2026ರ ಮಾರ್ಚ್ 19ರಿಂದ ಆರಂಭವಾಗಲಿರುವ ‘ಪರಾಭವ ನಾಮ ಸಂವತ್ಸರ’ವು ಕರ್ಕಾಟಕ ರಾಶಿಯವರ ಪಾಲಿಗೆ ಅತ್ಯಂತ ಜಾಗರೂಕತೆಯಿಂದ ಇರಬೇಕಾದ ವರ್ಷವಾಗಿದೆ. ಈ ವರ್ಷ ಗುರು ಗ್ರಹವು ನಿಮ್ಮ ಜನ್ಮ ರಾಶಿಯಲ್ಲಿಯೇ ಸಂಚರಿಸುತ್ತಿರುವುದು ಮತ್ತು ಶನೈಶ್ಚರ ಭಾಗ್ಯ ಸ್ಥಾನದಲ್ಲಿ ಸಂಚರಿಸುವುದು ನಿಮ್ಮ ಜೀವನದ ಮೇಲೆ ಯಾವ ರೀತಿಯ ಗಂಭೀರ ಪರಿಣಾಮ ಬೀರಲಿದೆ? ಜನ್ಮ ಗುರುವಿನ ಪ್ರಭಾವದಿಂದ ಸ್ಥಾನಭ್ರಂಶ ಅಥವಾ ಮಾನಸಿಕ ಕ್ಲೇಶ ಉಂಟಾಗುವ ಸಾಧ್ಯತೆ ಇದೆಯೇ? ಅಷ್ಟಮ ರಾಹುವಿನ ಸಂಚಾರವು ನಿಮ್ಮ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯನ್ನು ಹೇಗೆ ಪರೀಕ್ಷಿಸಲಿದೆ? ವೃತ್ತಿ ಜೀವನದಲ್ಲಿ ಎದುರಾಗಬಹುದಾದ ಏರಿಳಿತಗಳು, ದಾಂಪತ್ಯದಲ್ಲಿನ ಸವಾಲುಗಳು ಮತ್ತು ಇವುಗಳಿಗೆ ಶಾಸ್ತ್ರೋಕ್ತವಾಗಿ ಮಾಡಬೇಕಾದ ಪರಿಹಾರಗಳೇನು ಎಂಬುದರ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ. ಈ ವರ್ಷದ ರಾಶಿ ಭವಿಷ್ಯವನ್ನು ಓದಿ, ಮುನ್ನೆಚ್ಚರಿಕೆ ವಹಿಸಿ.
ಕರ್ಕಾಟಕ ರಾಶಿಯವರ ಗುಣ ಸ್ವಭಾವ
ಕರ್ಕಾಟಕ ರಾಶಿಯವರು ಪುನರ್ವಸು (4ನೇ ಪಾದ), ಪುಷ್ಯ ಮತ್ತು ಆಶ್ಲೇಷ ನಕ್ಷತ್ರಗಳಲ್ಲಿ ಜನಿಸಿದವರು. ಚಂದ್ರ ರಾಶ್ಯಾಧಿಪತಿ ಆಗಿರುವುದರಿಂದ ಇವರು ಭಾವಜೀವಿಗಳು, ಕರುಣಾಮಯಿಗಳು ಮತ್ತು ಚಂಚಲ ಮನಸ್ಸಿನವರು. ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಇತರರ ಕಷ್ಟಕ್ಕೆ ಬೇಗನೆ ಸ್ಪಂದಿಸುವ ಇವರು, ಸಮಾಜದಲ್ಲಿ ಎಲ್ಲರ ಪ್ರೀತಿಪಾತ್ರರಾಗಿರುತ್ತಾರೆ. ನೆನಪಿನ ಶಕ್ತಿ ಅಗಾಧವಾಗಿರಲಿದ್ದು, ಹಳೆಯ ವಿಷಯಗಳನ್ನು ಮರೆಯುವುದಿಲ್ಲ. ಇವರು ಅಂತರ್ಮುಖಿಗಳಾದರೂ ತಮ್ಮ ಆತ್ಮೀಯರ ವಲಯದಲ್ಲಿ ಅತ್ಯಂತ ಚಟುವಟಿಕೆಯಿಂದ ಇರುತ್ತಾರೆ. ಸಾಹಿತ್ಯ ಮತ್ತು ಕಲೆಯ ಬಗ್ಗೆ ಒಲವು ಹೆಚ್ಚು.
