ಭಾರತದ ದೇವಸ್ಥಾನಗಳು ತಮ್ಮ ವಾಸ್ತುಶಿಲ್ಪ ಮತ್ತು ಇತಿಹಾಸಕ್ಕೆ ಮಾತ್ರವಲ್ಲದೆ, ವಿಜ್ಞಾನಕ್ಕೂ ನಿಲುಕದ ಕೆಲವು ಅದ್ಭುತ ಪವಾಡಗಳಿಗೆ ಹೆಸರುವಾಸಿಯಾಗಿವೆ. ಅಂತಹವುಗಳಲ್ಲಿ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿರುವ ತಿರುವರಪ್ಪು ಶ್ರೀ ಕೃಷ್ಣ ಸ್ವಾಮಿ ದೇವಸ್ಥಾನ ಪ್ರಮುಖವಾದುದು. ಇಲ್ಲಿನ ಕೃಷ್ಣನ ವಿಗ್ರಹಕ್ಕೆ ಹಸಿವಾದರೆ ಸಾಕು, ಅದು ತೆಳ್ಳಗಾಗತೊಡಗುತ್ತದೆ ಎಂಬ ನಂಬಿಕೆ ಶತಮಾನಗಳಿಂದ ನಡೆದುಬಂದಿದೆ. ಈ ವಿಗ್ರಹವು ಚತುರ್ಭುಜಗಳನ್ನು ಹೊಂದಿದೆ. ಕೃಷ್ಣನ ಬಲಗೈಯಲ್ಲಿ ಹಸಿವನ್ನು ನೀಗಿಸುವ ಆಹಾರದ ತಟ್ಟೆ ಇದೆ. ಉಳಿದ ಕೈಗಳಲ್ಲಿ ಶಂಖ ಮತ್ತು ಚಕ್ರಗಳಿವೆ.
1. ಹಸಿವಿನಿಂದ ಕೃಶವಾಗುವ ವಿಗ್ರಹದ ರಹಸ್ಯ
ಈ ದೇವಸ್ಥಾನದ ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ ಇಲ್ಲಿನ ಶ್ರೀಕೃಷ್ಣನ ವಿಗ್ರಹ. ಕೃಷ್ಣನು ಕಂಸನನ್ನು ಕೊಂದ ನಂತರ ಬಹಳ ಹಸಿವಿನಿಂದಿದ್ದ ಎಂಬ ಪೌರಾಣಿಕ ಹಿನ್ನೆಲೆ ಇಲ್ಲಿದೆ. ಒಂದು ವೇಳೆ ದೇವರಿಗೆ ಸರಿಯಾದ ಸಮಯಕ್ಕೆ ನೈವೇದ್ಯ (ಆಹಾರ) ನೀಡದಿದ್ದರೆ, ವಿಗ್ರಹವು ಹಸಿವಿನಿಂದ ಕೃಶವಾಗುತ್ತದೆ (ತೆಳ್ಳಗಾಗುತ್ತದೆ) ಎನ್ನಲಾಗುತ್ತದೆ.
ಒಮ್ಮೆ ಸೂರ್ಯಗ್ರಹಣದ ಸಮಯದಲ್ಲಿ ದೇವಸ್ಥಾನವನ್ನು ದೀರ್ಘಕಾಲ ಮುಚ್ಚಲಾಗಿತ್ತು. ಗ್ರಹಣ ಮುಗಿದ ನಂತರ ಪೂಜಾರಿಗಳು ಬಾಗಿಲು ತೆರೆದಾಗ, ಕೃಷ್ಣನ ವಿಗ್ರಹವು ತುಂಬಾ ಸುಸ್ತಾದಂತೆ ಮತ್ತು ತೆಳ್ಳಗಾಗಿರುವುದು ಕಂಡುಬಂದಿತು. ಇದನ್ನು ಕಂಡ ಆದಿ ಶಂಕರಾಚಾರ್ಯರು, ಈ ದೇವಸ್ಥಾನದಲ್ಲಿ ಎಂದಿಗೂ ನೈವೇದ್ಯ ನಿಲ್ಲಿಸಬಾರದು ಎಂದು ಸೂಚಿಸಿದರು. ಅಂದಿನಿಂದ ಇಂದಿನವರೆಗೆ ಗ್ರಹಣವಿದ್ದರೂ ಈ ದೇವಸ್ಥಾನದ ಬಾಗಿಲು ಮುಚ್ಚುವುದಿಲ್ಲ.
