2026ನೇ ಇಸವಿಯಲ್ಲಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಮಹತ್ವದ ಬದಲಾವಣೆಗೆ ಸಾಕ್ಷಿಯಾಗಲಿದೆ. ಈ ವರ್ಷ ಶುಭಗ್ರಹವಾದ ಗುರು (ಬೃಹಸ್ಪತಿ) ಅತಿ ವೇಗವಾಗಿ ಮೂರು ರಾಶಿಗಳಲ್ಲಿ ಸಂಚರಿಸಲಿದ್ದಾನೆ. ಜೂನ್ ತನಕ ಮಿಥುನ, ನಂತರ ಅಕ್ಟೋಬರ್ ತನಕ ಕರ್ಕಾಟಕ ಮತ್ತು ವರ್ಷಾಂತ್ಯದಲ್ಲಿ ಸಿಂಹ ರಾಶಿಗೆ ಗುರು ಪ್ರವೇಶ ಮಾಡಲಿದ್ದಾನೆ. ಈ ಬದಲಾವಣೆಯು ದ್ವಾದಶ ರಾಶಿಗಳ ಮೇಲೆ ಬೀರುವ ಪ್ರಭಾವ ಮತ್ತು ‘ಗುರು ಬಲ’ದ ಕುರಿತಾದ ವಿಸ್ತಾರವಾದ ಮಾಹಿತಿ ಇಲ್ಲಿದೆ. ಅಂದಹಾಗೆ ಧನುಸ್ಸು, ಮೀನ ರಾಶಿಗಳಿಗೆ ಗುರು ರಾಶ್ಯಾಧಿಪತಿಯಾದರೆ, ಕರ್ಕಾಟಕ ರಾಶಿಯಲ್ಲಿ ಉಚ್ಚ ಸ್ಥಿತಿಯನ್ನು ತಲುಪುತ್ತಾನೆ. ಇನ್ನು ಮಕರ ರಾಶಿಯಲ್ಲಿ ನೀಚ ಸ್ಥಿತಿಯನ್ನು ತಲುಪುತ್ತಾನೆ. ಪುನರ್ವಸು, ವಿಶಾಖಾ, ಪೂರ್ವಾಭಾದ್ರಾ ನಕ್ಷತ್ರಗಳಿಗೆ ಗುರು ಅಧಿಪತಿ ಆಗುತ್ತಾನೆ.
ಗುರು ಬಲ ಎಂದರೇನು?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗೋಚಾರ ಫಲದಲ್ಲಿ ಗುರುವು ನಿಮ್ಮ ಜನ್ಮ ರಾಶಿಯಿಂದ 2, 5, 7, 9 ಮತ್ತು 11ನೇ ಸ್ಥಾನಗಳಲ್ಲಿ ಸಂಚರಿಸುವ ಕಾಲವನ್ನು ‘ಗುರು ಬಲ’ ಎನ್ನಲಾಗುತ್ತದೆ.
- ಗುರು ಬಲವಿದ್ದಾಗ ವಿವಾಹ ಯೋಗ, ಸಂತಾನ, ವಿದೇಶ ಪ್ರವಾಸ ಕೂಡಿ ಬರುತ್ತದೆ (ಇದನ್ನೇ ‘ಗುರುಬಲ ಬಂದಿದೆ’ ಎನ್ನುತ್ತಾರೆ).
- ಆರ್ಥಿಕ ಸಂಕಷ್ಟಗಳು ದೂರವಾಗಿ ಸಂಪತ್ತು ವೃದ್ಧಿಯಾಗುತ್ತದೆ.
- ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ಮತ್ತು ಮನಸ್ಸಿನಲ್ಲಿ ನೆಮ್ಮದಿ ನೆಲೆಸುತ್ತದೆ.
2026ರ ಗುರು ಸಂಚಾರದ ಕಾಲಾವಧಿ ಮತ್ತು ಗುರು ಬಲದ ವಿವರ
ಅವಧಿ 1: ವರ್ಷದ ಆರಂಭದಿಂದ ಜೂನ್ 1, 2026ರವರೆಗೆ (ಮಿಥುನ ರಾಶಿಯಲ್ಲಿ ಗುರು)
ಗುರುವು ಮಿಥುನ ರಾಶಿಯಲ್ಲಿರುವಾಗ ಈ ಕೆಳಗಿನ ರಾಶಿಗಳಿಗೆ ಗುರು ಬಲವಿರುತ್ತದೆ:
- ಗುರು ಬಲವಿರುವ ರಾಶಿಗಳು: ವೃಷಭ, ಸಿಂಹ, ತುಲಾ, ಧನು ಮತ್ತು ಕುಂಭ.
- ಫಲ: ಈ ಅವಧಿಯಲ್ಲಿ ಈ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ ಮತ್ತು ಶುಭ ಕಾರ್ಯಗಳು ಜರುಗಲಿವೆ.
ಅವಧಿ 2: ಜೂನ್ 2 ರಿಂದ ಅಕ್ಟೋಬರ್ 31, 2026ರವರೆಗೆ (ಕರ್ಕಾಟಕ ರಾಶಿಯಲ್ಲಿ ಗುರು)
ಗುರುವು ತನ್ನ ಉಚ್ಚ ರಾಶಿಯಾದ ಕರ್ಕಾಟಕಕ್ಕೆ ಪ್ರವೇಶಿಸಿದಾಗ ಅತ್ಯಂತ ಶಕ್ತಿಯುತನಾಗಿರುತ್ತಾನೆ.
