Sri Gurubhyo Logo

ಮೇಷ ರಾಶಿ ಯುಗಾದಿ ಫಲ 2026: ಆಸ್ತಿ ಖರೀದಿ ಮತ್ತು ವಿವಾಹ ಯೋಗದ ಸಂಪೂರ್ಣ ವಿವರ

A golden ram representing Aries zodiac sign standing on an astrological wheel with planets like Jupiter and Saturn, symbolizing 2026 horoscope transitions.
2026ರ ಪರಾಭವ ನಾಮ ಸಂವತ್ಸರದಲ್ಲಿ ಮೇಷ ರಾಶಿಯ ವರ್ಷ ಫಲ: ಗುರು ಬಲ ಮತ್ತು ಶನಿ ಪ್ರಭಾವದ ಒಂದು ನೋಟ.

ಮೇಷ ರಾಶಿಯಲ್ಲಿ ಜನಿಸಿದವರಿಗೆ ಪರಾಭವ ನಾಮ ಸಂವತ್ಸರದಲ್ಲಿ ಯುಗಾದಿ ವರ್ಷಫಲ ಹೇಗಿದೆ? ಶುಭ ಫಲಗಳು ಏನೇನು? ಗುರು ಬಲ ಇದೆಯಾ? ಎಚ್ಚರಿಕೆಗಳು ಯಾವ್ಯಾವು? ಇತ್ಯಾದಿ ವಿಚಾರಗಳ ಬಗ್ಗೆ ಗ್ರಹಗಳ ಗೋಚಾರದ ಆಧಾರದಲ್ಲಿ ವರ್ಷಭವಿಷ್ಯ ನೀಡಲಾಗುತ್ತಿದೆ. 2026ರ ಪರಾಭವ ನಾಮ ಸಂವತ್ಸರವು ಗ್ರಹಗತಿಗಳ ಗೋಚಾರದ ದೃಷ್ಟಿಯಿಂದ ಕುತೂಹಲಕಾರಿಯಾಗಿದೆ. ಮೇಷ ರಾಶಿಯವರಿಗೆ ಈ ವರ್ಷವು ಏರಿಳಿತಗಳಿಂದ ಕೂಡಿದ್ದರೂ ಗುರು ಬಲದ ಪ್ರಭಾವದಿಂದ ಶುಭ ಫಲಗಳೂ ಸಿಗಲಿವೆ. ನಿಮ್ಮ ರಾಶಿಯ ಭವಿಷ್ಯ ಈ ಕೆಳಗಿನಂತಿದೆ:

ಮೇಷ ರಾಶಿ ಗುಣ ಸ್ವಭಾವ

ಮೇಷ ರಾಶಿಯವರು ಅಶ್ವಿನಿ, ಭರಣಿ ಮತ್ತು ಕೃತಿಕಾ ನಕ್ಷತ್ರದ ಮೊದಲ ಪಾದದಲ್ಲಿ ಜನಿಸಿದವರು. ಇವರು ಸ್ವಾಭಾವಿಕವಾಗಿ ಚಟುವಟಿಕೆಯುಳ್ಳವರು, ಸಾಹಸಿಗಳು ಮತ್ತು ಧೈರ್ಯವಂತರು. ಮಂಗಳ ಇವರ ಅಧಿಪತಿಯಾಗಿರುವುದರಿಂದ, ಯಾವುದೇ ಕೆಲಸವನ್ನು ತಕ್ಷಣವೇ ಆರಂಭಿಸುವ ಉತ್ಸಾಹ ಇವರಲ್ಲಿರುತ್ತದೆ. ಇವರು ನೇರ ನಡೆ- ನುಡಿಯ ವ್ಯಕ್ತಿಗಳು ಮತ್ತು ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಇವರಲ್ಲಿ ಆತುರದ ನಿರ್ಧಾರ ಮತ್ತು ಸಿಟ್ಟು ಕಾಣಿಸಿಕೊಳ್ಳಬಹುದು. ಸ್ವತಂತ್ರವಾಗಿ ಬದುಕಲು ಬಯಸುವ ಇವರು, ಸವಾಲುಗಳನ್ನು ಎದುರಿಸುವುದರಲ್ಲಿ ಆನಂದ ಪಡುತ್ತಾರೆ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಗುಣ ಇವರದ್ದು.

