ಕೆಲವು ಸ್ತೋತ್ರ ಪಠಣ- ಶ್ರವಣವನ್ನು ನಿತ್ಯವೂ ಮಾಡುವುದರಿಂದ ಇಂಥಿಂಥ ಪ್ರಯೋಜನಗಳಿವೆ ಎಂಬುದು ಧಾರ್ಮಿಕ ನಂಬಿಕೆ ಮತ್ತು ಕೆಲವಕ್ಕೆ ಶಾಸ್ತ್ರದ ಆಧಾರವೂ ಇದೆ. ಸಾಮಾನ್ಯವಾಗಿ ಜ್ಯೋತಿಷ್ಯ ಕೇಳುವುದಕ್ಕೆ ಅಂತ ಹೋದಾಗ ಇಲ್ಲಿ ಉಲ್ಲೇಖ ಮಾಡಿರುವ ಕೆಲವು ಸ್ತೋತ್ರಗಳನ್ನೇ ಸಮಸ್ಯೆಗೆ ಪರಿಹಾರ ಎಂಬಂತೆ ಹೇಳುವುದು ಉಂಟು. ಒಂದು ವೇಳೆ ಸಮಯವಿದ್ದಲ್ಲಿ ಪಠಣ ಮಾಡಿ. ಅದಾಗದಿದ್ದಲ್ಲಿ ಯೂಟ್ಯೂಬ್ ನಲ್ಲಿ ಸಿಗುವಂಥ ಈ ಸ್ತೋತ್ರಗಳನ್ನು ಶ್ರವಣ ಮಾಡಿ. ಅದಕ್ಕೂ ಮುನ್ನ ಒಮ್ಮೆಯಾದರೂ ಇವುಗಳ ಅರ್ಥವನ್ನು ತಿಳಿದುಕೊಳ್ಳುವುದಕ್ಕೆ ಪ್ರಯತ್ನವನ್ನು ಮಾಡಿ. ಹಾಗಂತ ಇವೇ ಸ್ತೋತ್ರಗಳು ಮಾತ್ರ ಪಠಣ- ಶ್ರವಣ ಮಾಡಬೇಕು ಎಂದರ್ಥವಲ್ಲ. ಆದರೆ ಇಲ್ಲಿ ಉಲ್ಲೇಖಿಸಿರುವುದು ಎಲ್ಲ ವ್ಯಕ್ತಿಯ- ವಯಸ್ಸಿನವರು ಬದುಕಿನಲ್ಲಿ ಬಯಸುವಂಥ ವಿಚಾರಗಳು ಆಗಿರುತ್ತವೆ ಎಂಬ ಕಾರಣಕ್ಕೆ ಈ ಲೇಖನವನ್ನು ಸಿದ್ಧಪಡಿಸಲಾಗಿದೆ.
ದೈನಂದಿನ ಬದುಕಿಗೆ ಈ ಐದು ಸ್ತೋತ್ರಗಳ ಪಠಣ- ಶ್ರವಣದಿಂದ ನಾನಾ ರೀತಿ ಅನುಗ್ರಹ ಆಗುತ್ತದೆ. ಅವು ಏನೆಂದು ತಿಳಿಯಲು ಮುಂದೆ ಓದಿ.
1. ಕನಕಧಾರಾ ಸ್ತೋತ್ರ: ಸಮೃದ್ಧಿ
ಆದಿ ಶಂಕರಾಚಾರ್ಯರು ರಚನೆ ಮಾಡಿದ ಈ ಅದ್ಭುತ ಸ್ತೋತ್ರವು ಮಹಾಲಕ್ಷ್ಮಿಯ ಕೃಪೆಯನ್ನು ಪಡೆಯಲು ಇರುವ ಸುಲಭ ಮಾರ್ಗವಾಗಿದೆ.
