Sri Gurubhyo Logo

Rahu Ketu Transition in Pisces and Virgo: ಮೀನಕ್ಕೆ ರಾಹು, ಕನ್ಯಾಗೆ ಕೇತು ಸಂಚಾರ; ಮೇಷದಿಂದ ಮೀನದ ತನಕ ದ್ವಾದಶ ರಾಶಿ ಫಲಾಫಲ

Rahu Ketu Transition in 2023
ಪ್ರಾತಿನಿಧಿಕ ಚಿತ್ರ

ರಾಹು- ಕೇತು ಗ್ರಹಗಳು ಅಕ್ಟೋಬರ್ 30, 2023ರಂದು ಸಂಚಾರದಲ್ಲಿ ಬದಲಾವಣೆ ಮಾಡಿಕೊಳ್ಳಲಿವೆ. ಅಲ್ಲಿಯ ತನಕ ರಾಹು ಗ್ರಹ ಮೇಷ ರಾಶಿಯಲ್ಲೂ ಕೇತು ತುಲಾ ರಾಶಿಯಲ್ಲೂ ಸಂಚಾರ ಮಾಡುತ್ತವೆ. ಇನ್ನು ರಾಹು ಗ್ರಹವು ಗುರುವಿನೊಂದಿಗೆ ಮೇಷ ರಾಶಿಯಲ್ಲಿ ಇರುವುದರಿಂದ ಇದನ್ನು ಗುರು- ಚಂಡಾಲ ಯೋಗ ಎಂದು ಕರೆಯಲಾಗುತ್ತದೆ. ಇಂಥ ಗ್ರಹ ಸ್ಥಿತಿಯಿಂದ ಹನ್ನೆರಡು ರಾಶಿಗಳವರಿಗೂ ನಕಾರಾತ್ಮಕ ಪರಿಣಾಮ ಇದೆ. ಅದು ನವೆಂಬರ್ ಒಂದನೇ ತಾರೀಕಿನಿಂದ ಇರುವುದಿಲ್ಲ. ಮೀನ ರಾಶಿಗೆ ರಾಹು ಪ್ರವೇಶಿಸಿದರೆ, ಕನ್ಯಾ ರಾಶಿಗೆ ಕೇತುವಿನ ಪ್ರವೇಶ ಆಗುತ್ತದೆ.

ಈ ಎರಡೂ ಗ್ರಹಗಳು ಒಂದು ರಾಶಿಯಲ್ಲಿ ಹದಿನೆಂಟು ತಿಂಗಳ ಕಾಲ ಇರುತ್ತವೆ. ಮತ್ತು ಇವೆರಡು ಅಪ್ರದಕ್ಷಿಣೆಯಾಗಿ ಸಂಚಾರ ಮಾಡುತ್ತವೆ. ಉಳಿದ ಗ್ರಹಗಳು ಪ್ರದಕ್ಷಿಣೆಯಾಗಿ ಸಂಚಾರ ಮಾಡುತ್ತವೆ. ಇವೆರಡನ್ನೂ ಸಮ ಸಪ್ತಕಗಳು ಎಂದು ಕರೆಯಲಾಗುತ್ತದೆ. ಅಂದರೆ ಏಳು ರಾಶಿ (ಮನೆಗಳ) ಅಂತರದಲ್ಲೇ ಸಂಚಾರ ಮಾಡುತ್ತವೆ. ಪ್ರಾಚೀನ ಜ್ಯೋತಿಷ್ಯ ಗ್ರಂಥಗಳಲ್ಲಿ ಏಳು ಗ್ರಹಗಳ ಪ್ರಸ್ತಾವ ಮಾತ್ರ ಮಾಡಲಾಗಿದೆ. ಅವು ರವಿ, ಚಂದ್ರ, ಕುಜ, ಬುಧ, ಗುರು, ಶುಕ್ರ ಮತ್ತು ಶನಿ. 

Kaal Sarp Yoga: ಕಾಳಸರ್ಪ ಯೋಗ ಅಂದರೇನು, ಎಷ್ಟು ವಿಧಗಳಿವೆ, ಅದರ ಪರಿಣಾಮಗಳ ವಿವರ ಇಲ್ಲಿದೆ

ಇದೀಗ ರಾಹು ಮತ್ತು ಕೇತು ಕ್ರಮವಾಗಿ ಮೀನ – ಕನ್ಯಾ ರಾಶಿಯಲ್ಲಿ ಪ್ರವೇಶ ಮಾಡುವುದರಿಂದ ಮೇಷದಿಂದ ಮೀನದ ತನಕ ಯಾವ ರಾಶಿಯವರ ಮೇಲೆ ಏನು ಪ್ರಭಾವ ಬೀರುತ್ತದೆ ಎಂಬುದರ ವಿವರ ಇಲ್ಲಿದೆ.