- ಗುರು ಬಲವಿರುವ ರಾಶಿಗಳು: ಮಿಥುನ, ಕನ್ಯಾ, ವೃಶ್ಚಿಕ, ಮಕರ ಮತ್ತು ಮೀನ.
- ಫಲ: ಈ ಸಮಯದಲ್ಲಿ ಈ ರಾಶಿಯವರಿಗೆ ಭಾಗ್ಯೋದಯವಾಗಲಿದೆ. ವಿಶೇಷವಾಗಿ ವೃಶ್ಚಿಕ ಮತ್ತು ಮೀನ ರಾಶಿಯವರಿಗೆ ಹೆಚ್ಚಿನ ಲಾಭವಿರುತ್ತದೆ.
ಅವಧಿ 3: ನವೆಂಬರ್ 1 ರಿಂದ ಡಿಸೆಂಬರ್ 31, 2026ರವರೆಗೆ (ಸಿಂಹ ರಾಶಿಯಲ್ಲಿ ಗುರು)
ಗುರುವು ವರ್ಷದ ಕೊನೆಯ ಎರಡು ತಿಂಗಳು ಸಿಂಹ ರಾಶಿಯಲ್ಲಿ ಇರುತ್ತಾನೆ.
- ಗುರು ಬಲವಿರುವ ರಾಶಿಗಳು: ಕರ್ಕಾಟಕ, ತುಲಾ, ಧನು, ಕುಂಭ ಮತ್ತು ಮೇಷ.
- ಫಲ: ಸ್ಥಗಿತಗೊಂಡಿದ್ದ ಕೆಲಸಗಳು ವೇಗ ಪಡೆದುಕೊಳ್ಳುತ್ತವೆ. ಹೊಸ ಹೂಡಿಕೆಗೆ ಇದು ಸಕಾಲ.
ಶನಿ ಸಂಚಾರ 2026: ಐದು ರಾಶಿಗಳಿಗೆ ಎಚ್ಚರಿಕೆ! ಶಾಸ್ತ್ರೋಕ್ತ ಶ್ಲೋಕಗಳು ಮತ್ತು ದಿವ್ಯ ಪರಿಹಾರಗಳು
ಗುರು ಬಲ ಇಲ್ಲದವರು ಅನುಭವಿಸುವ ಸಮಸ್ಯೆಗಳು
ಗುರುವು ಅಶುಭ ಸ್ಥಾನದಲ್ಲಿದ್ದಾಗ (ಜನ್ಮ ರಾಶಿಯಲ್ಲೇ ಇದ್ದಾಗ ಅಥವಾ 4, 6, 8, 12ನೇ ಸ್ಥಾನದಲ್ಲಿದ್ದಾಗ):
- ದೈಹಿಕ ಆಲಸ್ಯ, ಸಾಲ ಬಾಧೆ ಮತ್ತು ಮಾನಸಿಕ ಅಶಾಂತಿ.
- ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುವುದು (ಕೆಲಸಗಳು ಕೊನೆ ಕ್ಷಣದಲ್ಲಿ ಕೈ ತಪ್ಪುವುದು).
- ಗೌರವಕ್ಕೆ ಧಕ್ಕೆ ಬರುವ ಸಾಧ್ಯತೆ ಅಥವಾ ಗುರು-ಹಿರಿಯರೊಂದಿಗೆ ಭಿನ್ನಾಭಿಪ್ರಾಯ.
ಗುರು ಬಲ ಇಲ್ಲದವರು ಮಾಡಿಕೊಳ್ಳಬೇಕಾದ ಪರಿಹಾರಗಳು
ಗುರುವಿನ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಮತ್ತು ಅನುಗ್ರಹ ಪಡೆಯಲು ಈ ಕೆಳಗಿನ ಪರಿಹಾರಗಳನ್ನು ಸೂಚಿಸಲಾಗಿದೆ:
- ದೇವತಾ ಆರಾಧನೆ: ಗುರುವಾರಗಳಂದು ತಪ್ಪದೇ ದಕ್ಷಿಣಾಮೂರ್ತಿ ಅಥವಾ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಿ.
- ದಾನ: ಬಡ ವಿದ್ಯಾರ್ಥಿಗಳಿಗೆ ಹಳದಿ ಬಣ್ಣದ ವಸ್ತುಗಳು, ಪುಸ್ತಕಗಳು ಅಥವಾ ಕಡಲೆಕಾಳು ದಾನ ನೀಡುವುದು ಶ್ರೇಷ್ಠ.
- ಮಂತ್ರ ಪಠಣೆ: ಪ್ರತಿದಿನ “ಓಂ ಬೃಂ ಬೃಹಸ್ಪತಯೇ ನಮಃ” ಮಂತ್ರವನ್ನು 108 ಬಾರಿ ಜಪಿಸಿ.
- ಸ್ತೋತ್ರ: ಪ್ರತಿ ಗುರುವಾರ ‘ಗುರು ಅಷ್ಟೋತ್ತರ’ ಅಥವಾ ‘ವಿಷ್ಣು ಸಹಸ್ರನಾಮ’ ಪಠಿಸುವುದು ಶುಭ.
- ರತ್ನ ಧಾರಣೆ: ಗುರುವಿನ ಅನುಗ್ರಹಕ್ಕಾಗಿ ಜ್ಯೋತಿಷಿಗಳ ಸಲಹೆಯಂತೆ ಕನಕ ಪುಷ್ಯರಾಗ (Yellow Sapphire) ಅಥವಾ ಅದರ ಉಪರತ್ನವಾದ ಸಿಟ್ರಿನ್ (Citrine) ಧರಿಸಬಹುದು.
ಲೇಖನ- ಶ್ರೀನಿವಾಸ ಮಠ





