ನವಗ್ರಹಗಳ ಪೈಕಿ ಪ್ರತಿ ಗ್ರಹಕ್ಕೂ ಮೀಸಲಾದ ದೇವಸ್ಥಾನಗಳು ತಮಿಳುನಾಡಿನಲ್ಲಿ ಇದೆ. ಆ ಪೈಕಿ ಅತ್ಯಂತ ಖ್ಯಾತಿ ಪಡೆದ ಕ್ಷೇತ್ರಗಳಲ್ಲಿ ಒಂದು ತಿರುನೆಲ್ಲಾರ್ ಶನೈಶ್ಚರ ದೇವಸ್ಥಾನ. ಜನ್ಮ ಜಾತಕದಲ್ಲಿ ಶನಿಯು ದುರ್ಬಲವಾಗಿದ್ದರೆ ಅಥವಾ ನೀಚ ಸ್ಥಿತಿಯಲ್ಲಿದ್ದರೆ, ಗೋಚಾರದಲ್ಲಿ ಸಾಡೇಸಾತ್, ಪಂಚಮ ಶನಿ (ಜನ್ಮ ರಾಶಿಯಿಂದ ಐದನೇ ಮನೆ), ಅಷ್ಟಮ ಶನಿ (ಜನ್ಮ ರಾಶಿಯಿಂದ ಎಂಟನೇ ಮನೆ), ಅರ್ಧಾಷ್ಟಮ ಶನಿ (ಜನ್ಮರಾಶಿಯಿಂದ ನಾಲ್ಕನೇ ಮನೆ) ಸಂಚಾರ ಮಾಡುವಾಗ ಪರಿಣಾಮ- ಪ್ರಭಾವ ತೀಕ್ಷ್ಣವಾಗಿರುತ್ತದೆ. ಅದರಿಂದ ಇಲ್ಲಿ ದರ್ಶನ ಮಾಡಿಕೊಂಡು, ಪೂಜೆ ಮಾಡಿಸಿಕೊಂಡು ಬರುವುದಕ್ಕೆ ಹೇಳಲಾಗುತ್ತದೆ.
ತಮಿಳುನಾಡಿನ ಕಾರೈಕಲ್ ಸಮೀಪ ಇರುವ ತಿರುನೆಲ್ಲಾರ್ ಭಾರತದ ಅತ್ಯಂತ ಪ್ರಸಿದ್ಧ ನವಗ್ರಹ ಕ್ಷೇತ್ರಗಳಲ್ಲಿ ಒಂದಾಗಿದೆ. ನವಗ್ರಹಗಳಲ್ಲಿ ಅತ್ಯಂತ ಪ್ರಭಾವಶಾಲಿ ಎಂದು ನಂಬಲಾದ ಶನಿದೇವನು ಇಲ್ಲಿ ಶಾಂತರೂಪದಲ್ಲಿ ನೆಲೆಸಿ, ಭಕ್ತರ ಕಷ್ಟಗಳನ್ನು ನಿವಾರಿಸುತ್ತಾನೆ.
