ವಿವಾಹ ಮಾಡುವಾಗ ಹುಡುಗ- ಹುಡುಗಿಯ ಜಾತಕ ಕೂಡಿ ಬರುತ್ತದೆಯೇ ಎಂಬುದನ್ನು ಮೊದಲಿಗೆ ನೋಡುವ ಪರಿಪಾಠ ನಡೆದುಬಂದಿದೆ. ಹುಡುಗ ಮತ್ತು ಹುಡುಗಿಯ ಜನ್ಮ ನಕ್ಷತ್ರ ಮತ್ತು ಜನ್ಮ ರಾಶಿಯನ್ನು ಆಧಾರವಾಗಿಟ್ಟುಕೊಂಡು, ವಧು- ವರರ ಸಾಲಾವಳಿ ನೋಡಲಾಗುತ್ತದೆ. ಇಬ್ಬರು ವ್ಯಕ್ತಿಗಳು ಜೀವನದುದ್ದಕ್ಕೂ ಅನ್ಯೋನ್ಯವಾಗಿ ಬದುಕಬೇಕು. ಆದ್ದರಿಂದ ತುಂಬ ವಿಸ್ತೃತವಾಗಿ ಜಾತಕಗಳನ್ನು ಪರಾಮರ್ಶೆ ಮಾಡಲಾಗುತ್ತದೆ. ಆ ಪೈಕಿ ಮೊದಲಿಗೆ ಗುಣ ಮತ್ತು ಕೂಟಗಳು ಕೂಡಿ ಬರುತ್ತವೆಯೇ ಎಂಬುದನ್ನು ನೋಡಲಾಗುತ್ತದೆ. ಕೂಟಗಳು ಅಂದರೆ ದ್ವಾದಶ ಕೂಟಗಳು- ಅಂದರೆ ಹನ್ನೆರಡು ಬರುತ್ತವೆ. ಅವುಗಳ ಹೆಸರು ಹೀಗಿವೆ: ದಿನಕೂಟ, ಗಣಕೂಟ, ಮಾಹೇಂದ್ರ ಕೂಟ, ಸ್ತ್ರೀ ದೀರ್ಘ ಕೂಟ, ಯೋನಿ ಕೂಟ, ರಾಶಿ ಕೂಟ, ಗ್ರಹಮೈತ್ರ ಕೂಟ, ವಶ್ಯ ಕೂಟ, ರಜ್ಜು ಕೂಟ, ವೇಧಾ ಕೂಟ, ವರ್ಣ ಕೂಟ, ನಾಡೀ ಕೂಟ.
ಇವುಗಳನ್ನು ನೋಡುವುದಕ್ಕೆ ಶುರು ಮಾಡುವ ಮೊದಲಿಗೆ ಸ್ತ್ರೀ ಪೂರ್ವ ನಕ್ಷತ್ರ ಏನಾದರೂ ಆಗುತ್ತದೆಯೇ ಎಂದು ನೋಡಲಾಗುತ್ತದೆ. ಉದಾಹರಣೆಗೆ, ಹುಡುಗಿಯ ನಕ್ಷತ್ರ ಅಶ್ವಿನಿ ಆಗಿದ್ದು, ಹುಡುಗನದು ಭರಣಿ ನಕ್ಷತ್ರ ಆಗಿದ್ದಲ್ಲಿ ಸ್ತ್ರೀ ಪೂರ್ವ ನಕ್ಷತ್ರ ಎನ್ನಲಾಗುತ್ತದೆ. ವಿವಾಹ ಶುಭವಲ್ಲ ಎನ್ನಲಾಗುತ್ತದೆ. ಆದರೆ ರೋಹಿಣಿ, ಹಸ್ತಾ, ವಿಶಾಖಾ, ಮೂಲಾ, ಅಶ್ವಿನಿ, ಮೃಗಶಿರಾ, ಶತಭಿಷಾ, ಪೂರ್ವಾಷಾಢ, ಕೃತ್ತಿಕಾ, ಪುನರ್ವಸು ಈ ನಕ್ಷತ್ರಗಳ ಪೈಕಿ ಯಾವುದಾದರೊಂದು ಹುಡುಗನ ನಕ್ಷತ್ರ ಆಗಿದ್ದಲ್ಲಿ ಹುಡುಗಿಯದು ಅದರ ಮೊದಲಿನ ನಕ್ಷತ್ರವಾದರೂ (ಹುಡುಗಿಯದು ಕೃತ್ತಿಕಾ, ಚಿತ್ತಾ, ಸ್ವಾತಿ, ರೋಹಿಣಿ, ಧನಿಷ್ಠಾ, ಮೂಲಾ, ಭರಣಿ, ಆರಿದ್ರಾ ನಕ್ಷತ್ರವಾಗಿದ್ದಾಗ) ದೋಷ ಇಲ್ಲ ಎಂಬ ಉಲ್ಲೇಖ ಇದೆ.