ಶನಿ ಸಂಚಾರ

ಈ ಸಂವತ್ಸರದಲ್ಲಿ ಶನಿ ಗ್ರಹ ನಿಮ್ಮ ರಾಶಿಯಿಂದ ಹನ್ನೆರಡನೇ ಮನೆಯಾದ ಮೀನ ರಾಶಿಯಲ್ಲಿ ಸಂಚರಿಸಲಿದೆ. ಇದನ್ನು ‘ಏಳೂವರೆ ಶನಿಯ ಆರಂಭದ ಕಾಲ’ ಎಂದು ಕರೆಯಲಾಗುತ್ತದೆ. ಇದರಿಂದಾಗಿ ಈ ವರ್ಷ ನಿಮಗೆ ಅಧಿಕ ಖರ್ಚು, ಅನಗತ್ಯ ಪ್ರಯಾಣ ಮತ್ತು ಮಾನಸಿಕ ಒತ್ತಡ ಉಂಟಾಗಬಹುದು. ವೃತ್ತಿ ಕ್ಷೇತ್ರದಲ್ಲಿ ಕೆಲಸದ ಹೊರೆ ಹೆಚ್ಚಾಗಲಿದ್ದು, ಶ್ರಮಕ್ಕೆ ತಕ್ಕ ಪ್ರತಿಫಲ ತಡವಾಗಿ ದೊರೆಯಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಆದರೆ ಶನಿಯು ವ್ಯಯ ಸ್ಥಾನದಲ್ಲಿ ಇರುವುದರಿಂದ ಹೂಡಿಕೆಗಳ ಬಗ್ಗೆ ಎಚ್ಚರಿಕೆ ಅಗತ್ಯವಿದ್ದರೂ ವಿದೇಶ ಪ್ರಯಾಣದ ಹಂಬಲ ಇರುವವರಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ.

ಗುರು ಸಂಚಾರ

ಗುರು ಗ್ರಹದ ಸಂಚಾರವು ಈ ವರ್ಷ ನಿಮಗೆ ವರದಾನವಾಗಲಿದೆ. ಜೂನ್ 1ರ ತನಕ ಗುರುವು ಮಿಥುನದಲ್ಲಿದ್ದು ಸಾಧಾರಣ ಫಲ ನೀಡಿದರೂ ಜೂನ್ 2ರಿಂದ ಅಕ್ಟೋಬರ್ 31ರ ತನಕ ಕರ್ಕಾಟಕ ರಾಶಿಯಲ್ಲಿ (ನಿಮ್ಮ ರಾಶಿಯಿಂದ 4ನೇ ಮನೆ) ಉಚ್ಚಸ್ಥಿತಿಯಲ್ಲಿರುತ್ತಾನೆ. ಈ ಸಮಯದಲ್ಲಿ ಆಸ್ತಿ ಖರೀದಿ, ಸುಖ ಭೋಗಗಳು ಮತ್ತು ಕೌಟುಂಬಿಕ ಶಾಂತಿ ಲಭಿಸಲಿದೆ. ನವೆಂಬರ್ 1ರಿಂದ ಜನವರಿ 24ರ ತನಕ ಗುರುವು ಸಿಂಹ ರಾಶಿಗೆ (5ನೇ ಮನೆ) ಪ್ರವೇಶಿಸುವುದರಿಂದ ‘ಗುರು ಬಲ’ ಪೂರ್ಣವಾಗಿ ದೊರೆಯಲಿದೆ. ಈ ಅವಧಿಯಲ್ಲಿ ಸಂತಾನ ಭಾಗ್ಯ, ವಿವಾಹ ಯೋಗ, ಉದ್ಯೋಗದಲ್ಲಿ ಬಡ್ತಿ ಮತ್ತು ಆರ್ಥಿಕ ಲಾಭಗಳು ನಿಶ್ಚಿತ. ಜನವರಿ 25ರ ನಂತರ ಪುನಃ ಕರ್ಕಾಟಕಕ್ಕೆ ಬರುವ ಗುರುವು ನಿಮ್ಮ ಸುಖ ಸ್ಥಾನವನ್ನು ಬಲಪಡಿಸಿ, ಸಮಾಜದಲ್ಲಿ ಗೌರವ ತಂದುಕೊಡಲಿದ್ದಾನೆ. ಗುರುವಿನ ಕೃಪೆಯಿಂದಾಗಿ ಶನಿಯ ನಕಾರಾತ್ಮಕ ಪ್ರಭಾವವು ಗಣನೀಯವಾಗಿ ಕಡಿಮೆಯಾಗಲಿದೆ.

