2026ನೇ ಇಸವಿಯ ವರ್ಷಭವಿಷ್ಯದಲ್ಲಿ ಮೀನ ರಾಶಿಯ ಫಲಾಫಲಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. 2026ರ ಜನವರಿ 1ನೇ ತಾರೀಕಿನಿಂದ ಡಿಸೆಂಬರ್ 31ರ ತನಕ ಗ್ರಹಗಳ ಗೋಚಾರ ಸ್ಥಿತಿಯನ್ನು ಆಧರಿಸಿ ಈ ಭವಿಷ್ಯವನ್ನು ಸಿದ್ಧಪಡಿಸಲಾಗಿದೆ.
2026ರ ಗ್ರಹ ಸಂಚಾರದ ವಿವರ:
ಶನಿ: ಇಡೀ ವರ್ಷ ನಿಮ್ಮದೇ ರಾಶಿಯಲ್ಲಿ (ಜನ್ಮ ರಾಶಿಯಲ್ಲಿ) ಸಂಚರಿಸುತ್ತದೆ. ಇದು ಸಾಡೇಸಾತಿಯ ಮಧ್ಯದ ಹಂತ (ಜನ್ಮ ಶನಿ).
ರಾಹು-ಕೇತು: ಜನವರಿ ಒಂದರಿಂದ ಡಿಸೆಂಬರ್ 5ರ ವರೆಗೆ ರಾಹು ಹನ್ನೆರಡನೇ ಮನೆಯಲ್ಲಿ (ಕುಂಭ) ಮತ್ತು ಕೇತು ಆರನೇ ಮನೆಯಲ್ಲಿ (ಸಿಂಹ) ಇರುತ್ತದೆ.
ಆ ನಂತರ ರಾಹು ಲಾಭ ಸ್ಥಾನಕ್ಕೆ (ಮಕರ) ಹಾಗೂ ಕೇತು ಐದನೇ ಮನೆಗೆ (ಕರ್ಕಾಟಕ) ಪ್ರವೇಶಿಸುತ್ತಾರೆ.
ಗುರು: ಜನವರಿ ಒಂದರಿಂದ ಜೂನ್ 1ರ ವರೆಗೆ ಮಿಥುನದಲ್ಲಿ (4ನೇ ಮನೆ), ಅಕ್ಟೋಬರ್ 31ರವರೆಗೆ ಕರ್ಕಾಟಕದಲ್ಲಿ (5ನೇ ಮನೆ), ಆ ನಂತರ ವರ್ಷಾಂತ್ಯದವರೆಗೆ ಸಿಂಹ ರಾಶಿಯಲ್ಲಿ (6ನೇ ಮನೆ) ಸಂಚರಿಸುತ್ತದೆ.
ಮೀನ ರಾಶಿಯು ಪೂರ್ವಾಭಾದ್ರ ನಕ್ಷತ್ರದ 4ನೇ ಪಾದ, ಉತ್ತರಾಭಾದ್ರ ನಕ್ಷತ್ರದ ನಾಲ್ಕೂ ಪಾದಗಳು ಹಾಗೂ ರೇವತಿ ನಕ್ಷತ್ರದ ನಾಲ್ಕೂ ಪಾದಗಳನ್ನು ಒಳಗೊಂಡಿದೆ. ಪೂರ್ವಾಭಾದ್ರ ನಕ್ಷತ್ರಕ್ಕೆ ಗುರು, ಉತ್ತರಾಭಾದ್ರಕ್ಕೆ ಶನಿ, ರೇವತಿ ನಕ್ಷತ್ರಕ್ಕೆ ಬುಧ ಗ್ರಹ ಅಧಿಪತಿ. ಮೀನ ರಾಶಿಯ ಅಧಿಪತಿ ಗುರು ಗ್ರಹ. ಇದು ಜಲ ತತ್ವದ, ದ್ವಿಸ್ವಭಾವ ರಾಶಿಯಾಗಿದ್ದು, ಕಾಲಪುರುಷನ ಚಕ್ರದ ಹನ್ನೆರಡನೇ ರಾಶಿಯಾಗಿದೆ.
2026 ನ್ಯೂಮರಾಲಜಿ ಭವಿಷ್ಯ: ಮದುವೆ, ಉದ್ಯೋಗ, ಹಣಕಾಸು, ಆರೋಗ್ಯ – ಜನ್ಮಸಂಖ್ಯೆ 1ರಿಂದ 9ರವರೆಗೆ
ಮೀನ ರಾಶಿ ವರ್ಷ ಭವಿಷ್ಯ 2026:
ಶನಿ ಗೋಚಾರ ಫಲ: ಶನಿಯು ಈ ವರ್ಷ ಪೂರ್ತಿ ನಿಮ್ಮ ಜನ್ಮ ರಾಶಿಯಲ್ಲಿಯೇ ಸಂಚರಿಸುತ್ತದೆ. ಇದು ಸಾಡೇಸಾತಿಯ ಅತ್ಯಂತ ಪ್ರಮುಖ ಘಟ್ಟವಾದ ‘ಜನ್ಮ ಶನಿ’ ಕಾಲ. ಇದರ ಪ್ರಭಾವದಿಂದ ಕೆಲಸದಲ್ಲಿ ವಿಪರೀತ ಒತ್ತಡ, ಮಾನಸಿಕ ಕಿರಿಕಿರಿ ಮತ್ತು ಸುಸ್ತು ಕಾಣಿಸಿಕೊಳ್ಳುತ್ತದೆ. ಶನಿಯು ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಾನೆ. ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯ, ವಿಶೇಷವಾಗಿ ಕಾಲು ಅಥವಾ ಮೂಳೆ ಸಂಬಂಧಿತ ನೋವುಗಳು ಬಾಧಿಸಬಹುದು. ಉದ್ಯೋಗದಲ್ಲಿ ಸ್ಥಾನಪಲ್ಲಟ ಅಥವಾ ಅನಿರೀಕ್ಷಿತ ಬದಲಾವಣೆಗಳಿಗೆ ಸಿದ್ಧರಾಗಿರಬೇಕು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ತಡವಾಗಿ ಸಿಗುವುದರಿಂದ ನಿರಾಶೆ ಬೇಡ.
ರಾಹು-ಕೇತು ಗೋಚಾರ ಫಲ: ಹನ್ನೆರಡನೇ ಮನೆಯಲ್ಲಿ ರಾಹುವಿನ ಸಂಚಾರವಿರುವುದರಿಂದ ಅನಗತ್ಯ ಪ್ರಯಾಣಗಳು ಮತ್ತು ವ್ಯರ್ಥ ಖರ್ಚುಗಳು ಹೆಚ್ಚಾಗಲಿವೆ. ವಿದೇಶಿ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಮಿಶ್ರಫಲ ಸಿಗಲಿದೆ. ಆಸ್ಪತ್ರೆ ಖರ್ಚು- ವೆಚ್ಚಗಳು ಬರುವ ಸಾಧ್ಯತೆ ಇರುವುದರಿಂದ ಎಚ್ಚರವಿರಲಿ. ಆದರೆ ಆರನೇ ಮನೆಯಲ್ಲಿ ಕೇತುವಿನ ಸಂಚಾರ ಇರುವುದರಿಂದ ಶತ್ರುಗಳ ಮೇಲೆ ಜಯ ಸಿಗಲಿದೆ. ಎಂತಹ ಕಠಿಣ ಸವಾಲು ಎದುರಾದರೂ ಅದನ್ನು ಎದುರಿಸುವ ಸ್ಥೈರ್ಯ ನಿಮಗಿರುತ್ತದೆ. ಗುಪ್ತ ಶತ್ರುಗಳ ಕುತಂತ್ರಗಳು ನಿಮ್ಮ ಮುಂದೆ ನಡೆಯುವುದಿಲ್ಲ.
ಗುರು ಗೋಚಾರ ಫಲ: ನಿಮ್ಮ ರಾಶ್ಯಾಧಿಪತಿಯಾದ ಗುರುವು ಜೂನ್ 1ರವರೆಗೆ ನಾಲ್ಕನೇ ಮನೆಯಲ್ಲಿ ಇರುವುದರಿಂದ ಸುಖ-ಸಂತೋಷದ ಮೇಲೆ ಪ್ರಭಾವ ಬೀರಲಿದ್ದಾನೆ. ಸ್ನೇಹಿತರ ಜೊತೆಗೆ ವೈಮನಸ್ಯ ಕಾಣಿಸಿಕೊಳ್ಳಬಹುದು. ಮನೆ ಅಥವಾ ವಾಹನ ಖರೀದಿ ಮಾಡುವ ಯೋಗವಿದೆ. ಅದೇ ವೇಳೆ ಸಾಲದ ಪ್ರಮಾಣ ಹೆಚ್ಚಾಗುತ್ತದೆ. ಜೂನ್ 2ರಿಂದ ಅಕ್ಟೋಬರ್ 31ರವರೆಗೆ ಗುರುವು ಐದನೇ ಮನೆಗೆ (ಪಂಚಮ ಸ್ಥಾನ) ಪ್ರವೇಶಿಸುವುದು ನಿಮ್ಮ ಪಾಲಿಗೆ ಅತ್ಯಂತ ಒಳ್ಳೆ ಸಮಯ. ಈ ಅವಧಿಯಲ್ಲಿ ಸಂತಾನ ಭಾಗ್ಯ, ಆರ್ಥಿಕ ಸುಧಾರಣೆ ಮತ್ತು ಶುಭ ಕಾರ್ಯಗಳು ನೆರವೇರುತ್ತವೆ. ನವೆಂಬರ್ ನಂತರ ಗುರು 6ನೇ ಮನೆಗೆ ಹೋದಾಗ ಆರೋಗ್ಯ ಮತ್ತು ಸಾಲದ ವಿಷಯದಲ್ಲಿ ಮತ್ತೆ ನಿಗಾ ವಹಿಸುವುದು ಉತ್ತಮ.
ಪರಿಹಾರ: ಪ್ರತಿ ಶನಿವಾರ ಶಿವನ ದೇವಸ್ಥಾನದಲ್ಲಿ ರುದ್ರಾಭಿಷೇಕ ಮಾಡಿಸಿ ಅಥವಾ ಶನೈಶ್ಚರನಿಗೆ ಎಳ್ಳೆಣ್ಣೆ ದೀಪ ಹಚ್ಚಿ. ದುರ್ಗಾ ಸೂಕ್ತವನ್ನು ಶ್ರವಣ ಮಾಡಿ.
ಲೇಖನ: ಶ್ರೀನಿವಾಸ ಮಠ