ಪ್ರಯೋಜನಗಳು: ಈ ಸ್ತೋತ್ರದ ಶ್ರವಣ- ಪಠಣದಿಂದ ಮನೆಯಲ್ಲಿನ ಆರ್ಥಿಕ ಮುಗ್ಗಟ್ಟುಗಳು ದೂರ ಆಗುತ್ತವೆ. ಕೇವಲ ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಮಾತ್ರ ಅಲ್ಲದೆ, ಜೀವನದಲ್ಲಿ ಒಂದು ರೀತಿಯ ಸ್ಥಿರತೆ ಮತ್ತು ಮಂಗಳಕರ ಭಾವನೆಯನ್ನು ಇದು ಮೂಡಿಸುತ್ತದೆ. ವಿಶ್ರಾಂತಿಯಲ್ಲಿರುವ ಒಮ್ಮೆ ಕೇಳಿ ನೋಡಿ, ಭವಿಷ್ಯದ ಬಗ್ಗೆ ಭರವಸೆಯನ್ನು ನೀಡುತ್ತದೆ.
2. ಶ್ಯಾಮಲಾ ದಂಡಕ: ಜ್ಞಾನ ಮತ್ತು ವಾಕ್ಚಾತುರ್ಯ
ಮಹಾಕವಿ ಕಾಳಿದಾಸನ ಭಕ್ತಿ ಮತ್ತು ಪಾಂಡಿತ್ಯದ ಈ ದಂಡಕವು ಮಾತಂಗಿ (ಸರಸ್ವತಿ) ದೇವಿಯ ಸ್ತುತಿಯಾಗಿದೆ.
ಪ್ರಯೋಜನಗಳು: ಇದನ್ನು ಪಠಿಸುವುದರಿಂದ ಬುದ್ಧಿಶಕ್ತಿ ಚುರುಕಾಗುತ್ತದೆ ಮತ್ತು ಮಾತಿನಲ್ಲಿ ಸ್ಪಷ್ಟತೆ ಲಭಿಸುತ್ತದೆ. ವಿದ್ಯಾರ್ಥಿಗಳಿಗೆ ಮತ್ತು ಸೃಜನಶೀಲ ಕಾರ್ಯಗಳಲ್ಲಿ ತೊಡಗಿರುವವರಿಗೆ ಇದು ವರದಾನ. ಹೊಸ ಹೊಸ ವಿಚಾರಗಳನ್ನು ಕಲಿಯಲು ಮತ್ತು ಅರ್ಥ ಮಾಡಿಕೊಳ್ಳಲು ಶ್ಯಾಮಲಾ ದಂಡಕ ಪ್ರೇರಣೆ ನೀಡುತ್ತದೆ.
3. ವಿಷ್ಣು ಸಹಸ್ರನಾಮ: ಶಾಂತಿ ಮತ್ತು ರಕ್ಷಣೆ
ವಿಶ್ವದ ಒಡೆಯನಾದ ಮಹಾವಿಷ್ಣುವಿನ ಸಾವಿರ ನಾಮಗಳ ಈ ಪಠಣವು ಸರ್ವವ್ಯಾಪಿ ಶಕ್ತಿಯನ್ನು ಹೊಂದಿದೆ. ಇದನ್ನು ಯುಧಿಷ್ಠಿರನಿಗೆ ಭೀಷ್ಮಾಚಾರ್ಯರು ಹೇಳಿದ್ದು.
