Sri Gurubhyo Logo

Sheikh Hasina Horoscope: ಹೊತ್ತಿ ಉರಿಯುತ್ತಿರುವ ಬಾಂಗ್ಲಾದೇಶದಿಂದ ಹೊರಟ ಶೇಖ್ ಹಸೀನಾ ಜಾತಕ ವಿಶ್ಲೇಷಣೆ

Sheikh Hasina
ಶೇಖ್ ಹಸೀನಾ

ಬಾಂಗ್ಲಾದೇಶ ಹೊತ್ತಿ ಉರಿಯುತ್ತಿದೆ. ಅಲ್ಲಿನ ಪ್ರಧಾನಿ ಆಗಿದ್ದ ಶೇಖ್ ಹಸೀನಾ ಅವರು ದೇಶ ಬಿಟ್ಟು ಹೊರಟಿದ್ದಾರೆ. ಆಕೆ ಇದ್ದ ಅರಮನೆ ಅಕ್ಷರಶಃ ದಿಕ್ಕು- ದೆಸೆ ಇಲ್ಲದ ತಿಜೋರಿಯಂತೆ ಆಗಿ, ಸಿಟ್ಟಿಗೆದ್ದ ಜನರ ಕೈಲಿ ಸಿಕ್ಕುಹೋಗಿದೆ. ಮತ್ತಿನ್ನೇನು ಬಾಕಿ ಉಳಿಯುತ್ತದೆ? ಶೇಖ್ ಹಸೀನಾ ಅವರಂತೂ ತಮ್ಮದೊಂದು ರಾಜೀನಾಮೆ ಭಾಷಣ ಕೂಡ ಮಾಡಲಿಕ್ಕಾಗದೆ ಎದ್ದೇನೋ ಬಿದ್ದೇನೋ ಎಂಬಂತೆ ದೇಶ ಬಿಟ್ಟಿದ್ದಾರೆ. ಇಂಥ ಸಂದರ್ಭದಲ್ಲಿ ಆಕೆಯ ಜಾತಕವನ್ನು ಕರ್ನಾಟಕದ ಖ್ಯಾತ ಜ್ಯೋತಿಷಿಗಳು- ಅಧ್ಯಾತ್ಮ ಚಿಂತಕರೂ ಆದ, ಉಡುಪಿ ಜಿಲ್ಲೆಯ ಕಾಪು ಮೂಲದ ಪ್ರಕಾಶ್ ಅಮ್ಮಣ್ಣಾಯ ಅವರು ವಿಶ್ಲೇಷಣೆ ಮಾಡಿದ್ದಾರೆ. ಶ್ರೀಗುರುಭ್ಯೋ.ಕಾಮ್ ಜೊತೆಗೆ ಮಾತನಾಡಿದ ಅವರು, ನಾನೀಗಾಗಲೇ ಇಂಥದ್ದೊಂದು ಗ್ರಹ ಸ್ಥಿತಿ ಬಗ್ಗೆ ಹಲವು ಸಲ ಹೇಳಿದ್ದೇನಲ್ಲ ಎಂದು ಪದೇಪದೇ ನೆನಪಿಸಿದರು. ಇರಲಿ, ಅಂಥದ್ದೇನು ಗ್ರಹ ಸ್ಥಿತಿ ಎಂಬುದನ್ನು ಮುಂದೆ ಅವರದೇ ಮಾತಿನಲ್ಲಿ ನಿರೂಪಣೆ ಆಗಿರುವ ಈ ಲೇಖನದಲ್ಲಿ ಓದಿಕೊಂಡು ಬಿಡಿ.

