Sri Gurubhyo Logo

ಸಕ್ಕರೆ ಕಾಯಿಲೆಗೂ ಗ್ರಹದೋಷಕ್ಕೂ ಇದೆಯೇ ನಂಟು? ಕರ್ಮವಿಪಾಕ ಸಂಹಿತೆ ನೀಡುವ ಅಚ್ಚರಿಯ ಮಾಹಿತಿ

Diabetes and Medical Astrology concept with Ayurveda manuscripts and birth chart - ಮಧುಮೇಹ ಮತ್ತು ಜ್ಯೋತಿಷ್ಯ ಪರಿಹಾರ
ಸಾಂದರ್ಭಿಕ ಚಿತ್ರ

ಮನುಷ್ಯನಿಗೆ ಬರುವ ಕಾಯಿಲೆಗಳು ಕೇವಲ ದೇಹಕ್ಕೆ ಮಾತ್ರ ಸಂಬಂಧಿಸಿದ್ದಲ್ಲ, ಅದರಲ್ಲಿ ಕರ್ಮದ ಫಲವೂ ಇರುತ್ತದೆ. ಆದ್ದರಿಂದ ಔಷಧವೊಂದೇ ಅಲ್ಲ, ದೇವತಾ ಆರಾಧನೆ ಹಾಗೂ ದಾನ- ಧರ್ಮ ಸಹ ಅಗತ್ಯ ಎಂಬುದು ಆಯುರ್ವೇದ ವೈದ್ಯ ಪದ್ಧತಿಯ ಬಲವಾದ ನಂಬಿಕೆ. ಇನ್ನು ರೋಗನಿರ್ಣಯದಿಂದ ಆರಂಭವಾಗಿ, ಚಿಕಿತ್ಸೆಗೆ ಅನುಸರಿಸುವ ವಿಧಾನ ಮತ್ತು ಯಾವ ದಿನದಿಂದ ಚಿಕಿತ್ಸೆ ಶುರು ಮಾಡಬೇಕು ಎಂಬುದಕ್ಕೆ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ತಿಥಿ-ವಾರ- ನಕ್ಷತ್ರ ಮೊದಲಾದವುಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅದೇ ರೀತಿ ಒಬ್ಬ ವ್ಯಕ್ತಿಯ ಜನ್ಮಜಾತಕದಲ್ಲಿನ ಗ್ರಹ ಸ್ಥಿತಿಯನ್ನು ಸಹ ಸಮಗ್ರವಾಗಿ ವಿಶ್ಲೇಷಿಸಲಾಗುತ್ತದೆ. ಕರ್ಮವಿಪಾಕ ಸಂಹಿತೆ ಹಾಗೂ ವೀರಸಿಂಹಾವಲೋಕನ ಎಂಬೆರಡು ಪ್ರಮುಖ ವೈದ್ಯಕೀಯ ಜ್ಯೋತಿಷ್ಯ ಗ್ರಂಥದ ಆಧಾರದ ಮೇಲೆ “ಮಧುಮೇಹ”, “ಸಕ್ಕರೆ ಕಾಯಿಲೆ” ಅಥವಾ ಡಯಾಬಿಟೀಸ್ ಎಂದು ಕರೆಸಿಕೊಳ್ಳುವ ಸ್ಥಿತಿ ಯಾವಾಗ ಬರುತ್ತದೆ ಎಂಬುದರ ವಿಶ್ಲೇಷಣೆಯನ್ನು ಈ ಲೇಖನದಲ್ಲಿ ತೆರೆದಿಡಲಾಗಿದೆ. ಇದರ ಬಗ್ಗೆ ಮತ್ತೂ ನಿಖರ ಹಾಗೂ ಆಳವಾದ ಮಾಹಿತಿಗೆ ಆಯುರ್ವೇದ ವೈದ್ಯರನ್ನು ಭೇಟಿ ಆಗುವುದು ಉತ್ತಮ ಹಾಗೂ ಸೂಕ್ತ.

ಕರ್ಮವಿಪಾಕ ಸಂಹಿತೆ: ಪೂರ್ವಜನ್ಮದ ಕಾರಣಗಳು:

ಕರ್ಮವಿಪಾಕ ಸಂಹಿತೆಯು ಯಾವ ಪಾಪ ಮಾಡಿದ್ದಲ್ಲಿ ಯಾವ ಸಮಸ್ಯೆ ಎದುರಾಗುತ್ತದೆ ಎಂಬುದನ್ನು ವಿವರಿಸುತ್ತದೆ. ಮಧುಮೇಹದಿಂದ ಬಾಧೆ ಅನುಭವಿಸುತ್ತಾ ಇದ್ದಲ್ಲಿ ಅದಕ್ಕೆ ಏನು ಕಾರಣ ಎಂಬ ವಿವರ ಹೀಗಿದೆ: 

ದೇವದ್ರವ್ಯದ ಅಪಹಾರ: ದೇವಸ್ಥಾನಗಳ ಅಥವಾ ದೈವಕಾರ್ಯಗಳಿಗೆ ಎಂದು ಮೀಸಲಾಗಿ ಇಟ್ಟಿದ್ದ ಮಧುರ ಪದಾರ್ಥಗಳನ್ನು ಎನಿಸಿಕೊಳ್ಳುವ ಹಾಲು, ಜೇನುತುಪ್ಪ, ಸಕ್ಕರೆ ಮೊದಲಾದವುಗಳನ್ನು ಒಬ್ಬರೇ ಪಡೆದುಕೊಂಡಿರುವುದು ಅಥವಾ ಕಳವು ಮಾಡಿರುವುದು.

ಆತಿಥ್ಯದಲ್ಲಿ ವಂಚನೆ: ಹಸಿದು ಬಂದವರಿಗೆ ಅಥವಾ ಬ್ರಾಹ್ಮಣರಿಗೆ ಮಧುರವಾದ ಭೋಜನದ ವ್ಯವಸ್ಥೆ ಮಾಡುವುದಾಗಿ ಭರವಸೆಯನ್ನು ನೀಡಿ, ಕೊನೆ ಕ್ಷಣದಲ್ಲಿ ವಂಚನೆ ಮಾಡಿದ್ದಲ್ಲಿ.

ಗುರುದ್ರೋಹ: ಗುರುವಿಗೆ ಸಿಗಬೇಕಾದ ಗೌರವ ಅಥವಾ ದ್ರವ್ಯವನ್ನು ಅವರಿಗೆ ಸಿಗದಂತೆ ಮಾಡಿದ್ದಲ್ಲಿ.

ಕರ್ಮವಿಪಾಕ ಸಂಹಿತೆಯು ಅಡಿಗೆರೆ ಹಾಕಿದಂತೆ ಹೇಳುವುದು ‘ಅತಿಯಾದ ಲೋಭ’ ಹಾಗೂ ‘ಮಧುರ ಪದಾರ್ಥಗಳ ದುರ್ಬಳಕೆ ಅಥವಾ ಅನ್ಯಾಯದ ಬಳಕೆ’ಯಂದ ಮಧುಮೇಹದ ವಿಪರೀತ ಬಾಧೆ ಕಾಡುತ್ತದೆ. ಇದಕ್ಕೆ ‘ಪ್ರಾಯಶ್ಚಿತ್ತ’ದ ವಿವರಣೆ ಸಹ ಈ ಸಂಹಿತೆಯಲ್ಲಿ ಇದೆ.