ರಾಹು-ಕೇತು ಸಂಚಾರ

ವರ್ಷದ ಆರಂಭದಿಂದ ಡಿಸೆಂಬರ್ 5ರ ತನಕ ರಾಹುವು ಕುಂಭ ರಾಶಿಯಲ್ಲಿ (11ನೇ ಮನೆ) ಇರುವುದರಿಂದ ಆಕಸ್ಮಿಕ ಧನಲಾಭ ಮತ್ತು ಮಿತ್ರರಿಂದ ಸಹಕಾರ ದೊರೆಯಲಿದೆ. ಕೇತುವು ಸಿಂಹದಲ್ಲಿದ್ದು ಸ್ವಲ್ಪ ಮಟ್ಟದ ಮಾನಸಿಕ ಗೊಂದಲ ತಂದರೂ ಆಧ್ಯಾತ್ಮಿಕ ಆಸಕ್ತಿ ಹೆಚ್ಚಿಸಲಿದ್ದಾನೆ. ಆದರೆ ಡಿಸೆಂಬರ್ 5ರ ನಂತರ ರಾಹು ಮಕರಕ್ಕೂ (10ನೇ ಮನೆ) ಮತ್ತು ಕೇತು ಕರ್ಕಾಟಕಕ್ಕೂ (4ನೇ ಮನೆ) ಪ್ರವೇಶಿಸುತ್ತಾರೆ. ಈ ಬದಲಾವಣೆಯಿಂದ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಗಳು ಹೆಗಲೇರಲಿವೆ. ಮನೆ ಅಥವಾ ವಾಹನದ ವಿಷಯದಲ್ಲಿ ಸಣ್ಣಪುಟ್ಟ ಅಡೆತಡೆಗಳು ಎದುರಾಗಬಹುದು. ಹಿರಿಯರ ಆರೋಗ್ಯದ ಬಗ್ಗೆ ಈ ಸಮಯದಲ್ಲಿ ಹೆಚ್ಚಿನ ಗಮನ ಹರಿಸುವುದು ಸೂಕ್ತ.

ಪರಿಹಾರಗಳು

  • ಶನಿ ಶಾಂತಿ: ಪ್ರತಿ ಶನಿವಾರ ಶನಿ ದೇವರಿಗೆ ಎಳ್ಳೆಣ್ಣೆ ದೀಪ ಹಚ್ಚಿ.
  • ಗುರು ಸೇವೆ: ಗುರುವಾರಗಳಂದು ದಕ್ಷಿಣಾಮೂರ್ತಿ ಅಥವಾ ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಿ, ಹಳದಿ ಬಣ್ಣದ ಹೂವುಗಳನ್ನು ಅರ್ಪಿಸಿ.
  • ದಾನ: ಬಡವರಿಗೆ ಅಥವಾ ಕಷ್ಟದಲ್ಲಿರುವವರಿಗೆ ಅನ್ನದಾನ ಮಾಡುವುದು ನಿಮ್ಮ ದೋಷಗಳನ್ನು ಕಡಿಮೆ ಮಾಡುತ್ತದೆ.
  • ಮಂತ್ರ: ಪ್ರತಿದಿನ ‘ಓಂ ನಮಃ ಶಿವಾಯ’ ಪಂಚಾಕ್ಷರಿ ಮಂತ್ರವನ್ನು 108 ಬಾರಿ ಜಪಿಸಿ.

ಕರ್ಮವಿಪಾಕ ಸಂಹಿತಾ ಮತ್ತು ದಾರಿದ್ರ್ಯ ಮುಕ್ತಿ: ಶಾಸ್ತ್ರಗಳು ಹೇಳುವ ಗುಟ್ಟುಗಳೇನು?

ಕೊನೆಮಾತು

“ಆರೋಗ್ಯದ ವಿಷಯದಲ್ಲಿ ವಿಶೇಷವಾಗಿ ಕಾಲು ಅಥವಾ ಪಾದದ ನೋವಿನ ಬಗ್ಗೆ ಎಚ್ಚರವಿರಲಿ”. 

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts