ ದಾನ ಮಾಡಿ
ಲೇಖನ- ಶ್ರೀನಿವಾಸ ಮಠ





