ವೈದಿಕ ಜ್ಯೋತಿಷ್ಯದ ಅನ್ವಯ ಸೃಷ್ಟಿ ಆಗುವ ಕೆಲವು ಯೋಗಗಳು ಹೆಚ್ಚಿನ ಸಂಖ್ಯೆಯ ಜನರಲ್ಲಿ ಕಂಡುಬರುತ್ತದೆ. ಆದರೂ ಅದು ಯೋಗ ತರುವುದು ಹೌದು. ಅಂಥದ್ದೇ ಒಂದು ಯೋಗ- ಬುಧಾದಿತ್ಯ ಯೋಗ. ಅಂದರೆ ಒಂದೇ ರಾಶಿಯಲ್ಲಿ ಬುಧ ಹಾಗೂ ರವಿ ಒಟ್ಟಿಗೆ ಇದ್ದರೆ ಅದರಿಂದ ಸೃಷ್ಟಿ ಆಗುವಂಥದ್ದು. ಈ ಎರಡೂ ಗ್ರಹಗಳ ಚಲನೆ ವೇಗ ಒಂದೇ ಆಗಿರುವುದರಿಂದ ಬಹುಪಾಲು ಜಾತಕದಲ್ಲಿ ಈ ಯೋಗ ಕಂಡುಬರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಭಪ್ರದ ಹಾಗೂ ಸಾಮಾನ್ಯವಾದ ಯೋಗಗಳಲ್ಲಿ ‘ಬುಧಾದಿತ್ಯ ಯೋಗ’ ಕೂಡ ಒಂದು. ಬುಧಾದಿತ್ಯ ಯೋಗದ ಕುರಿತಾದ ಸಮಗ್ರ ಮಾಹಿತಿ ಮತ್ತು ವಿವಿಧ ಭಾವಗಳಲ್ಲಿ (ಮನೆಗಳಲ್ಲಿ) ಇದರ ಫಲಗಳು ಇಲ್ಲಿವೆ:
ಬುಧಾದಿತ್ಯ ಯೋಗ ಫಲ ಏನು?
ಸೂರ್ಯನನ್ನು ‘ಆತ್ಮಕಾರಕ’ ಎನ್ನಲಾಗುತ್ತದೆ. ಇದು ತೇಜಸ್ಸು, ಅಧಿಕಾರ ಮತ್ತು ಆತ್ಮವಿಶ್ವಾಸವನ್ನು ಪ್ರತಿನಿಧಿಸುತ್ತದೆ. ಬುಧನನ್ನು ‘ಬುದ್ಧಿಕಾರಕ’ ಎನ್ನಲಾಗುತ್ತದೆ, ಇದು ಜ್ಞಾನ, ಮಾತು ಮತ್ತು ತರ್ಕವನ್ನು ಪ್ರತಿನಿಧಿಸುತ್ತದೆ. ಈ ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಸೇರಿದಾಗ ಜಾತಕನಿಗೆ ಅದ್ಭುತ ಬುದ್ಧಿಶಕ್ತಿ, ಕೀರ್ತಿ ಮತ್ತು ಯಶಸ್ಸು ದೊರೆಯುತ್ತದೆ. ಇದನ್ನು ‘ನಿಪುಣ ಯೋಗ’ ಎಂದೂ ಕರೆಯುತ್ತಾರೆ.
ಗಮನಿಸಿ: ಆದರೆ ಬುಧನು ಸೂರ್ಯನಿಂದ ಅತಿಯಾಗಿ ದಗ್ಧನಾಗದೇ (Combust), ಶುಭ ಸ್ಥಾನಗಳಲ್ಲಿದ್ದಾಗ ಮಾತ್ರ ಪೂರ್ಣ ಫಲ ನೀಡುತ್ತಾನೆ. ರವಿ ಗ್ರಹಕ್ಕೆ ಸಿಂಹ ರಾಶಿ ಸ್ವಕ್ಷೇತ್ರ, ಮೇಷ ರಾಶಿಯು ಉಚ್ಚಕ್ಷೇತ್ರವಾಗುತ್ತದೆ, ಇನ್ನು ತುಲಾ ರಾಶಿ ನೀಚಕ್ಷೇತ್ರವಾಗುತ್ತದೆ. ಅದೇ ಬುಧನಿಗೆ ಮಿಥುನ- ಕನ್ಯಾ ರಾಶಿಗಳು ಸ್ವಕ್ಷೇತ್ರ, ಕನ್ಯಾ ರಾಶಿಯು ಉಚ್ಚ ಕ್ಷೇತ್ರ ಮತ್ತು ಮೀನರಾಶಿ ನೀಚಕ್ಷೇತ್ರ ಆಗುತ್ತದೆ.
ಅಖಂಡ ಶ್ರೀಮಂತ ಯೋಗ: ನಿಮ್ಮ ಜಾತಕದಲ್ಲಿ ಈ ಅದೃಷ್ಟದ ಯೋಗವಿದೆಯೇ? ಇಲ್ಲಿದೆ ಸಂಪೂರ್ಣ ವಿವರ!