ಕ್ಷೇತ್ರದ ಪೌರಾಣಿಕ ಮಹಿಮೆ ಮತ್ತು ನಳ ಮಹಾರಾಜ:
ತಿರುನೆಲ್ಲಾರ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಳ ಮಹಾರಾಜನಿಗೂ ಉಲ್ಲೇಖವಿದೆ. ಪುರಾಣದ ಪ್ರಕಾರ, ಶನಿಯ ಪ್ರಭಾವದಿಂದ (ಸಾಡೇಸಾತಿ) ತನ್ನ ರಾಜ್ಯ ಮತ್ತು ನೆಮ್ಮದಿಯನ್ನು ಕಳೆದುಕೊಂಡು ಕಂಗಾಲಾಗಿದ್ದ ನಳ ಮಹಾರಾಜನು ಅನೇಕ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸುತ್ತಾನೆ. ಅಂತಿಮವಾಗಿ ಇಲ್ಲಿನ ದರ್ಬಾರಣ್ಯೇಶ್ವರ ಸನ್ನಿಧಿಗೆ ಬಂದು, ಇಲ್ಲಿನ ಪವಿತ್ರ ತೀರ್ಥದಲ್ಲಿ ಸ್ನಾನ ಮಾಡಿ, ಈಶ್ವರನನ್ನು ಪೂಜಿಸಿದಾಗ ಆತನಿಗೆ ದೋಷಮುಕ್ತಿ ದೊರೆಯಿತು ಎಂದು ಹೇಳಲಾಗುತ್ತದೆ. ಈ ಕಾರಣದಿಂದಲೇ ಇಂದಿಗೂ ಶನಿ ದೋಷದಿಂದ ಬಳಲುವವರು, ಸಾಡೇಸಾತ್ ಶನಿ, ಅರ್ಧಾಷ್ಟಮ ಶನಿ, ಪಂಚಮ ಶನಿ ಅಥವಾ ಅಷ್ಟಮ ಶನಿಯ ಪ್ರಭಾವ ಇರುವವರು ಈ ಕ್ಷೇತ್ರಕ್ಕೆ ಬಂದು ಶನಿದೇವನ ಅನುಗ್ರಹ ಪಡೆಯುತ್ತಾರೆ.
ದೇವಸ್ಥಾನದ ದರ್ಶನ ಮತ್ತು ಪೂಜಾ ಸಮಯ:
ಭಕ್ತರು ತಮ್ಮ ಪ್ರಯಾಣವನ್ನು ಈ ಕೆಳಗಿನ ಸಮಯಕ್ಕೆ ಅನುಗುಣವಾಗಿ ಯೋಜಿಸುವುದು ಸೂಕ್ತ:
ಸಾಮಾನ್ಯ ದಿನಗಳಲ್ಲಿ (ಸೋಮವಾರ – ಶುಕ್ರವಾರ ಮತ್ತು ಭಾನುವಾರ):
ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ.
ಸಂಜೆ 4ಗಂಟೆಯಿಂದ ರಾತ್ರಿ 9 ಗಂಟೆವರೆಗೆ.
ಶನಿವಾರ (ವಿಶೇಷ ದಿನ):
ಶನಿವಾರದಂದು ದೇವಸ್ಥಾನವು ಇಡೀ ದಿನ ತೆರೆದಿರುತ್ತದೆ.
ಬೆಳಿಗ್ಗೆ 5ರಿಂದ ರಾತ್ರಿ 9ರ ವರೆಗೆ ದರ್ಶನ ಪಡೆಯಬಹುದು (ಮಧ್ಯಾಹ್ನ ಬಾಗಿಲು ಮುಚ್ಚುವುದಿಲ್ಲ).
ಪವಿತ್ರ ನಳ ತೀರ್ಥ ಮತ್ತು ದರ್ಶನದ ಕ್ರಮ:
ಈ ದೇವಸ್ಥಾನದಲ್ಲಿ ದರ್ಶನ ಪಡೆಯಲು ಒಂದು ಕ್ರಮವಿದೆ.
ನಳ ತೀರ್ಥ ಸ್ನಾನ: ಮೊದಲು ದೇವಸ್ಥಾನದ ಹೊರಭಾಗದಲ್ಲಿರುವ ‘ನಳ ತೀರ್ಥ’ ಎಂಬ ಪವಿತ್ರ ಕೊಳದಲ್ಲಿ ಸ್ನಾನ ಮಾಡಬೇಕು. ಸ್ನಾನದ ನಂತರ ಹಳೆಯ ಬಟ್ಟೆಯನ್ನು ಅಲ್ಲೇ ಬಿಡುವುದು ಇಲ್ಲಿನ ವಾಡಿಕೆ. ಆದರೆ ಇದಕ್ಕೆ ಯಾವುದೇ ಪೌರಾಣಿಕ ಹಿನ್ನೆಲೆ ಇಲ್ಲ. ಹೀಗೆ ಅಲ್ಲಿಗೆ ಭೇಟಿ ನೀಡುವವರೆಲ್ಲ ಮಾಡುತ್ತಾ ಬಂದಲ್ಲಿ ಅಲ್ಲಿನ ಪರಿಸರ ಹಾಳಾಗುವುದಕ್ಕೆ ಕಾರಣ ಆಗುತ್ತದೆ. ಆದ್ದರಿಂದ ಇಂಥದ್ದೆಲ್ಲ ಮಾಡುವುದಕ್ಕೆ ಹೋಗಬೇಡಿ.
