ವಧು- ವರರು ಒಂದೇ ನಕ್ಷತ್ರ ಆಗಿದ್ದಲ್ಲಿ ಮದುವೆಗೆ ಪ್ರಶಸ್ತವಾ? ಹೀಗಿದ್ದಲ್ಲಿ ಮದುವೆ ಹಂತಕ್ಕೆ ಮುಂದುವರಿಯಬಹುದಾ? ಈ ರೀತಿ ಪ್ರಶ್ನೆ ಕೇಳಿಕೊಂಡು ಬರುವವರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಇದೆ. ಈ ಬಗ್ಗೆ ಮಾಹಿತಿ ಕೂಡ ಇಲ್ಲದ ಕೆಲವರು ಇಬ್ಬರದೂ ಒಂದೇ ನಕ್ಷತ್ರ- ಒಂದೇ ರಾಶಿಯಾದರೆ ಬಹಳ ಒಳ್ಳೆಯದು ಅಂತಲೂ ಹೇಳುತ್ತಾರೆ, ಮತ್ತೂ ಕೆಲವರು “ವಿವಾಹ ಮಾಡುವುದು ಒಳ್ಳೆಯದಲ್ಲ” ಅಂತಲೂ ಹೇಳಿ ಬಿಡುತ್ತಾರೆ. ಹಾಗೆ ನೋಡಿದರೆ, ಈ ಎರಡೂ ಮಾತಿನಲ್ಲಿ ಇರುವುದು ಅರ್ಧ ಸತ್ಯ ಮಾತ್ರ. ವಧು- ವರರದು ಏಕನಕ್ಷತ್ರವಾದರೂ ವಿವಾಹ ಮಾಡಬಹುದಾದ ಕೆಲವು ನಕ್ಷತ್ರಗಳಿವೆ, ಮತ್ತು ಅದೇ ರೀತಿ ಏಕನಕ್ಷತ್ರವಾದಲ್ಲಿ ವಿವಾಹಕ್ಕೆ ಮುಂದುವರಿಯಬಾರದು ಎಂಬಂಥ ಕೆಲವು ನಕ್ಷತ್ರಗಳು ಸಹ ಇವೆ. ಅದನ್ನೇ ವಿವರಿಸಲಾಗುತ್ತಿದೆ.
ನಕ್ಷತ್ರಗಳು ಒಟ್ಟು ಇಪ್ಪತ್ತೇಳು ಇವೆ. ಅದರಲ್ಲಿ ಏಕನಕ್ಷತ್ರವಾದರೂ ಮುಂದುವರಿಯಬಹುದಾದ, ಉತ್ತಮ ಫಲವನ್ನೇ ನೀಡುವ ನಕ್ಷತ್ರಗಳು: ರೋಹಿಣಿ, ಮಖಾ, ಶ್ರವಣ, ಉತ್ತರಭಾದ್ರಾ ಹಾಗೂ ರೇವತಿ.
ಇನ್ನು ಮಧ್ಯಮ ಫಲ ನೀಡುವ ನಕ್ಷತ್ರಗಳು: ಅಶ್ವಿನಿ, ಮೃಗಶಿರಾ, ಆರಿದ್ರಾ, ಪುಷ್ಯ, ಪುಬ್ಬಾ, ಚಿತ್ತಾ, ಅನೂರಾಧಾ.
ಹಾನಿ ಆಗುವ ನಕ್ಷತ್ರಗಳು: ಕೃತ್ತಿಕಾ, ಪುನರ್ವಸು, ವಿಶಾಖ.
ಏಕನಕ್ಷತ್ರ ಆದಲ್ಲಿ ವಿವಾಹ ಮಾಡಿಕೊಳ್ಳಲೇ ಬಾರದು ಎಂಬ ನಕ್ಷತ್ರಗಳು ಹೀಗಿವೆ: ಭರಣಿ, ಆಶ್ಲೇಷಾ, ಉತ್ತರಾ, ಹಸ್ತಾ, ಸ್ವಾತಿ, ಜ್ಯೇಷ್ಠಾ, ಮೂಲಾ, ಪೂರ್ವಾಷಾಢ, ಉತ್ತರಾಷಾಢ, ಧನಿಷ್ಠಾ, ಶತಭಿಷಾ, ಪೂರ್ವಾಭಾದ್ರಾ.
ಈ ಸಂದರ್ಭದಲ್ಲಿ ಉಲ್ಲೇಖ ಮಾಡಬೇಕಾದ ಮತ್ತೂ ಒಂದು ವಿಷಯ ಇದೆ. ಪ್ರತಿ ನಕ್ಷತ್ರಕ್ಕೆ ನಾಲ್ಕು ಪಾದಗಳು ಇರುತ್ತವೆ, ಅದೇ ರೀತಿ ಮೂರು ನಕ್ಷತ್ರಗಳು ಸೇರಿ ಒಂದು ರಾಶಿಯಾಗಿ ಭಾಗವಾಗುತ್ತವೆ. ಇದರಲ್ಲಿ ಹುಡುಗಿ- ಹುಡುಗಿಯದು ಒಂದೇ ನಕ್ಷತ್ರವಾಗಿ, ಹುಡುಗಿಯ ನಕ್ಷತ್ರದ ಪಾದಕ್ಕಿಂತ ಮುಂದಿನದು ಹುಡುಗನದಾಗಿ, ಇಬ್ಬರದೂ ಒಂದೇ ರಾಶಿಯಾದರೂ ಮದುವೆ ಮಾಡಬಹುದು.