ಶೇಖ್ ಹಸೀನಾ ಅವರ ಜನ್ಮ ದಿನಾಂಕ 28-9-1947. ಜನನ ಆಗಿರುವುದು ಬಾಂಗ್ಲಾದೇಶದಲ್ಲಿ. ಆಕೆ ಜನನವಾದ ಸಮಯದಲ್ಲಿ ಕರ್ಕಾಟಕ ರಾಶಿಯಲ್ಲಿ ಶನಿ ಗ್ರಹ ಸ್ಥಿತವಾಗಿತ್ತು. ಅದರರ್ಥ, ಈಗ ಕುಂಭ ರಾಶಿಯಲ್ಲಿ ಇರುವಂಥ ಶನಿಯು ಅವರ ಜನ್ಮ ಜಾತಕದ ಸ್ಥಿತಿಗೆ ಮಂದಸ್ಯ ಮಂದಾಷ್ಟಮ ಆಗುತ್ತದೆ. ಈ ರೀತಿಯ ಜಾತಕರಿಗೆ ಬಹಳ ಸಮಯದಿಂದ ಎಚ್ಚರಿಕೆಯನ್ನು ಹೇಳುತ್ತಲೇ ಬರುತ್ತಿದ್ದೇನೆ. ಗೋಚರ ಶನಿಯು ಕುಂಭ ಸಂಚಾರದಲ್ಲಿ ವಿಪರೀತ ಒತ್ತಡ, ಆತಂಕ ಉಂಟು ಮಾಡುತ್ತಾನೆ. ಯಾರ್ಯಾರದು ಕರ್ಕಾಟಕ ರಾಶಿಯೋ ಯಾರದು ಕರ್ಕಾಟಕ ಲಗ್ನವೋ ಅಥವಾ ಯಾರಿಗೆ ಜನನ ಸಮಯದಲ್ಲಿ ಕರ್ಕಾಟಕದಲ್ಲಿ ಶನಿ ಗ್ರಹ ಸ್ಥಿತವಾಗಿರುತ್ತದೋ ಅಂಥವರೆಲ್ಲರಿಗೂ ಸಮಸ್ಯೆಯೇ. ಚಿತ್ರ ನಟ ದರ್ಶನ್ ಅವರ ಜನ್ಮ ಜಾತಕದಲ್ಲೂ ಶನಿ ಗ್ರಹ ಕರ್ಕಾಟಕ ರಾಶಿಯಲ್ಲಿಯೇ ಇದೆ. 

ಕುಂಭ ರಾಶಿಯಲ್ಲಿನ ಶನಿ ವಕ್ರೀ ಗತಿಯಲ್ಲಿ

ಈಗ ಶೇಖ್ ಹಸೀನಾ ಅವರ ಜಾತಕವನ್ನು ಸಹಜ ಕುತೂಹಲಕ್ಕಾಗಿ ಪರಿಶೀಲಿಸಿದಾಗ ತಿಳಿದು ಬಂದ ಸ್ಥಿತಿ ಇದು. ಆಕೆ ಪಾಲಿಗೆ ಅದೃಷ್ಟ ಸ್ವಲ್ಪ ಮಟ್ಟಿಗಾದರೂ ಇರುವಂತೆ ಕಾಣುತ್ತದೆ. ಅದಕ್ಕೆ ಕಾರಣ ಏನೆಂದರೆ ನವೆಂಬರ್ 15ರ ತನಕ ಕುಂಭ ರಾಶಿಯಲ್ಲಿನ ಶನಿ ವಕ್ರೀ ಗತಿಯಲ್ಲಿ ಇರುತ್ತದೆ. ಇಲ್ಲದಿದ್ದರೆ ಅವರು ಇನ್ನೂ ದೊಡ್ಡ ಅಪಾಯ ಆಗಿರುತ್ತಿತ್ತು. ಆದರೆ ನವೆಂಬರ್ ಹದಿನೈದರ ನಂತರ ಇವರ ಸ್ಥಿತಿ ಬಹಳ ಚಿಂತಾಜನಕ ಆಗುತ್ತದೆ. ಅದು ಅವರ ಪ್ರಾಣಕ್ಕೇ ತಂದರೂ ತರಬಹುದು. ಆ ಭಗವಂತನ ದಯೆಯಿಂದ ಹಾಗೆ ಯಾವುದೇ ತೊಂದರೆ ಆಗದಿರಲಿ ಅಂತ ಕೇಳಿಕೊಳ್ಳಬೇಕು ಅಷ್ಟೇ. 

