ಮನುಷ್ಯ ಎಷ್ಟೇ ಪ್ರಯತ್ನ ಪಟ್ಟರೂ ಕೆಲವೊಮ್ಮೆ ಯಶಸ್ಸು ಸಿಗುವುದಿಲ್ಲ. ಬಡತನ, ಸಾಲದ ಸುಳಿ ಮತ್ತು ದಾರಿದ್ರ್ಯವು ಮನುಷ್ಯನನ್ನು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಕುಗ್ಗಿಸುತ್ತದೆ. ಇಂತಹ ಸಂದರ್ಭದಲ್ಲಿ ವೈಯಕ್ತಿಕ ಪ್ರಯತ್ನದ ಜೊತೆಗೆ ದೈವಿಕ ಬಲವೂ ಅತಿ ಮುಖ್ಯ. ನಮ್ಮ ಪುರಾಣ ಮತ್ತು ಶಾಸ್ತ್ರಗಳಲ್ಲಿ ದಾರಿದ್ರ್ಯವನ್ನು ಒಂದು ‘ಮಹಾರೋಗ’ ಎಂದು ಕರೆಯಲಾಗಿದೆ. ಇದನ್ನು ಹೋಗಲಾಡಿಸಲು ದಾನ, ಹೋಮ ಮತ್ತು ಜಪಗಳೆಂಬ ತ್ರಿವಿಧ ಮಾರ್ಗಗಳನ್ನು ಸೂಚಿಸಲಾಗಿದೆ. ಕರ್ಮವಿಪಾಕ ಸಂಹಿತಾ ಎಂಬ ಗ್ರಂಥದಲ್ಲಿ ಈ ರೀತಿಯ ಪರಿಸ್ಥಿತಿಗೆ ಒಬ್ಬ ವ್ಯಕ್ತಿಯು ಮಾಡಿದ ಪಾಪದ ಫಲವೇ ಕಾರಣ ಎಂಬುದನ್ನು ವಿವರಿಸಲಾಗಿದೆ. ಗೊತ್ತಿದ್ದೋ ಗೊತ್ತಿಲ್ಲದೆಯೇ ಆದಂಥ ಪಾಪಗಳಿಗೆ ಪ್ರಾಯಶ್ಚಿತ್ತಾವಾಗಿ ಕೆಲವು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಮನುಷ್ಯ ಪ್ರಯತ್ನಗಳು ಅನುಕೂಲವಾಗಿ ಮಾರ್ಪಡುತ್ತವೆ. ಆದರೆ ನೆನಪಿರಲಿ, ಈ ರೀತಿ ಜಪ- ಹೋಮ- ದಾನಗಳನ್ನು ಮಾಡಿ, ನಿಮ್ಮಷ್ಟಕ್ಕೆ ನೀವಿದ್ದು ಬಿಡಿ ಎಂದರ್ಥವಲ್ಲ. ಪ್ರಯತ್ನಗಳನ್ನು ನಿಲ್ಲಿಸಬಾರದು ಎಂಬುದು ಮುಖ್ಯ ಅಂಶ.
1. ಮಹಾಲಕ್ಷ್ಮೀ ಪ್ರತಿಮೆ ದಾನ (ಮೂರ್ತಿ ದಾನ)
ಲಕ್ಷ್ಮಿಯು ಐಶ್ವರ್ಯದ ದೇವತೆ. ದಾರಿದ್ರ್ಯವು ಲಕ್ಷ್ಮಿಯ ಅಭಾವದಿಂದ ಉಂಟಾಗುತ್ತದೆ. ಶಾಸ್ತ್ರಗಳ ಪ್ರಕಾರ, ಅತಿಯಾದ ಆರ್ಥಿಕ ಸಂಕಷ್ಟವಿದ್ದಾಗ ಅಥವಾ ದೀರ್ಘಕಾಲದ ರೋಗಗಳಿಂದ ಮುಕ್ತಿ ಪಡೆಯಲು ಚಿನ್ನ ಅಥವಾ ಬೆಳ್ಳಿಯ ಮಹಾಲಕ್ಷ್ಮೀ ಪ್ರತಿಮೆಯನ್ನು ಶಾಸ್ತ್ರೋಕ್ತವಾಗಿ ಪೂಜಿಸಿ, ಅದನ್ನು ಸತ್ಪಾತ್ರರಿಗೆ ದಾನ ಮಾಡಬೇಕು. ಇದನ್ನು ‘ಶ್ರೀಮೂರ್ತಿದಾನ’ ಎಂದು ಕರೆಯಲಾಗುತ್ತದೆ.
