ತಮಿಳುನಾಡಿನ ಮೈಲಾಡುದುರೈ ಜಿಲ್ಲೆಯಲ್ಲಿರುವ ತಿರುಕಡೈಯೂರ್ ಅಮೃತಘಟೇಶ್ವರರ್-ಅಭಿರಾಮಿ ದೇವಸ್ಥಾನವು ಬಹಳ ವಿಶಿಷ್ಟವಾದ ಸ್ಥಳ. ಇದು ಕೇವಲ ಒಂದು ಧಾರ್ಮಿಕ ಕೇಂದ್ರವಲ್ಲ, ‘ಆಯಸ್ಸು’ ಮತ್ತು ‘ಅಮರತ್ವ’ದ ಸಂಕೇತವಾಗಿದೆ. ಈ ದೇವಸ್ಥಾನದ ಇತಿಹಾಸ, ಮಹತ್ವ ಮತ್ತು ವಿಶೇಷತೆಗಳ ಬಗ್ಗೆ ಲೇಖನ ಇಲ್ಲಿದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಅರವತ್ತು, ಎಪ್ಪತ್ತು, ಎಂಬತ್ತು ಹಾಗೂ ತೊಂಬತ್ತನೇ ವರ್ಷವನ್ನು ತಲುಪುವುದು ವಿಶಿಷ್ಟ ಘಟ್ಟ. ಆ ಕಾರಣದಿಂದ ಷಷ್ಠ್ಯಬ್ದಪೂರ್ತಿ, ಭೀಮರಥ ಶಾಂತಿ ಹೀಗೆ ಪೂಜೆ- ಪುನಸ್ಕಾರಗಳನ್ನು ಮಾಡಿಸಲಾಗುತ್ತದೆ. ಅದರ ಉದ್ದೇಶ ಇಷ್ಟೇ, ವಯೋ ಸಹಜವಾಗಿ ಎದುರಾಗುವ ಆರೋಗ್ಯ ಸಮಸ್ಯೆಗಳು ದಾಟಿ, ಜೀವನ ಅರಳಬೇಕು. ಆಯುಷ್ಯ ವೃದ್ಧಿ ಆಗಬೇಕು. ಕುಟುಂಬದ ವಿಸ್ತರಣೆಯನ್ನು ಕಂಡು ಹಿಗ್ಗಬೇಕು ಹಾಗೂ ಬೆಳವಣಿಗೆಯನ್ನು ಕಂಡು ಅಭಿಮಾನಿಸುವುದಕ್ಕೆ ಅವಕಾಶ ಆಗಬೇಕು. ಆ ಕಾರಣದಿಂದಲೇ ಅರವತ್ತನೇ ವಯಸ್ಸಿನಿಂದ ಶುರುವಾಗಿ, ಪ್ರತಿ ಹತ್ತು ವರ್ಷಕ್ಕೆ ಶಾಂತಿ ಹೋಮಗಳು- ದೇವರ ಆರಾಧನೆಯನ್ನು ಮಾಡಿ ಪ್ರಾರ್ಥಿಸಲಾಗುತ್ತದೆ. ಅಂಥದ್ದೊಂದು ಶಾಂತಿ ಮಾಡಿಸುವುದಕ್ಕೆ ವಿಶಿಷ್ಟವಾದ ಹಾಗೂ ಶಕ್ತಿಯುತವಾದ ಕ್ಷೇತ್ರ ತಿರುಕಡೈಯೂರ್ ಅಮೃತಘಟೇಶ್ವರರ್-ಅಭಿರಾಮಿ ದೇವಸ್ಥಾನ.