ಶೇಖ್ ಹಸೀನಾ ಅವರ ಗುಣ ವಿಶ್ಲೇಷಣೆ ಮಾಡುವುದಾದರೆ, ಇವರು ಕುಂಭ ರಾಶಿ. ಚಂದ್ರನು ಇರುವ ರಾಶಿಯಿಂದ ವೃಶ್ಚಿಕವು ಕರ್ಮಸ್ಥಾನ ಆಗುತ್ತದೆ. ಹಾಗೆಯೇ ಶನಿ ಇರುವ ಕರ್ಕಾಟಕ ರಾಶಿಗೆ ಕರ್ಮ ಸ್ಥಾನವು ಮೇಷ ಆಗುತ್ತದೆ. ಹೀಗೆ ಎರಡೂ ರಾಶಿಗೂ (ಮೇಷ- ವೃಶ್ಚಿಕ) ಅಧಿಪತಿ ಕುಜ. ಅದೂ ಅಲ್ಲದೆ ಚಂದ್ರ ರಾಶಿಯಿಂದ ಕರ್ಮ ಸ್ಥಾನವಾಗುವ ವೃಶ್ಚಿಕದಲ್ಲಿ ಕೇತು ಇದ್ದು (ಜನನ ಕಾಲದಲ್ಲಿ), ಕೇತು ಗ್ರಹವು ಕುಜನು ನೀಡುವಂಥ ಫಲವನ್ನೇ ನೀಡುತ್ತದೆ. ಆದ್ದರಿಂದ ಈ ರೀತಿ ಗ್ರಹ ಸ್ಥಿತಿ ಇರುವ ಜಾತಕರಲ್ಲಿ ಇತರರ ಮೇಲೆ ಹಿಡಿತ ಸಾಧಿಸುವ, ಅಧಿಕಾರ ಚಲಾಯಿಸುವ, ಎಲ್ಲ ವಿಚಾರದಲ್ಲೂ ತನ್ನದೇ ನಡೆಯಬೇಕು ಎನ್ನುವ, ಇತರರ ಮೇಲೆ ಸದಾ ಅನುಮಾನದ ಕಣ್ಣಿಟ್ಟಿರುವ ಪ್ರವೃತ್ತಿ ಇರುತ್ತದೆ. ಇದರ ಜತೆಗೆ ಸರ್ವಾಧಿಕಾರಿ ಧೋರಣೆ ಸಹ ಇರುತ್ತದೆ. 

Jupiter Transit In Taurus: ವೃಷಭ ರಾಶಿಗೆ ಗುರು ಗ್ರಹ ಪ್ರವೇಶ; ಮೇಷದಿಂದ ಮೀನ ರಾಶಿಯ ತನಕ ಏನು ಫಲ?

ಆರನೇ ಮನೆ ರಿಪು ಸ್ಥಾನ

ಈ ಜಾತಕದಲ್ಲಿ ಇನ್ನೂ ಒಂದು ವಿಚಾರ ಗೊತ್ತಾಗುತ್ತದೆ. ಚಂದ್ರ ಇರುವಂಥ ಕುಂಭ ರಾಶಿಯಿಂದ ಆರನೇ ಮನೆ, ಇದನ್ನು ರಿಪು ಸ್ಥಾನ ಅಂತಲೇ ಕರೆಯಲಾಗುತ್ತದೆ. ಅಂದರೆ ಶತ್ರು ಸ್ಥಾನ ಎಂದರ್ಥ. ಕುಂಭದಿಂದ ಆರನೇ ಮನೆ ಕರ್ಕಾಟಕ ರಾಶಿ ಆಗುತ್ತದೆ. ಕರ್ಕಾಟಕ ರಾಶಿಗೆ ಅಧಿಪತಿ ಚಂದ್ರ. ಹೀಗೆ ಚಂದ್ರ ಅಂದಾಕ್ಷಣ ಅದರ ಸ್ವಭಾವವೂ ಹೊಳೆಯಬೇಕು. ಸ್ತ್ರೀ ಸೂಚಕ ಗ್ರಹ ಚಂದ್ರ. ಇಲ್ಲಿ ಶತ್ರು ಹೆಣ್ಣು. ಶೇಖ್ ಹಸೀನಾರಿಗೆ ಪ್ರಬಲ ಶತ್ರುವಾಗಿ ಇರುವುದು ಮತ್ತೊಬ್ಬ ಮಹಿಳೆಯೇ. ಇದು ಜಗತ್ತಿಗೇ ಗೊತ್ತಿರುವ ವಿಚಾರ ಎಂದು ಈ ಲೇಖನ ಓದುತ್ತಿರುವ ಹಲವರಿಗೆ ಅನ್ನಿಸಬಹುದು. ಆದರೆ ಗ್ರಹ ಸ್ಥಿತಿ ಎಂಥ ಪರಿಸ್ಥಿತಿಯನ್ನು ತಂದಿಡುತ್ತದೆ ಎಂಬುದಕ್ಕೆ ಉದಾಹರಣೆ- ನಿದರ್ಶನವಾಗಿ ನಮ್ಮೆದುರು ಸ್ಪಷ್ಟವಾಗಿದೆ. 

