ಧನುಸ್ಸು ರಾಶಿಯಲ್ಲಿ ಜನಿಸಿದವರಿಗೆ ಪರಾಭವ ನಾಮ ಸಂವತ್ಸರದಲ್ಲಿ ಯುಗಾದಿ ವರ್ಷಫಲ ಹೇಗಿದೆ? ಶುಭ ಫಲಗಳು ಏನೇನು? ಗುರು ಬಲ ಇದೆಯಾ? ಎಚ್ಚರಿಕೆಗಳು ಯಾವ್ಯಾವು? 2026ರ ಈ ವರ್ಷ ಧನುಸ್ಸು ರಾಶಿಯವರಿಗೆ ಗ್ರಹಗತಿಗಳ ಸಂಚಾರವು ಕುತೂಹಲಕಾರಿಯಾಗಿದೆ. ಚತುರ್ಥ ಶನಿಯ ಪ್ರಭಾವವಿದ್ದರೂ ಗುರುವಿನ ಸಂಚಾರವು ಹಂತ ಹಂತವಾಗಿ ನಿಮ್ಮ ಜೀವನದ ಮೇಲೆ ಪರಿಣಾಮ ಬೀರಲಿದೆ. ನಿಮ್ಮ ರಾಶಿಯ ಸಂಪೂರ್ಣ ಭವಿಷ್ಯ ಇಲ್ಲಿದೆ:
ಧನುಸ್ಸು ರಾಶಿ ಗುಣ ಸ್ವಭಾವ
ಧನುಸ್ಸು ರಾಶಿಯವರು ಮೂಲಾ, ಪೂರ್ವಾಷಾಢ ಮತ್ತು ಉತ್ತರಾಷಾಢ ನಕ್ಷತ್ರದ ಮೊದಲ ಪಾದದಲ್ಲಿ ಜನಿಸಿದವರು. ಗುರು ಇವರ ರಾಶ್ಯಾಧಿಪತಿ. ಇವರು ಸ್ವಾಭಾವಿಕವಾಗಿ ಜ್ಞಾನದಾಹಿಗಳು, ಮುಕ್ತ ಮನಸ್ಸಿನವರು ಮತ್ತು ಸದಾ ಆಶಾವಾದಿಗಳು. ನ್ಯಾಯ ಮತ್ತು ಧರ್ಮದ ಪರವಾಗಿ ನಿಲ್ಲುವ ಇವರು, ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಗಳಾಗಿರುತ್ತಾರೆ. ಸಾಹಸ ಪ್ರವೃತ್ತಿ ಮತ್ತು ನೇರ ಮಾತು ಇವರ ಗುಣ. ಎಂತಹ ಕಠಿಣ ಸವಾಲುಗಳನ್ನೂ ಆತ್ಮವಿಶ್ವಾಸದಿಂದ ಎದುರಿಸುವ ಸಾಮರ್ಥ್ಯ ಇವರಿಗಿರುತ್ತದೆ.
ಶನಿ ಸಂಚಾರ
ಈ ಸಂವತ್ಸರದಲ್ಲಿ ಶನಿ ಗ್ರಹವು ನಿಮ್ಮ ರಾಶಿಯಿಂದ ನಾಲ್ಕನೇ ಮನೆಯಾದ ಮೀನ ರಾಶಿಯಲ್ಲಿ ಸಂಚರಿಸಲಿದೆ. ಇದನ್ನು ‘ಚತುರ್ಥ ಶನಿ’ ಅಥವಾ ಅರ್ಧಾಷ್ಟಮ ಶನಿ ಎಂದು ಕರೆಯಲಾಗುತ್ತದೆ.
- ಪರಿಣಾಮ: ಕೌಟುಂಬಿಕ ಪರಿಸರದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು. ಮನೆ ಅಥವಾ ವಾಹನಕ್ಕೆ ಸಂಬಂಧಿಸಿದ ಖರ್ಚುಗಳು ಹೆಚ್ಚಾಗಲಿವೆ.
- ಎಚ್ಚರಿಕೆ: ಕೆಲಸದ ಒತ್ತಡದಿಂದಾಗಿ ಮಾನಸಿಕ ಆಯಾಸ ಉಂಟಾಗಬಹುದು. ತಾಯಿಯ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಆದರೆ ಶನಿಯು ನಿಮ್ಮನ್ನು ಶಿಸ್ತುಬದ್ಧ ಜೀವನಕ್ಕೆ ಒಗ್ಗಿಕೊಳ್ಳುವಂತೆ ಮಾಡುತ್ತಾನೆ.
ಗುರು ಸಂಚಾರ
ಈ ವರ್ಷ ನಿಮ್ಮ ರಾಶ್ಯಾಧಿಪತಿಯಾದ ಗುರುವಿನ ಸಂಚಾರವು ಬಹಳ ವೇಗವಾಗಿ ಬದಲಾಗಲಿದೆ:
- ಜೂನ್ 1ರ ತನಕ: ಗುರುವು 7ನೇ ಮನೆಯಲ್ಲಿ (ಸಪ್ತಮ ಗುರು) ಸಂಚರಿಸಲಿದ್ದಾನೆ. ಇದು ಅತ್ಯಂತ ಶುಭ ಕಾಲ. ಅವಿವಾಹಿತರಿಗೆ ವಿವಾಹ ಯೋಗ, ವ್ಯಾಪಾರದಲ್ಲಿ ಲಾಭ ಮತ್ತು ದಾಂಪತ್ಯ ಸುಖ ದೊರೆಯಲಿದೆ.