2. ಶ್ರೀಸೂಕ್ತ ಹೋಮ
ವೇದೋಕ್ತವಾದ ‘ಶ್ರೀಸೂಕ್ತ’ವು ಲಕ್ಷ್ಮಿಯನ್ನು ಪ್ರಸನ್ನಗೊಳಿಸಲು ಅತ್ಯಂತ ಶ್ರೇಷ್ಠವಾದ ಮಾರ್ಗ. ಕೇವಲ ಪಠಣ ಮಾಡುವುದಕ್ಕಿಂತ ತುಪ್ಪವನ್ನು (ಆಜ್ಯ) ಬಳಸಿ ಶ್ರೀಸೂಕ್ತದ ಮಂತ್ರಗಳ ಮೂಲಕ ಅಗ್ನಿಯಲ್ಲಿ ಹೋಮ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಮತ್ತು ದಾರಿದ್ರ್ಯ ಲಕ್ಷ್ಮಿ (ಅಲಕ್ಷ್ಮಿ) ನಿರ್ಗಮಿಸುತ್ತಾಳೆ ಎಂದು ನಂಬಲಾಗಿದೆ.
3. ಮಂತ್ರ ಜಪ ಮತ್ತು ಅನುಷ್ಠಾನ
ದೇವರ ಸನ್ನಿಧಾನದಲ್ಲಿ ಕುಳಿತು ಏಕಾಗ್ರತೆಯಿಂದ ಮಂತ್ರಗಳನ್ನು ಜಪಿಸುವುದು ಆತ್ಮಬಲವನ್ನು ಹೆಚ್ಚಿಸುತ್ತದೆ. ಮುಖ್ಯವಾಗಿ ಈ ಕೆಳಗಿನ ಸೂಕ್ತಗಳನ್ನು ಜಪಿಸುವುದು ಫಲಪ್ರದ:
- ಶ್ರೀಸೂಕ್ತ: ಸಂಪತ್ತು ಮತ್ತು ಸಮೃದ್ಧಿಗಾಗಿ.
- ಪವಮಾನ ಸೂಕ್ತ: ಪಾಪ ಪರಿಹಾರ ಮತ್ತು ಅಂತಃಕರಣ ಶುದ್ಧಿಗಾಗಿ.
- ಭಾಗ್ಯಸೂಕ್ತ: ಅದೃಷ್ಟ ಅಥವಾ ಭಾಗ್ಯೋದಯಕ್ಕಾಗಿ.
ಮನೆಯಲ್ಲಿ ಸ್ಫಟಿಕ ಶಿವಲಿಂಗವಿದ್ದರೆ ಏನೆಲ್ಲಾ ಲಾಭ? ಇಲ್ಲಿದೆ ಶಾಸ್ತ್ರೋಕ್ತ ವಿವರಣೆ
ಪ್ರಮಾಣ ಶ್ಲೋಕಗಳು ಮತ್ತು ಅರ್ಥ
ಈ ಮೇಲಿನ ಪರಿಹಾರಗಳಿಗೆ ಆಧಾರವಾಗಿರುವ ಶಾಸ್ತ್ರೋಕ್ತ ಶ್ಲೋಕಗಳು ಇಲ್ಲಿವೆ:
ಶ್ಲೋಕ 1:
ಶ್ರೀಮೂರ್ತಿದಾನಮಥವಾ ಕುರ್ಯಾದ್ರೋಗೋಪಶಾಂತಯೇ |
ಶ್ರೀಸೂಕ್ತೇನಾಜ್ಯಹೋಮಂವಾ ತಂತ್ರೋಕ್ತ ವಿಧಿನಾ ಚರೇತ್ ||
ಅರ್ಥ: ರೋಗಗಳ ಶಾಂತಿಗಾಗಿ ಮತ್ತು ದಾರಿದ್ರ್ಯದ ನಿವಾರಣೆಗಾಗಿ ಮಹಾಲಕ್ಷ್ಮಿಯ ಮೂರ್ತಿಯನ್ನು ದಾನ ಮಾಡಬೇಕು. ಅಥವಾ ತಂತ್ರೋಕ್ತ ವಿಧಾನದಂತೆ ಶ್ರೀಸೂಕ್ತ ಮಂತ್ರಗಳಿಂದ ತುಪ್ಪವನ್ನು ಬಳಸಿ ಹೋಮವನ್ನು ಮಾಡಬೇಕು.