ವೀರಸಿಂಹಾವಲೋಕನ ಹಾಗೂ ಗ್ರಹದೋಷ ವಿಚಾರ:

ಒಬ್ಬ ವ್ಯಕ್ತಿಯ ಜಾತಕದಲ್ಲಿ ಶುಕ್ರ, ಗುರು ಹಾಗೂ ಚಂದ್ರ ಈ ಮೂರು ಗ್ರಹಗಳ ಸ್ಥಿತಿಯನ್ನು ಪರಾಮರ್ಶೆ ಮಾಡಬೇಕು. ಗ್ರಹಗಳ ಬಗೆಗಿನ ವಿವರಣೆ ಹೀಗಿದೆ:

ಶುಕ್ರದೋಷ: ಶುಕ್ರ ಗ್ರಹವು ಸಕ್ಕರೆ ಹಾಗೂ ಇನ್ಸುಲಿನ್ ಕಾರಕತ್ವವನ್ನು ಸೂಚಿಸುತ್ತದೆ. ವ್ಯಕ್ತಿಯ ಜನ್ಮಜಾತಕದಲ್ಲಿ ಲಗ್ನ ಬಲವಾಗಿದ್ದಲ್ಲಿ ಅಲ್ಲಿಂದ ಅಥವಾ ಚಂದ್ರನಿಗೆ ಬಲವಿದ್ದಲ್ಲಿ ಚಂದ್ರ ಲಗ್ನದಿಂದ ಆರನೇ ಮನೆಯಲ್ಲಿ ಶುಕ್ರ ಗ್ರಹವು ಶನಿ ಅಥವಾ ರಾಹುವಿನಿಂದ ಪೀಡಿತವಾಗಿದ್ದರೆ ಅದನ್ನು ಸ್ತ್ರೀಶಾಪ ಅಥವಾ ಭೋಗದ ಅತಿರೇಕದ ಫಲವಾಗಿ ಮಧುಮೇಹದ ಸಮಸ್ಯೆ ನೀಡುತ್ತದೆ. ಇನ್ನು ಶುಕ್ರ ಗ್ರಹವು ದೇಹದಲ್ಲಿನ ದ್ರವದ ಅಂಶವನ್ನು ನಿರ್ವಹಣೆ ಮಾಡುವ ಗ್ರಹವಾಗಿದೆ.

ಮಧುಮೇಹ– ಸಕ್ಕರೆ ಅಂಶದ ನಿಯಂತ್ರಕನಾದ ಶುಕ್ರನ ದೋಷದಿಂದ ಪ್ರಮೇಹ

ಮೂತ್ರಪಿಂಡದ ಸಮಸ್ಯೆ– ಮೂತ್ರ ವಿಸರ್ಜನೆ ಅಥವಾ ಹರಿವಿನಲ್ಲಿ ಸಮಸ್ಯೆಗಳು

ಜನನಾಂಗದ ದೋಷಗಳು– ಸಂತಾನೋತ್ಪತ್ತಿಗೆ ಸಂಬಂಧಿಸಿದ ಸಮಸ್ಯೆಗಳು

ದೃಷ್ಟಿದೋಷ- ಕಣ್ಣಿನ ಪೊರೆ ಅಥವಾ ದೃಷ್ಟಿ ಮಂದವಾಗುವುದು.

ಇನ್ನು ತ್ವಚೆಯ ಕಾಂತಿ ಕಡಿಮೆ ಆಗುವುದು ಹಾಗೂ ಅತಿಯಾದ ಆಲಸ್ಯ

ಗುರು ದೋಷ: ಗುರು ಗ್ರಹವು ಯಕೃತ್ತು ಮತ್ತು ದೇಹದಲ್ಲಿನ ಕೊಬ್ಬಿನ ಅಂಶವನ್ನು ಸೂಚಿಸುತ್ತದೆ. ಮೇದಸ್ಸಿನ ಅಧಿಪತಿಯಾದ ಗುರು ಗ್ರಹ ಜನ್ಮಜಾತಕದಲ್ಲಿ ಅಶುಭ ಸ್ಥಾನದಲ್ಲಿ ಇದ್ದರೆ ಸಕ್ಕರೆಯ ಸಮತೋಲನ ತಪ್ಪುತ್ತದೆ. ಹಿರಿಯರಿಗೆ ಅಪಚಾರ ಮಾಡಿದ್ದರಿಂದ ಹೀಗೆ ಗುರುವಿನ ದೋಷ ಉಂಟಾಗುತ್ತದೆ.