ಗಣಪತಿ ದರ್ಶನ: ಸ್ನಾನದ ನಂತರ ಮೊದಲು ವಿನಾಯಕನ ದರ್ಶನ ಮಾಡಬೇಕು.
ಶನೈಶ್ಚರ ದರ್ಶನ: ಆಮೇಲೆ ಈ ಕ್ಷೇತ್ರದ ಪ್ರಮುಖ ಆಕರ್ಷಣೆಯಾದ ಶನಿದೇವನ ಸನ್ನಿಧಿಗೆ ಹೋಗಿ ಎಳ್ಳೆಣ್ಣೆ ದೀಪ ಹಚ್ಚಿ ಪ್ರಾರ್ಥಿಸಬೇಕು.
ಈಶ್ವರ ದರ್ಶನ: ಅಂತಿಮವಾಗಿ ಗರ್ಭಗುಡಿಯಲ್ಲಿರುವ ದರ್ಬಾರಣ್ಯೇಶ್ವರ (ಶಿವ) ಮತ್ತು ಪ್ರಾಣಾಂಬಿಕಾ ದೇವಿ ದರ್ಶನ ಪಡೆಯಬೇಕು.
ದಿನವೂ ಪಠಿಸಬಹುದಾದ 5 ಸ್ತೋತ್ರಗಳು: ಆರೋಗ್ಯ, ಸಮೃದ್ಧಿ, ಶಾಂತಿ ಮತ್ತು ಧೈರ್ಯಕ್ಕೆ ದೈವಿಕ ಮಾರ್ಗ
ಶನಿ ಸಂಚಾರ ಪಥ ಬದಲಾವಣೆ:
ಸಾಮಾನ್ಯವಾಗಿ ಪ್ರತಿ ಎರಡೂವರೆ ವರ್ಷಕ್ಕೊಮ್ಮೆ ಶನಿದೇವನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬದಲಾಗುತ್ತಾನೆ. ಆಗ ಇಲ್ಲಿ ‘ಶನಿ ಪೆಯರ್ಚಿ’ ಎಂಬ ಮಹೋತ್ಸವ ನಡೆಯುತ್ತದೆ. ಈ ಸಮಯದಲ್ಲಿ ದೇಶದಾದ್ಯಂತ ಲಕ್ಷಾಂತರ ಭಕ್ತರು ಇಲ್ಲಿಗೆ ಬರುತ್ತಾರೆ.
ಪ್ರಯಾಣ ಮಾರ್ಗದರ್ಶಿ: ತಲುಪುವುದು ಹೇಗೆ?
ವಿಮಾನ: ಸಮೀಪದ ವಿಮಾನ ನಿಲ್ದಾಣವೆಂದರೆ ತಿರುಚಿರಾಪಳ್ಳಿ (Trichy). ಅಲ್ಲಿಂದ ಸುಮಾರು 150 ಕಿ.ಮೀ ದೂರದಲ್ಲಿದೆ.
ರೈಲು: ಮೈಲಾಡುದುರೈ (Mayiladuthurai) ಅಥವಾ ಕಾರೈಕಲ್ ರೈಲ್ವೆ ನಿಲ್ದಾಣಗಳು ಹತ್ತಿರದಲ್ಲಿವೆ.
ರಸ್ತೆ: ಕುಂಭಕೋಣಂನಿಂದ ಸುಮಾರು 50 ಕಿ.ಮೀ ಮತ್ತು ಪಾಂಡಿಚೇರಿಯಿಂದ 140 ಕಿ.ಮೀ ದೂರದಲ್ಲಿದೆ. ಸಾಕಷ್ಟು ಬಸ್ ಸೌಕರ್ಯಗಳಿವೆ.
ಲೇಖನ- ಶ್ರೀನಿವಾಸ ಮಠ





