2026ನೇ ಇಸವಿಯ ವರ್ಷಭವಿಷ್ಯದಲ್ಲಿ ಕನ್ಯಾ ರಾಶಿ ಫಲಾಫಲವನ್ನು ಈ ಲೇಖನದಲ್ಲಿ ತಿಳಿಸಲಾಗುವುದು. ಈ ಸರಣಿಯಲ್ಲಿ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳ ಜ್ಯೋತಿಷ್ಯ ರೀತಿಯಾದ ವರ್ಷಭವಿಷ್ಯವನ್ನು ನೀಡಲಾಗುತ್ತಿದೆ. ಇದಕ್ಕಾಗಿ ಗ್ರಹಗಳ ಗೋಚಾರ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಅದರಲ್ಲಿಯೂ ದೀರ್ಘಕಾಲ ಒಂದೇ ರಾಶಿಯಲ್ಲಿ ಇರುವಂಥ ಗ್ರಹಗಳಾದ ಶನಿ, ರಾಹು- ಕೇತು ಹಾಗೂ ಗುರು ಗ್ರಹದ ಸಂಚಾರವನ್ನು ಆಧರಿಸಿ, ಇಲ್ಲಿನ ಫಲಾಫಲವನ್ನು ತಿಳಿಸಲಾಗಿದೆ. ಇಲ್ಲಿ ನೀಡಲಾಗಿರುವ ವರ್ಷಫಲವು 2026ನೇ ಇಸವಿಯ ಜನವರಿ 1ನೇ ತಾರೀಕಿನಿಂದ ಡಿಸೆಂಬರ್ 31ನೇ ತಾರೀಕಿನ ತನಕ ಅನ್ವಯ ಆಗುತ್ತದೆ. ನೆನಪಿನಲ್ಲಿಡಿ, ಇದು ಯುಗಾದಿ ಸಂವತ್ಸರ ಫಲ ಅಥವಾ ಯುಗಾದಿ ಭವಿಷ್ಯ ಅಲ್ಲ, ಇದು ಹೆಚ್ಚು ಜನಪ್ರಿಯ ಆಗಿರುವ ಜನವರಿಯಿಂದ ಡಿಸೆಂಬರ್ ತನಕದ ಕ್ಯಾಲೆಂಡರ್ ವರ್ಷ ಭವಿಷ್ಯ.
ಗ್ರಹ ಸಂಚಾರದ ವಿವರ ಹೀಗಿದೆ:
ಶನಿ ಗ್ರಹ ಇಡೀ ವರ್ಷ ಮೀನ ರಾಶಿಯಲ್ಲಿ ಸಂಚರಿಸುತ್ತದೆ.
ರಾಹು- ಕೇತು: ಜನವರಿಯಿಂದ ಡಿಸೆಂಬರ್ 5ನೇ ತಾರೀಕಿನ ತನಕ ರಾಹು ಕುಂಭ ರಾಶಿಯಲ್ಲಿ, ಕೇತು ಸಿಂಹ ರಾಶಿಯಲ್ಲಿ ಇರುತ್ತದೆ. ಆ ನಂತರ ವರ್ಷಾಂತ್ಯದ ತನಕ ರಾಹು ಮಕರ ರಾಶಿಯಲ್ಲೂ ಕೇತು ಕರ್ಕಾಟಕ ರಾಶಿಯಲ್ಲಿ ಇರುತ್ತದೆ.
ಗುರು: ಜನವರಿಯಿಂದ ಜೂನ್ ಒಂದನೇ ತಾರೀಕಿನ ತನಕ ಗುರು ಗ್ರಹ ಮಿಥುನ ರಾಶಿಯಲ್ಲಿ ಸಂಚರಿಸುತ್ತದೆ. ಆ ನಂತರ ಅಕ್ಟೋಬರ್ 31ನೇ ತಾರೀಕಿನ ತನಕ ಕರ್ಕಾಟಕ ರಾಶಿಯಲ್ಲಿ ಬೃಹಸ್ಪತಿ ಸಂಚರಿಸುತ್ತದೆ, ಆ ಮೇಲೆ ವರ್ಷಾಂತ್ಯದ ತನಕ ಸಿಂಹ ರಾಶಿಯಲ್ಲಿ ಗುರು ಸಂಚಾರ ಇರುತ್ತದೆ.