2. ರಾತ್ರಿ 2 ಗಂಟೆಗೆ ಬಾಗಿಲು ತೆರೆಯುವ ಸಂಪ್ರದಾಯ
ಸಾಮಾನ್ಯವಾಗಿ ಎಲ್ಲ ದೇವಸ್ಥಾನಗಳು ಬೆಳಗಿನ ಜಾವ 4 ಅಥವಾ 5 ಗಂಟೆಗೆ ತೆರೆದರೆ, ಈ ದೇವಸ್ಥಾನವು ರಾತ್ರಿ 2 ಗಂಟೆಗೆ ತೆರೆಯುತ್ತದೆ. ಭಗವಂತನಿಗೆ ಹಸಿವಾಗಬಾರದು ಎಂಬ ಕಾರಣಕ್ಕೆ ಮುಂಜಾನೆ 3 ಗಂಟೆಗೆ ಮೊದಲ ನೈವೇದ್ಯವನ್ನು ಅರ್ಪಿಸಲಾಗುತ್ತದೆ. ನೈವೇದ್ಯ ಅರ್ಪಿಸಿದ ನಂತರವೇ ದೇವರಿಗೆ ಅಭಿಷೇಕ ಮತ್ತು ಇತರ ಪೂಜೆಗಳನ್ನು ಮಾಡಲಾಗುತ್ತದೆ.
3. ಪೂಜಾರಿಯ ಕೈಯಲ್ಲಿ ಸುತ್ತಿಗೆ
ಈ ದೇವಸ್ಥಾನದ ಪೂಜಾರಿಗಳು ಒಂದು ವಿಚಿತ್ರ ಸಂಪ್ರದಾಯವನ್ನು ಪಾಲಿಸುತ್ತಾರೆ. ಅವರು ದೇವಸ್ಥಾನದ ಬೀಗದ ಕೈಗಳ ಜೊತೆಗೆ ಒಂದು ಸುತ್ತಿಗೆಯನ್ನುಇಟ್ಟುಕೊಂಡಿರುತ್ತಾರೆ. ಒಂದು ವೇಳೆ ಬೀಗದ ಕೈಯಿಂದ ಬಾಗಿಲು ತೆರೆಯಲು ವಿಳಂಬವಾದರೆ, ಸಮಯ ವ್ಯರ್ಥ ಮಾಡದೆ ಸುತ್ತಿಗೆಯಿಂದ ಬೀಗ ಒಡೆದಾದರೂ ಸರಿ, ದೇವರಿಗೆ ಸರಿಯಾದ ಸಮಯಕ್ಕೆ ಆಹಾರ ನೀಡಬೇಕು ಎಂಬುದು ಇದರ ಹಿಂದಿನ ಉದ್ದೇಶ. ದೇವರಿಗೆ ಹಸಿವು ತಡೆಯಲು ಸಾಧ್ಯವಿಲ್ಲ ಎಂಬ ಅಚಲ ನಂಬಿಕೆ ಭಕ್ತರಲ್ಲಿದೆ.
4. ಪ್ರಸಾದದ ಮಹತ್ವ ಮತ್ತು ದೋಷ ನಿವಾರಣೆ
ದೇವಸ್ಥಾನಕ್ಕೆ ಬರುವ ಯಾವೊಬ್ಬ ಭಕ್ತನೂ ಪ್ರಸಾದ ಪಡೆಯದೆ ಹಿಂತಿರುಗಬಾರದು ಎಂಬ ಕಟ್ಟುನಿಟ್ಟಿನ ನಿಯಮವಿದೆ. ಇಲ್ಲಿನ ಪ್ರಸಾದವನ್ನು ಸೇವಿಸುವುದರಿಂದ ಕೆಳಗಿನ ದೋಷಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ:
- ನವಗ್ರಹ ದೋಷ ಮತ್ತು ಗ್ರಹಣ ದೋಷ.
- ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆಗಳು.
- ವಿವಾಹದಲ್ಲಿ ಉಂಟಾಗುವ ಅಡೆತಡೆಗಳು.
- ಸರ್ಪ ದೋಷ ಮತ್ತು ಬ್ರಹ್ಮಹತ್ಯಾ ದೋಷಗಳು.
5. ದೇವಸ್ಥಾನದ ವಿನ್ಯಾಸ ಮತ್ತು ಸುತ್ತಮುತ್ತಲಿನ ಪರಿಸರ
ಈ ಸುಂದರ ದೇವಸ್ಥಾನವು ಮೀನಾಚಿಲ್ ನದಿಯ ದಂಡೆಯಲ್ಲಿದೆ. ಗರ್ಭಗುಡಿಯಲ್ಲಿ ಕೃಷ್ಣನ ವಿಗ್ರಹವಿದ್ದರೆ, ಅದರ ಸುತ್ತಲೂ ಇತರ ದೇವತೆಗಳ ಗುಡಿಗಳಿವೆ:
- ಪೂರ್ವದಲ್ಲಿ: ಕೋಚಂಬಲಂ ದೇವಸ್ಥಾನ.
- ಉತ್ತರದಲ್ಲಿ: ಶಿವ ಮತ್ತು ನರಸಿಂಹ ಸ್ವಾಮಿಯ ವಿಗ್ರಹಗಳು.
- ಪಶ್ಚಿಮದಲ್ಲಿ: ಗಣಪತಿ, ಸುಬ್ರಹ್ಮಣ್ಯ ಮತ್ತು ಶಾಸ್ತಾ ದೇವಸ್ಥಾನಗಳು.
- ದಕ್ಷಿಣದಲ್ಲಿ: ಯಕ್ಷ ಮತ್ತು ಗಂಧರ್ವರ ಸನ್ನಿಧಿಗಳು.