ಇನ್ನು ವೃಷಭದಲ್ಲಿ ರಾಹು. ಜನ್ಮ ರಾಶಿಯಾದ ಕುಂಭದಿಂದ ನಾಲ್ಕನೇ ಮನೆ ಆಗುತ್ತದೆ. ಈಕೆಯದು ವಿಪರೀತ ಐಷಾರಾಮದ ಬದುಕು. ಜತೆಗೆ ತನ್ನ ಜವಾಬ್ದಾರಿ ನಿರ್ವಹಿಸುವುದರಲ್ಲಿ ಮುಂದಕ್ಕೆ ಹಾಕುವ, ಆಮೇಲೆ ಮಾಡಿದರಾಯಿತು ಎಂಬಂಥ ಸ್ವಭಾವ ಎಂದು ಹೇಳಬೇಕಾಗುತ್ತದೆ. ಇಲ್ಲಿ ಓದುಗರಿಗೆ ಗೊಂದಲ ಆಗುವುದು ಬೇಡ ಎಂಬ ಕಾರಣಕ್ಕೆ ಸ್ಪಷ್ಟತೆ ನೀಡುತ್ತಿದ್ದೇನೆ: ಲಗ್ನದಿಂದ ಜಾತಕ ವಿಮರ್ಶೆ ಮಾಡುವಂತೆಯೇ ಚಂದ್ರ ಇರುವಂಥ ರಾಶಿಯನ್ನು ಲಗ್ನವಾಗಿ ಪರಿಗಣಿಸಿ, ಅದರಿಂದ ಫಲ ವಿಶ್ಲೇಷಣೆ ಮಾಡುವ ಕ್ರಮ ಇದೆ. ಅದು ಸಹ ಸರಿಯಾದ ಕ್ರಮವೇ ಹಾಗೂ ಅದಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲೇ ಆಧಾರ ಇದೆ. ಆದ್ದರಿಂದ ಯಾರಿಗೆ ಚಂದ್ರ ರಾಶಿಯಿಂದ ಲಗ್ನದ ರೀತಿಯಾಗಿ ಪರಿಗಣಿಸಬಹುದೇ ಎಂಬ ಸಂದೇಹ ಮೂಡುತ್ತದೆ, ಅಂಥವರು ಗೊಂದಲಕ್ಕೆ ಒಳಗಾಗಬೇಡಿ. ಇಂದಿನ ಆಕೆಯ ಸ್ಥಿತಿಗೆ ಬೇಜವಾಬ್ದಾರಿ, ನಿರ್ಲಕ್ಷ್ಯವೇ ಮೂಲ ಕಾರಣ. 