ತಮಿಳುನಾಡಿನಲ್ಲಿ ಇರುವ ಈ ದೇವಸ್ಥಾನಕ್ಕೆ ತಮ್ಮ ಮನೆಯ ಹಿರಿಯರೊಂದಿಗೆ ಕುಟುಂಬ ಸಮೇತ ತೆರಳಿ, ಶಾಂತಿ ಮಾಡಿಸುವ ಪರಿಪಾಠ ಇದೆ. ಪುರಾಣಗಳಲ್ಲಿ ಉಲ್ಲೇಖವಾದಂತೆ ಮೃತ್ಯುಂಜಯನಾದ ಪರಶಿವನು ಕಾಲನನ್ನೇ (ಯಮನನ್ನು) ಸಂಹಾರ ಮಾಡಿದ ಕ್ಷೇತ್ರವಿದು. ಅಂತಹ ಅಪರೂಪದ “ಅಷ್ಟ ವೀರಸ್ಥಾನ”ಗಳಲ್ಲಿ ಒಂದಾದ ತಿರುಕಡೈಯೂರ್, ಆಯಸ್ಸು ಮತ್ತು ಶಾಂತಿ ಹೋಮಗಳಿಗೆ ವಿಶ್ವವಿಖ್ಯಾತವಾಗಿದೆ.
ಕ್ಷೇತ್ರದ ಪೌರಾಣಿಕ ಹಿನ್ನೆಲೆ (ಸ್ಥಳ ಪುರಾಣ):
ತಿರುಕಡೈಯೂರ್ ಎಂಬ ಹೆಸರಿನ ಹಿಂದೆ ಜನರ ಮಧ್ಯೆ ಪ್ರಚಲಿತದಲ್ಲಿ ಇರುವ ಒಂದು ರೋಚಕ ಕಥೆಯಿದೆ. ದೇವತೆಗಳು ಮತ್ತು ಅಸುರರು ಕ್ಷೀರಸಾಗರವನ್ನು ಮಥಿಸಿದಾಗ ‘ಅಮೃತ’ ಲಭಿಸುತ್ತದೆ. ಆ ಅಮೃತವನ್ನು ದೇವತೆಗಳು ಹಂಚಿಕೊಳ್ಳುವ ಮೊದಲಿಗೆ ಪ್ರಥಮ ಪೂಜಿತನಾದ ಗಣೇಶನನ್ನು ಸ್ಮರಿಸಲು ಮರೆಯುತ್ತಾರೆ. ಇದರಿಂದ ಕೋಪಗೊಂಡ ಗಣೇಶನು ಅಮೃತದ ಕಲಶವನ್ನು ಈ ಕ್ಷೇತ್ರದಲ್ಲಿ ಬಚ್ಚಿಡುತ್ತಾನೆ. ಆ ನಂತರ ದೇವತೆಗಳು ಪ್ರಾರ್ಥಿಸಿದಾಗ, ಆ ಕಲಶವು ಶಿವಲಿಂಗವಾಗಿ ಮಾರ್ಪಡುತ್ತದೆ. ಹೀಗಾಗಿ ಇಲ್ಲಿನ ಶಿವನನ್ನು ‘ಅಮೃತಘಟೇಶ್ವರರ್’ (ಅಮೃತದ ಕೊಡದಿಂದ ಉದ್ಭವಿಸಿದವನು) ಎಂದು ಕರೆಯಲಾಗುತ್ತದೆ.