ಕನ್ಯಾ- ಉತ್ತರಾ ಫಲ್ಗುಣಿ ನಕ್ಷತ್ರದ ಎರಡು, ಮೂರು, ನಾಲ್ಕನೇ ಪಾದ, ಹಸ್ತಾ ನಕ್ಷತ್ರ ನಾಲ್ಕೂ ಪಾದ ಹಾಗೂ ಚಿತ್ತಾ ನಕ್ಷತ್ರದ ಒಂದು, ಎರಡನೇ ಪಾದ ಸೇರಿ ಕನ್ಯಾ ರಾಶಿ ಆಗುತ್ತದೆ. ಉತ್ತರಾ ನಕ್ಷತ್ರಕ್ಕೆ ರವಿ ಅಧಿಪತಿ ಆಗುತ್ತಾನೆ, ಹಸ್ತಾ ನಕ್ಷತ್ರಕ್ಕೆ ಚಂದ್ರ ಹಾಗೂ ಚಿತ್ತಾ ನಕ್ಷತ್ರಕ್ಕೆ ಕುಜ ಅಧಿಪತಿ. ಇನ್ನು ಕನ್ಯಾ ರಾಶ್ಯಾಧಿಪತಿ ಬುಧ ಆಗುತ್ತದೆ. ದ್ವಿಸ್ವಭಾವ ರಾಶಿ, ಪೃಥ್ವಿ ತತ್ವದ ಕಾಲಪುರುಷನ ಚಕ್ರದ ಆರನೇ ರಾಶಿ ಸಿಂಹ.
2026 ನ್ಯೂಮರಾಲಜಿ ಭವಿಷ್ಯ: ಮದುವೆ, ಉದ್ಯೋಗ, ಹಣಕಾಸು, ಆರೋಗ್ಯ – ಜನ್ಮಸಂಖ್ಯೆ 1ರಿಂದ 9ರವರೆಗೆ
ಕನ್ಯಾ ರಾಶಿ ವರ್ಷ ಭವಿಷ್ಯ ಹೀಗಿದೆ:
ಶನಿ ಗೋಚಾರ ಫಲ: ಏಳನೇ ಮನೆಯಲ್ಲಿ ಶನಿ ಗ್ರಹದ ಸಂಚಾರ ಇರುತ್ತದೆ. ನಿಮ್ಮ ರಾಶಿಗೆ ಸುತ ಸ್ಥಾನ- ರಿಪು ಸ್ಥಾನದ ಅಧಿಪತಿಯಾದ ಶನೈಶ್ಚರ ಈ ಸ್ಥಾನದಲ್ಲಿ ಇರುವುದರಿಂದ ಮಕ್ಕಳ ವೈವಾಹಿಕ ಜೀವನದಲ್ಲಿ ಏರುಪೇರು ಆಗುತ್ತದೆ. ಇನ್ನು ದಂಪತಿ ಮಧ್ಯೆ ಸಂದೇಹ ತಲೆದೋರುತ್ತದೆ. ಈ ಹಿಂದೆ ನಡೆದಿದ್ದಂಥ ಕೆಲವು ಬೆಳವಣಿಗೆಗಳು ಮನಸ್ತಾಪ, ಬೇಸರಕ್ಕೆ ಕಾರಣ ಆಗಲಿದೆ. ಪಾರ್ಟನರ್ ಷಿಪ್ ವ್ಯವಹಾರ ಮಾಡುತ್ತಿರುವವರಿಗೆ ನಷ್ಟ- ಅಭಿಪ್ರಾಯ ಭೇದ ಕಾಣಿಸಿಕೊಳ್ಳುತ್ತದೆ. ವಿದೇಶಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಅಲ್ಲಿ ಕಿರಿಕಿರಿ ಅನುಭವಕ್ಕೆ ಬರಲಿದ್ದು, ಅಲ್ಲಿಂದ ವಾಪಸ್ ಬರುವ ಆಲೋಚನೆ ಮೂಡಲಿದೆ. ಸಂಗಾತಿಯ ಅನಾರೋಗ್ಯ ಸಮಸ್ಯೆಗೆ ಹೆಚ್ಚಿನ ಖರ್ಚು- ವೆಚ್ಚ ಆಗಲಿದೆ. ಸಂಗಾತಿಯ ಸಂಬಂಧಿಗಳಿಂದ ಮೂದಲಿಕೆ- ನಿಂದನೆ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ವ್ಯವಹಾರ- ವ್ಯಾಪಾರದಲ್ಲಿ ನಿಮ್ಮ ಜೊತೆಗೆ ಅಥವಾ ನಿಮ್ಮ ಕೈ ಕೆಳಗೆ ಕೆಲಸ ಮಾಡಿದಂಥವರೇ ಪ್ರತ್ಯೇಕವಾಗಿ ಪ್ರತಿಸ್ಪರ್ಧಿಯಾಗಿ ಬದಲಾಗುತ್ತಾರೆ. ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಂಗಾತಿಯೇ ಕೋರ್ಟ್- ಕಚೇರಿ, ಪೊಲೀಸ್ ಠಾಣೆ ಮೆಟ್ಟಿಲೇರುವ ಸಾಧ್ಯತೆಯೂ ಇದೆ.
ರಾಹು- ಕೇತು ಗೋಚಾರ ಫಲ: ಆರನೇ ಮನೆಯಲ್ಲಿ ರಾಹು ಗ್ರಹದ ಸಂಚಾರ ಇರುವ ವರ್ಷದ ಬಹುತೇಕ ಭಾಗ ಹಣಕಾಸಿನ ಹೊಂದಾಣಿಕೆಗೆ ಕಷ್ಟವಾಗುವುದಿಲ್ಲ. ಭೂಮಿ ವ್ಯವಹಾರಗಳು ಕೈ ಹಿಡಿಯಲಿವೆ. ಹೈಪರ್ ಟೆನ್ಷನ್ ಸಮಸ್ಯೆಗಳು ಒಂದಿಷ್ಟು ಕಾಡುತ್ತದೆ ಎನ್ನುವುದು ಬಿಟ್ಟರೆ ವ್ಯವಹಾರಗಳಲ್ಲಿ ನೀವು ತೆಗೆದುಕೊಳ್ಳುವ ಕೆಲವು ನಿರ್ಧಾರ ಲಾಭ ತಂದುಕೊಡುತ್ತದೆ. ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಇರುವವರಿಗೆ ಆದಾಯ ಹಾಗೂ ಲಾಭ ಹೆಚ್ಚಾಗಲಿದೆ. ವ್ಯಯ ಸ್ಥಾನದಲ್ಲಿ ಇರುವ ಕೇತು ನಿಮ್ಮಲ್ಲಿ ಆಲಸ್ಯ ಹೆಚ್ಚು ಮಾಡಿಸುತ್ತಾನೆ. ಹಣಕಾಸು ವಿಚಾರದಲ್ಲಿನ ನಿಮ್ಮ ನಿರ್ಲಕ್ಷ್ಯದಿಂದ ಕೆಲವು ಒಳ್ಳೆ ಅವಕಾಶಗಳು ಕೈ ತಪ್ಪಿ ಹೋಗುತ್ತವೆ. ಭೂಮಿ ಖರೀದಿಗೆ ನೋಡುವಾಗ ಅಲ್ಲಿ ಏನಾದರೂ ದೋಷ ಇದೆಯೇ ಎಂಬುದನ್ನು ಪರೀಕ್ಷಿಸಿದ ನಂತರದಲ್ಲಿ ಮುಂದಕ್ಕೆ ಹೆಜ್ಜೆ ಇಡುವುದು ಒಳ್ಳೆಯದು.