ವಿವಿಧ ಭಾವಗಳಲ್ಲಿ ಬುಧಾದಿತ್ಯ ಯೋಗದ ಫಲಗಳು
ಲಗ್ನದಿಂದ (ಮೊದಲ ಮನೆಯಿಂದ) ಹನ್ನೆರಡನೇ ಮನೆಯವರೆಗೆ ಈ ಯೋಗವು ಈ ಕೆಳಗಿನ ಫಲಗಳನ್ನು ನೀಡುತ್ತದೆ:
1. ಪ್ರಥಮ ಭಾವ (ಲಗ್ನ ಸ್ಥಾನ)
ಲಗ್ನದಲ್ಲಿ ಈ ಯೋಗವಿದ್ದರೆ ಜಾತಕನು ಅತ್ಯಂತ ಬುದ್ಧಿವಂತ, ಸುಂದರ ಮತ್ತು ಆಕರ್ಷಕ ವ್ಯಕ್ತಿತ್ವ ಉಳ್ಳವನಾಗಿರುತ್ತಾನೆ. ಸಮಾಜದಲ್ಲಿ ಗೌರವ, ಕೀರ್ತಿ ಲಭಿಸುತ್ತದೆ. ಗಣಿತ ಮತ್ತು ಸಂಶೋಧನೆಯಲ್ಲಿ ಆಸಕ್ತಿ ಇರುತ್ತದೆ.
2. ದ್ವಿತೀಯ ಭಾವ (ಧನ ಸ್ಥಾನ)
ಮಾತಿನ ಚಾತುರ್ಯ ಹೆಚ್ಚಿರುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಸ್ಥಿರ ಆಸ್ತಿ ಗಳಿಸುವ ಯೋಗವಿರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಅಥವಾ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ.
3. ತೃತೀಯ ಭಾವ (ಪರಾಕ್ರಮ ಸ್ಥಾನ)
ಜಾತಕನು ಸಾಹಸಿಯಾಗಿರುತ್ತಾನೆ. ಬರವಣಿಗೆ, ಪತ್ರಿಕೋದ್ಯಮ ಅಥವಾ ಸಂವಹನ ಕಲೆಯಲ್ಲಿ ಪ್ರವೀಣನಾಗುತ್ತಾನೆ. ಒಡಹುಟ್ಟಿದವರಿಂದ ಸಹಾಯ ದೊರೆಯುತ್ತದೆ.
4. ಚತುರ್ಥ ಭಾವ (ಸುಖ ಸ್ಥಾನ)
ಸುಖಮಯ ಜೀವನ ನಡೆಸುತ್ತಾನೆ. ಉತ್ತಮ ಮನೆ, ವಾಹನ ಯೋಗವಿರುತ್ತದೆ. ತಾಯಿಯ ಕಡೆಯಿಂದ ಲಾಭ ಮತ್ತು ಉನ್ನತ ಶಿಕ್ಷಣ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ.
5. ಪಂಚಮ ಭಾವ (ಪುತ್ರ/ವಿದ್ಯಾ ಸ್ಥಾನ)
ಅಸಾಧಾರಣ ಬುದ್ಧಿಶಕ್ತಿ ಇರುತ್ತದೆ. ಸೃಜನಶೀಲತೆ (Creativity) ಹೆಚ್ಚಿರುತ್ತದೆ. ಸಮಾಜದಲ್ಲಿ ಸಲಹೆಗಾರರಾಗಿ ಅಥವಾ ಮಂತ್ರಿಗಳಾಗಿ ಗುರುತಿಸಿಕೊಳ್ಳುತ್ತಾರೆ. ಉತ್ತಮ ಸಂತಾನ ಭಾಗ್ಯವಿರುತ್ತದೆ.
6. ಷಷ್ಠ ಭಾವ (ಶತ್ರು/ರೋಗ ಸ್ಥಾನ)
ಇಲ್ಲಿ ಈ ಯೋಗವು ಮಿಶ್ರ ಫಲ ನೀಡುತ್ತದೆ. ಶತ್ರುಗಳನ್ನು ಸೋಲಿಸುವ ಸಾಮರ್ಥ್ಯವಿರುತ್ತದೆ. ಕಾನೂನು ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ ಯಶಸ್ಸು ಕಾಣಬಹುದು. ಆದರೆ ಆರೋಗ್ಯದ ಬಗ್ಗೆ ಕಾಳಜಿ ಇರಲಿ.
7. ಸಪ್ತಮ ಭಾವ (ಕಳತ್ರ ಸ್ಥಾನ)
ಸಮಾಜದಲ್ಲಿ ಪ್ರತಿಷ್ಠೆ ಸಿಗುತ್ತದೆ. ಸಂಗಾತಿಯು ಬುದ್ಧಿವಂತರಾಗಿರುತ್ತಾರೆ ಹಾಗೂ ಸಭ್ಯ ವ್ಯಕ್ತಿಯಾಗಿರುತ್ತಾರೆ. ವ್ಯಾಪಾರ ಮತ್ತು ಪಾಲುದಾರಿಕೆಯಲ್ಲಿ ಉತ್ತಮ ಲಾಭವಿರುತ್ತದೆ.