ಯಕೃತ್ತಿನ ತೊಂದರೆ, ಜಾಂಡಿಸ್, ಲಿವರ್ ಸಿರೋಸಿಸ್ 

ಬೊಜ್ಜು- ಅತಿಯಾದ ತೂಕ ಹೆಚ್ಚಳ ಮತ್ತು ಕೊಲೆಸ್ಟ್ರಾಲ್ ಸಮಸ್ಯೆ 

ಜೀರ್ಣಕ್ರಿಯೆಯ ದೋಷ- ಗ್ಯಾಸ್ಟ್ರಿಕ್ ಮತ್ತು ಕರುಳಿಗೆ ಸಂಬಂಧಿಸಿದ ಸಮಸ್ಯೆಗಳು

ಕರ್ಣರೋಗ- ಕಿವಿ ಕೇಳಿಸದಿರುವುದು ಅಥವಾ ಕಿವಿಯ ಸೋಂಕು

ಚಂದ್ರ ದೋಷ: ಇನ್ನು ಯಾರ ಜಾತಕದಲ್ಲಿ ಚಂದ್ರ ದುರ್ಬಲನಾಗಿರುತ್ತಾನೋ ಅಂಥವರಿಗೆ ಮನಸ್ಸಿನ ಮೇಲೆ ಒತ್ತಡ ಹೆಚ್ಚಾಗಿ, ಆ ಮೂಲಕ ಸಕ್ಕರೆ ಕಾಯಿಲೆ ಉಲ್ಬಣ ಆಗುತ್ತದೆ.

ಮಾನಸಿಕ ಕಾಯಿಲೆಗಳು- ಖಿನ್ನತೆ, ಅತಿಯಾದ ಆತಂಕ ನಿದ್ರಾಹೀನತೆ ಕಾಡುತ್ತದೆ.

ಶ್ವಾಸಕೋಶದ ಸಮಸ್ಯೆ- ಶೀತ, ಕೆಮ್ಮು, ಆಸ್ತಮಾ, ನ್ಯುಮೋನಿಯಾ

ರಕ್ತದೋಷ- ಅನಿಮಿಯಾ ಅಥವಾ ಬಿಪಿ (ರಕ್ತದೊತ್ತಡ) ಏರುಪೇರಾಗುವುದು

ಸ್ತ್ರೀರೋಗಗಳು- ಮಾಸಿಕ ಋತುಚಕ್ರದಲ್ಲಿ ಏರುಪೇರು.

ಡಯಾಬಿಟೀಸ್ ನಿಯಂತ್ರಣಕ್ಕೆ ನಂಬಿಕೆಯ ದೇಗುಲ: ಸಾವಿರ ವರ್ಷಗಳ ಇತಿಹಾಸದ ಕರುಂಬೇಶ್ವರರ್ ದೇವಾಲಯ

ಕಾಯಿಲೆಗೆ ಚಿಕಿತ್ಸೆಯ ಜೊತೆಗೆ ಕರ್ಮ ಸಹ ಕಳೆಯಲು ಹೀಗೆ ಮಾಡಬೇಕು:

ಧನ್ವಂತರಿ ಆರಾಧನೆ: ಓಂ ನಮೋ ಭಗವತೇ ವಾಸುದೇವಾಯ ಧನ್ವಂತರಯೇ ಎಂಬ ಮಂತ್ರದ ಜಪ ಮಾಡುವುದರಿಂದ ಚಿಕಿತ್ಸೆಗೆ ಬಲ ಸಿಗುತ್ತದೆ.

