ದೇವಾಲಯ ಅಶುದ್ಧಗೊಳ್ಳುವುದು ಹೇಗೆ? ಗ್ರಹಗತಿಗಳು ನೀಡುವ ಸಂದೇಶವೇನು?

A portrait of an astrologer in a traditional Hindu temple, holding a birth chart and contemplating. A blurred background with a temple deity and an overlay of astrological chart symbols.
ದೇವಾಲಯದ ಪಾವಿತ್ರ್ಯತೆ ಮತ್ತು ಮಲಿನತೆಯ ವಿಚಾರವನ್ನು ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಕೋನದಿಂದ ವಿಶ್ಲೇಷಣೆ

ಲೇಖನ- ಪ್ರಕಾಶ್ ಅಮ್ಮಣ್ಣಾಯ

ಒಂದು ದೇವಾಲಯಕ್ಕೆ ಸಂಬಂಧಿಸಿದಂತೆ ಪ್ರಶ್ನೆಯನ್ನು ಕೇಳಿದಾಗ ಅಲ್ಲಿನ ಶುದ್ಧತೆ- ಮಲಿನತೆಯನ್ನು ಹೇಗೆ ನಿರ್ಧರಿಸುವುದು ಎಂಬುದನ್ನು ವಿವರಿಸುವ ಲೇಖನ ಇಲ್ಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ದೇವಾಲಯ ಅಥವಾ ಮನೆಗಳು ಕೇವಲ ದಲಿತರ ಪ್ರವೇಶ ಅಥವಾ ಸ್ಪರ್ಶದಿಂದ ಮಲಿನವಾಗುತ್ತವೆ ಎಂದು ಹೇಳಲು ಯಾವುದೇ ಗ್ರಹಗತಿಗಳಲ್ಲಿ ಆಧಾರಗಳಿಲ್ಲ. ಶಾಸ್ತ್ರದ ಪ್ರಕಾರ ಮಲಿನತೆಗೆ ಮುಖ್ಯ ಕಾರಣಗಳು ವ್ಯಕ್ತಿಯ ಕರ್ಮ, ಆಚಾರದ ಲೋಪ ಮತ್ತು ಶ್ರದ್ಧೆಯ ಕೊರತೆ. ಇದನ್ನು ಜಾತಕ ಅಥವಾ ಪ್ರಶ್ನಾ ಕುಂಡಲಿಯ ಮೂಲಕ ಹೇಗೆ ವಿಶ್ಲೇಷಿಸಬಹುದು ಎಂಬ ವಿವರ ಇಲ್ಲಿದೆ:

ಭಾವಗಳ ಮೂಲಕ ಮಲಿನತೆಯ ವಿಶ್ಲೇಷಣೆ

  • ಚತುರ್ಥ ಭಾವ: ಇದು ಗೃಹ ಕ್ಷೇತ್ರ ಮತ್ತು ಆಲಯದ ಸ್ಥಿತಿಯನ್ನು ಸೂಚಿಸುತ್ತದೆ.
  • ಪಂಚಮ ಭಾವ: ಬಿಂಬ (ವಿಗ್ರಹ) ಮತ್ತು ಅರ್ಚಕರ ಸ್ಥಿತಿಯನ್ನು ತಿಳಿಸುತ್ತದೆ.
  • ದ್ವಿತೀಯ ಭಾವ: ದೇವರಿಗೆ ಅರ್ಪಿಸುವ ಆಹಾರ ಅಥವಾ ನೈವೇದ್ಯದ ಶುದ್ಧತೆಯನ್ನು ಪ್ರತಿನಿಧಿಸುತ್ತದೆ.
  • ತೃತೀಯ ಭಾವ: ನೈವೇದ್ಯಕ್ಕೆ ಬಳಸುವ ಪಾತ್ರೆಗಳ ಶುದ್ಧತೆಯನ್ನು ತೋರಿಸುತ್ತದೆ.

ನೈವೇದ್ಯ ದೋಷಗಳು (ದ್ವಿತೀಯ ಮತ್ತು ತೃತೀಯ ಭಾವ)

ದ್ವಿತೀಯದಲ್ಲಿ ಪಾಪಗ್ರಹ ಅಥವಾ ಶತ್ರು ಗ್ರಹಗಳಿದ್ದಾಗ ನೈವೇದ್ಯವು ‘ಅಪಥ್ಯ’ (ಅಶುದ್ಧ)ವಾಗುತ್ತದೆ. ತೃತೀಯ ಭಾವದ ಸ್ಥಿತಿಯನ್ನು ಆಧರಿಸಿ ಈ ಕೆಳಗಿನ ಕಾರಣಗಳಿಂದ ಮಲಿನತೆ ಉಂಟಾಗಬಹುದು:

