ಇದೇ ಮೇ ತಿಂಗಳ 12ರಿಂದ 23ರ ವರೆಗೆ ಸಂಭವಿಸಲಿರುವ ಗೋಚಾರ ಕಾಳಸರ್ಪ ಯೋಗದ ಬಗ್ಗೆ ಲೇಖನ ಇಲ್ಲಿದೆ. ಜೋತಿಷ್ಯ ಶಾಸ್ತ್ರದ ಪ್ರಕಾರ, ರಾಹು ಮತ್ತು ಕೇತುಗಳ ಮಧ್ಯೆ ಉಳಿದೆಲ್ಲಾ ಸಪ್ತ ಗ್ರಹಗಳು ಬಂಧಿಯಾದಾಗ ಕಾಳಸರ್ಪ ಯೋಗ ಸೃಷ್ಟಿಯಾಗುತ್ತದೆ. ಮೇ 12ರಿಂದ 23ರ ವರೆಗೆ ಕುಂಭದಲ್ಲಿ ರಾಹು ಮತ್ತು ಸಿಂಹದಲ್ಲಿ ಕೇತು ಇರುವಾಗ ಈ ಸ್ಥಿತಿ ನಿರ್ಮಾಣವಾಗುತ್ತಿದ್ದು, ಇದು ಜಾಗತಿಕವಾಗಿ ಅತ್ಯಂತ ಸೂಕ್ಷ್ಮ ಕಾಲಘಟ್ಟವಾಗಿದೆ.
1. ರಾಜಕೀಯ ಅಸ್ಥಿರತೆ ಮತ್ತು ಸಂಘರ್ಷ
ಸಿಂಹ ರಾಶಿಯು ಆಡಳಿತ ಮತ್ತು ಅಧಿಕಾರವನ್ನು ಸೂಚಿಸುತ್ತದೆ. ಇಲ್ಲಿ ಕೇತು ಇರುವುದರಿಂದ ಜಗತ್ತಿನ ಪ್ರಬಲ ರಾಷ್ಟ್ರಗಳ ನಾಯಕರ ನಿರ್ಧಾರಗಳಲ್ಲಿ ಗೊಂದಲ ಉಂಟಾಗಬಹುದು. ಪ್ರಮುಖ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಅಥವಾ ಗಡಿ ಭಾಗಗಳಲ್ಲಿ ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆ ಇದೆ.
2. ನೈಸರ್ಗಿಕ ವಿಕೋಪಗಳು
ಕಾಳಸರ್ಪ ಯೋಗದ ಅವಧಿಯಲ್ಲಿ ಪಂಚಭೂತಗಳ ಸಮತೋಲನದಲ್ಲಿ ಏರುಪೇರಾಗಬಹುದು. ಅನಿರೀಕ್ಷಿತ ಹವಾಮಾನ ಬದಲಾವಣೆ, ಚಂಡಮಾರುತ ಅಥವಾ ಭೂಕಂಪದಂತಹ ನೈಸರ್ಗಿಕ ವಿಕೋಪಗಳ ಬಗ್ಗೆ ಎಚ್ಚರಿಕೆ ಅಗತ್ಯ. ವಿಶೇಷವಾಗಿ ವಾಯು ಮತ್ತು ಅಗ್ನಿ ತತ್ವದ ರಾಶಿಗಳಲ್ಲಿ ಈ ಯೋಗ ಇರುವುದರಿಂದ ಬೆಂಕಿ ಅವಘಡಗಳ ಬಗ್ಗೆ ಜಾಗ್ರತೆ ಬೇಕು.
3. ಆರ್ಥಿಕ ಮಾರುಕಟ್ಟೆಯಲ್ಲಿ ಏರಿಳಿತ
ಷೇರು ಮಾರುಕಟ್ಟೆ ಮತ್ತು ಜಾಗತಿಕ ಆರ್ಥಿಕತೆಯಲ್ಲಿ ಅನಿರೀಕ್ಷಿತ ಕುಸಿತ ಅಥವಾ ಹಠಾತ್ ಬದಲಾವಣೆಗಳು ಕಂಡುಬರಬಹುದು. ಹೂಡಿಕೆದಾರರಲ್ಲಿ ಭಯದ ವಾತಾವರಣ ನಿರ್ಮಾಣವಾಗಬಹುದು. ಬಂಗಾರ ಮತ್ತು ಕಚ್ಚಾ ತೈಲದ ಬೆಲೆಗಳಲ್ಲಿ ಅಸ್ಥಿರತೆ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
4. ಹನ್ನೆರಡು ರಾಶಿಗಳ ಮೇಲೆ ಕಾಳಸರ್ಪ ಯೋಗದ ಪ್ರಭಾವ
ಈ ಹನ್ನೊಂದು ದಿನಗಳ ಕಾಲ ಹನ್ನೆರಡು ರಾಶಿಗಳ ಮೇಲೆ ಉಂಟಾಗುವ ಸಂಕ್ಷಿಪ್ತ ಪರಿಣಾಮಗಳು ಹೀಗಿವೆ:
- ಮೇಷ: ಆರ್ಥಿಕ ವ್ಯವಹಾರಗಳಲ್ಲಿ ಜಾಗ್ರತೆ ಇರಲಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
- ವೃಷಭ: ವೃತ್ತಿ ಜೀವನದಲ್ಲಿ ಒತ್ತಡ ಹೆಚ್ಚಾಗಬಹುದು. ಅನಗತ್ಯ ಪ್ರಯಾಣವನ್ನು ತಪ್ಪಿಸಿ.
