ವೃಶ್ಚಿಕ ರಾಶಿಯಲ್ಲಿ ಜನಿಸಿದವರಿಗೆ ಪರಾಭವ ನಾಮ ಸಂವತ್ಸರದಲ್ಲಿ ಯುಗಾದಿ ವರ್ಷಫಲ ಹೇಗಿದೆ? ಶುಭ ಫಲಗಳು ಏನೇನು? ಗುರು ಬಲ ಇದೆಯಾ? ಎಚ್ಚರಿಕೆಗಳು ಯಾವ್ಯಾವು? ಇತ್ಯಾದಿ ವಿಚಾರಗಳ ಬಗ್ಗೆ ಗ್ರಹಗಳ ಗೋಚಾರದ ಆಧಾರದಲ್ಲಿ ವರ್ಷಭವಿಷ್ಯ ನೀಡಲಾಗುತ್ತಿದೆ. 2026ರ ಪರಾಭವ ನಾಮ ಸಂವತ್ಸರವು ವೃಶ್ಚಿಕ ರಾಶಿಯವರಿಗೆ ಒಂದು ಸಮಾಧಾನಕರ ಹಾಗೂ ಪ್ರಗತಿಯ ವರ್ಷ. ಈ ವರ್ಷ ಗುರುವಿನ ಬಲವು ನಿಮ್ಮನ್ನು ಯಶಸ್ಸಿನತ್ತ ಮುನ್ನಡೆಸಲಿದೆ. ನಿಮ್ಮ ರಾಶಿಯ ಭವಿಷ್ಯ ಈ ಕೆಳಗಿನಂತಿದೆ:
ವೃಶ್ಚಿಕ ರಾಶಿ ಗುಣ ಸ್ವಭಾವ
ವೃಶ್ಚಿಕ ರಾಶಿಯವರು ವಿಶಾಖ (4ನೇ ಪಾದ), ಅನೂರಾಧ ಮತ್ತು ಜ್ಯೇಷ್ಠಾ ನಕ್ಷತ್ರದಲ್ಲಿ ಜನಿಸಿದವರು. ಮಂಗಳ ಇವರ ಅಧಿಪತಿಯಾಗಿರುವುದರಿಂದ ಇವರು ಸಹಜವಾಗಿಯೇ ಧೈರ್ಯವಂತರು, ತೀಕ್ಷ್ಣ ಬುದ್ಧಿವಂತರು ಮತ್ತು ದೃಢ ಸಂಕಲ್ಪದವರು. ಒಮ್ಮೆ ಗುರಿ ನಿರ್ಧರಿಸಿದರೆ ಅದನ್ನು ಸಾಧಿಸುವವರೆಗೂ ವಿಶ್ರಮಿಸುವುದಿಲ್ಲ. ನೇರ ನಡೆ-ನುಡಿಯ ವ್ಯಕ್ತಿಗಳಾದರೂ ರಹಸ್ಯಗಳನ್ನು ಕಾಪಾಡುವಲ್ಲಿ ನಿಪುಣರು. ಶಿಸ್ತು ಮತ್ತು ನಿಷ್ಠೆಗೆ ಹೆಸರಾದ ಇವರು, ಅನ್ಯಾಯದ ವಿರುದ್ಧ ಸಿಡಿದೇಳುವ ಸ್ವಭಾವ ಹೊಂದಿರುತ್ತಾರೆ. ತಮ್ಮನ್ನು ನಂಬಿದವರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ.
ಶನಿ ಸಂಚಾರ
ಈ ಸಂವತ್ಸರದಲ್ಲಿ ಶನಿ ಗ್ರಹ ನಿಮ್ಮ ರಾಶಿಯಿಂದ ಐದನೇ ಮನೆಯಾದ ಮೀನ ರಾಶಿಯಲ್ಲಿ ಸಂಚರಿಸಲಿದೆ. ಇದನ್ನು ‘ಪಂಚಮ ಶನಿ’ ಎಂದು ಕರೆಯಲಾಗುತ್ತದೆ. ಐದನೇ ಮನೆಯ ಶನಿಯು ನಿಮ್ಮ ಪೂರ್ವ ಪುಣ್ಯದ ಫಲವಾಗಿ ಕೆಲವು ಕೆಲಸಗಳಲ್ಲಿ ವಿಳಂಬ ತರಬಹುದು. ವಿಶೇಷವಾಗಿ ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಶೇರು ಮಾರುಕಟ್ಟೆ ಅಥವಾ ಆತುರದ ಹೂಡಿಕೆಗಳಿಂದ ದೂರವಿರುವುದು ಉತ್ತಮ. ಆದರೂ ಶನಿಯು 11ನೇ ಮನೆಯನ್ನು ನೋಡುವುದರಿಂದ ಆರ್ಥಿಕ ಸ್ಥಿತಿ ಸ್ಥಿರವಾಗಿರಲಿದೆ.
ಗುರು ಸಂಚಾರ
ಗುರು ಗ್ರಹದ ಸಂಚಾರವು ಈ ವರ್ಷ ನಿಮಗೆ ದೊಡ್ಡ ರಕ್ಷಣೆಯಾಗಿ ಬರಲಿದೆ. ಜೂನ್ 1ರ ತನಕ ಗುರುವು ಎಂಟನೇ ಮನೆಯಲ್ಲಿದ್ದು (ಮಿಥುನ) ಅಲ್ಪ ಮಟ್ಟದ ಪರೀಕ್ಷೆ ಒಡ್ಡಿದರೂ ಜೂನ್ 2ರಿಂದ ಅಕ್ಟೋಬರ್ 31ರ ತನಕ ತನ್ನ ಉಚ್ಚ ರಾಶಿಯಾದ ಕರ್ಕಾಟಕದಲ್ಲಿ (ನಿಮ್ಮ ರಾಶಿಯಿಂದ 9ನೇ ಮನೆ) ಸಂಚರಿಸಲಿದ್ದಾನೆ. 9ನೇ ಮನೆಯ ಗುರುವಿನಿಂದ ನಿಮಗೆ ಪೂರ್ಣವಾಗಿ ‘ಭಾಗ್ಯೋದಯ’ ಉಂಟಾಗಲಿದೆ. ಈ ಸಮಯದಲ್ಲಿ ಸ್ಥಗಿತಗೊಂಡಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ, ಹಿರಿಯರ ಆಸ್ತಿ ಸಿಗುವ ಯೋಗವಿದೆ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ನವೆಂಬರ್ 1ರಿಂದ ಜನವರಿ 24ರ ತನಕ ಗುರುವು ಸಿಂಹ ರಾಶಿಗೆ (10ನೇ ಮನೆ) ಪ್ರವೇಶಿಸುವುದರಿಂದ ವೃತ್ತಿ ಕ್ಷೇತ್ರದಲ್ಲಿ ಬಡ್ತಿ ಮತ್ತು ಗೌರವ ಪ್ರಾಪ್ತಿಯಾಗಲಿದೆ. ಗುರುವಿನ ಈ ಶುಭ ಸಂಚಾರವು ಶನಿಯ ನಕಾರಾತ್ಮಕ ಪ್ರಭಾವವನ್ನು ತಗ್ಗಿಸಲಿದೆ.