ಮೇಷ

ನಿಮ್ಮ ರಾಶಿಗೆ ಹನ್ನೆರಡನೇ ಮನೆಯಲ್ಲಿ ರಾಹು ಹಾಗೂ ಆರನೇ ಮನೆಯಲ್ಲಿ ಕೇತು ಸಂಚಾರ ಆಗುತ್ತದೆ. ಷೇರು ಮಾರುಕಟ್ಟೆ, ಡಿಜಿಟಲ್ ಸ್ವತ್ತು ಇತ್ಯಾದಿಗಳಲ್ಲಿ ಹೊಸದಾಗಿ ಹೂಡಿಕೆ ಮಾಡುವುದಕ್ಕೆ ಹೋಗದಿರಿ. ಇನ್ನು ಈಗಾಗಲೇ ಮಾಡಿರುವ ಹೂಡಿಕೆ ಇದ್ದಲ್ಲಿ ಅವುಗಳನ್ನು ವಾಪಸ್ ತೆಗೆದುಕೊಳ್ಳುವುದು ಕ್ಷೇಮ. ಅತಿಯಾದ ನಂಬಿಕೆ, ಮತ್ತೊಬ್ಬ ವ್ಯಕ್ತಿಯ ಬಗ್ಗೆ ಅತಿಯಾದ ವಿಶ್ವಾಸ ಯಾವ ಕಾರಣಕ್ಕೂ ಬೇಡ. ಭೂಮಿಗೆ ಸಂಬಂಧಿಸಿದ ವ್ಯವಹಾರಗಳನ್ನು ಮಾಡುವವರು, ಖರೀದಿ ಮಾಡುವವರು ಕಾಗದ- ಪತ್ರಗಳ ವಿಚಾರದಲ್ಲಿ ಬಹಳ ಜಾಗ್ರತೆಯನ್ನು ವಹಿಸಿ. ಸೂಕ್ತವಾದ ಕಾನೂನು ಮಾರ್ಗದರ್ಶನವನ್ನು ಪಡೆದುಕೊಳ್ಳಿ. ಅಧ್ಯಾತ್ಮ ಕ್ಷೇತ್ರದಲ್ಲಿ ಇರುವವರು, ತೀರ್ಥಯಾತ್ರೆಗಳನ್ನು ಆಯೋಜಿಸುವವರು ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರ ಹಣದ ಹರಿವು ಉತ್ತಮವಾಗಿರುತ್ತದೆ. ಹೆಚ್ಚು ಪ್ರಭಾವಿಗಳು ಸಹ ಆಗಲಿದ್ದೀರಿ. ಉಳಿದ ಕ್ಷೇತ್ರದವರು ಹಿರಿಯರು, ಅನುಭವಿಗಳ ಮಾರ್ಗದರ್ಶನ ಪಡೆದುಕೊಳ್ಳುವುದು ಕ್ಷೇಮ.

ವೃಷಭ

ಹನ್ನೊಂದನೇ ಮನೆಯಲ್ಲಿ ರಾಹು ಮತ್ತು ಐದನೇ ಮನೆಯಲ್ಲಿ ಕೇತು ಸಂಚರಿಸುತ್ತದೆ. ಈಗಾಗಲೇ ಹಣ ಕಟ್ಟಿಯಾಗಿದೆ, ಸೈಟು ಅಥವಾ ಮನೆ ಅಥವಾ ವಿಲ್ಲಾ ನಮಗೆ ಹಸ್ತಾಂತರ ಆಗುವುದಷ್ಟೇ ಬಾಕಿ ಇದೆ. ಅದಕ್ಕಾಗಿ ಕಾಯುತ್ತಾ ಇದ್ದೇವೆ ಎನ್ನುವವರಿಗೆ ನಿರೀಕ್ಷೆ ನಿಜವಾಗಲಿದೆ. ಆದರೆ ಈ ವಿಷಯದಲ್ಲಿ ನಿಮ್ಮ ಶ್ರಮ ಹೆಚ್ಚು ಬೇಕಾಗುತ್ತದೆ. ಅಂದರೆ ಪದೇಪದೇ ಫಾಲೋ ಅಪ್ ಮಾಡಬೇಕು. ಆಯಾ ಕಾಲಕ್ಕೆ ಸಲ್ಲಿಸಬೇಕಾದ ದಾಖಲೆ, ವ್ಯಕ್ತಿಗಳನ್ನು ಭೇಟಿ ಮಾಡಬೇಕು ಎಂದು ಆಲಸ್ಯ ತೋರದೆ ಭೇಟಿ ಆಗಬೇಕು. ವಾಹನಗಳನ್ನು ಖರೀದಿಸುವ ಯೋಗ ಇದೆ. ಜತೆಗೆ ವಿದೇಶಗಳಿಗೆ ಅಲ್ಪ ಸಮಯಕ್ಕಾದರೂ ಭೇಟಿ ನೀಡುವ ಅವಕಾಶ ದೊರೆಯಲಿದೆ. ನಿಮ್ಮ ಸಾಮರ್ಥ್ಯವನ್ನು ಸಾಬೀತು ಮಾಡುವುದಕ್ಕೆ ಅವಕಾಶಗಳು ದೊರೆಯಲಿವೆ. ಈ ಅವಧಿಯಲ್ಲಿ ನೀವು ಈ ಹಿಂದೆ ಮಾಡಿದ್ದ ಕೆಲಸಗಳಲ್ಲಿ ಸಮಸ್ಯೆಗಳು, ತೊಡಕುಗಳು ಎದುರಾಗಬಹುದು. ಮಕ್ಕಳ ವಿಚಾರದಲ್ಲಿ ಚಿಂತೆಗಳು ಕಾಣಿಸಿಕೊಳ್ಳುತ್ತವೆ.