ಸೂರ್ಯನಿಗೆ ಅರ್ಘ್ಯ: ಜಠಾರಾಗ್ನಿಯನ್ನು ಪ್ರಚೋದಿಸುವುದಕ್ಕಾಗಿ ಪ್ರತಿ ದಿನ ಸೂರ್ಯನಿಗೆ ಅರ್ಘ್ಯವನ್ನು ನೀಡಬೇಕು.

ವಾರಾಹಿದೇವಿ ಆರಾಧನೆ: ದೇಹದ ಅಂಗಾಂಗಗಳ ಸಂರಕ್ಷಣೆಗಾಗಿ ವಾರಾಹಿ ದೇವಿಯ ಆರಾಧನೆಯನ್ನು ಮಾಡಿಕೊಳ್ಳಬೇಕು.

ಚಂದ್ರಮೌಳೀಶ್ವರನ ಆರಾಧನೆ: ಚಂದ್ರಮೌಳೀಶ್ವರನ ಸ್ವರೂಪದಲ್ಲಿ ಇರುವಂಥ ಶಿವನನ್ನು ಆರಾಧಿಸುವುದರಿಂದ ಮಾನಸಿಕವಾದ ಶಾಂತಿ ದೊರೆಯುತ್ತದೆ.

ದಾನ-ಧರ್ಮ ಇತ್ಯಾದಿ:

ಕರ್ಮ ವಿಪಾಕ ಸಂಹಿತೆಯು ರೋಗ ಪರಿಹಾರಕ್ಕಾಗಿ ಈ ಕೆಳಗಿನವುಗಳನ್ನು ಸೂಚಿಸುತ್ತದೆ:

ಮಧುರ ದ್ರವ್ಯ ದಾನ: ಮಧುಮೇಹ ಬಂದಂಥ ವ್ಯಕ್ತಿಗೆ ಯಾವುದನ್ನು ಅತಿಯಾಗಿ ಸೇವಿಸಬಾರದೆಂದು ವೈದ್ಯರು ಹೇಳುತ್ತಾರೋ, ಅಂದರೆ ಸಕ್ಕರೆ, ಬೆಲ್ಲ, ಹಾಲು ಇಂಥ ಪದಾರ್ಥಗಳನ್ನು ಇತರರಿಗೆ ಪ್ರೀತಿಯಿಂದ ದಾನ ಮಾಡುವುದು ಕರ್ಮಕ್ಷಯಕ್ಕೆ ದಾರಿ ಮಾಡಿಕೊಡುತ್ತದೆ.

ಅಘೋರ ಸುದರ್ಶನ ಹೋಮ: ನಕಾರಾತ್ಮಕ ಶಕ್ತಿಗಳ ನಿವಾರಣೆ ಮತ್ತು ದೇಹದ ಒಳಗಿನ ವಿಷ ಅಂಶಗಳ ಶುದ್ಧೀಕರಣಕ್ಕಾಗಿ ಮಾಡಿಕೊಳ್ಳುವಂಥದ್ದು.

ಗ್ರಹದೋಷ ನಿವಾರಣೆಯ ಮಾಹಿತಿ:

ಶುಕ್ರನಿಗೆ: ಲಕ್ಷ್ಮೀ ಪೂಜೆ, ಬಿಳಿ ವಸ್ತ್ರವನ್ನು ದಾನ ಮಾಡುವುದು, ಸಕ್ಕರೆ ತ್ಯಜಿಸಿ, ದಾನ ಮಾಡುವುದು

ಗುರು ಗ್ರಹಕ್ಕೆ: ಗೋವಿನ ಸೇವೆ, ಹಿರಿಯರ ಆಶೀರ್ವಾದ, ಕಡಲೇಕಾಳು ದಾನ, ವಿಷ್ಣುಸಹಸ್ರನಾಮ ಪಠಣ

ಚಂದ್ರನಿಗೆ: ಶಿವಲಿಂಗಕ್ಕೆ ಹಾಲಿನ ಅಭಿಷೇಕ, ಪವಮಾನ ಸೂಕ್ತ ಪಠಣ ಮತ್ತು ತಾಯಿಯ ಅಥವಾ ತಾಯಿ ಸಮಾನರಾದವರ ಸೇವೆ ಮಾಡುವುದು.