ಇದನ್ನು ಹೊರತು ಪಡಿಸಿದಂತೆ ಒಂದೊಂದು ಸಮುದಾಯದವರು ಒಂದೊಂದು ಕೂಟಕ್ಕೆ ಪ್ರಾಶಸ್ತ್ಯ ನೀಡುತ್ತಾರೆ. ಮತ್ತು ಆ ಕೂಟ ಕೂಡಿಬಂದರೆ ಅಥವಾ ಹೊಂದಾಣಿಕೆ ಇದ್ದರೆ ಮಾತ್ರ ಆ ಸಂಬಂಧದಲ್ಲಿ ಮುಂದುವರಿಯುತ್ತಾರೆ.
ಷಷ್ಟಾಷ್ಟಕ ನೋಡಲಾಗುತ್ತದೆ. ಹುಡುಗನ ರಾಶಿಯಿಂದ ಎಣಿಸುತ್ತಾ ಹುಡುಗಿಯ ರಾಶಿ ಆರು ಅಥವಾ ಎಂಟನೆಯದಾದಲ್ಲಿ, ಅದೇ ರೀತಿ ಹುಡುಗಿಯ ರಾಶಿಯಿಂದ ಎಣಿಸುತ್ತಾ ಹುಡುಗನ ರಾಶಿ ಆರು ಅಥವಾ ಎಂಟನೆಯದಾದರೆ ಇದನ್ನು ಷಷ್ಟಾಷ್ಟಕ ಎನ್ನಲಾಗುತ್ತದೆ. ಹೀಗಿದ್ದಾಗ ಪರಸ್ಪರ ಹೊಂದಾಣಿಕೆ ಕಡಿಮೆ ಇರುತ್ತದೆ ಎಂಬ ಅಭಿಪ್ರಾಯ ಇದೆ. ಉದಾಹರಣೆಗೆ ಮೇಷ ರಾಶಿಗೆ ಕನ್ಯಾ ರಾಶಿಯು ಆರನೇ ರಾಶಿಯಾದರೆ, ಕನ್ಯಾದಿಂದ ಮೇಷ ರಾಶಿ ಎಂಟನೆಯದಾಗುತ್ತದೆ. ಅದೇ ರೀತಿ ಮೇಷದಿಂದ ವೃಶ್ಚಿಕ ರಾಶಿಯು ಎಂಟನೆಯದಾದರೆ, ವೃಶ್ಚಿಕದಿಂದ ಮೇಷ ಆರನೆಯದಾಗುತ್ತದೆ. ಹೀಗೆ ಹುಡುಗಿಯ ರಾಶಿಯಿಂದ ಹುಡುಗನದು ಮತ್ತು ಹುಡುಗನ ರಾಶಿಯಿಂದ ಹುಡುಗಿಯದು ಎಷ್ಟನೆಯ ರಾಶಿ ಎಂಬುದನ್ನು ನೋಡಬೇಕು.
ಹೀಗೆ ಕೂಟ ಮತ್ತು ಗುಣಗಳ ಆಧಾರದಲ್ಲಿ ಪರಸ್ಪರ ಆಗಿಬರುವಂಥ ಮತ್ತು ಪರಸ್ಪರ ಆಗಿಬರುವುದಿಲ್ಲ ಎಂಬಂಥ ನಕ್ಷತ್ರ, ರಾಶಿಗಳು ಯಾವುವು ಎಂಬುದನ್ನು ಪಂಚಾಂಗಗಳಲ್ಲಿ, ವಿವಿಧ ಗ್ರಂಥಗಳಲ್ಲಿ ಬಹಳ ವಿವರವಾಗಿ ವಿವರಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪಟ್ಟಿಗಳು ಸಹ ಸಿಗುತ್ತವೆ. ಅಂದರೆ ಗುಣ ಮತ್ತು ಕೂಟವನ್ನು ಪರಸ್ಪರ ಎಲ್ಲ ನಕ್ಷತ್ರಗಳಿಗೂ ಲೆಕ್ಕ ಹಾಕಿ, ಗುಣ- ಕೂಟಗಳ ಪಟ್ಟಿಯನ್ನು ನೀಡಲಾಗಿರುತ್ತದೆ.
ಇವುಗಳನ್ನೆಲ್ಲ ನೋಡಿದ ಮೇಲೆ ಪರಸ್ಪರ ಜಾತಕಗಳಲ್ಲಿ ಕುಜ ದೋಷ ಯಾವ ಪ್ರಮಾಣದಲ್ಲಿದೆ ಎಂಬುದನ್ನು ನೋಡಲಾಗುತ್ತದೆ.