ಮತ್ತೊಂದು ಪ್ರಮುಖ ಕಥೆ ಮಾರ್ಕಂಡೇಯನದ್ದು. ಅಲ್ಪಾಯುಷಿಯಾದ ಮಾರ್ಕಂಡೇಯನಿಗೆ ಹದಿನಾರನೇ ವರ್ಷದಲ್ಲಿ ಯಮಧರ್ಮರಾಜನು ಪ್ರಾಣ ಹರಣ ಮಾಡಲು ಬಂದಾಗ, ಈ ಕ್ಷೇತ್ರದ ಶಿವಲಿಂಗವನ್ನು ಗಟ್ಟಿಯಾಗಿ ಅಪ್ಪಿಕೊಳ್ಳುತ್ತಾನೆ. ಯಮನು ಎಸೆದ ಪಾಶವು ಶಿವಲಿಂಗವನ್ನು ಸುತ್ತಿಕೊಳ್ಳುತ್ತದೆ. ಇದರಿಂದ ಕ್ರುದ್ಧನಾದ ಶಿವನು ಲಿಂಗದಿಂದ ಉದ್ಭವಿಸಿ, ಯಮನನ್ನು ಸಂಹರಿಸುತ್ತಾನೆ (ಕಾಲಸಂಹಾರ ಮೂರ್ತಿ). ಆ ನಂತರ ಮಾರ್ಕಂಡೇಯನಿಗೆ ಅಮರತ್ವವನ್ನು ಕರುಣಿಸುತ್ತಾನೆ.

ದೇವಸ್ಥಾನದ ವಾಸ್ತುಶಿಲ್ಪ ಮತ್ತು ವಿನ್ಯಾಸ:
ಚೋಳರ ಕಾಲದ ಅದ್ಭುತ ವಾಸ್ತುಶಿಲ್ಪವನ್ನು ಇಲ್ಲಿ ಕಾಣಬಹುದು. ಸುಮಾರು ಹನ್ನೊಂದು ಎಕರೆ ವಿಸ್ತೀರ್ಣದಲ್ಲಿ ಹರಡಿರುವ ಈ ದೇವಸ್ಥಾನವು ಎತ್ತರದ ಗೋಪುರಗಳು ಮತ್ತು ವಿಶಾಲವಾದ ಪ್ರಾಕಾರಗಳನ್ನು ಹೊಂದಿದೆ. ಅಮೃತಘಟೇಶ್ವರರ್ ಸನ್ನಿಧಿಯ ಗರ್ಭಗುಡಿಯಲ್ಲಿ ಶಿವಲಿಂಗವಿದ್ದು, ಈ ಲಿಂಗದ ಮೇಲೆ ಇಂದಿಗೂ ಯಮನ ಪಾಶದ ಗುರುತುಗಳನ್ನು ಕಾಣಬಹುದು.
ಇನ್ನು ಅಭಿರಾಮಿ ಅಮ್ಮನ್, ಅಂದರೆ ಇಲ್ಲಿನ ಪಾರ್ವತಿ ದೇವಿಯನ್ನು ‘ಅಭಿರಾಮಿ’ ಎಂದು ಕರೆಯಲಾಗುತ್ತದೆ. ಆಕೆ ಅತ್ಯಂತ ಸುಂದರಿ ಮತ್ತು ಕರುಣಾಮಯಿ. ಕಾಲಸಂಹಾರ ಮೂರ್ತಿ, ಅಂದರೆ ಯಮನನ್ನು ಶಿಕ್ಷಿಸುವ ಭಂಗಿಯಲ್ಲಿರುವ ಶಿವನ ವಿಗ್ರಹವು ಭಕ್ತರಲ್ಲಿ ಭಕ್ತಿ ಮತ್ತು ಭಯವನ್ನು ಏಕಕಾಲಕ್ಕೆ ಮೂಡಿಸುತ್ತದೆ.