6. ತಲುಪುವುದು ಹೇಗೆ?
- ರಸ್ತೆ: ತಿರುವರಪ್ಪು ಕೊಟ್ಟಾಯಂ ಜಿಲ್ಲೆಯಲ್ಲಿದ್ದು, ಬಸ್ ಸೌಲಭ್ಯ ಚೆನ್ನಾಗಿದೆ. ಬಸ್ ನಿಲ್ದಾಣದಿಂದ ಕೇವಲ 210 ಮೀಟರ್ ದೂರದಲ್ಲಿದೆ.
- ರೈಲು: ಕೊಟ್ಟಾಯಂ ರೈಲ್ವೆ ನಿಲ್ದಾಣದಿಂದ ಸುಮಾರು 8.2 ಕಿ.ಮೀ ದೂರದಲ್ಲಿದೆ.
- ವಿಮಾನ: ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 90 ಕಿ.ಮೀ ದೂರದಲ್ಲಿದೆ.
7. ವಿಗ್ರಹವು ನೀರಿನಲ್ಲಿ ದೊರೆತ ಪೌರಾಣಿಕ ಹಿನ್ನೆಲೆ
ಈ ದೇವಾಲಯದ ವಿಗ್ರಹವು ನೀರಿನಲ್ಲಿ ಪತ್ತೆಯಾದ ಬಗ್ಗೆ ಒಂದು ರೋಚಕ ಇತಿಹಾಸವಿದೆ:
- ಪಾಂಡವರ ಆರಾಧನೆ: ವನವಾಸದ ಸಮಯದಲ್ಲಿ ಪಾಂಡವರು ಈ ಚತುರ್ಭುಜ ಕೃಷ್ಣನ ವಿಗ್ರಹವನ್ನು ಪೂಜಿಸುತ್ತಿದ್ದರು ಎನ್ನಲಾಗುತ್ತದೆ. ವನವಾಸ ಮುಗಿಸಿ ಅವರು ತೆರಳುವಾಗ, ಈ ವಿಗ್ರಹವನ್ನು ಸಮುದ್ರದಲ್ಲಿ (ಅಥವಾ ಹತ್ತಿರದ ಕೆರೆಯಲ್ಲಿ) ವಿಸರ್ಜಿಸಿದರು.
- ವಿಲ್ವಮಂಗಲಂ ಸ್ವಾಮಿಗಳ ಪತ್ತೆ: ಕಾಲಾಂತರದಲ್ಲಿ ಪ್ರಖ್ಯಾತ ಸಂತ ವಿಲ್ವಮಂಗಲಂ ಸ್ವಾಮಿಗಳು ದೋಣಿಯಲ್ಲಿ ಸಂಚರಿಸುತ್ತಿದ್ದಾಗ, ಅವರ ದೋಣಿಯ ಹುಟ್ಟು (Oar) ನೀರಿನ ಅಡಿಯಲ್ಲಿದ್ದ ಯಾವುದೋ ವಸ್ತುವಿಗೆ ಬಲವಾಗಿ ತಗುಲಿತು. ಅವರು ಅದನ್ನು ಪರೀಕ್ಷಿಸಿದಾಗ ಶ್ರೀಕೃಷ್ಣನ ಸುಂದರ ವಿಗ್ರಹವು ದೊರೆಯಿತು.
- ‘ವಾರ್ಪು‘ ಮತ್ತು ಹೆಸರಿನ ಉಗಮ: ದೋಣಿಯಿಂದ ಇಳಿದ ಸ್ವಾಮಿಗಳು ವಿಗ್ರಹವನ್ನು ಪ್ರತಿಷ್ಠಾಪಿಸಲು ಸೂಕ್ತ ಸ್ಥಳವನ್ನು ಹುಡುಕುತ್ತಿದ್ದರು. ಅಷ್ಟರಲ್ಲಿ ವಿಪರೀತ ಮಳೆ ಬಂದಿದ್ದರಿಂದ, ಹತ್ತಿರದ ಕುನ್ನಂಕಾರಿ ಮೆನನ್ ಎಂಬ ಸ್ಥಳೀಯ ಪ್ರಮುಖರ ಮನೆಯಲ್ಲಿದ್ದ ದೊಡ್ಡದಾದ ಕಂಚಿನ ಪಾತ್ರೆಯಲ್ಲಿ (ವಾರ್ಪು) ವಿಗ್ರಹವನ್ನು ತಾತ್ಕಾಲಿಕವಾಗಿ ಇರಿಸಲಾಯಿತು. ಆ ‘ವಾರ್ಪು’ ಎಂಬ ಪಾತ್ರೆಯಲ್ಲಿ ಕೃಷ್ಣನನ್ನು ಇರಿಸಿದ ಕಾರಣದಿಂದಲೇ ಈ ಸ್ಥಳಕ್ಕೆ ‘ತಿರುವರುಪ್ಪು‘ ಎಂಬ ಹೆಸರು ಬಂದಿತು.
ಲೇಖನ- ಶ್ರೀನಿವಾಸ ಮಠ