  • ಪಾತ್ರೆಗಳ ಅಶುದ್ಧತೆ: ತೊಳೆಯದ ಅಥವಾ ಮಲಿನವಾದ ಪಾತ್ರೆಗಳಲ್ಲಿ ನೈವೇದ್ಯ ಸಿದ್ಧಪಡಿಸುವುದು.
  • ಅಸಮರ್ಪಕ ಅಡುಗೆ: ಸೀದುಹೋದ ಅಥವಾ ಅರ್ಧಂಬರ್ಧ ಬೆಂದ ಆಹಾರ.
  • ಬಾಹ್ಯ ಕಣಗಳು: ಆಹಾರದಲ್ಲಿ ತಲೆಕೂದಲು ಅಥವಾ ಕ್ರಿಮಿ-ಕೀಟಗಳು ಇರುವುದು.
  • ಉಚ್ಛಿಷ್ಟ (ಎಂಜಲು): ದೇವರಿಗೆ ಅರ್ಪಿಸುವ ಮೊದಲೇ ಯಾರಾದರೂ ಆಹಾರವನ್ನು ಸೇವಿಸುವುದು ಅಥವಾ ಎಂಜಲು ಮಾಡುವುದು.
  • ಅಶುದ್ಧ ಸಿದ್ಧತೆ: ಸ್ನಾನ ಮಾಡದೆ, ಮಡಿ ಇಲ್ಲದೆ ಒಲೆಗೆ ಬೆಂಕಿ ಹಾಕುವುದು ಅಥವಾ ಅಡುಗೆ ಮಾಡುವಾಗ ಗುಟ್ಕಾ, ಎಲೆ-ಅಡಿಕೆ ಸೇವಿಸುವುದು ಮಹಾಪರಾಧ.
  • ಪ್ರಾಣಿ ಸ್ಪರ್ಶ: ಬೆಕ್ಕು ಅಥವಾ ನಾಯಿಗಳ ಸ್ಪರ್ಶವಾದರೆ ಅದು ಮಲಿನವೆನಿಸುತ್ತದೆ.
  • ದೃಷ್ಟಿ ದೋಷ: ಅಡುಗೆ ಮಾಡುವಾಗ ಬೇರೆಯವರು ಆಸೆಯಿಂದ ನೋಡಿ ಬಾಯಲ್ಲಿ ನೀರೂರಿಸಿದರೆ ಅದು ‘ದೃಷ್ಟಿ ಮಲಿನ’ವಾಗುತ್ತದೆ.
  • ರಕ್ಷಣೆ ಇಲ್ಲದಿರುವುದು: ನೈವೇದ್ಯವನ್ನು ಮುಚ್ಚಿಡದಿದ್ದಾಗ ಅದರ ಮೇಲೆ ಪಕ್ಷಿಗಳು ಹಾರಾಡಿದರೆ ಅಥವಾ ಪ್ರಾಣಿಗಳು ನೋಡಿದರೆ ಅದರ ಪಾವಿತ್ರ್ಯತೆ ಕೆಡುತ್ತದೆ.
  • ಸ್ಥಳ ಶುದ್ಧಿ: ನೈವೇದ್ಯದ ನಂತರ ಗೋಮಯ ಅಥವಾ ಅರಿಶಿನ ನೀರಿನಿಂದ ಸ್ಥಳ ಶುದ್ಧಿ ಮಾಡದಿದ್ದರೆ ಮಲಿನತೆ ಮುಂದುವರಿಯುತ್ತದೆ.

ಬಿಂಬ ಮತ್ತು ಆಡಳಿತ ದೋಷ (ಪಂಚಮ ಮತ್ತು ನವಮ ಭಾವ)

  • ಬಿಂಬ ದೋಷ: ಪಂಚಮ ಭಾವವು ಮಾಂದಿ ಯುಕ್ತವಾಗಿದ್ದರೆ ಅಥವಾ ಪಾಪಗ್ರಹಗಳ ಪ್ರಭಾವಕ್ಕೆ ಒಳಗಾಗಿದ್ದರೆ ವಿಗ್ರಹದ ಚೈತನ್ಯಕ್ಕೆ ಮಲಿನತೆಯ ದೋಷ ತಟ್ಟುತ್ತದೆ.
  • ನಿರ್ವಹಣಾ ಲೋಪ: ನವಮ ಭಾವವು ಆಡಳಿತ ಮತ್ತು ಮೊಕ್ತೇಸರರನ್ನು ಸೂಚಿಸುತ್ತದೆ. ಇಲ್ಲಿನ ಅವ್ಯವಸ್ಥೆ (Mismanagement) ಅಥವಾ ಪೂರ್ವಗ್ರಹ ಪೀಡಿತ ನಿರ್ಧಾರಗಳು ಆಲಯದ ಅಶುದ್ಧತೆಗೆ ಕಾರಣವಾಗುತ್ತವೆ.

