ನಾಮಕ್ಕಲ್ ನಲ್ಲಿ ಇರುವ ನರಸಿಂಹ ದೇವರ ದರ್ಶನ ಮಾಡಬೇಕು ಎಂಬುದು ಹಲವು ತಿಂಗಳ ಅಪೇಕ್ಷೆ ಆಗಿತ್ತು. ಆ ಭಗವಂತನ ಚಿತ್ತಕ್ಕೆ ಬಂದದ್ದರ ಹೊರತಾಗಿ ಅದು ಸಾಕಾರ ಆಗಲು ಸಾಧ್ಯವೇ? ಅಂತೂ ಶನಿವಾರದಂದು ಬೆಳಗ್ಗೆ 6.45ಕ್ಕೆ ಬೆಂಗಳೂರಿನಿಂದ ಹೊರಟೆವು. ಮಧ್ಯೆ ಲಘುವಾಗಿ ಉಪಾಹಾರ ಸೇವಿಸಿ, ಮುಂದುವರಿದೆವು. ಮಧ್ಯಾಹ್ನ 12.15ರ ಹೊತ್ತಿಗೆ ತಮಿಳುನಾಡಿನ ಸೇಲಂನಲ್ಲಿ ಇರುವಂಥ ನಾಮಕ್ಕಲ್ ತಲುಪಿಯಾಯಿತು. ಅಲ್ಲಿರುವ ಶ್ರೀ ನಾಮಗಿರಿ ಲಕ್ಷ್ಮಿ ಸಮೇತ ನರಸಿಂಹಸ್ವಾಮಿ ದೇಗುಲವು ಅತ್ಯಂತ ಪುರಾತನ ಮತ್ತು ಪವಾಡಸದೃಶ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ದೇವಾಲಯವು ಬೃಹತ್ ಬೆಟ್ಟದ ಪಾದದಡಿಯಲ್ಲಿ ಸ್ಥಿತವಾಗಿದ್ದು, ಇತಿಹಾಸ ಮತ್ತು ಭಕ್ತಿಯ ಸಂಗಮವಾಗಿದೆ.
ದೇವಾಲಯದ ಇತಿಹಾಸ ಮತ್ತು ವಿಶೇಷ
ಈ ದೇವಾಲಯವು ಎಂಟನೇ ಶತಮಾನದ ಪಲ್ಲವರ ಕಾಲದ ಬಂಡೆ ಕೊರೆದ ದೇವಾಲಯವಾಗಿದೆ. ಇಲ್ಲಿನ ನರಸಿಂಹಸ್ವಾಮಿಯು “ಶಾಂತ ನರಸಿಂಹ”ನಾಗಿ ನೆಲೆಸಿದ್ದಾನೆ.
- ಸ್ಥಳ ಪುರಾಣ: ಹಿರಣ್ಯಕಶಿಪುವನ್ನು ಸಂಹಾರ ಮಾಡಿದ ನಂತರ ಉಗ್ರ ರೂಪದಲ್ಲಿದ್ದ ನರಸಿಂಹನನ್ನು ಶಾಂತಗೊಳಿಸಲು ಲಕ್ಷ್ಮಿ ದೇವಿಯು ಇಲ್ಲಿ ತಪಸ್ಸು ಮಾಡಿದಳು ಎನ್ನಲಾಗುತ್ತದೆ. ಹನುಮಂತನು ನೇಪಾಳದಿಂದ ತಂದ ಸಾಲಿಗ್ರಾಮವು ಇಲ್ಲಿ ಸ್ಥಾಪಿತವಾಗಿ ಈ ಬೆಟ್ಟವಾಯಿತು ಎಂಬ ನಂಬಿಕೆಯೂ ಇದೆ.
- ವಿಗ್ರಹ: ಗರ್ಭಗುಡಿಯಲ್ಲಿ ನರಸಿಂಹಸ್ವಾಮಿಯು ಕುಳಿತ ಭಂಗಿಯಲ್ಲಿದ್ದು, ಕೈಯಲ್ಲಿ ಸುದರ್ಶನ ಚಕ್ರ ಮತ್ತು ಶಂಖವನ್ನು ಹಿಡಿದಿದ್ದಾನೆ.
ದೇವಾಲಯದ ಸಮಯ
ಭಕ್ತರು ದರ್ಶನಕ್ಕಾಗಿ ಈ ಕೆಳಗಿನ ಸಮಯವನ್ನು ಗಮನಿಸಿ:
- ಬೆಳಗ್ಗೆ 7.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ
- ಸಂಜೆ 4.30ರಿಂದ ರಾತ್ರಿ 8.30 ರವರೆಗೆ.
(ವಿಶೇಷ ಹಬ್ಬದ ದಿನಗಳಲ್ಲಿ ಮತ್ತು ಶನಿವಾರದಂದು ಸಮಯ ಬದಲಾಗಬಹುದು).
ಶ್ರೀಕಾಕುಳಂನ ಶ್ರೀಕೂರ್ಮಂ ದೇವಸ್ಥಾನ: ಪಿತೃದೋಷ ನಿವಾರಿಸುವ ಕೂರ್ಮನಾಥನ ಸನ್ನಿಧಿಯ ಸಮಗ್ರ ದರ್ಶನ
ತಲುಪುವುದು ಹೇಗೆ?
ನಾಮಕ್ಕಲ್ ನಗರವು ತಮಿಳುನಾಡಿನ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ.