ನಲ್ಲಮಲ ಕಾಡಿನ ಸಿದ್ಧರ ತಪೋಭೂಮಿಯಲ್ಲಿ ಇಷ್ಟಾರ್ಥ ನೆರವೇರಿಸುವ ಅಪೂರ್ವ ಶಕ್ತಿ ದೇವತೆ ಇಷ್ಟಕಾಮೇಶ್ವರಿ ದೇವಿ
ಅಭಿರಾಮಿ ಅಮ್ಮನ್ ಮತ್ತು ಅಭಿರಾಮಿ ಭಟ್ಟರ ಪವಾಡ:
ಈ ದೇವಸ್ಥಾನವು ಭಕ್ತ ‘ಅಭಿರಾಮಿ ಭಟ್ಟ’ರ ಹೆಸರಿನಿಂದಲೂ ಪ್ರಸಿದ್ಧ. ಒಮ್ಮೆ ತಂಜಾವೂರಿನ ರಾಜ ಈ ದೇವಸ್ಥಾನಕ್ಕೆ ಬಂದಾಗ, ಗಾಢ ಧ್ಯಾನದಲ್ಲಿದ್ದ ಭಟ್ಟರನ್ನು ಕೇಳುತ್ತಾರೆ—”ಇಂದು ಯಾವ ತಿಥಿ?” ಎಂದು. ಭಟ್ಟರು ತದೇಕಚಿತ್ತರಾಗಿ ಅಮ್ಮನ ಮುಖವನ್ನು ನೋಡುತ್ತಾ “ಹುಣ್ಣಿಮೆ” ಎನ್ನುತ್ತಾರೆ. ವಾಸ್ತವವಾಗಿ ಅಂದು ಅಮಾವಾಸ್ಯೆ ಇರುತ್ತದೆ. ರಾಜನು ಸಿಟ್ಟಾಗಿ, “ಸಂಜೆ ಚಂದ್ರ ಉದಯಿಸದಿದ್ದರೆ ನಿನಗೆ ಮರಣದಂಡನೆ” ಎಂದು ಘೋಷಿಸುತ್ತಾರೆ. ಭಟ್ಟರು ದೇವಿಯ ಮೇಲೆ ನಂಬಿಕೆಯಿಟ್ಟು ‘ಅಭಿರಾಮಿ ಅಂದಾದಿ’ ಎಂಬ ನೂರು ಶ್ಲೋಕಗಳನ್ನು ಹಾಡುತ್ತಾರೆ. ಎಪ್ಪತ್ತೊಂಬತ್ತನೇ ಶ್ಲೋಕದ ವೇಳೆಗೆ, ತಾಯಿ ಅಭಿರಾಮಿ ತನ್ನ ಕಿವಿಯ ಓಲೆಯನ್ನು ಆಕಾಶಕ್ಕೆ ಎಸೆಯುತ್ತಾಳೆ. ಅದು ಪೂರ್ಣಚಂದ್ರನಂತೆ ಹೊಳೆಯುತ್ತದೆ. ರಾಜನು ತನ್ನ ತಪ್ಪಿನಿಂದ ನೊಂದುಕೊಂಡು, ಭಟ್ಟರಿಗೆ ಗೌರವ ಸಲ್ಲಿಸುತ್ತಾನೆ.
ವಿಶೇಷ ಪೂಜೆಗಳು ಮತ್ತು ಆಯಸ್ಸು ಹೋಮಗಳು:
ತಿರುಕಡೈಯೂರ್ ಕ್ಷೇತ್ರದಲ್ಲಿ ನಡೆಯುವ ಶಾಂತಿ ಹೋಮಗಳಿಗೆ ಬಹಳ ಖ್ಯಾತಿ ಪಡೆದಿದೆ. ವಯಸ್ಸಿನ ಮುಖ್ಯ ಘಟ್ಟಗಳನ್ನು ಆಧರಿಸಿ ಇಲ್ಲಿ ವಿಶಿಷ್ಟ ಪೂಜೆಗಳು ನಡೆಯುತ್ತವೆ:
ಮೃತ್ಯುಂಜಯ ಹೋಮ: ಅಕಾಲಿಕ ಮೃತ್ಯು ದೂರವಾಗಲು ಮತ್ತು ಅನಾರೋಗ್ಯ ನಿವಾರಣೆಗೆ ಮಾಡಿಸಲಾಗುತ್ತದೆ.