ಕುಜ ದೋಷ, ವಿವಾಹ ವಿಳಂಬ, ಭೂಮಿ ವ್ಯಾಜ್ಯಕ್ಕೆ ಪರಿಹಾರ ನೀಡುವ ಅಪರೂಪದ ಅಂಗಾರಕ ದೇವಾಲಯ – ತುಮಕೂರಿನ ಶ್ರೀಕೃಷ್ಣ ನಗರ
ಗುರು ಗೋಚಾರ ಫಲ: ಜನವರಿಯಿಂದ ಜೂನ್ ತನಕ ಹತ್ತನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಇರುತ್ತದೆ. ಈ ವೇಳೆ ಮಿಶ್ರ ಫಲದ ಅನುಭವ ಆಗಲಿದೆ. ಉದ್ಯೋಗದಲ್ಲಿ ಅವಕಾಶಗಳು ದೊರೆಯಲಿವೆ, ಆದರೆ ಅವು ಸವಾಲಿನಿಂದ ಕೂಡಿರುತ್ತದೆ. ನಿಮ್ಮ ಮೇಲಧಿಕಾರಿಗಳನ್ನು ಎದುರು ಹಾಕಿಕೊಂಡು, ನಿಮಗೆ ವಹಿಸಿದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ಮಾಡಿ ಮುಗಿಸುತ್ತೀರಿ. ಆದರೆ ಅದರ ಪೂರ್ಣ ಪ್ರಮಾಣದ ಶ್ರೇಯ ನಿಮಗೆ ಸಿಗುವುದಿಲ್ಲ. ಜೂನ್ ತಿಂಗಳ ಎರಡನೇ ತಾರೀಕಿನಿಂದ ಹನ್ನೊಂನೇ ಮನೆಗೆ, ಅಂದರೆ ಲಾಭ ಸ್ಥಾನಕ್ಕೆ ಬರುವ ಗುರು ಗ್ರಹ ಅಕ್ಟೋಬರ್ ಮೂವತ್ತೊಂದನೇ ತಾರೀಕಿನವರೆಗೆ ಅಲ್ಲಿಯೇ ಇರುತ್ತದೆ. ವಿವಾಹ ಆಗುವುದು, ಮದುವೆ ನಿಶ್ಚಯ ಆಗುವುದು, ಸಂತಾನದ ವಿಚಾರಕ್ಕೆ ಶುಭ ಬೆಳವಣಿಗೆ, ಮನೆ ನಿರ್ಮಾಣ, ಖರೀದಿ, ವಾಹನ ಖರೀದಿ, ಉದ್ಯೋಗ ಬದಲಾವಣೆ, ಲಾಭದಲ್ಲಿ ಹೆಚ್ಚಳ ಹೀಗೆ ಹಲವು ವಿಧದಲ್ಲಿ ಅನುಕೂಲಗಳು ಆಗಲಿವೆ. ನವೆಂಬರ್- ಡಿಸೆಂಬರ್ ತಿಂಗಳಲ್ಲಿ ಹನ್ನೆರಡನೇ ಮನೆ ವ್ಯಯ ಸ್ಥಾನದಲ್ಲಿ ಗುರು ಸಂಚಾರ ಆಗುತ್ತದೆ. ಈ ವೇಳೆ ಖರ್ಚು- ವೆಚ್ಚ ವಿಪರೀತ ಹೆಚ್ಚಾಗುತ್ತದೆ. ಆರೋಗ್ಯದ ಮೇಲೂ ಪರಿಣಾಮ ಬರುತ್ತದೆ.
ಪರಿಹಾರ: ಗಣಪತಿ ಆರಾಧನೆಯನ್ನು ಮಾಡಿಕೊಳ್ಳಿ.
ಲೇಖನ- ಶ್ರೀನಿವಾಸ ಮಠ