ಮಿಥುನ

ಹತ್ತನೇ ಮನೆಯಲ್ಲಿ ರಾಹು ಹಾಗೂ ನಾಲ್ಕನೇ ಮನೆಯಲ್ಲಿ ಕೇತು ಸಂಚಾರ ಆಗಲಿದೆ. ನಿಮ್ಮ ಕರ್ತವ್ಯವನ್ನು ಮಾಡುವುದರಲ್ಲಿ ವಿವಿಧ ಹಂತಗಳಲ್ಲಿ ವೈಫಲ್ಯಗಳನ್ನು ಕಾಣಲಿದ್ದೀರಿ. ನಿಮ್ಮ ಕೆಲಸ- ಕಾರ್ಯ, ನಡವಳಿಕೆಗಳಲ್ಲಿ ತಪ್ಪುಗಳು ಕಾಣಿಸಿಕೊಂಡು, ಅದನ್ನು ಎಲ್ಲರೂ ಎತ್ತಾಡಲಿದ್ದಾರೆ. ಉದ್ಯೋಗದ ಸ್ಥಳದಲ್ಲಿ ನಿಮ್ಮ ಕೆಲಸಗಳಲ್ಲಿ ಬೇರೆಯವರು ವಿಪರೀತ ತಲೆ ತೂರಿಸುತ್ತಾರೆ. ಇದನ್ನು ಸಹಿಸಲಾಗದೆ ನೀವಾಡುವ ಮಾತುಗಳಿಂದ ನಿಮಗೇ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈಗ ಮಾಡುತ್ತಿರುವ ಕೆಲಸದಿಂದ ಹೆಚ್ಚೇನೂ ಪ್ರಾಮುಖ್ಯ ಇಲ್ಲದ ಕಡೆಗೆ ನಿಮ್ಮನ್ನು ಹಾಕಬಹುದು. ನಿಮಗಿಂತ ಮೇಲೆ ಬೇರೆಯವರನ್ನು ತಂದು ಕೂಡಿಸಿ, ಅವರು ಹೇಳಿದಂತೆ ನೀವೂ ಕೆಲಸ ಮಾಡಿಕೊಂಡು ಹೋಗಿ ಅಂತ ಹೇಳಬಹುದು. ಈ ಅವಧಿಯಲ್ಲಿ ಪಿತೃ ಕಾರ್ಯಗಳನ್ನು, ತಂದೆ- ತಾಯಿಯ ಜವಾಬ್ದಾರಿಗಳನ್ನು ನಿರ್ವಹಿಸಿ. ಹೊಸದಾಗಿ ಮನೆ ಕಟ್ಟಿದವರಿಗೆ ಸಣ್ಣ- ಪುಟ್ಟ ಕೆಲಸಗಳು ಅಂತ ಖರ್ಚುಗಳು ಹೆಚ್ಚಾಗಲಿವೆ. ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಸಿ ಅದರಿಂದಲೂ ನಷ್ಟಗಳನ್ನು ಅನುಭವಿಸುತ್ತೀರಿ.

ಕರ್ಕಾಟಕ

ಒಂಬತ್ತನೇ ಮನೆಯಲ್ಲಿ ರಾಹು, ಮೂರನೇ ಮನೆಯಲ್ಲಿ ಕೇತು ಸಂಚಾರ ಆಗಲಿದೆ. ಅರೆಬರೆ ಮಾಹಿತಿ ಇರುವಂಥ ಕೆಲಸಗಳನ್ನು ಮಾಡಲಿಕ್ಕೆ ಹೋಗಬೇಡಿ. ಕಣ್ಣಿನ ವೈದ್ಯರು, ಸರ್ಕಾರದ ಮಟ್ಟದಲ್ಲಿ ಉನ್ನತ ಹುದ್ದೆಯಲ್ಲಿ ಇರುವವರು ಇಲಾಖೆ ವಿಚಾರಣೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಕೆಲಸ ಅಥವಾ ಜವಾಬ್ದಾರಿಗಳನ್ನು ಬೇರೆಯವರಿಗೆ ವರ್ಗಾಯಿಸುವುದಕ್ಕೆ ಹೋಗಬೇಡಿ. ಜತೆಗೆ ಇದು ಸಣ್ಣ ಕೆಲಸ, ಆ ಮೇಲೆ ಮಾಡಿದರಾಯಿತು ಅಥವಾ ಯಾರಿಂದಾದರೂ ಮಾಡಿಸಿ ಬಿಡೋಣ ಎಂಬ ಧೋರಣೆ ಖಂಡಿತವಾಗಿಯೂ ಬೇಡ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ವ್ಯಾಜ್ಯಗಳು ಇದ್ದಲ್ಲಿ ಸಾಧ್ಯವಾದಷ್ಟೂ ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ. ತಂದೆಯೊಂದಿಗೆ ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳಬಹುದು. ಅದು ವಿಪರೀತಕ್ಕೆ ಹೋಗದಂತೆ ನೋಡಿಕೊಳ್ಳಿ. ಸಹೋದರ- ಸಹೋದರಿಯರ ಮೂಲಕ ಕೆಲವು ಅನುಕೂಲಗಳು ಒದಗಿಬರಲಿವೆ. ಸ್ವಲ್ಪ ಸಮಯ ನೀಡಿ, ಇನ್ನೊಬ್ಬರಿಗೆ ಮಾಡಿದ ಸಹಾಯದಿಂದ ದೊಡ್ಡ ಮಟ್ಟದಲ್ಲಿ ಅನುಕೂಲ ಒದಗಿ ಬರಲಿದೆ.