ಷಷ್ಠ್ಯಬ್ದಪೂರ್ತಿ (ಅರವತ್ತನೇ ವರ್ಷ): ವ್ಯಕ್ತಿಗೆ ಅರವತ್ತನೇ ವರ್ಷ ನಡೆಯುವಾಗ ದಂಪತಿ ಸಮೇತರಾಗಿ ಇಲ್ಲಿ ಮರು ಮದುವೆಯಾಗುವ ಸಂಪ್ರದಾಯವಿದೆ. ಇದು ಆಯುಷ್ಯ ವೃದ್ಧಿಗಾಗಿ ಮಾಡಲಾಗುತ್ತದೆ.
ಭೀಮರಥ ಶಾಂತಿ (ಎಪ್ಪತ್ತನೇ ವರ್ಷ): ಎಪ್ಪತ್ತನೇ ವರ್ಷಕ್ಕೆ ಕಾಲಿಟ್ಟಾಗ ಮಾಡುವ ಶಾಂತಿ ಹೋಮ.
ಸದಾಭಿಷೇಕಂ (ಎಂಬತ್ತನೇ ವರ್ಷ): ಸಹಸ್ರ ಚಂದ್ರದರ್ಶನದ ಶಾಂತಿ ಪೂಜೆ.
ಕನಕಾಭಿಷೇಕಂ (ತೊಂಬತ್ತನೇ ವರ್ಷ): ತೊಂಬತ್ತನೇ ವರ್ಷದಲ್ಲಿ ಮಾಡುವ ಆಯುಷ್ಯ- ಆರೋಗ್ಯ ವೃದ್ಧಿಗಾಗಿ ಪೂಜೆ.
ಪ್ರಯಾಣ ಮಾರ್ಗದರ್ಶಿ- ತಲುಪುವ ಹಾದಿ:
ಈ ಸ್ಥಳವು ತಮಿಳುನಾಡಿನ ಮೈಲಾಡುದುರೈನಿಂದ ಸುಮಾರು ಇಪ್ಪತ್ತು ಕಿ.ಮೀ ದೂರದಲ್ಲಿದೆ. ರೈಲಿನ ಮೂಲಕ ಮೈಲಾಡುದುರೈ ಅಥವಾ ಚಿದಂಬರಂ ತಲುಪಿ, ಅಲ್ಲಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ತೆರಳಬಹುದು.
ದೇವಸ್ಥಾನದ ಸಮಯ: ಬೆಳಗ್ಗೆ ಆರರಿಂದ ಮಧ್ಯಾಹ್ನ ಒಂದು ಗಂಟೆ ಮತ್ತು ಸಂಜೆ ನಾಲ್ಕರಿಂದ ರಾತ್ರಿ ಒಂಬತ್ತರವರೆಗೆ ದರ್ಶನಕ್ಕೆ ಅವಕಾಶವಿದೆ.
ಕೊನೆಮಾತು:
ತಿರುಕಡೈಯೂರ್ ಕೇವಲ ಪ್ರವಾಸಿ ತಾಣವಲ್ಲ, ಅದೊಂದು ಶಕ್ತಿ ಕೇಂದ್ರ. ನೀವು ಆತಂಕದಿಂದ ಮುಕ್ತರಾಗಬೇಕಿದ್ದರೆ, ಕುಟುಂಬದಲ್ಲಿ ಹಿರಿಯರ ಆಯುಷ್ಯ ವೃದ್ಧಿಯಾಗಬೇಕಿದ್ದರೆ ಈ ಕ್ಷೇತ್ರಕ್ಕೆ ಒಮ್ಮೆಯಾದರೂ ಭೇಟಿ ನೀಡಿ. ಅಭಿರಾಮಿ ದೇವಿಯ ಕೃಪೆ ಮತ್ತು ಅಮೃತಘಟೇಶ್ವರನ ಆಶೀರ್ವಾದವಿದ್ದರೆ ಯಮನೂ ಹತ್ತಿರ ಬರಲಾರ ಎಂಬ ನಂಬಿಕೆಯಿದೆ.
ಲೇಖನ- ಶ್ರೀನಿವಾಸ ಮಠ