8. ಅಷ್ಟಮ ಭಾವ (ಆಯುಷ್ಯ ಸ್ಥಾನ)
ಗೂಢ ವಿಷಯಗಳಲ್ಲಿ (Occult Science) ಆಸಕ್ತಿ ಇರುತ್ತದೆ. ಪಿತ್ರಾರ್ಜಿತ ಆಸ್ತಿ ಸಿಗುವ ಸಂಭವವಿದೆ. ಆದರೆ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರುಗಳಿರಬಹುದು. ಸಂಶೋಧಕರಿಗೆ ಇದು ಒಳ್ಳೆಯ ಸ್ಥಾನ.
9. ನವಮ ಭಾವ (ಭಾಗ್ಯ ಸ್ಥಾನ)
ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಇರುತ್ತದೆ. ವಿದೇಶ ಪ್ರಯಾಣ ಮತ್ತು ಅಲ್ಲಿ ಯಶಸ್ಸು ಕಾಣುವ ಯೋಗವಿದೆ. ತಂದೆಯ ಸಹಕಾರ ಮತ್ತು ಅದೃಷ್ಟದ ಬೆಂಬಲ ಸದಾ ಇರುತ್ತದೆ.
10. ದಶಮ ಭಾವ (ಕರ್ಮ ಸ್ಥಾನ)
ವೃತ್ತಿಜೀವನದಲ್ಲಿ ಅತ್ಯುನ್ನತ ಸ್ಥಾನಕ್ಕೇರುತ್ತಾರೆ. ಸರ್ಕಾರಿ ಕೆಲಸ ಅಥವಾ ದೊಡ್ಡ ಕಂಪನಿಗಳಲ್ಲಿ ಉನ್ನತ ಅಧಿಕಾರ ಸಿಗುತ್ತದೆ. ಈ ಸ್ಥಾನದಲ್ಲಿ ಬುಧಾದಿತ್ಯ ಯೋಗವು ಅತ್ಯಂತ ಪ್ರಬಲವಾದ ಫಲ ನೀಡುತ್ತದೆ.
11. ಏಕಾದಶ ಭಾವ (ಲಾಭ ಸ್ಥಾನ)
ಹಲವು ಮೂಲಗಳಿಂದ ಆದಾಯ ಹರಿದುಬರುತ್ತದೆ. ಸಮಾಜದ ಗಣ್ಯ ವ್ಯಕ್ತಿಗಳ ಸ್ನೇಹವಿರುತ್ತದೆ. ಹೂಡಿಕೆಗಳಿಂದ ದೊಡ್ಡ ಮಟ್ಟದ ಲಾಭ ಗಳಿಸುತ್ತಾರೆ.
12. ದ್ವಾದಶ ಭಾವ (ವ್ಯಯ ಸ್ಥಾನ)
ಆಧ್ಯಾತ್ಮಿಕ ಚಿಂತನೆ ಹೆಚ್ಚಿರುತ್ತದೆ. ವಿದೇಶದಲ್ಲಿ ನೆಲೆಸುವ ಅಥವಾ ವಿದೇಶಿ ವ್ಯವಹಾರಗಳಿಂದ ಲಾಭ ಪಡೆಯುವ ಸಾಧ್ಯತೆ ಇರುತ್ತದೆ. ಅನಗತ್ಯ ಖರ್ಚುಗಳ ಬಗ್ಗೆ ಎಚ್ಚರವಿರಬೇಕು.
ಯೋಗದ ಬಲವನ್ನು ಹೆಚ್ಚಿಸುವುದು ಹೇಗೆ?
- ಬುಧನು ದುರ್ಬಲನಾಗಿದ್ದರೆ ಹಸಿರು ಹೆಸರು ಕಾಳನ್ನು ದಾನ ಮಾಡುವುದು ಅಥವಾ ಹಸಿರು ಬಟ್ಟೆ ಧರಿಸುವುದು ಒಳ್ಳೆಯದು.
- ಸೂರ್ಯನಿಗೆ ನಿತ್ಯ ಅರ್ಘ್ಯ ನೀಡುವುದು ಮತ್ತು ಆದಿತ್ಯ ಹೃದಯ ಸ್ತೋತ್ರ ಪಠಿಸುವುದು ಶುಭ ತರುತ್ತದೆ.
- ಗಣೇಶನ ಆರಾಧನೆ ಮಾಡುವುದರಿಂದ ಬುಧನ ಅನುಗ್ರಹ ದೊರೆಯುತ್ತದೆ.
ಲೇಖನ- ಶ್ರೀನಿವಾಸ ಮಠ