ಸಿಂಹ

ಎಂಟನೇ ಮನೆಯಲ್ಲಿ ರಾಹು ಹಾಗೂ ಎರಡನೇ ಮನೆಯಲ್ಲಿ ಕೇತು ಸಂಚಾರ ಆಗಲಿದೆ. ನಿಮ್ಮಲ್ಲಿ ಕ್ಷಮಿಸಲು ಸಾಧ್ಯವೇ ಆಗದಷ್ಟು ಆಲಸ್ಯ ಕಾಣಿಸಿಕೊಳ್ಳಲಿದೆ. ಕೊನೆ ಕ್ಷಣದ ತನಕ ಅಥವಾ ಡೆಡ್ ಲೈನ್ ಬರುವ ತನಕ ಕೆಲಸ ಮಾಡುವುದಕ್ಕೆ ಮನಸ್ಸೇ ಮಾಡುವುದಿಲ್ಲ. ನಾನು ಮಾಡಿದ್ದೇ ಸರಿ ಎಂಬ ಧೋರಣೆ ಇದ್ದಲ್ಲಿ ಅದು ಮತ್ತೆ ತಲೆ ಎತ್ತಲಾರದ ಮಟ್ಟಕ್ಕೆ ಮೇಲಿಂದ ಮೇಲೆ ಹಿನ್ನಡೆಗಳನ್ನು ಕಾಣುವಂತಾಗುತ್ತದೆ. ಚರ್ಮಕ್ಕೆ ಸಂಬಂಧಿಸಿದ ವ್ಯಾಧಿಗಳು ಈಗಾಗಲೇ ಇದೆ ಎಂದಾದಲ್ಲಿ ಅದು ಉಲ್ಬಣ ಆಗಬಹುದು. ಇನ್ನು ಯಾರಿಗೆ ಕಣ್ಣಿನ ಸಮಸ್ಯೆಗಳು ಇರುತ್ತದೋ ಅಂಥವರಿಗೆ ಪರಿಸ್ಥಿತಿ ಬಿಗಡಾಯಿಸುವಂತಾಗುತ್ತದೆ. ಪದೇಪದೇ ಅವಮಾನಗಳಿಗೆ ಗುರಿ ಆಗುತ್ತೀರಿ. ನೆನಪಿನಲ್ಲಿಡಿ, ನಿಮಗೆ ಇರುವಷ್ಟು ಮಾಹಿತಿ ಬೇಕಾದಷ್ಟು ಆಯಿತು ಎಂಬ ಧೋರಣೆ ಯಾವ ಕಾರಣಕ್ಕೂ ಬೇಡ. ಅದೆಷ್ಟೇ ಸಣ್ಣ ಕೆಲಸ ಆದರೂ ಶ್ರದ್ಧಾ- ಭಕ್ತಿಯಿಂದ ಮಾಡಿ. ಇನ್ನು ಇದೇ ಸಮಯದಲ್ಲಿ ಕುಟುಂಬದಲ್ಲಿ ನಿಮ್ಮ ಮಾತಿನ ಧಾಟಿಗೆ, ಬಳಸುವ ಪದಗಳಿಗೆ ತೀವ್ರ ವಿರೋಧ ವ್ಯಕ್ತವಾಗುತ್ತದೆ. ಯಾಕಾದರೂ ಮನೆಯಲ್ಲಿ ಇದ್ದೀನೋ ಎಂಬಷ್ಟು ಮಾನಸಿಕ ಹಿಂಸೆ ನಿಮ್ಮನ್ನು ಕಾಡುತ್ತದೆ.

ಕನ್ಯಾ

ಏಳನೇ ಮನೆಯಲ್ಲಿ ರಾಹು, ಒಂದನೇ ಮನೆಯಲ್ಲಿ ಕೇತು ಸಂಚಾರ ಆಗುತ್ತದೆ. ಹೊಸ ವ್ಯವಹಾರ, ಪಾರ್ಟನರ್ ಷಿಪ್, ದೂರ ಪ್ರಯಾಣ ಇಂಥವುಗಳನ್ನು ಬಹಳ ಜಾಗ್ರತೆಯಿಂದ ಇರಬೇಕು. ಇನ್ನು ಈಗಾಗಲೇ ಮದುವೆ ನಿಶ್ಚಯ ಆಗಿದೆ, ನಿಶ್ಚಿತಾರ್ಥ ಆಗಿದೆ ಅನ್ನುವವರು ಸಹ ತುಂಬ ಎಚ್ಚರಿಕೆಯಿಂದ ವರ್ತಿಸಬೇಕು. ಹಳೇ ಪ್ರೀತಿ- ಪ್ರೇಮ ಪ್ರಕರಣಗಳು ಮತ್ತೆ ಶುರುವಾಗಬಹುದು. ಅಥವಾ ವಿವಾಹಿತರಿಗೇ ವಿವಾಹದ ಆಚೆಗೊಂದು ಸೆಳೆತ, ಸ್ನೇಹ ಆರಂಭವಾಗಬಹುದು. ಸಾಮಾಜಿಕವಾಗಿ ತಪ್ಪು ಎಂದು ಗೊತ್ತಾದ ಮೇಲೂ ಅಂಥ ಸಂಬಂಧದಲ್ಲಿ ಮುಂದುವರಿದಲ್ಲಿ ಅದಕ್ಕೆ ತಕ್ಕ ಬೆಲೆಯನ್ನು ತೆರಬೇಕಾದೀತು. ಸಂಗಾತಿಯ ಜತೆ ಮಾತನಾಡುವಾಗ ಕೂಡ ಬೇಕಾಬಿಟ್ಟಿಯಾಗಿ ಮಾತನಾಡಬೇಡಿ. ತಮಾಷೆಗೆ ಆಡುವ ಮಾತಾದರೂ ಅದು ಎಲ್ಲೋ ಕರೆದುಕೊಂಡು ಹೋಗಿ ಬಿಟ್ಟು ಬಿಡುತ್ತದೆ. ಆದ್ದರಿಂದ ಮಾತಿನ ಮೇಲೆ ಹತೋಟಿ- ನಿಗಾ ಇರಲಿದೆ. ಇನ್ನು ಆರೋಗ್ಯ ಕೈ ಕೊಡಬಹುದು. ತಲೆ ಸುತ್ತು, ಕಣ್ಣು ಮಂಜು ಮಂಜಾಗುವುದು, ಸಿಗರೇಟ್- ಮದ್ಯಪಾನ ಮಾಡುವವರಾಗಿದ್ದಲ್ಲಿ ಅವುಗಳಿಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆ ಕಳವಳ ಆಗುವ ಮಟ್ಟಕ್ಕೆ ಆಗಲಿದೆ.