ಪ್ರಯೋಜನಗಳು: ಮಾನಸಿಕ ಒತ್ತಡ ಹೋಗಲಾಡಿಸಲು ಇದು ಅತ್ಯಂತ ಶಕ್ತಿಶಾಲಿ. ಜಾತಕದಲ್ಲಿರುವ ದೋಷಗಳ ಪ್ರಭಾವವನ್ನು ತಗ್ಗಿಸಿ, ಜೀವನದಲ್ಲಿ ನೆಮ್ಮದಿ ತರುತ್ತದೆ. ನಿದ್ದೆಯ ಸಮಸ್ಯೆ ಇರುವವರು ಅಥವಾ ಮಾನಸಿಕ ಸಮಸ್ಯೆಯಿಂದ ಭಯ ಇರುವವರು ಇದನ್ನು ಕೇಳುವುದರಿಂದ ಅಥವಾ ಪಠಿಸುವುದರಿಂದ ಶಾಂತಿ ಲಭಿಸುತ್ತದೆ. ಇದರ ಫಲ ಸಹಸ್ರ ಸಹಸ್ರ ಆರೋಗ್ಯದಿಂದ ಅಧ್ಯಾತ್ಮ ಸಾಧನೆ ತನಕ ಇದೆ.
ರುದ್ರಾಭಿಷೇಕದ ಮಹತ್ವ ಮತ್ತು ಫಲಗಳು: ಧನುರ್ಮಾಸದಲ್ಲಿ ಈಶ್ವರನ ಅಭಿಷೇಕದಿಂದ ಸಕಲ ಕಷ್ಟ ನಿವಾರಣೆ
4. ಹನುಮಾನ್ ಚಾಲೀಸಾ: ಧೈರ್ಯ ಮತ್ತು ಸಂಕಲ್ಪ
ಗೋಸ್ವಾಮಿ ತುಳಸೀದಾಸರ ಈ ರಚನೆಯು ಹನುಮಂತನ ಅಪ್ರತಿಮ ಶಕ್ತಿ ಮತ್ತು ಭಕ್ತಿಯ ಸಂಕೇತವಾಗಿದೆ.
ಪ್ರಯೋಜನಗಳು: ಹನುಮಾನ್ ಚಾಲೀಸಾ ಪಠಣವು ಆತ್ಮವಿಶ್ವಾಸವನ್ನು ತುಂಬುತ್ತದೆ. ಜೀವನದಲ್ಲಿ ಎದುರಾಗುವ ಯಾವುದೇ ಅಡೆತಡೆಗಳನ್ನು ಎದುರಿಸುವ ಶಕ್ತಿಯನ್ನು ಇದು ನೀಡುತ್ತದೆ. ನಕಾರಾತ್ಮಕ ಆಲೋಚನೆಗಳನ್ನು ದೂರ ಮಾಡಿ, ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಸಂಕಲ್ಪ ಬಲವನ್ನು ಇದು ನೀಡುತ್ತದೆ.
5. ಆದಿತ್ಯ ಹೃದಯಂ: ಆರೋಗ್ಯ ಮತ್ತು ವಿಜಯ
ಸೂರ್ಯನ ಆರಾಧನೆಯು ನಮ್ಮ ದೇಹ ಮತ್ತು ಮನಸ್ಸಿಗೆ ಶಕ್ತಿ ತುಂಬುವ ಕ್ರಿಯೆಯಾಗಿದೆ.
ಪ್ರಯೋಜನಗಳು: ಇದು ದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ. ವಿಶೇಷವಾಗಿ ಕಣ್ಣಿನ ದೃಷ್ಟಿ ಮತ್ತು ಹೃದಯದ ಆರೋಗ್ಯಕ್ಕೆ ಇದು ಸಹಕಾರಿ. ಶತ್ರುಗಳ ಮೇಲೆ ಅಥವಾ ಕಷ್ಟಗಳ ಮೇಲೆ ವಿಜಯ ಸಾಧಿಸಲು ಇದು ದೈವಿಕ ಬಲವನ್ನು ನೀಡುತ್ತದೆ. ಸೂರ್ಯನ ಕಿರಣಗಳಂತೆ ನಮ್ಮ ವ್ಯಕ್ತಿತ್ವವು ಪ್ರಕಾಶಿಸಲು ಇದು ಸಹಾಯ ಮಾಡುತ್ತದೆ.
ಲೇಖನ- ಶ್ರೀನಿವಾಸ ಮಠ