ಕುಜ ದೋಷ ವಿಚಾರ
ಕುಜ ದೋಷ ಚಿಂತನೆಯನ್ನು ಲಗ್ನದಿಂದ, ಶುಕ್ರನಿಂದ ಮತ್ತು ಚಂದ್ರನಿಂದ ಮಾಡಲಾಗುತ್ತದೆ. ಜನ್ಮ ಜಾತಕದಲ್ಲಿ ಲಗ್ನದಿಂದ ಲೆಕ್ಕ ಹಾಕುತ್ತಾ ಮತ್ತು ಶುಕ್ರ ಹಾಗೂ ಚಂದ್ರನಿಂದ ಲೆಕ್ಕ ಹಾಕುತ್ತಾ ಕುಜ ಗ್ರಹ ಎಲ್ಲಿದೆ ಎಂಬುದರ ಆಧಾರದಲ್ಲಿ ಇದರ ವಿಶ್ಲೇಷಣೆ ಮಾಡಲಾಗುತ್ತದೆ. ಚಂದ್ರ ಮತ್ತು ಶುಕ್ರನಿಂದ ಲೆಕ್ಕ ಹಾಕುವಾಗ ಬರುವ ಕುಜ ದೋಷವು ಸಮಾನ ಬಲವುಳ್ಳದ್ದು. ಇನ್ನು ಲಗ್ನದಿಂದ ಬರುವಂಥ ಕುಜ ದೋಷವು ಉಳಿದ ಎರಡಕ್ಕಿಂತ ಎರಡರಷ್ಟು ಬಲ ಇರುವಂಥದ್ದು.
ಲಗ್ನ, ಚಂದ್ರ ಮತ್ತು ಶುಕ್ರರಿಂದ 1-2-4-5-7-8-12 ಈ ಸ್ಥಾನಗಳಲ್ಲಿ ಕುಜ ಇದ್ದರೆ ಕುಜ ದೋಷ ಇದೆ ಎಂದರ್ಥ. ಪುರುಷರಿಗೆ 2-4-8ರಲ್ಲಿ ಕುಜನಿದ್ದಲ್ಲಿ ಮತ್ತು ಮಹಿಳೆಯರಿಗೆ 4-8-12ರಲ್ಲಿ ಕುಜನಿದ್ದರೆ ಹೆಚ್ಚು ದೋಷ ಎನಿಸಿಕೊಳ್ಳುತ್ತದೆ.
ಈ ಕುಜ ದೋಷವು ಸ್ತ್ರೀಗಿಂತ ಪುರುಷರಿಗೆ ಸ್ವಲ್ಪ ಹೆಚ್ಚಾಗಿದ್ದರೂ ಸಮಸ್ಯೆಯಿಲ್ಲ. ಆದರೆ ಸ್ತ್ರೀ ಜಾತಕಕ್ಕೆ ಹೆಚ್ಚಾಗಿರಬಾರದು.
ಇನ್ನು ಕುಜ ದೋಷಕ್ಕೆ ಪರಿಹಾರ ಎಂಬಂತೆ ಜನ್ಮ ಜಾತಕದಲ್ಲಿನ ಇತರ ಗ್ರಹ ಸ್ಥಿತಿಗಳೇ ಕೆಲವೊಮ್ಮ ಇರುತ್ತವೆ. ಉದಾಹರಣೆಗೆ ಲಗ್ನದಿಂದ ಶನಿಯು ಒಂದು, ನಾಲ್ಕು, ಏಳು, ಎಂಟು, ಹನ್ನೆರಡರಲ್ಲಿ ಇದ್ದಲ್ಲಿ ಕುಜ ದೋಷ ಇಲ್ಲ ಎಂಬ ವಚನ ಇದೆ. ಕುಜ ಗ್ರಹವು ಸ್ವಕೇತ್ರ (ಮೇಷ- ವೃಶ್ಚಿಕ), ಉಚ್ಚ ಕ್ಷೇತ್ರ (ಮಕರ), ಮಿತ್ರ ಕ್ಷೇತ್ರಗಳಲ್ಲಿ ಇದ್ದಲ್ಲಿ, ಶುಭ ಗ್ರಹಗಳ ಸಂಬಂಧ (ಚಂದ್ರ, ಬುಧ, ಗುರು), ಶುಭಗ್ರಹ ದೃಷ್ಟಿ (ಚಂದ್ರ, ಬುಧ, ಗುರು) ಮಿತ್ರಾಂಶದ ಸ್ಥಿತಿ ಇದ್ದಾಗಲೂ ದೋಷಕಾರಿ ಆಗುವುದಿಲ್ಲ ಎಂಬ ಉಲ್ಲೇಖವೂ ಇದೆ. ಇನ್ನು ಕರ್ಕಾಟಕ, ಸಿಂಹ ಲಗ್ನದವರಿಗೆ ಕುಜ ದೋಷಕಾರಿ ಅಲ್ಲ ಎಂಬುದಿದೆ. ಹೀಗೆ ಈ ಕುಜ ದೋಷ ಪರಿಹಾರ ಆಗುವಂತೆ ಗ್ರಹ ಸ್ಥಿತಿಗಳು, ಲಗ್ನವೇ ಇದೆ.