ಪುಣ್ಯಾಹ ವಾಚನ- ಪಂಚಗವ್ಯ ಪ್ರಾಶನ: ಈ ಶುದ್ಧೀಕರಣ ವಿಧಿಯ ಮಹತ್ವ, ಪ್ರಯೋಜನಗಳೇನು?

ಸೂತಕ ಮತ್ತು ಸಂಚಾರದ ಮಿತಿ

ಯಾರೋ ಅಜ್ಞಾನತಃ ಸೂತಕದಲ್ಲಿ ದೇವಾಲಯಕ್ಕೆ ಬಂದರೆ ಅದು ಆಲಯಕ್ಕೆ ದೋಷವಲ್ಲ, ಅದು ಬಂದ ವ್ಯಕ್ತಿಗೆ ಸಂಬಂಧಿಸಿದ್ದು. ಆದರೆ ದೋಷವಿದೆ ಎಂದು ತಿಳಿದೂ ಅರ್ಚಕರು ಅಥವಾ ಸಿಬ್ಬಂದಿ ನಿಯಮ ಉಲ್ಲಂಘಿಸಿದರೆ ಅದು ‘ಮಲಿನ ದೋಷ’ವಾಗುತ್ತದೆ.

ದೇವಾಲಯದ ಪಾವಿತ್ರ್ಯತೆ ಎಂಬುದು ಜಾತಿಯ ಮೇಲೆ ನಿಂತಿಲ್ಲ. ಗರ್ಭಗುಡಿ ಅತ್ಯಂತ ಶುದ್ಧ ಪ್ರದೇಶ. ಅಲ್ಲಿ ಅರ್ಚಕರಿಗಾಗಲಿ ಅಥವಾ ಇತರರಿಗಾಗಲಿ ಅವರವರ ಕರ್ತವ್ಯದ ಮಿತಿ ಇರುತ್ತದೆ. “ನಾನು ಬ್ರಾಹ್ಮಣ, ಹಾಗಾಗಿ ಎಲ್ಲಿ ಬೇಕಾದರೂ ಹೋಗಬಹುದು” ಎನ್ನುವುದು ಎಷ್ಟು ತಪ್ಪೋ, “ನನಗೂ ಹಕ್ಕಿದೆ” ಎಂದು ನಿಯಮ ಮೀರಿ ಗರ್ಭಗುಡಿ ಪ್ರವೇಶಿಸುವುದು ಅಷ್ಟೇ ತಪ್ಪು. ಪ್ರತಿಯೊಬ್ಬರೂ ತಮ್ಮ ಮಿತಿಯೊಳಗೆ ನಿಂತು ಭಕ್ತಿಯಿಂದ ಸೇವೆ ಸಲ್ಲಿಸುವುದೇ ನಿಜವಾದ ಶುಚಿತ್ವ.

ಪ್ರೇತ ದೋಷ ಮತ್ತು ಮುಕ್ತಿ

ದೇವಾಲಯದ ಆವರಣದಲ್ಲಿ ಮಾಡಬಾರದ ಅಪಚಾರಗಳನ್ನು ಮಾಡಿದವರು ‘ಪ್ರೇತತ್ವ’ವನ್ನು ಹೊಂದುತ್ತಾರೆ. ಅಂತಹ ಆತ್ಮಗಳಿಗೆ ಮೋಕ್ಷ ಸಿಗುವವರೆಗೆ ಅಥವಾ ಶಾಸ್ತ್ರೋಕ್ತವಾಗಿ ಉಚ್ಚಾಟನೆ ಮಾಡುವವರೆಗೆ ಆಲಯವು ಮಲಿನವಾಗಿರುತ್ತದೆ. ಮಾಂದಿಯ ಸ್ಥಿತಿಯನ್ನು ಅವಲೋಕಿಸಿ ಅಂತಹ ಪ್ರೇತಗಳ ಇರುವಿಕೆಯನ್ನು ಪತ್ತೆ ಹಚ್ಚಬಹುದು.

ಕೊನೆ ಮಾತು:

ಶುದ್ಧ ಕರ್ಮ ನೀತಿಯೇ ಮಲಿನತೆಯನ್ನು ತಡೆಯುವ ಏಕೈಕ ಮಾರ್ಗ. ಇಲ್ಲಿ ಮನುಷ್ಯ ನಿರ್ಮಿತ ಜಾತಿ ಪದ್ಧತಿಗಿಂತ, ಮಾಡುವ ಕೆಲಸದಲ್ಲಿನ ಪಾವಿತ್ರ್ಯತೆ ಮತ್ತು ಶಾಸ್ತ್ರೋಕ್ತ ಮಡಿವಂತಿಕೆಯೇ ಮುಖ್ಯವಾಗುತ್ತದೆ.

ನಿರೂಪಣೆ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts