ಮಾರ್ಚ್ ಒಂದನೇ ತಾರೀಕು ಶುಕ್ರನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಇದು ಕುತೂಹಲಕಾರಿ ವಿದ್ಯಮಾನ. ಏಕೆಂದರೆ, ಮೀನ ರಾಶಿಯು ಶುಕ್ರನಿಗೆ “ಉಚ್ಚ ಕ್ಷೇತ್ರ” (Exaltation point). ಇಲ್ಲಿ ಶುಕ್ರನು ತನ್ನ ಪೂರ್ಣ ಬಲವನ್ನು ಹೊಂದಿರುತ್ತಾನೆ. ಅಲ್ಲಿ ಈಗಾಗಲೇ ಸ್ಥಿತನಾಗಿರುವ ಶನಿಯೊಂದಿಗೆ ಶುಕ್ರನ ಯುತಿ ಆಗುವುದು ಒಂದು ವಿಶಿಷ್ಟ ಯೋಗಕ್ಕೆ ನಾಂದಿ ಹಾಡಲಿದೆ. ಈ ಸಂಯೋಜನೆಯನ್ನು ಜ್ಯೋತಿಷ್ಯದಲ್ಲಿ “ಭೃಗು-ಶನಿ” ಯುತಿ ಎಂದು ಕರೆಯಲಾಗುತ್ತದೆ. ಇದರ ಪ್ರಭಾವ ಮತ್ತು ಹನ್ನೆರಡು ರಾಶಿಗಳ ಮೇಲಾಗುವ ಪರಿಣಾಮಗಳ ಕುರಿತಾದ ಸಮಗ್ರ ಲೇಖನ ಇಲ್ಲಿದೆ.
ಶುಕ್ರ-ಶನಿ ಯುತಿ: ಒಂದು ತಾತ್ವಿಕ ವಿಶ್ಲೇಷಣೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರನು ಸುಖ, ಭೋಗ, ಪ್ರೇಮ ಮತ್ತು ಕಲೆಯ ಸಂಕೇತ. ಶನಿಯು ಶಿಸ್ತು, ಕರ್ಮ, ಮಿತಿ ಮತ್ತು ವೈರಾಗ್ಯದ ಸಂಕೇತ. ಮೀನ ರಾಶಿಯು ಮೋಕ್ಷ ಮತ್ತು ಆಧ್ಯಾತ್ಮದ ಮನೆಯಾದ್ದರಿಂದ, ಈ ಯುತಿಯು ಲೌಕಿಕ ಸುಖ ಮತ್ತು ಆಧ್ಯಾತ್ಮಿಕ ಶಿಸ್ತಿನ ನಡುವಿನ ಸಮತೋಲನವನ್ನು ತರುತ್ತದೆ.
ಇದಕ್ಕೆ ಸಂಬಂಧಿಸಿದ ಒಂದು ಪ್ರಮುಖ ಶ್ಲೋಕ ಹೀಗಿದೆ:
“ಶುಕ್ರೋಚ್ಚೇ ಶನಿ ಸಂಯುಕ್ತೇ ಧರ್ಮಕರ್ಮರತೋ ನರಃ | ಭೋಗಭಾಗ್ಯಯುತೋ ವಿದ್ವಾನ್ ಲೋಕಪೂಜ್ಯೋ ಭವೇತ್ ಸದಾ ||”
ಅರ್ಥ: ಉಚ್ಚ ಶುಕ್ರನು ಶನಿಯೊಂದಿಗೆ ಸೇರಿದಾಗ ಮನುಷ್ಯರು ಧರ್ಮ ಮತ್ತು ಕರ್ಮಗಳಲ್ಲಿ ಆಸಕ್ತಿ ಹೊಂದುತ್ತಾರೆ. ಭೋಗ-ಭಾಗ್ಯಗಳ ಜೊತೆಗೆ ಪಾಂಡಿತ್ಯವನ್ನು ಪಡೆದು ಸಮಾಜದಲ್ಲಿ ಗೌರವಕ್ಕೆ ಪಾತ್ರನಾಗುತ್ತಾರೆ.
ಹನ್ನೆರಡು ರಾಶಿಗಳ ಮೇಲೆ ಪ್ರಭಾವ
ಈ ಯುತಿಯು ಮೀನ ರಾಶಿಯಲ್ಲಿ (ಕಾಲಪುರುಷ ಕುಂಡಲಿಯ 12ನೇ ಮನೆ) ನಡೆಯುತ್ತಿರುವುದರಿಂದ ಪ್ರತಿ ರಾಶಿಯ ಮೇಲೆ ವಿಭಿನ್ನ ಪರಿಣಾಮ ಬೀರುತ್ತದೆ:
1. ಮೇಷ ರಾಶಿ
ನಿಮ್ಮ ರಾಶಿಯ 12ನೇ ಮನೆಯಲ್ಲಿ ಈ ಯುತಿ ನಡೆಯುವುದರಿಂದ ವಿದೇಶ ಪ್ರಯಾಣದ ಯೋಗವಿದೆ. ವಿಲಾಸಿ ವಸ್ತುಗಳಿಗಾಗಿ ಅತಿಯಾದ ಖರ್ಚು ಸಂಭವಿಸಬಹುದು. ಆದರೆ ಶನಿಯ ಪ್ರಭಾವದಿಂದ ಖರ್ಚಿನ ಮೇಲೆ ನಿಯಂತ್ರಣವಿರಲಿ.