ಶನಿ ಸಂಚಾರ
ಈ ಸಂವತ್ಸರದಲ್ಲಿ ಶನಿ ಗ್ರಹವು ನಿಮ್ಮ ರಾಶಿಯಿಂದ ಒಂಬತ್ತನೇ ಮನೆಯಾದ ಮೀನ ರಾಶಿಯಲ್ಲಿ ಸಂಚರಿಸಲಿದೆ. 9ನೇ ಮನೆಯ ಶನಿಯು ‘ಭಾಗ್ಯ ಹಾನಿ’ ಮತ್ತು ಅಡೆತಡೆಗಳನ್ನು ಸೂಚಿಸುತ್ತಾನೆ. ಇದು ಪಿತೃ ಸ್ಥಾನವಾದ್ದರಿಂದ ತಂದೆಯ ಆರೋಗ್ಯದಲ್ಲಿ ಏರುಪೇರು ಅಥವಾ ಅವರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲು ವಿಳಂಬವಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಇದ್ದರೂ ವಿಘ್ನಗಳು ಎದುರಾಗಬಹುದು. ವಿದೇಶ ಪ್ರಯಾಣ ಅಥವಾ ಉನ್ನತ ಶಿಕ್ಷಣದ ಹಂಬಲ ಇರುವವರಿಗೆ ಶನಿಯು ಅತೀವ ಪರಿಶ್ರಮವನ್ನು ಬೇಡುತ್ತಾನೆ. ಭಾಗ್ಯೋದಯಕ್ಕೆ ಕಠಿಣ ಹಾದಿಯನ್ನು ಕ್ರಮಿಸಬೇಕಾದ ಅನಿವಾರ್ಯ ಈ ವರ್ಷ ಎದುರಾಗಲಿದೆ.
ಗುರು ಸಂಚಾರ
ಈ ಸಂವತ್ಸರದಲ್ಲಿ ಗುರುವಿನ ಸಂಚಾರವು ಮಿಶ್ರಫಲದಾಯಕ ಆಗಿದೆ. ಜೂನ್ 1ರ ತನಕ ಗುರು 12ನೇ ಮನೆಯಲ್ಲಿದ್ದು ಅನಗತ್ಯ ಖರ್ಚುಗಳನ್ನು ಹೆಚ್ಚಿಸಲಿದ್ದಾನೆ. ಜೂನ್ 2ರಿಂದ ಅಕ್ಟೋಬರ್ 31ರ ತನಕ ಗುರುವು ನಿಮ್ಮ ಜನ್ಮ ರಾಶಿಯಲ್ಲೇ ಸಂಚರಿಸುವುದರಿಂದ ಮಾನಸಿಕ ಗೊಂದಲ, ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಳಂಬ ಮತ್ತು ಶಾರೀರಿಕ ಆಲಸ್ಯ ಉಂಟಾಗಬಹುದು. ಸ್ಥಾನ ಬದಲಾವಣೆಯ ಸಾಧ್ಯತೆಗಳಿವೆ. ಆದರೆ ನವೆಂಬರ್ 1ರಿಂದ ಜನವರಿ 24ರ ತನಕ ಗುರುವು 2ನೇ ಮನೆಗೆ (ಸಿಂಹ) ಪ್ರವೇಶಿಸಿದಾಗ ಮಾತ್ರ ಸ್ವಲ್ಪ ಆರ್ಥಿಕ ಚೇತರಿಕೆ ಮತ್ತು ಕುಟುಂಬದಲ್ಲಿ ನೆಮ್ಮದಿ ಕಾಣಬಹುದು. ಜನವರಿ 25ರ ನಂತರ ಪುನಃ ಜನ್ಮ ರಾಶಿಗೆ ಬರುವ ಗುರುವು ನಿಮ್ಮ ತಾಳ್ಮೆಯನ್ನು ಪರೀಕ್ಷಿಸಲಿದ್ದಾನೆ. ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ.
