2026ನೇ ಇಸವಿಯ ವರ್ಷಭವಿಷ್ಯದಲ್ಲಿ ತುಲಾ ರಾಶಿಯ ಫಲಾಫಲವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಮೇಷದಿಂದ ಮೀನದವರೆಗೆ ಹನ್ನೆರಡು ರಾಶಿಗಳಿಗೆ ಗ್ರಹಗಳ ಗೋಚಾರ ಆಧಾರವಾಗಿ ವರ್ಷಭವಿಷ್ಯವನ್ನು ನೀಡಲಾಗುತ್ತಿದ್ದು, ಇಲ್ಲಿ ದೀರ್ಘಕಾಲ ಒಂದೇ ರಾಶಿಯಲ್ಲಿ ಸಂಚರಿಸುವ ಶನಿ, ರಾಹು–ಕೇತು ಹಾಗೂ ಗುರು ಗ್ರಹಗಳ ಸಂಚಾರವನ್ನು ಪ್ರಮುಖವಾಗಿ ಪರಿಗಣಿಸಲಾಗಿದೆ. ಈ ವರ್ಷಭವಿಷ್ಯವು 2026 ಜನವರಿ 1ರಿಂದ ಡಿಸೆಂಬರ್ 31ರವರೆಗೆ ಅನ್ವಯವಾಗುತ್ತದೆ. ಇದು ಯುಗಾದಿ ಸಂವತ್ಸರ ಫಲವಲ್ಲ; ಜನವರಿ–ಡಿಸೆಂಬರ್ ಕ್ಯಾಲೆಂಡರ್ ವರ್ಷಕ್ಕೆ ಅನ್ವಯಿಸುವ ಫಲವಾಗಿದೆ.
ಗ್ರಹ ಸಂಚಾರದ ವಿವರ:
ಶನಿ ಗ್ರಹ-
ಇಡೀ ವರ್ಷ ಶನಿ ಮೀನ ರಾಶಿಯಲ್ಲಿ ಸಂಚರಿಸುತ್ತದೆ.
ರಾಹು–ಕೇತು:
ಜನವರಿ 1ರಿಂದ ಡಿಸೆಂಬರ್ 5ರವರೆಗೆ
ರಾಹು: ಕುಂಭ ರಾಶಿ (ತುಲಾ ರಾಶಿಗೆ 5ನೇ ಮನೆ)
ಕೇತು: ಸಿಂಹ ರಾಶಿ (11ನೇ ಮನೆ)
ಡಿಸೆಂಬರ್ 6 ನಂತರ
ರಾಹು: ಮಕರ (4ನೇ ಮನೆ)
ಕೇತು: ಕರ್ಕಾಟಕ (10ನೇ ಮನೆ)
ಗುರು:
ಜನವರಿ 1 ರಿಂದ ಜೂನ್ 1ರ ತನಕ ಮಿಥುನ ರಾಶಿ (9ನೇ ಮನೆ)
ಜೂನ್ 2 ರಿಂದ ಅಕ್ಟೋಬರ್ 31ರ ತನಕ ಕರ್ಕಾಟಕ (10ನೇ ಮನೆ)
ನವೆಂಬರ್–ಡಿಸೆಂಬರ್ ಸಿಂಹದಲ್ಲಿ ಸಂಚಾರ (11ನೇ ಮನೆ – ಲಾಭ ಸ್ಥಾನ)
2026 ನ್ಯೂಮರಾಲಜಿ ಭವಿಷ್ಯ: ಮದುವೆ, ಉದ್ಯೋಗ, ಹಣಕಾಸು, ಆರೋಗ್ಯ – ಜನ್ಮಸಂಖ್ಯೆ 1ರಿಂದ 9ರವರೆಗೆ
ತುಲಾ ರಾಶಿ: ಚಿತ್ತಾ ನಕ್ಷತ್ರದ 3, 4ನೇ ಪಾದ, ಸ್ವಾತಿ ನಕ್ಷತ್ರದ ನಾಲ್ಕೂ ಪಾದ, ವಿಶಾಖ ನಕ್ಷತ್ರದ 1, 2, 3ನೇ ಪಾದ ಸೇರಿ ತುಲಾ ರಾಶಿ ಆಗುತ್ತದೆ. ಚಿತ್ತಾ ನಕ್ಷತ್ರದ ಅಧಿಪತಿ ಕುಜ, ಸ್ವಾತಿ ನಕ್ಷತ್ರಕ್ಕೆ ರಾಹು ಹಾಗೂ ವಿಶಾಖ ನಕ್ಷತ್ರಕ್ಕೆ ಗುರು ಗ್ರಹ ಅಧಿಪತಿ. ಈ ರಾಶಿಯ ಅಧಿಪತಿ ಶುಕ್ರ. ವಾಯು ತತ್ವದ, ಚರ ರಾಶಿ, ಕಾಲಪುರುಷನ ಚಕ್ರದ ಏಳನೇ ರಾಶಿ ತುಲಾ.
ತುಲಾ ರಾಶಿ – ವರ್ಷಭವಿಷ್ಯ 2026
ಶನಿ ಗೋಚಾರ ಫಲ:
ಶನಿ ನಾಲ್ಕು ಹಾಗೂ ಐದನೇ ಮನೆಯ ಅಧಿಪತಿಯಾಗಿ 6ನೇ ಸ್ಥಾನದಲ್ಲೇ ಸಂಚರಿಸುವುದರಿಂದ ಈ ವರ್ಷ ನಿಮಗೆ ಶ್ರಮದ ಮೂಲಕ ಜಯ ದೊರೆಯುವ ಕಾಲ. ಶತ್ರುಗಳು, ಕೋರ್ಟ್–ಕಚೇರಿ ವ್ಯವಹಾರಗಳು, ಸಾಲ–ಬಾಕಿ ವಿಷಯಗಳಲ್ಲಿ ನಿಧಾನವಾದರೂ ಅನುಕೂಲಕರ ಪರಿಹಾರ ಸಿಗುತ್ತದೆ. ಉದ್ಯೋಗಸ್ಥರಿಗೆ ಕೆಲಸದ ಒತ್ತಡ ಹೆಚ್ಚಾಗಲಿದೆ, ಆದರೆ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಆರೋಗ್ಯ ವಿಚಾರದಲ್ಲಿ ನೋಡುವುದಾದರೆ ಹೊಟ್ಟೆ, ನರಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ಅಗತ್ಯ. ನಿರ್ಲಕ್ಷ್ಯ ಬೇಡ. ಆಸ್ತಿ, ವಾಹನ ಖರೀದಿ, ಹಣ ಹೂಡಿಕೆ ಅವಕಾಶಗಳು ಹೆಚ್ಚಾಗಿವೆ.
ರಾಹು–ಕೇತು ಗೋಚಾರ ಫಲ:
5ನೇ ಮನೆಯಲ್ಲಿ ರಾಹು ಇರುವುದರಿಂದ ಮನಸ್ಸಿನಲ್ಲಿ ಅಸ್ಥಿರತೆ, ಮಕ್ಕಳ ವಿಚಾರದಲ್ಲಿ ಚಿಂತೆ, ಪ್ರೀತಿ ಸಂಬಂಧಗಳಲ್ಲಿ ಗೊಂದಲ ಉಂಟಾಗಬಹುದು. ಆದರೆ ಸ್ಪರ್ಧಾತ್ಮಕ ಪರೀಕ್ಷೆ, ಕ್ರಿಯೇಟಿವ್ ಕ್ಷೇತ್ರದಲ್ಲಿ ಇರುವವರಿಗೆ ಹೊಸ ಅವಕಾಶಗಳು ದೊರೆಯುತ್ತವೆ. 11ನೇ ಮನೆಯಲ್ಲಿ ಕೇತು ಸಂಚಾರ ಇರುವುದರಿಂದ ಆದಾಯ ಇದ್ದರೂ ತೃಪ್ತಿ ಕಡಿಮೆ. ಸ್ನೇಹ ವಲಯದಲ್ಲಿ ಮನಸ್ತಾಪ ಆಗಬಹುದು, ನಿರೀಕ್ಷೆಯಂತೆ ನಡೆಯುತ್ತಿಲ್ಲ ಎಂಬ ಅನುಭವ ಆಗಬಹುದು. ಹಳೆಯ ಸ್ನೇಹಿತರಿಂದ ನಿರಾಸೆ ಉಂಟಾಗಲಿದೆ. ಆದರೂ ಅನವಶ್ಯಕ ಆಸೆಗಳಿಂದ ದೂರ ಸರಿಯುವ ಬುದ್ಧಿ ಬರುತ್ತದೆ. ತೀರ್ಥಕ್ಷೇತ್ರ ದರ್ಶನ, ದೇವತಾ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು, ಹಿರಿಯರ ಮಾರ್ಗದರ್ಶನದಿಂದ ಅನುಕೂಲ. ಧಾರ್ಮಿಕ ವೃತ್ತಿಯಲ್ಲಿ ಇರುವವರಿಗೆ ಜನಪ್ರಿಯತೆ, ಹಣಕಾಸು ಆದಾಯ ಹೆಚ್ಚಳ ಆಗುವ ಸಮಯ.