ಶುಕ್ರ ದಶೆಯಲ್ಲಿ ಶನಿ ಭುಕ್ತಿ

ಸದ್ಯಕ್ಕೆ ಆಕೆಗೆ ನಡೆಯುತ್ತಿರುವ ದಶಾ- ಭುಕ್ತಿಯನ್ನು ಗಮನಿಸುವುದಾದರೆ. ಈಗ ಶುಕ್ರದಶೆ ನಡೆಯುತ್ತಿದೆ. ಅದು ಅತ್ಯತ್ತಮವೇ. ಆದರೆ ಶನಿ ಭುಕ್ತಿಯು ನಡೆಯುತ್ತಿರುವುದರಿಂದ ಮಾರಕವಾಗಿ ಪರಿಣಮಿಸಿದೆ. ಯಾಕೆಂದರೆ, ಶನಿಗೆ ಮರಣ ದ್ರೇಕ್ಕಾಣಾಧಿಪತ್ಯ ಇರುವುದರಿಂದ ಮರಣ ಅಥವಾ ಮರಣ ಸಮಾನ ಯೋಗ ಅಂತ ಹೇಳಬೇಕಾಗುತ್ತದೆ. ಮರಣ ಅಂದರೆ ಸಾಯುವುದು ಎಂದೇ ತಿಳಿಯಬೇಕಿಲ್ಲ. ಮರಣ ಎಂದರೆ ಉತ್ತಮ ಸ್ಥಿತಿಯ ನಷ್ಟ, ಉತ್ತಮ ಸಾಧನೆಯ ನಾಶ. ಪ್ರತಿಷ್ಠೆ- ಗೌರವಗಳ ಹಾನಿ. ಇದಕ್ಕೆ ಧಕ್ಕೆಯಾದಾಗ ಮರಣ ಬರಲಾರದು ಎಂದು ಹೇಳೋದು ಹೇಗೆ? ಮನುಷ್ಯನ ಉದ್ದೇಶ, ಆಸೆ, ಬಹಳ ಹಚ್ಚಿಕೊಂಡಿರುವುದಕ್ಕೆ,

ಪ್ರತಿಷ್ಠೆ, ಗೌರವಗಳಿಗೆ ಹಾನಿಯಾದರೆ, ಅದರಲ್ಲೇ ಆ ವ್ಯಕ್ತಿಯು ಭಾವನಾತ್ಮಕವಾಗಿ ಬಂದಿಯಾಗಿದ್ದರೆ, ತಾವು ಏನನ್ನು ಕಳೆದುಕೊಂಡರೋ ಅದರ ಬಗೆಗಿನ ಚಿಂತೆಯಲ್ಲಿ ಅಥವಾ ಆಘಾತದಲ್ಲಿ ಬದುಕಿಗಿಂತ ಮರಣ ಲೇಸು ಎಂದೆನಿಸುತ್ತದೆ. ಈ ಭಾವನೆಯನ್ನೇ ಮರಣ ಸಮಾನ ಯೋಗ ಎನ್ನುವುದು. ಇನ್ನು ಆಘಾತದಿಂದ ನಿಜವಾಗಿಯೂ ಮರಣವೇ ಬರುವ ಸಾಧ್ಯತೆ ಇರುತ್ತದೆ.

ಯಾವ ವ್ಯಕ್ತಿಯು 1946-47ನೇ ಇಸವಿಯಲ್ಲಿ ಅಥವಾ 1975-76ನೇ ಇಸವಿಯಲ್ಲಿ, ಅಂದರೆ ಶನಿಯು ಕರ್ಕಾಟಕ ರಾಶಿಯಲ್ಲಿ ಇರುವಾಗ ಜನಿಸಿರುತ್ತಾರೋ ಅಂಥವರಿಗೆ ತಾಳ್ಮೆ, ಮುಂಜಾಗರೂಕತೆ, ದೈವ ಬಲ ಇದ್ದರೆ ಅಪಾಯವಾದರೂ ಅದನ್ನು ಸಹಿಸಿಕೊಳ್ಳುವ ಅಥವಾ ಅಪಾಯವನ್ನು ಭಂಗ ಮಾಡುವ ಸಾಮರ್ಥ್ಯ ಇರುತ್ತದೆ. ಇದ್ಯಾವುದೂ ಇಲ್ಲದೆ ಐಷಾರಾಮಿಯಾಗಿ, ಉದ್ವೇಗಿಯಾಗಿ, ಶೀಘ್ರ ಕೋಪಿಷ್ಠರೂ ಆದರೆ ಅವರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಇದನ್ನೆಲ್ಲ ಮನಗಂಡು ನಮ್ಮ ಹಿರಿಯರು ದೈವ- ದೇವರ ಆರಾಧನೆ, ಆಹಾರ ನಿಯಮ, ವ್ರತ ನಿಯಮಗಳನ್ನು ಪಾಲಿಸಲು ಹೇಳಿದ್ದಾರೆ. 

ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ- ಅಧ್ಯಾತ್ಮ ಚಿಂತಕರು, ಕಾಪು (ಉಡುಪಿ ಜಿಲ್ಲೆ)

 

Latest News

Related Posts