ರಾಹು-ಕೇತು ಸಂಚಾರ
ವರ್ಷದ ಆರಂಭದಿಂದ ಡಿಸೆಂಬರ್ 5ರ ತನಕ ರಾಹುವು ಕುಂಭ ರಾಶಿಯಲ್ಲಿ (4ನೇ ಮನೆ) ಇರುವುದರಿಂದ ಆಸ್ತಿ ಅಥವಾ ವಾಹನದ ವಿಷಯದಲ್ಲಿ ಸ್ವಲ್ಪ ಗೊಂದಲ ಉಂಟಾಗಬಹುದು. ಕೇತುವು ಹತ್ತನೇ ಮನೆಯಲ್ಲಿದ್ದು ಕೆಲಸದ ಮೇಲೆ ಸ್ವಲ್ಪ ವಿರಕ್ತಿ ತರಬಹುದು. ಆದರೆ ಡಿಸೆಂಬರ್ 5ರ ನಂತರ ರಾಹು ಮಕರಕ್ಕೂ (3ನೇ ಮನೆ) ಮತ್ತು ಕೇತು ಕರ್ಕಾಟಕಕ್ಕೂ (9ನೇ ಮನೆ) ಪ್ರವೇಶಿಸುತ್ತಾರೆ. ಮೂರನೇ ಮನೆಯ ರಾಹುವು ವೃಶ್ಚಿಕ ರಾಶಿಯವರಿಗೆ ಅದ್ಭುತ ಧೈರ್ಯ ಮತ್ತು ಶತ್ರುಗಳ ಮೇಲೆ ವಿಜಯವನ್ನು ತಂದುಕೊಡಲಿದ್ದಾನೆ. ಕೇತುವಿನ ಪ್ರಭಾವದಿಂದ ತೀರ್ಥಯಾತ್ರೆಯ ಯೋಗಗಳು ಒದಗಿ ಬರಲಿವೆ.
ಪರಿಹಾರಗಳು
- ಶನಿ ಶಾಂತಿ: ಪ್ರತಿ ಶನಿವಾರ ಹನುಮಂತನಿಗೆ ಎಳ್ಳೆಣ್ಣೆ ದೀಪ ಹಚ್ಚಿ ಮತ್ತು ಹನುಮಾನ್ ಚಾಲೀಸಾ ಪಠಿಸಿ.
- ಗುರು ಸೇವೆ: ಜೂನ್ ವರೆಗೆ ಅಷ್ಟಮ ಗುರುವಿನ ಪ್ರಭಾವ ತಗ್ಗಿಸಲು ಗುರುವಾರ ದತ್ತಾತ್ರೇಯರ ಅಥವಾ ಸಾಯಿಬಾಬಾ ದರ್ಶನ ಮಾಡಿ.
- ದಾನ: ಬಡ ವಿದ್ಯಾರ್ಥಿಗಳಿಗೆ ಪುಸ್ತಕ ಅಥವಾ ವಿದ್ಯಾಭ್ಯಾಸಕ್ಕೆ ನೆರವು ನೀಡುವುದು ನಿಮ್ಮ ಭಾಗ್ಯವನ್ನು ವೃದ್ಧಿಸುತ್ತದೆ.
- ಮಂತ್ರ: ಪ್ರತಿದಿನ ‘ಓಂ ನಮೋ ನಾರಾಯಣಾಯ’ ಮಂತ್ರವನ್ನು 108 ಬಾರಿ ಜಪಿಸಿ.
ಮನೆಯಲ್ಲಿ ಸ್ಫಟಿಕ ಶಿವಲಿಂಗವಿದ್ದರೆ ಏನೆಲ್ಲಾ ಲಾಭ? ಇಲ್ಲಿದೆ ಶಾಸ್ತ್ರೋಕ್ತ ವಿವರಣೆ
ಕೊನೆಮಾತು
“ಆರ್ಥಿಕ ಹೂಡಿಕೆಯಲ್ಲಿ ಆತುರ ಬೇಡ, ಜೂನ್ ನಂತರದ ಸಮಯವು ನಿಮ್ಮ ದೀರ್ಘಕಾಲದ ಕನಸುಗಳನ್ನು ನನಸು ಮಾಡಲು ಪೂರಕವಾಗಿದೆ.”
ಲೇಖನ– ಶ್ರೀನಿವಾಸ ಮಠ