ತುಲಾ

ಆರನೇ ಮನೆಯಲ್ಲಿ ರಾಹು ಮತ್ತು ಹನ್ನೆರಡನೇ ಮನೆಯಲ್ಲಿ ಕೇತು ಸಂಚಾರ ಆಗುತ್ತದೆ. ಈಗಾಗಲೇ ಭೂಮಿಗೆ ಸಂಬಂಧಿಸಿದ ವ್ಯಾಜ್ಯಗಳಿವೆ ಅಥವಾ ಸೈಟು, ಜಮೀನು ಅಥವಾ ಮನೆ ಖರೀದಿಗಾಗಿ ಹಣ ನೀಡಿದ್ದೀರಿ, ಅದು ಯಾವುದೋ ಸಮಸ್ಯೆಯಲ್ಲಿ ಸಿಲುಕಿಕೊಂಡಿದೆ ಅಂತಾದಲ್ಲಿ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ಮಾರ್ಗಗಳು ಗೋಚರ ಆಗಲಿವೆ. ಕೋರ್ಟ್ ಗಳಲ್ಲಿ ಇರುವಂಥ ವ್ಯಾಜ್ಯಗಳನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಒಂದು ವೇದಿಕೆ ದೊರೆಯಲಿದೆ. ಇದರಿಂದ ಸ್ವಲ್ಪ ಮಟ್ಟಿಗೆ ನಿಮಗೆ ಅನುಕೂಲ ಸಹ ಆಗಲಿದೆ. ಶತ್ರುಗಳ ವಿರುದ್ಧ ನಿಮ್ಮ ಕೈ ಮೇಲಾಗಲಿದೆ. ನೇರಾನೇರ ಮಾತನಾಡುವ ಮೂಲಕ ಇತರರಲ್ಲಿ ನಿಮ್ಮ ಬಗ್ಗೆ ಒಂದು ಬಗೆಯ ಗೌರವ ಮತ್ತು ಭಯ ಸೃಷ್ಟಿ ಆಗಲಿದೆ. ಅರ್ಧಂಬರ್ಧ ಆಗಿ ನಿಂತಿರುವ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗಲು ಬೇಕಾದ ಸಂಪನ್ಮೂಲ, ಸನ್ನಿವೇಶಗಳು, ಸಹಾಯ ನಿಮಗೆ ದೊರೆಯಲಿದೆ. ದೇವಾಲಯ ಕಾರ್ಯಗಳನ್ನು ಕೈಗೆತ್ತಿಕೊಂಡವರಿಗೆ, ಧಾರ್ಮಿಕ ಪ್ರವಾಸ ಆಯೋಜಿಸುವವರಿಗೆ, ದೇವಾಲಯ ಪಾರುಪತ್ತೇದಾರರಿಗೆ ವರ್ಚಸ್ಸಿಗೆ ಧಕ್ಕೆ ಆಗುವಂಥ ಬೆಳವಣಿಗೆಗಳು ಆಗಲಿವೆ. ಉಳಿದವರು ದೊಡ್ಡ ಮಟ್ಟದ ಹಣವನ್ನು ಅಜಾಗರೂಕತೆ ಕಾರಣಕ್ಕೆ ಕಳೆದುಕೊಳ್ಳಲಿದ್ದೀರಿ.

ವೃಶ್ಚಿಕ

ಐದನೇ ಮನೆಯಲ್ಲಿ ರಾಹು ಮತ್ತು ಹನ್ನೊಂದನೇ ಮನೆಯಲ್ಲಿ ಕೇತು ಸಂಚಾರ ಆಗಲಿದೆ. ವಿದ್ಯಾರ್ಥಿಗಳು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಗಮನ ವಿದ್ಯೆಯ ಹೊರತಾಗಿ ಬೇರೆಡೆಗೆ ಜಾಸ್ತಿ ಆಗಲಿದೆ. ಏಕಾಗ್ರತೆ ಸಾಧಿಸುವುದು ಅಸಾಧ್ಯ ಎನಿಸಿಬಿಡುತ್ತದೆ. ನಾನು ಮಾಡಿದ್ದೆಲ್ಲವೂ ಸರಿ, ನಾನು ಮಾಡಿದ್ದೇ ಸರಿ ಎಂಬ ಭಾವನೆ ಆಳವಾಗಿ ಬೇರೂರುತ್ತದೆ. ಉದ್ಯೋಗದಲ್ಲಿ, ವ್ಯಾಪಾರ- ವ್ಯವಹಾರ ಉದ್ಯಮದಲ್ಲಿ ಇರುವವರಿಗೆ ಹಳೇ ತಪ್ಪುಗಳು ಭೂತವಾಗಿ ಬಂದು ಕಾಡಲಿವೆ. ತೆರಿಗೆ ವಂಚನೆ ಅಥವಾ ತೆರಿಗೆಗೆ ಸಂಬಂಧಿಸಿದ ಮಾಹಿತಿ ಮರೆ ಮಾಚಿದ್ದೀರಿ ಅಂತ ನೋಟಿಸ್ ನೀಡುವ ಸಾಧ್ಯತೆಗಳಿವೆ. ಇನ್ನು ಪರವಾನಗಿ ತೆಗೆದುಕೊಂಡೇ ವ್ಯವಹಾರಗಳನ್ನು ಮಾಡಿ. ಒಂದು ವೇಳೆ ಅವಧಿ ಮೀರಿದ್ದಲ್ಲಿ ಅದನ್ನು ನವೀಕರಣ ಮಾಡಿಕೊಳ್ಳಿ. ಇನ್ನೊಬ್ಬರಿಗೆ ಹೇಳಿದ್ದೇನೆ, ಅವರು ನೋಡಿಕೊಳ್ಳುತ್ತಾರೆ ಎಂದು ನಿಮ್ಮಷ್ಟಕ್ಕೆ ನೀವಿದ್ದು ಬಿಟ್ಟಿದ್ದಲ್ಲಿ ಸಮಸ್ಯೆಗಳನ್ನು ಮಾಡಿಕೊಳ್ಳುತ್ತೀರಿ. ಇನ್ನು ಇದೇ ಅವಧಿಯಲ್ಲಿ ಸಾಲ ಮಾಡಿಯಾದರೂ ವಾಹನಗಳನ್ನು ಖರೀದಿ ಮಾಡುತ್ತೀರಿ. ವಿವಿಧ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದೀರಿ. ಕೃಷಿಕರು ಭೋಗ್ಯಕ್ಕಾದರೂ ಭೂಮಿಯನ್ನು ಪಡೆಯುವ ಯೋಗ ಇದೆ.

ಧನುಸ್ಸು

ನಾಲ್ಕನೇ ಮನೆಯಲ್ಲಿ ರಾಹು ಹಾಗೂ ಹತ್ತನೇ ಮನೆಯಲ್ಲಿ ಕೇತು ಸಂಚಾರ ಆಗಲಿದೆ. ಮನೆಯ ದುರಸ್ತಿಯನ್ನೋ ಅಥವಾ ಕಚೇರಿ, ಗೋದಾಮುಗಳ ವಿಸ್ತರಣೆಯನ್ನೋ ಮಾಡಬೇಕು ಅಂತ ಹೊರಟಾಗ ಸರಿಯಾದ ಬಜೆಟ್ ಮಾಡಿಕೊಳ್ಳಿ. ವಾಹನಗಳ ಮಾಡಿಫಿಕೇಷನ್, ಮನೆಯಲ್ಲಿ ಹೆಚ್ಚುವರಿ ಕೋಣೆ ನಿರ್ಮಾಣ, ಬಾತ್ ರೂಮ್- ಟಾಯ್ಲೆಟ್ ಗಳ ನವೀಕರಣ ಮಾಡಬೇಕು ಎಂದು ಹೊರಟಲ್ಲಿ ಒಂದಕ್ಕೆ ನಾಲ್ಕು ಖರ್ಚು ಆಗಲಿದೆ. ತಾಯಿಯೊಂದಿಗೆ ಅಥವಾ ತಾಯಿಗೆ ಸಮಾನರಾದವರ ಜತೆಗೆ ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳಲಿವೆ. ಯಾರಿಗಾದರೂ ಸಹಾಯ ಮಾಡುವುದಾಗಿ ಮಾತು ಕೊಡುವ ಮುನ್ನ ಒಂದಕ್ಕೆ ನಾಲ್ಕು ಬಾರಿ ಆಲೋಚನೆಯನ್ನು ಮಾಡಿ. ಸೋಷಿಯಲ್ ಮೀಡಿಯಾಗಳಲ್ಲಿ ಇತರರ ಬಗ್ಗೆ ಏನಾದರೂ ಪೋಸ್ಟ್ ಮಾಡುತ್ತಿದ್ದೀರಿ ಎಂದಾದಲ್ಲಿ ಆ ನಂತರದ ಪರಿಣಾಮ ಏನಾಗಬಹುದು ಎಂಬ ಬಗ್ಗೆ ಯೋಚಿಸಿ. ಏಕೆಂದರೆ ನಿಮ್ಮ ಇಮೇಜ್ ಇದರಿಂದಾಗಿ ಹಾಳಾದಲ್ಲಿ ಅದನ್ನು ಸರಿ ಮಾಡಿಕೊಳ್ಳುವುದಕ್ಕೆ ಹರಸಾಹಸ ಪಡಬೇಕಾಗುತ್ತದೆ. ಇನ್ನು ಇದೇ ಅವಧಿಯಲ್ಲಿ ಉದ್ಯೋಗ, ವೃತ್ತಿ, ವ್ಯವಹಾರ ಮಾಡುವ ಸ್ಥಳದಲ್ಲಿ ನಿಮ್ಮ ನಿಯತ್ತು, ಪ್ರಾಮಾಣಿಕತೆ ಮತ್ತು ಉದ್ದೇಶಗಳ ಬಗ್ಗೆಯೇ ಪ್ರಶ್ನೆಗಳು ಏಳುತ್ತವೆ. ಮುಖ್ಯ ಜವಾಬ್ದಾರಿಗಳನ್ನು ನಿಮ್ಮಿಂದ ಬೇರೆಯವರಿಗೆ ವರ್ಗಾಯಿಸಲಾಗುತ್ತದೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಇಳಿದುಹೋಗುತ್ತದೆ.