- ರಸ್ತೆ ಮಾರ್ಗ: ಬೆಂಗಳೂರಿನಿಂದ ನಾಮಕ್ಕಲ್ ಸುಮಾರು 250 ಕಿ.ಮೀ ದೂರದಲ್ಲಿದೆ (ಹೊಸೂರು, ಧರ್ಮಪುರಿ, ಸೇಲಂ ಮಾರ್ಗವಾಗಿ). ಸೇಲಂನಿಂದ ಕೇವಲ 40 ಕಿ.ಮೀ ದೂರದಲ್ಲಿದೆ.
- ರೈಲು ಮಾರ್ಗ: ನಾಮಕ್ಕಲ್‌ನಲ್ಲಿ ರೈಲು ನಿಲ್ದಾಣವಿದೆ. ಬೆಂಗಳೂರು, ಚೆನ್ನೈ ಮತ್ತು ಕನ್ಯಾಕುಮಾರಿಯಿಂದ ಇಲ್ಲಿಗೆ ರೈಲುಗಳ ಸಂಪರ್ಕವಿದೆ.
- ವಿಮಾನ ಮಾರ್ಗ: ಹತ್ತಿರದ ವಿಮಾನ ನಿಲ್ದಾಣವೆಂದರೆ ತಿರುಚಿರಾಪಳ್ಳಿ (Trichy), ಇದು ಸುಮಾರು 90 ಕಿ.ಮೀ ದೂರದಲ್ಲಿದೆ. ಕೊಯಮತ್ತೂರು ವಿಮಾನ ನಿಲ್ದಾಣವು ಸುಮಾರು 160 ಕಿ.ಮೀ ದೂರದಲ್ಲಿದೆ.

ಪ್ರಮುಖ ಆಕರ್ಷಣೆಗಳು
- ನಾಮಕ್ಕಲ್ ಆಂಜನೇಯ ದೇಗುಲ: ನರಸಿಂಹ ದೇವಸ್ಥಾನದ ಎದುರಿಗೇ ಈ ಪ್ರಸಿದ್ಧ ಆಂಜನೇಯ ದೇಗುಲವಿದೆ. ಇಲ್ಲಿನ ಹನುಮಂತನ ವಿಗ್ರಹವು ಸುಮಾರು 18 ಅಡಿ ಎತ್ತರವಿದ್ದು, ಒಂದೇ ಶಿಲೆಯಲ್ಲಿ ಕೆತ್ತಲಾಗಿದೆ. ವಿಶೇಷವೆಂದರೆ ಈ ದೇವಸ್ಥಾನಕ್ಕೆ ಛಾವಣಿ ಇಲ್ಲ.
- ನಾಮಕ್ಕಲ್ ಕೋಟೆ: ದೇವಾಲಯದ ಹಿಂಭಾಗದಲ್ಲಿರುವ ಬೆಟ್ಟದ ಮೇಲೆ ಟಿಪ್ಪು ಸುಲ್ತಾನ್ ಕಾಲದ ಕೋಟೆಯನ್ನು ನೋಡಬಹುದು.
- ನಾಮಗಿರಿ ಅಮ್ಮನವರ ಸನ್ನಿಧಿ: ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರು ಈ ದೇವಿಯ ಪರಮ ಭಕ್ತರಾಗಿದ್ದರು ಮತ್ತು ಅವರ ಗಣಿತದ ಸೂತ್ರಗಳು ದೇವಿಯ ಅನುಗ್ರಹದಿಂದ ಬರುತ್ತಿದ್ದವು ಎಂದು ಹೇಳಲಾಗುತ್ತಿತ್ತು.
ಪ್ರಮುಖ ಸೂಚನೆಗಳು
- ದರ್ಶನಕ್ಕೆ ಶನಿವಾರದಂದು ಹೆಚ್ಚಿನ ಜನಸಂದಣಿ ಇರುತ್ತದೆ.
- ದೇವಾಲಯದ ಒಳಗೆ ಫೋಟೋ ತೆಗೆಯಲು ಅನುಮತಿ ಇಲ್ಲ.
ಗಮನಿಸಿ:
ನರಸಿಂಹ ದೇವಾಲಯದಲ್ಲಿ ಅಭೀಷ್ಟಗಳನ್ನು ಹೇಳಿಕೊಳ್ಳಬೇಕು ಎಂದೇನಾದರೂ ಇದ್ದಲ್ಲಿ ಹೇಳಿಕೊಳ್ಳಬಹುದು. ಜೊತೆಗೆ 10X6 ಅಳತೆಯ, ಇದನ್ನು ‘ಪತ್ತಾರ್’ ಅಂತಲೂ ಕರೆಯಲಾಗುತ್ತದೆ. ಆ ಅಳತೆಯ ಪಂಚೆಯನ್ನು ‘ವಸ್ತ್ರ ಸಮರ್ಪಣೆ’ ಮಾಡಬಹುದು. ಅಲ್ಲಿರುವ ಅರ್ಚಕರು ಹೇಳಿರುವ ಪ್ರಕಾರ, ಹೊಸದಾದ ಈ ಅಳತೆಯ ಯಾವುದೇ ಬಣ್ಣದ ಪಂಚೆಯನ್ನು ದೇವರಿಗೆ ಸಮರ್ಪಣೆ ಮಾಡಬಹುದು. ಶತ್ರುಬಾಧೆ, ದೃಷ್ಟಿದೋಷ, ಗ್ರಹ ದೋಷ ಅಥವಾ ಇನ್ಯಾವುದೇ ಸಮಸ್ಯೆಗಳ ನಿವಾರಣೆಗೆ ಇಲ್ಲಿನ ದೇವರನ್ನು ದರ್ಶನ ಮಾಡಿ, ಪ್ರಾರ್ಥನೆ ಸಲ್ಲಿಸಲಾಗುತ್ತದೆ.
ಲೇಖನ- ಶ್ರೀನಿವಾಸ ಮಠ