2. ವೃಷಭ ರಾಶಿ (ಶುಕ್ರನ ಸ್ವಕ್ಷೇತ್ರ)
11ನೇ ಮನೆಯಲ್ಲಿ ಉಚ್ಚ ಶುಕ್ರ ಮತ್ತು ಶನಿ ಇರುವುದರಿಂದ ಆರ್ಥಿಕ ಲಾಭ ವಿಪರೀತವಾಗಿರುತ್ತದೆ. ಹಳೆಯ ಹೂಡಿಕೆಗಳಿಂದ ಲಾಭ ಸಿಗಲಿದೆ. ಗೆಳೆಯರ ಸಹಕಾರದಿಂದ ಹೊಸ ಉದ್ಯಮ ಆರಂಭಿಸಬಹುದು.
3. ಮಿಥುನ ರಾಶಿ
ಹತ್ತನೇ ಮನೆಯಲ್ಲಿ (ಕರ್ಮ ಸ್ಥಾನ) ಈ ಯುತಿ ಉದ್ಯೋಗದಲ್ಲಿ ದೊಡ್ಡ ಬದಲಾವಣೆ ತರಲಿದೆ. ಕಲಾತ್ಮಕ ಕ್ಷೇತ್ರದಲ್ಲಿದ್ದವರಿಗೆ ಹೆಚ್ಚಿನ ಮನ್ನಣೆ ಮತ್ತು ಬಡ್ತಿ ದೊರೆಯುವ ಸಾಧ್ಯತೆ ಇದೆ.
4. ಕರ್ಕಾಟಕ ರಾಶಿ
ಭಾಗ್ಯ ಸ್ಥಾನದಲ್ಲಿ ಈ ಯುತಿ ಇರುವುದರಿಂದ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ತಂದೆಯಿಂದ ಆಸ್ತಿ ಅಥವಾ ಸಹಾಯ ದೊರೆಯಲಿದೆ. ದೂರದ ಪ್ರಯಾಣ ಲಾಭದಾಯಕವಾಗಿರಲಿದೆ.
5. ಸಿಂಹ ರಾಶಿ
ಎಂಟನೇ ಮನೆಯಲ್ಲಿ ಈ ಯುತಿ ಇರುವುದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಅನಿರೀಕ್ಷಿತ ಧನಲಾಭವಾಗುವ ಸಂಭವವಿದ್ದರೂ ಗುಪ್ತ ಶತ್ರುಗಳ ಬಗ್ಗೆ ಎಚ್ಚರಿಕೆ ಇರಲಿ.
6. ಕನ್ಯಾ ರಾಶಿ
ಏಳನೇ ಮನೆಯಲ್ಲಿ ಉಚ್ಚ ಶುಕ್ರ-ಶನಿ ಯುತಿ ಇರುವುದರಿಂದ ದಾಂಪತ್ಯ ಜೀವನದಲ್ಲಿ ಮಧುರತೆ ಇರುತ್ತದೆ. ಪಾಲುದಾರಿಕೆ ವ್ಯವಹಾರದಲ್ಲಿ (Partnership) ಶನಿಯ ಶಿಸ್ತು ಮತ್ತು ಶುಕ್ರನ ಲಾಭ ಎರಡೂ ಸಿಗಲಿವೆ.
ದಶರಥ ಕೃತ ಶನಿ ಸ್ತೋತ್ರ: ಸಾಡೇಸಾತಿ ಕಷ್ಟಗಳಿಂದ ಮುಕ್ತಿ ಪಡೆಯಲು ಇಲ್ಲಿದೆ ರಾಮಬಾಣ!
7. ತುಲಾ ರಾಶಿ
ಆರನೇ ಮನೆಯಲ್ಲಿ ಯುತಿ ಇರುವುದರಿಂದ ಹಳೆಯ ಸಾಲಗಳಿಂದ ಮುಕ್ತಿ ಸಿಗಲಿದೆ. ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ಸಿಗಲಿದೆ. ಆದರೆ ಸಂಗಾತಿಯ ಆರೋಗ್ಯದ ಬಗ್ಗೆ ಗಮನವಿರಲಿ.
8. ವೃಶ್ಚಿಕ ರಾಶಿ
ಪಂಚಮ ಸ್ಥಾನದಲ್ಲಿ ಈ ಯುತಿ ಇರುವುದರಿಂದ ಸಂತಾನ ಭಾಗ್ಯ ಅಥವಾ ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ. ಪ್ರೇಮ ಸಂಬಂಧಗಳು ಪ್ರಾಶಸ್ತ್ಯ ಪಡೆಯಲಿವೆ. ಸೃಜನಶೀಲ ಕೆಲಸಗಳಿಗೆ ಉತ್ತಮ ಸಮಯ.
9. ಧನು ರಾಶಿ
ನಾಲ್ಕನೇ ಮನೆಯಲ್ಲಿ ಈ ಯುತಿ ಇರುವುದರಿಂದ ಮನೆ ಅಥವಾ ವಾಹನ ಖರೀದಿ ಯೋಗವಿದೆ. ತಾಯಿಯ ಆರೋಗ್ಯ ಸುಧಾರಿಸಲಿದೆ. ಕೌಟುಂಬಿಕ ಸುಖ ಹೆಚ್ಚಾಗಲಿದೆ.
10. ಮಕರ ರಾಶಿ (ಶನಿ ಸ್ವಕ್ಷೇತ್ರ)
ಮೂರನೇ ಮನೆಯಲ್ಲಿ ಯುತಿ ಇರುವುದರಿಂದ ನಿಮ್ಮ ಸಾಹಸ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸಹೋದರರಿಂದ ಬೆಂಬಲ ಸಿಗಲಿದೆ. ಸಣ್ಣ ಪ್ರವಾಸಗಳು ಯಶಸ್ವಿಯಾಗಲಿವೆ.
11. ಕುಂಭ ರಾಶಿ
ಎರಡನೇ ಮನೆಯಲ್ಲಿ (ಧನ ಸ್ಥಾನ) ಈ ಯುತಿ ಇರುವುದರಿಂದ ಮಾತಿನ ಪ್ರಭಾವ ಹೆಚ್ಚಾಗಲಿದೆ. ಆರ್ಥಿಕವಾಗಿ ಸದೃಢರಾಗುವಿರಿ. ಕುಟುಂಬದಲ್ಲಿ ಶುಭ ಕಾರ್ಯಗಳು ಜರುಗಲಿವೆ.
12. ಮೀನ ರಾಶಿ
ನಿಮ್ಮದೇ ರಾಶಿಯಲ್ಲಿ ಈ ಯುತಿ ನಡೆಯುತ್ತಿರುವುದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಆಕರ್ಷಣೆಯ ಕಾಂತಿ ಹೆಚ್ಚಲಿದೆ. ಇದು ಅತ್ಯಂತ ಶುಭದಾಯಕ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ, ಆದರೆ ಶನಿಯಿಂದಾಗಿ ಜವಾಬ್ದಾರಿಗಳು ಕೂಡ ಹೆಚ್ಚಲಿವೆ.
ಮೀನದಲ್ಲಿ ಉಚ್ಚ ಶುಕ್ರ: ಮಾಲವ್ಯ ಯೋಗದ ವಿಶೇಷ ಫಲ
ಜ್ಯೋತಿಷ್ಯ ಶಾಸ್ತ್ರದಲ್ಲಿ ಪಂಚಮಹಾಪುರುಷ ಯೋಗಗಳಿಗೆ ವಿಶೇಷ ಸ್ಥಾನವಿದೆ. ಅದರಲ್ಲಿ ಶುಕ್ರನಿಂದ ಉಂಟಾಗುವ ‘ಮಾಲವ್ಯ ಯೋಗ’ ಅತ್ಯಂತ ಶ್ರೇಷ್ಠವಾದುದು. ಶುಕ್ರನು ಕೇಂದ್ರ ಸ್ಥಾನಗಳಲ್ಲಿ (1, 4, 7, 10) ಉಚ್ಚ ಸ್ಥಿತಿಯಲ್ಲಿದ್ದಾಗ ಈ ಯೋಗ ಸಿದ್ಧಿಸುತ್ತದೆ. ಮಾರ್ಚ್ ಒಂದರ ನಂತರ ಎಲ್ಲಿಯ ತನಕ ಶುಕ್ರನು ಮೀನ ರಾಶಿಯಲ್ಲಿ ಇರುವನೋ ಅಲ್ಲಿಯ ತನಕದ ಈ ಅವಧಿಯಲ್ಲಿ ಜನಿಸುವ ಶಿಶುಗಳಿಗೆ, ಅದರಲ್ಲೂ ವಿಶೇಷವಾಗಿ ನಾಲ್ಕು ಲಗ್ನಗಳವರಿಗೆ ಈ ಯೋಗ ಅನ್ವಯಿಸುತ್ತದೆ:
- ಮೀನ ಲಗ್ನ: ಲಗ್ನದಲ್ಲೇ (1ನೇ ಮನೆ) ಉಚ್ಚ ಶುಕ್ರನಿರುವುದರಿಂದ ಆಕರ್ಷಕ ವ್ಯಕ್ತಿತ್ವ ಮತ್ತು ಸುಖಮಯ ಜೀವನ ಲಭಿಸುತ್ತದೆ.