ರಾಹು-ಕೇತು ಸಂಚಾರ
ವರ್ಷದ ಆರಂಭದಿಂದ ಡಿಸೆಂಬರ್ 5ರ ತನಕ ರಾಹುವು ನಿಮ್ಮ ರಾಶಿಯಿಂದ 8ನೇ ಮನೆಯಲ್ಲಿ (ಕುಂಭ) ಮತ್ತು ಕೇತುವು 2ನೇ ಮನೆಯಲ್ಲಿ (ಸಿಂಹ) ಇರುತ್ತಾರೆ. ಇದು ಅಷ್ಟಮ ರಾಹುವಿನ ಕಾಲವಾದ್ದರಿಂದ ಹಠಾತ್ ಸಂಕಷ್ಟಗಳು ಅಥವಾ ಆರೋಗ್ಯ ಸಮಸ್ಯೆಗಳು ತಲೆದೋರಬಹುದು. ಮಾತಿನ ಮೇಲೆ ನಿಗಾ ಇರಲಿ. ಆದರೆ, ಡಿಸೆಂಬರ್ 5ರ ನಂತರ ರಾಹುವು 7ನೇ ಮನೆಗೆ (ಮಕರ) ಮತ್ತು ಕೇತುವು ಜನ್ಮ ರಾಶಿಗೆ (ಕರ್ಕಾಟಕ) ಪ್ರವೇಶಿಸುತ್ತಾರೆ. ಈ ಬದಲಾವಣೆಯಿಂದ ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು. ಪಾಲುದಾರಿಕೆ ವ್ಯವಹಾರಗಳಲ್ಲಿ ಪಾರದರ್ಶಕತೆ ಇರುವುದು ಬಹಳ ಮುಖ್ಯ.
ಪರಿಹಾರಗಳು
- ಶಿವ ಆರಾಧನೆ: ಪ್ರತಿ ಸೋಮವಾರ ಶಿವನಿಗೆ ರುದ್ರಾಭಿಷೇಕ ಮಾಡಿಸುವುದು ಅಥವಾ ಶಿವ ಪಂಚಾಕ್ಷರಿ ಮಂತ್ರ ಜಪಿಸುವುದು ಉತ್ತಮ.
- ಗುರು ಶಾಂತಿ: ಗುರುವಾರಗಳಂದು ದಕ್ಷಿಣಾಮೂರ್ತಿ ಸ್ತೋತ್ರ ಪಠಿಸಿ ಮತ್ತು ಹಳದಿ ಬಣ್ಣದ ವಸ್ತುಗಳನ್ನು ದಾನ ಮಾಡಿ.
- ಶನಿ ಸೇವೆ: ಶನಿವಾರ ಸಂಜೆ ಎಳ್ಳೆಣ್ಣೆ ದೀಪ ಹಚ್ಚಿ ‘ಶನಿ ವಜ್ರಪಂಜರ ಸ್ತೋತ್ರ’ ಪಠಿಸಿ.
- ದಾನ: ಅನಾಥಾಶ್ರಮಗಳಿಗೆ ಅಥವಾ ವೃದ್ಧಾಶ್ರಮಗಳಿಗೆ ನಿಮ್ಮ ಶಕ್ತಿಗನುಗುಣವಾಗಿ ಅನ್ನದಾನ ಮಾಡಿ.
ಮನೆಯಲ್ಲಿ ಸ್ಫಟಿಕ ಶಿವಲಿಂಗವಿದ್ದರೆ ಏನೆಲ್ಲಾ ಲಾಭ? ಇಲ್ಲಿದೆ ಶಾಸ್ತ್ರೋಕ್ತ ವಿವರಣೆ
ಕೊನೆಮಾತು
“ಗ್ರಹಗತಿಗಳು ಅಷ್ಟೊಂದು ಪೂರಕವಾಗಿಲ್ಲದ ಕಾರಣ, ಈ ವರ್ಷ ಹೂಡಿಕೆ ಮತ್ತು ವೃತ್ತಿ ಬದಲಾವಣೆಯ ವಿಷಯದಲ್ಲಿ ಅತಿ ಜಾಗರೂಕತೆಯಿಂದ ಇರಬೇಕು.”
ಲೇಖನ- ಶ್ರೀನಿವಾಸ ಮಠ