- ಮಿಥುನ: ಭಾಗ್ಯ ಸ್ಥಾನದಲ್ಲಿ ರಾಹು ಇರುವುದರಿಂದ ಆಧ್ಯಾತ್ಮಿಕ ಚಿಂತನೆ ಹೆಚ್ಚುತ್ತದೆ, ಆದರೆ ಕೆಲಸಗಳಲ್ಲಿ ವಿಳಂಬವಾಗಬಹುದು.
- ಕರ್ಕಾಟಕ: ಅಷ್ಟಮ ಸ್ಥಾನದ ಪ್ರಭಾವದಿಂದ ಆರೋಗ್ಯದಲ್ಲಿ ಏರುಪೇರಾಗಬಹುದು. ವಾಹನ ಚಾಲನೆಯಲ್ಲಿ ಎಚ್ಚರವಿರಲಿ.
- ಸಿಂಹ: ಕೇತು ನಿಮ್ಮ ರಾಶಿಯಲ್ಲಿಯೇ ಇರುವುದರಿಂದ ಮಾನಸಿಕ ಗೊಂದಲಗಳು ಕಾಡಬಹುದು. ಸಂಗಾತಿಯೊಂದಿಗೆ ಸಮಾಧಾನದಿಂದ ವರ್ತಿಸಿ.
- ಕನ್ಯಾ: ಶತ್ರುಗಳ ಬಾಧೆ ಕಡಿಮೆಯಾದರೂ, ಸಾಲದ ವಿಚಾರದಲ್ಲಿ ಜಾಗರೂಕರಾಗಿರಿ.
- ತುಲಾ: ಸಂತಾನದ ಬಗ್ಗೆ ಚಿಂತೆ ಅಥವಾ ವಿದ್ಯಾಭ್ಯಾಸದಲ್ಲಿ ಅಡೆತಡೆಗಳು ಎದುರಾಗಬಹುದು.
- ವೃಶ್ಚಿಕ: ಆಸ್ತಿ ವಿಚಾರದಲ್ಲಿ ವಿವಾದಗಳು ಉಂಟಾಗಬಹುದು. ತಾಯಿಯ ಆರೋಗ್ಯದ ಕಡೆ ಗಮನಹರಿಸಿ.
- ಧನು: ಧೈರ್ಯ ಹೆಚ್ಚಾಗುತ್ತದೆ, ಆದರೆ ಒಡಹುಟ್ಟಿದವರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬರಬಹುದು.
- ಮಕರ: ಮಾತಿನ ಮೇಲೆ ಹಿಡಿತವಿರಲಿ. ಕುಟುಂಬದಲ್ಲಿ ಕಲಹವಾಗದಂತೆ ನೋಡಿಕೊಳ್ಳಿ.
- ಕುಂಭ: ನಿಮ್ಮ ರಾಶಿಯಲ್ಲಿಯೇ ರಾಹು ಇರುವುದರಿಂದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರಪಡಬೇಡಿ.
- ಮೀನ: ಖರ್ಚುಗಳು ಅಧಿಕವಾಗಬಹುದು. ನಿದ್ರಾಹೀನತೆ ಅಥವಾ ಮಾನಸಿಕ ಅಶಾಂತಿ ಕಾಡಬಹುದು.
ಸರ್ಪದೋಷ ನಿವಾರಣೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ: ಆದಿ ಸುಬ್ರಹ್ಮಣ್ಯದಿಂದ ರಥೋತ್ಸವದವರೆಗೆ ಸಂಪೂರ್ಣ ವಿವರ
ಸೂಚನೆ: ಇವು ಗೋಚಾರ ಫಲಗಳಾಗಿದ್ದು, ವೈಯಕ್ತಿಕ ಜಾತಕದಲ್ಲಿನ ದಶಾ-ಭುಕ್ತಿಗಳ ಆಧಾರದ ಮೇಲೆ ಫಲಿತಾಂಶಗಳು ಬದಲಾಗಬಹುದು. ಪರಿಹಾರವಾಗಿ ಈ ಅವಧಿಯಲ್ಲಿ ಶಿವ ಪಂಚಾಕ್ಷರಿ ಮಂತ್ರ ಪಠಿಸುವುದು ಅಥವಾ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡುವುದು ಉತ್ತಮ.
ಲೇಖನ- ಶ್ರೀನಿವಾಸ ಮಠ