ಕುಜ ದೋಷವನ್ನು ನೋಡುವಾಗ ಕಾಲಬಲ, ದಿಗ್ಬಲ, ನೈಸರ್ಗಿಕ ಬಲ, ದೃಷ್ಟಿ ಬಲ, ಸ್ಥಾನ ಬಲಗಳನ್ನು ನೋಡಬೇಕು. ಇಲ್ಲಿ ಪ್ರಸ್ತಾವ ಮಾಡಿರುವ ವಿಚಾರಗಳು ಪ್ರಾಥಮಿಕವಾದ ಮಾಹಿತಿ ಮಾತ್ರ. ವಧು-ವರರ ಸಾಲಾವಳಿ ನೋಡಬೇಕು ಎನ್ನುವಾಗ ಜ್ಯೋತಿಷಿಗಳ ಬಳಿ ಪರಾಮರ್ಶೆ ಮಾಡುವುದು ಸೂಕ್ತ. ವಧು- ವರರ ದ್ವಿತೀಯ, ಪಂಚಮ, ಸಪ್ತಮ ಮತ್ತು ನವಮ ಭಾವಗಳ ಚಿಂತನೆಯನ್ನು ಸಹ ಮಾಡಬೇಕಾಗುತ್ತದೆ. ನವಾಂಶ ಕುಂಡಲಿಯನ್ನು ನೋಡಲಾಗುತ್ತದೆ. ವಿವಾಹಕ್ಕೆ ಉಪಯುಕ್ತವಾದ ವಿಚಾರಗಳು ಎಂಬುದು ಬಹಳ ದೀರ್ಘವಾಗಿರುವಂಥದ್ದು. ಅನ್ಯೋನ್ಯತೆ, ಸಂತಾನ, ದೀರ್ಘಾಯುಷ್ಯ ಇತ್ಯಾದಿಗಳ ಚಿಂತನೆಯನ್ನು ಮಾಡಿಯೇ ಮುಂದುವರಿಯುವುದು ಸೂಕ್ತ.
ಕೆಲವು ಜಾತಕರಿಗೆ ವಿವಾಹ ಪೂರ್ವದಲ್ಲಿ ಶಾಂತಿ- ಹೋಮಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಹಾಗೆ ಮಾಡಿಸಿಕೊಂಡು ಮುಂದುವರಿಯುವುದರಿಂದ ಪ್ರಯತ್ನಗಳಲ್ಲಿ ಅಡೆ- ತಡೆಗಳಾಗುವುದು, ಸಮಸ್ಯೆಗಳು ಎದುರಾಗುವುದರಿಂದ ರಕ್ಷಣೆ ಇರುತ್ತದೆ.
ಇನ್ನು ಕೊನೆಯದಾಗಿ, ಪರಸ್ಪರ ಹುಡುಗ- ಹುಡುಗಿ ಪ್ರೀತಿಸುತ್ತಿದ್ದಾರೆ ಅಂತಾದಾಗ ಜಾತಕ ವಿಶ್ಲೇಷಣೆ ಮಾಡಬೇಕಾ, ಆಗ ಏನು ಮಾಡಬೇಕು ಎಂಬ ಬಗ್ಗೆ ಕೂಡ ಜ್ಯೋತಿಷ್ಯದಲ್ಲಿ ಮಾರ್ಗದರ್ಶನ ಇದೆ.
(ಲೇಖಕರು- ವಿದ್ವಾನ್ ಮಂಜುನಾಥ್ ಭಾರದ್ವಾಜ್ (ಜ್ಯೋತಿಷಿಗಳು- ಪುರೋಹಿತರು), ಜಾತಕಗಳನ್ನು ಮಾಡಿಸಲು, ಪೌರೋಹಿತ್ಯಕ್ಕೆ ಹಾಗೂ ಜ್ಯೋತಿಷಕ್ಕೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಭೇಟಿ ಮಾಡುವುದಕ್ಕೆ ಮೊಬೈಲ್ ಫೋನ್ ಸಂಖ್ಯೆ- 8050789904 ಸಂಪರ್ಕಿಸಿ.)