- ಮಿಥುನ ಲಗ್ನ: ಹತ್ತನೇ ಮನೆಯಲ್ಲಿ (ಕರ್ಮ ಸ್ಥಾನ) ಶುಕ್ರನಿರುವುದರಿಂದ ವೃತ್ತಿಜೀವನದಲ್ಲಿ ಅತ್ಯುನ್ನತ ಕೀರ್ತಿ ಮತ್ತು ಯಶಸ್ಸು ಸಿಗುತ್ತದೆ.
- ಕನ್ಯಾ ಲಗ್ನ: ಏಳನೇ ಮನೆಯಲ್ಲಿ (ಸಪ್ತಮ ಸ್ಥಾನ) ಶುಕ್ರನಿರುವುದರಿಂದ ಸದ್ಗುಣಶೀಲ ಸಂಗಾತಿ ಮತ್ತು ಸಮೃದ್ಧ ಪಾಲುದಾರಿಕೆ ವ್ಯವಹಾರ ಲಭಿಸುತ್ತದೆ.
- ಧನುಸ್ಸು ಲಗ್ನ: ನಾಲ್ಕನೇ ಮನೆಯಲ್ಲಿ (ಸುಖ ಸ್ಥಾನ) ಶುಕ್ರನಿರುವುದರಿಂದ ಆಸ್ತಿ, ವಾಹನ ಮತ್ತು ತಾಯಿಯ ಕಡೆಯಿಂದ ಪೂರ್ಣ ಸುಖ ದೊರೆಯುತ್ತದೆ.
ಮಾಲವ್ಯ ಯೋಗದ ಪ್ರಭಾವ: ಈ ಯೋಗದಲ್ಲಿ ಜನಿಸಿದವರು ಸುಂದರವಾದ ಅಂಗಸೌಷ್ಠವ, ಜಾಣ್ಮೆ ಮತ್ತು ಕಲಾತ್ಮಕ ಮನೋಭಾವ ಹೊಂದಿರುತ್ತಾರೆ. ಇವರಿಗೆ ಜೀವನದಲ್ಲಿ ಭೌತಿಕ ಸುಖಗಳಿಗೆ ಕೊರತೆ ಇರುವುದಿಲ್ಲ. ಶನಿಯು ಜೊತೆಗಿರುವುದರಿಂದ, ಈ ಸುಖವು ಕೇವಲ ತಾತ್ಕಾಲಿಕವಾಗಿರದೆ ಶಿಸ್ತುಬದ್ಧವಾದ ಮತ್ತು ದೀರ್ಘಕಾಲದ ಸ್ಥಿರತೆಯನ್ನು ಹೊಂದಿರುತ್ತದೆ. ಶ್ಲೋಕದಂತೆ “ಶ್ರೀಮಾನ್ ಮಾಲವ್ಯಯೋಗೇ ತ್ಯಜತಿ ನೃಪಸಮೋ…” ಅಂದರೆ ಇವರು ರಾಜತುಲ್ಯ ಜೀವನವನ್ನು ನಡೆಸುವ ಭಾಗ್ಯವಂತರು.
ವಿಶೇಷ ಸೂಚನೆ ಮತ್ತು ಪರಿಹಾರ
ಶುಕ್ರನು ಸುಖ ನೀಡಿದರೆ, ಶನಿಯು ಪರೀಕ್ಷೆ ಮಾಡುತ್ತಾನೆ. ಈ ಸಮಯದಲ್ಲಿ ಅಹಂಕಾರ ಪಡದೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಉತ್ತಮ.
ಪರಿಹಾರ:
- ಶನಿವಾರದಂದು ಶಿವನಿಗೆ ಅಭಿಷೇಕ ಮಾಡಿಸಿ.
- ಶುಕ್ರವಾರದಂದು ಬಡವರಿಗೆ ಬಿಳಿ ಬಣ್ಣದ ಸಿಹಿತಿಂಡಿ ಹಂಚಿ.
- “ಓಂ ಶುಂ ಶುಕ್ರಾಯ ನಮಃ” ಮತ್ತು “ಓಂ ಶಂ ಶನೈಶ್ಚರಾಯ ನಮಃ” ಮಂತ್ರ ಜಪಿಸಿ.
ಲೇಖನ- ಶ್ರೀನಿವಾಸ ಮಠ