- ಜೂನ್ 2ರಿಂದ ಅಕ್ಟೋಬರ್ 31: ಗುರುವು 8ನೇ ಮನೆಗೆ (ಅಷ್ಟಮ ಗುರು) ಪ್ರವೇಶಿಸುತ್ತಾನೆ. ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ಆದರೂ ಗುರು ಉಚ್ಚಸ್ಥಿತಿಯಲ್ಲಿರುವುದರಿಂದ ಹಠಾತ್ ಧನಲಾಭದ ಸಾಧ್ಯತೆ ಇದೆ.
- ನವೆಂಬರ್ 1ರಿಂದ ಜನವರಿ 24: ಗುರುವು 9ನೇ ಮನೆಗೆ (ಭಾಗ್ಯ ಸ್ಥಾನ) ಪ್ರವೇಶಿಸುತ್ತಾನೆ. ಇದು ನಿಮ್ಮ ಪಾಲಿನ ‘ಮಹಾ ಭಾಗ್ಯೋದಯ’ದ ಕಾಲ. ಪೂರ್ಣ ಗುರುಬಲ ಲಭಿಸಲಿದ್ದು, ಸಕಲ ಕಾರ್ಯಗಳಲ್ಲಿ ಜಯ ಸಿಗಲಿದೆ.
- ಜನವರಿ 25ರ ನಂತರ: ಗುರುವು ಪುನಃ ವಕ್ರಿಯಾಗಿ 8ನೇ ಮನೆಗೆ ಬರುವುದರಿಂದ ಆರ್ಥಿಕ ಹೂಡಿಕೆಯಲ್ಲಿ ಎಚ್ಚರಿಕೆ ಅಗತ್ಯ.
ರಾಹು-ಕೇತು ಸಂಚಾರ
ಡಿಸೆಂಬರ್ 5ರ ತನಕ ರಾಹುವು 3ನೇ ಮನೆಯಲ್ಲಿ (ಕುಂಭ) ಇರುವುದು ನಿಮಗೆ ಆನೆ ಬಲ ನೀಡಿದಂತೆ. ನಿಮ್ಮ ಧೈರ್ಯ ಮತ್ತು ಕೀರ್ತಿ ಹೆಚ್ಚಾಗಲಿದೆ. ಕೇತುವು 9ನೇ ಮನೆಯಲ್ಲಿದ್ದು ಆಧ್ಯಾತ್ಮಿಕ ಯಾತ್ರೆಗಳಿಗೆ ಪ್ರೇರಣೆ ನೀಡಲಿದ್ದಾನೆ. ಡಿಸೆಂಬರ್ 5ರ ನಂತರ ರಾಹು 2ನೇ ಮನೆಗೆ ಮತ್ತು ಕೇತು 8ನೇ ಮನೆಗೆ ಪ್ರವೇಶಿಸುವುದರಿಂದ ಮಾತಿನ ಮೇಲೆ ಹಿಡಿತವಿರಲಿ ಹಾಗೂ ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ.
ಪರಿಹಾರಗಳು
- ಶನಿ ಶಾಂತಿ: ಶನಿವಾರದಂದು ಶನಿ ಅಷ್ಟೋತ್ತರ ಪಠಿಸಿ ಮತ್ತು ಬಡವರಿಗೆ ಕಪ್ಪು ಬಟ್ಟೆ ಅಥವಾ ಅನ್ನದಾನ ಮಾಡಿ.
- ಗುರು ಸೇವೆ: ಗುರುವಾರ ದಕ್ಷಿಣಾಮೂರ್ತಿಯನ್ನು ಆರಾಧಿಸಿ. ಹಳದಿ ಬಣ್ಣದ ಹಣ್ಣುಗಳನ್ನು ಪ್ರಸಾದವಾಗಿ ನೀಡಿ.
- ಧ್ಯಾನ: ಪ್ರತಿದಿನ 10 ನಿಮಿಷಗಳ ಕಾಲ ಓಂಕಾರ ಪ್ರಣವ ಮಂತ್ರವನ್ನು ಜಪಿಸಿ.
ಧನುಸ್ಸು ರಾಶಿ: ಜ್ಞಾನ, ಗುರಿ ಮತ್ತು ಸತ್ಯಪ್ರಿಯತೆಯ ಈ ರಾಶಿಯವರ ಸಂಪೂರ್ಣ ಗುಣ-ಸ್ವಭಾವ ಇಲ್ಲಿದೆ
ಕೊನೆಮಾತು
“ಜೂನ್ ವರೆಗಿನ ಉತ್ತಮ ಸಮಯವನ್ನು ಸರಿಯಾಗಿ ಬಳಸಿಕೊಳ್ಳಿ. ನವೆಂಬರ್ ನಂತರದ ಭಾಗ್ಯ ಗುರುವಿನ ಕಾಲವು ನಿಮ್ಮ ಜೀವನದ ದೊಡ್ಡ ಯಶಸ್ಸಿಗೆ ನಾಂದಿ ಹಾಡಲಿದೆ.”
ಲೇಖನ– ಶ್ರೀನಿವಾಸ ಮಠ