ರಾಜ ಶ್ಯಾಮಲಾ ದೇವಿ: ಜ್ಞಾನ, ವಾಕ್ ಸಿದ್ಧಿ, ಕಲೆ ಮತ್ತು ರಾಜಕೀಯ ಯಶಸ್ಸಿನ ಶಕ್ತಿದೇವತೆ
ಗುರು ಗೋಚಾರ ಫಲ:
ಜನವರಿಯಿಂದ ಜೂನ್ ತನಕ 9ನೇ ಮನೆಯಲ್ಲಿ ಗುರು ಸಂಚಾರದಿಂದ ಅದೃಷ್ಟ ಬೆಂಬಲ ಇರುತ್ತದೆ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ದೂರ ಪ್ರಯಾಣ ಯೋಗ ಇರುತ್ತದೆ. ಮದುವೆ- ಸಂತಾನ ಪ್ರಯತ್ನಗಳು ಯಶಸ್ವಿ ಆಗುತ್ತವೆ. ಜೂನ್‌ನಿಂದ ಅಕ್ಟೋಬರ್ ಅಂತ್ಯದವರೆಗೆ 10ನೇ ಮನೆಯಲ್ಲಿ ಗುರು ಸಂಚಾರದಿಂದ ಉದ್ಯೋಗ ಪ್ರಗತಿ, ಬಡ್ತಿ, ಹೊಸ ಜವಾಬ್ದಾರಿಗಳು ದೊರೆಯುತ್ತವೆ. ನವೆಂಬರ್–ಡಿಸೆಂಬರ್ ತಿಂಗಳಲ್ಲಿ ಗುರು 11ನೇ ಮನೆಯಲ್ಲಿ ಸಂಚರಿಸುವುದರಿಂದ ವರ್ಷದಲ್ಲೇ ಅತ್ಯುತ್ತಮ ಕಾಲ ಆರಂಭವಾಗುತ್ತದೆ. ಆದಾಯ ಹೆಚ್ಚಳ, ಹಳೆಯ ಬಾಕಿ ಹಣ ವಾಪಸ್, ಬೋನಸ್, ಲಾಭ, ವಿವಾಹ ನಿಶ್ಚಯ, ಸಂತಾನ ಭಾಗ್ಯ, ವಾಹನ–ಆಸ್ತಿ ಖರೀದಿ ಯೋಗಗಳು ಕಂಡುಬರುತ್ತವೆ. ಸಮಾಜದಲ್ಲಿ ಗೌರವ ಮತ್ತು ಸಂಪರ್ಕ ವಲಯ ವಿಸ್ತಾರವಾಗುತ್ತದೆ.
ಪರಿಹಾರ: ದುರ್ಗಾ ದೇವಿ ಆರಾಧನೆಯನ್ನು ಮಾಡಿಕೊಳ್ಳಿ.
ಲೇಖನ- ಶ್ರೀನಿವಾಸ ಮಠ