ಶ್ಲೋಕ 2:
ಶ್ರೀಸೂಕ್ತಂ ಪಾವಮಾನಂ ಚ ಭಾಗ್ಯಸೂಕ್ತಮಥಾಪಿವಾ |
ಅನ್ಯದ್ವಾ ವೈದಿಕಂ ಜಪ್ಯಂ ಜಪೇದ್ದೇವಸ್ಯ ಸನ್ನಿಧೌ ||
ಅರ್ಥ: ಶ್ರೀಸೂಕ್ತ, ಪವಮಾನ ಸೂಕ್ತ, ಭಾಗ್ಯಸೂಕ್ತ ಅಥವಾ ಇತರ ಯಾವುದೇ ವೈದಿಕ ಮಂತ್ರಗಳನ್ನು ದೇವರ ಸನ್ನಿಧಾನದಲ್ಲಿ ಭಕ್ತಿಯಿಂದ ಜಪಿಸಬೇಕು.
ಶ್ಲೋಕ 3:
ಏವಮಾದಿ ವಿಧಾನೇನ ದಾನಹೋಮ ಜಪಾದಿನಾ |
ದಾರಿದ್ರ್ಯಾಖ್ಯಾನ್ಮಹಾರೋಗಾನ್ಮುಕ್ತೋಮರ್ತ್ಯೋಹಿಜಾಯತೇ ||
ಅರ್ಥ: ಈ ಮೇಲಿನ ದಾನ, ಹೋಮ ಮತ್ತು ಜಪಗಳೆಂಬ ವಿಧಿವಿಧಾನಗಳನ್ನು ಪಾಲಿಸುವುದರಿಂದ, ಮನುಷ್ಯನು ‘ದಾರಿದ್ರ್ಯ’ ಎನ್ನುವ ಮಹಾರೋಗದಿಂದ ಮುಕ್ತನಾಗಿ ಸುಖಿಯಾಗುತ್ತಾನೆ.
ಕೊನೆಮಾತು
ನಮ್ಮ ಶಾಸ್ತ್ರಗಳು ಕೇವಲ ಆಧ್ಯಾತ್ಮಿಕ ಚಿಂತನೆಯನ್ನು ಮಾತ್ರವಲ್ಲದೆ, ಲೌಕಿಕ ಸಮಸ್ಯೆಗಳಿಗೆ ಬೇಕಾದ ಪರಿಹಾರಗಳನ್ನೂ ನೀಡಿವೆ. ದಾರಿದ್ರ್ಯವು ಕೇವಲ ಹಣದ ಅಭಾವವಲ್ಲ, ಅದು ಶಕ್ತಿಯ ಅಭಾವವೂ ಹೌದು. ಮೇಲೆ ತಿಳಿಸಿದ ದಾನ, ಹೋಮ ಮತ್ತು ಜಪದ ಮೂಲಕ ನಾವು ದೈವಿಕ ಕೃಪೆಯನ್ನು ಪಡೆದು, ಧನಾತ್ಮಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು. ಶ್ರದ್ಧೆ ಮತ್ತು ಭಕ್ತಿಯಿಂದ ಈ ಕಾರ್ಯಗಳನ್ನು ಮಾಡಿದರೆ ಆರ್ಥಿಕ ಸುಧಾರಣೆ ಕಂಡುಬರುತ್ತದೆ.
ಲೇಖನ- ಶ್ರೀನಿವಾಸ ಮಠ