ಮಕರ

ಮೂರನೇ ಮನೆಯಲ್ಲಿ ರಾಹು, ಒಂಬತ್ತನೇ ಮನೆಯಲ್ಲಿ ಕೇತು ಸಂಚಾರ ಆಗಲಿದೆ. ಮನೆ, ಜಮೀನು ಅಥವಾ ಸೈಟು ಮಾರಾಟಕ್ಕೆ ಇಟ್ಟಿದ್ದೀರಿ ಅಂತಾದಲ್ಲಿ ಉತ್ತಮವಾದ ಅಥವಾ ನಿಮ್ಮ ನಿರೀಕ್ಷಿತ ಅಥವಾ ಅಪೇಕ್ಷಿತ ಬೆಲೆಗೆ ಮಾರಾಟ ಆಗಲಿದೆ. ನಿಮ್ಮ ಸೋದರ, ಸೋದರಿಯರು ಅಥವಾ ಸೋದರ ಸಂಬಂಧಿಗಳು ಈ ವಿಚಾರದಲ್ಲಿ ನೆರವಿಗೆ ಬರಲಿದ್ದಾರೆ. ಈಗಿರುವುದು ಚಿಕ್ಕ ಮನೆ, ಇದಕ್ಕಿಂತ ದೊಡ್ಡ ಮನೆಗೆ ಹೋಗಬೇಕು ಅಂದುಕೊಳ್ಳುತ್ತಿರುವವರಿಗೆ ಅನುಕೂಲ ಆಗಲಿದೆ. ಈಗಾಗಲೇ ದೊಡ್ಡ ಸೈಟಿದೆ, ಅಲ್ಲಿ ಮನೆ ಕಟ್ಟಬೇಕು ಎಂದು ಬಹಳ ಸಮಯದಿಂದ ಅಂದುಕೊಳ್ಳುತ್ತಿದ್ದೀರಿ ಅಂತಾದರೆ ಅದು ಕೂಡ ಸಾಧ್ಯವಾಗಲಿದೆ. ನಿಮ್ಮ ಹಣ ಬೇರೆಯವರ ಬಳಿ ಸಿಕ್ಕಿ ಹಾಕಿಕೊಂಡಿದೆ, ಅದನ್ನು ವಾಪಸ್ ಪಡೆಯುವುದಕ್ಕೆ ಪ್ರಯತ್ನಿಸುತ್ತಿದ್ದೀರಿ ಎಂದಾದರೆ ಅದು ಕೂಡ ನಿಮ್ಮ ಕೈ ಸೇರುವ ಅವಕಾಶಗಳು ಇರುತ್ತವೆ. ಆದರೆ ಪ್ರಯತ್ನ ಬಲವಾಗಿ ಇರಬೇಕಾಗುತ್ತದೆ. ಇನ್ನು ಇದೇ ಅವಧಿಯಲ್ಲಿ ಸಾಲ ಪಡೆದವರ ಒತ್ತಡ ನಿಮ್ಮ ಮೇಲೆ ಜಾಸ್ತಿ ಆಗಲಿದೆ. ಈಗಿಂದೀಗಲೇ ಹಣ ಬೇಕೇ ಬೇಕು ಎಂದು ಕೆಲವರು ಪಟ್ಟು ಹಿಡಿಯಬಹುದು. ಮನೆ ಎದುರು ಬಂದು ಜಗಳ ಸಹ ಆಡುವ ಸಾಧ್ಯತೆ ಇದೆ. ವಾಸ್ತವದಲ್ಲಿ ಏನು ಸಾಧ್ಯವೋ ಅದನ್ನು ಮಾತ್ರ ಹೇಳಿ. ಒಂದು ವೇಳೆ ತಕ್ಷಣಕ್ಕೆ ತಪ್ಪಿಸಿಕೊಂಡರಾಯಿತು ಎಂದೇನಾದರೂ ಆಲೋಚಿಸಿ, ಏನೇನೋ ಮಾತು ಕೊಟ್ಟರೆ ದೊಡ್ಡ ಅವಮಾನಕ್ಕೆ ಗುರಿ ಆಗುತ್ತೀರಿ.

ಕುಂಭ

ಎರಡನೇ ಮನೆಯಲ್ಲಿ ರಾಹು, ಎಂಟನೇ ಮನೆಯಲ್ಲಿ ಕೇತು ಸಂಚಾರ ಆಗಲಿದೆ. ನಿಮ್ಮ ಸಾಮರ್ಥ್ಯ, ಮಿತಿಗಳ ಬಗ್ಗೆ ವಿಪರೀತ ಕಲ್ಪನೆಗಳು ಸೃಷ್ಟಿ ಆಗುತ್ತವೆ. ನಿಮಗೇ ಗೊತ್ತಿಲ್ಲದೆ ಸುಳ್ಳುಗಳು ಹೇಳುವುದು ತುಂಬ ಜಾಸ್ತಿ ಆಗುತ್ತದೆ. ನೀವು ಮಾಡಿಲ್ಲದ ಹಾಗೂ ನಿಮ್ಮಿಂದ ಮಾಡಲಾಗದ ಕೆಲಸಗಳನ್ನು ಸಹ ಒಪ್ಪಿಕೊಂಡು ಬಿಡಲಿದ್ದೀರಿ. ಪ್ರೀತಿ- ಪ್ರೇಮದಲ್ಲಿ ಇರುವವರು ಅಭಿಪ್ರಾಯ ಭೇದಗಳು ಉದ್ಭವಿಸಿದಲ್ಲಿ ಮಾತು ಬಿಡುವುದು ಮಾಡಬೇಡಿ. ನಿಮ್ಮ ಅಸಮಾಧಾನ ಏನು ಅಂತ ಹೇಳಿ, ಎಲ್ಲವನ್ನೂ ಬಗೆಹರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ. ಬಹಳ ಆಪ್ತರು ಎನಿಸಿಕೊಂಡವರ ಬಗ್ಗೆ ಇತರರು ಚಾಡಿ ಹೇಳುವುದು, ಆಕ್ಷೇಪ ಹೇಳುವುದು ವಿಪರೀತ ಜಾಸ್ತಿ ಆಗುತ್ತದೆ. ಆದ್ದರಿಂದ ಎಲ್ಲ ಮಾತನ್ನು ಕೇಳಿಸಿಕೊಳ್ಳುವಂತೆ ಮಾಡಿ, ಆದರೆ ಅದನ್ನೇ ಮುಂದು ಮಾಡಿಕೊಂಡು, ಯಾರನ್ನೂ ಅನುಮಾನಿಸಬೇಡಿ. ಹೀಗೆ ಮಾಡಿದಲ್ಲಿ ಆಪ್ತರಿಂದ ದೂರ ಆಗಬೇಕಾದೀತು. ಇನ್ನು ಈ ಅವಧಿಯಲ್ಲಿ ರಕ್ತಕ್ಕೆ ಸಂಬಂಧಿಸಿದಂತೆ ಅನಾರೋಗ್ಯ ಸಮಸ್ಯೆಗಳು ಕಾಡಲಿವೆ. ಜತೆಗೆ ರಕ್ತದೊತ್ತಡದ ಸಮಸ್ಯೆ ಇರುವವರು ಬಹಳ ಜಾಗ್ರತೆಯಿಂದ ಇರಬೇಕು. ಒಂದು ವೇಳೆ ರಕ್ತದೊತ್ತಡ ಹೆಚ್ಚಾಗುತ್ತಿದೆ ಎಂದೇನಾದರೂ ಎನಿಸಿದಲ್ಲಿ ಕೂಡಲೇ ಸೂಕ್ತ ವೈದ್ಯೋಪಚಾರ ಪಡೆದುಕೊಳ್ಳಿ.

ಮೀನ

ಒಂದನೇ ಮನೆಯಲ್ಲಿ ರಾಹು, ಏಳನೇ ಮನೆಯಲ್ಲಿ ಕೇತು ಸಂಚಾರ ಆಗಲಿದೆ. ಆಪ್ತರು ದೂರವಾಗುವ ಯೋಗ ಇದೆ. ಭಾವನಾತ್ಮಕವಾಗಿ ನೀವು ಯಾರನ್ನು ತುಂಬ ಹಚ್ಚಿಕೊಂಡಿರುತ್ತೀರೋ ಅಂಥವರಿಂದ ದೂರ ಆಗಬೇಕಾಗಬಹುದು. ನಿಮಗೆ ಕಿಡ್ನಿ ಸ್ಟೋನ್, ಯೂರಿನ್ ಇನ್ ಫೆಕ್ಷನ್, ಕಣ್ಣಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಕಾಡಬಹುದು. ಚರ್ಮದ ಆರೋಗ್ಯದ ಬಗ್ಗೆ ಕೂಡ ಹೆಚ್ಚು ನಿಗಾ ಮಾಡಬೇಕಾಗುತ್ತದೆ. ಮಸಾಲೆಯುಕ್ತ ಪದಾರ್ಥಗಳು, ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳಿಂದ ದೂರ ಇರುವುದು ಮುಖ್ಯವಾಗುತ್ತದೆ. ಸೋರಿಯಾಸಿಸ್, ಫ್ಯಾಟಿ ಲಿವರ್ ಇಂಥ ಅನಾರೋಗ್ಯ ಸಮಸ್ಯೆಗಳು ಈಗ ಕಾಣಿಸಬಹುದು ಅಥವಾ ಈಗಾಗಲೇ ಇದ್ದಲ್ಲಿ ಉಲ್ಬಣ ಆಗಲಿದೆ. ಮಾನಸಿಕವಾಗಿ ಏನೇನೋ ನಿಮಗೆ ಅನಿಸುವುದಕ್ಕೆ ಶುರುವಾಗುತ್ತದೆ. ಇತರರು ಹೇಳದ ಸಂಗತಿಗಳು ಹೇಳಿದಂತೆಯೂ ನಿಮ್ಮನ್ನು ಎಲ್ಲರೂ ಅನುಮಾನಿಸುತ್ತಿರುವಂತೆಯೂ ಅನಿಸುವುದಕ್ಕೆ ಶುರು ಆಗುತ್ತದೆ. ಇನ್ನು ಈ ಅವಧಿಯಲ್ಲಿ ಸಂಗಾತಿ ಜತೆಗೆ ವಾಗ್ವಾದಗಳು ವಿಪರೀತ ಮಟ್ಟಕ್ಕೆ ಹೋಗದಂತೆ ಎಚ್ಚರಿಕೆಯನ್ನು ವಹಿಸಿ. ಸಣ್ಣ-ಪುಟ್ಟ ಅಸಮಾಧಾನಗಳು ಅಲ್ಲಲ್ಲೇ ಬಗೆಹರಿಯುವಂತೆ ನೋಡಿಕೊಳ್ಳಿ.

ಈ ಅವಧಿಯಲ್ಲಿ ಮೇಷ, ಸಿಂಹ, ಮೀನ ಈ ಮೂರು ರಾಶಿಯವರು ರಾಹು ಶಾಂತಿಯನ್ನು ಮಾಡಿಸಿಕೊಂಡರೆ ಕ್ಷೇಮ. ಕನ್ಯಾ, ತುಲಾ, ಕುಂಭ ರಾಶಿಯವರು ಕೇತು ಶಾಂತಿ ಮಾಡಿಸಿಕೊಳ್ಳುವುದು ಉತ್ತಮ. 

(ಲೇಖಕರು- ವಿದ್ವಾನ್ ಮಂಜುನಾಥ್ ಭಾರದ್ವಾಜ್ (ಜ್ಯೋತಿಷಿಗಳು- ಪುರೋಹಿತರು), ಜಾತಕಗಳನ್ನು ಮಾಡಿಸಲು, ಪೌರೋಹಿತ್ಯಕ್ಕೆ ಹಾಗೂ ಜ್ಯೋತಿಷಕ್ಕೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಭೇಟಿ ಮಾಡುವುದಕ್ಕೆ ಮೊಬೈಲ್ ಫೋನ್ ಸಂಖ್ಯೆ- 8050789904 ಸಂಪರ್ಕಿಸಿ.)

Latest News

Related Posts