ಉದಾಹರಣೆಗೆ: ಹುಡುನದು ರೋಹಿಣಿ ನಕ್ಷತ್ರದ ಒಂದನೇ ಪಾದವಾಗಿ, ಹುಡುಗಿಯದು ರೋಹಿಣಿ ನಕ್ಷತ್ರದ ಎರಡು, ಮೂರು ಅಥವಾ ನಾಲ್ಕನೇ ಪಾದ ಈ ಪೈಕಿ ಯಾವುದೇ ಆದರೂ ಮದುವೆ ಮಾಡಬಹುದು. ಒಂದು ವೇಳೆ ಹುಡುಗನದು ರೋಹಿಣಿ ನಕ್ಷತ್ರದ ಎರಡನೇ ಪಾದ ಆದಲ್ಲಿ, ಹುಡುಗಿಯದು ರೋಹಿಣಿ ನಕ್ಷತ್ರ ಮೂರು ಅಥವಾ ನಾಲ್ಕನೇ ಪಾದ ಆದಲ್ಲಿ ಮದುವೆ ಮಾಡಬಹುದು. ಹುಡುಗ- ಹುಡುಗಿ ಇಬ್ಬರದೂ ರೋಹಿಣಿ ನಕ್ಷತ್ರ, ವೃಷಭ ರಾಶಿಯೇ ಬಂದರೂ ಪಾದದಲ್ಲಿ ಹುಡುಗಿಯದಕ್ಕಿಂತ ಹುಡುಗನದು ಮುಂದಿನ ಪಾದವಾದಲ್ಲಿ ವಿವಾಹ ಶುಭ.
ಅದೇ ರೀತಿ ಹುಡುಗನದು ಒಂದೇ ನಕ್ಷತ್ರ, ಮುಂದಿನ ಪಾದ ಹಾಗೂ ಹುಡುಗ- ಹುಡುಗಿಯದು ಬೇರೆ ರಾಶಿಗಳಾದರೂ ಮದುವೆ ಮಾಡಬಹುದು.
ಉದಾಹರಣೆಗೆ: ಚಿತ್ತಾ ನಕ್ಷತ್ರದ ಒಂದನೇ ಪಾದ ಅಥವಾ ಎರಡನೇ ಪಾದ, ಕನ್ಯಾ ರಾಶಿ ಹುಡುಗನದ್ದಾಗಿ, ಚಿತ್ತಾ ನಕ್ಷತ್ರದ ಮೂರು ಅತವಾ ನಾಲ್ಕನೇ ಪಾದ ತುಲಾ ರಾಶಿಯ ಹುಡುಗಿ ಆದ್ದಲ್ಲಿ ವಿವಾಹ ಮಾಡಬಹುದು.
ಗುಣ- ಕೂಟ ಬರುತ್ತವೆ ಎಂಬುದು ನಿಜ. ಆದರೆ ಹುಡುಗ- ಹುಡುಗಿ ಇಬ್ಬರ ಜಾತಕದಲ್ಲಿ ಕುಜ ದೋಷ ವಿಚಾರವನ್ನು ಒಮ್ಮೆ ಪರಾಮರ್ಶೆ ಮಾಡಿಕೊಂಡು ಮುಂದುವರಿಯಬೇಕು. ವಿಶೇಷ ಉಲ್ಲೇಖ: ವಧು- ವರರು ಪ್ರಾಪ್ತ ವಯಸ್ಕರಾಗಿ, ಪರಸ್ಪರ ಪ್ರೀತಿಯಲ್ಲಿ ಇದ್ದರೆ ಆಗ ವಿವಾಹೋಪಯೋಕ್ತ ಕೂಟಗಳನ್ನು ನೋಡುತ್ತಾ, ಆಗಿಬರುತ್ತದೆಯೋ ಇಲ್ಲವೋ ಎಂದು ನೋಡಬಾರದು ಎಂಬುದು ಶಾಸ್ತ್ರ ಸಮ್ಮತವಾದ ವಚನವಾಗಿದೆ.
-ಶ್ರೀನಿವಾಸ ಮಠ
ವಧು-ವರರ ಸಾಲಾವಳಿ, ಜಾತಕ ಮಾಡಿಸುವುದು ಮೊದಲಾದ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಕನ್ಸಲ್ಟೇಷನ್ ಗಾಗಿ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9620216525.