ಮಧುಮೇಹ ನಿವಾರಣೆಗಾಗಿ ಅಪರೂಪದ ನಾಲ್ಕು ಸೂಕ್ತಗಳು:

ಅಕ್ಷ್ಯೋಗ ರೋಗನಾಶನ ಸೂಕ್ತ: ಇದು ಋಗ್ವೇದದ ಅಪರೂಪದ ಸೂಕ್ತಗಳಲ್ಲಿ ಒಂದು. ಶರೀರದ ಒಳಗಿನ ಅಂಗಾಂಗಗಳ ರೋಗಗಳ ನಿವಾರಣೆಗೆ ಇದರ ಪಠಣ ಮಾಡಲಾಗುತ್ತದೆ. ಮಧುಮೇಹಕ್ಕೆ ಸಂಬಂಧಿಸಿದ ರೆಟಿನೋಪತಿ ಮತ್ತು ಕಿಡ್ನಿ ಮೇಲೆ ಆಗುವ ದುಷ್ಪರಿಣಾಮ ತಡೆಯುವುದಕ್ಕೆ ಇದು ಸಹಕಾರಿ.

ಆಪಃ ಸೂಕ್ತ: ಮಧುಮೇಹವು ದೇಹದ ಜಲತತ್ವಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದೆ. ಆಪಃ ಸೂಕ್ತವು ಜಲದೇವತೆಯನ್ನು ಪ್ರಾರ್ಥಿಸುವ ಮಂತ್ರ. ಸಕ್ಕರೆ ಕಾಯಿಲೆ ಇರುವವರಲ್ಲಿ ಅತಿಯಾದ ಬಾಯಾರಿಕೆ, ಮೂತ್ರದ ಸಮಸ್ಯೆ ಇರುತ್ತದೆ. ಈ ಸೂಕ್ತ ಪಠಣದಿಂದ ದೇಹದಲ್ಲಿನ ಇನ್ಸುಲಿನ್ ಹಾಗೂ ದ್ರವಗಳು ಸಮತೋಲನ ಆಗುತ್ತವೆ.

ಒಂದು ಲೋಟ ಅಥವಾ ತಂಬಿಗೆಯಲ್ಲಿ ನೀರನ್ನು ಇಟ್ಟುಕೊಂಡು, ಅದರ ಮುಂದೆ ಕುಳಿತು ಈ ಸೂಕ್ತ ಪಠಿಸಿದ ನಂತರದಲ್ಲಿ ನೀರನ್ನು ಸೇವಿಸಬೇಕು. ಇದು ಔಷಧೀಯ ಬಲವನ್ನು ನೀಡುತ್ತದೆ.

ಆಯುಷ್ಯ ಸೂಕ್ತ: ಮಧುಮೇಹದಿಂದ ದೇಹದ ಶಕ್ತಿ ಕುಂದದಂತೆ, ಆಯುಷ್ಯ ಹೆಚ್ಚುವುದಕ್ಕೆ ಸಹಕಾರಿ. ಈ ಸೂಕ್ತವು ದೇಹದಲ್ಲಿನ ಮೇದೋಜೀರಕ ಗ್ರಂಥಿಯಲ್ಲಿ ಪುನಶ್ಚೇತನಕ್ಕೆ ಸಹಕಾರಿ ಆಗುತ್ತದೆ. ಈ ಸೂಕ್ತ ಪಠಣದಿಂದ ಅಗ್ನಿ ಮತ್ತು ಸೋಮದೇವರ ಪ್ರಾರ್ಥನೆ ಮಾಡಿದಂತಾಗುತ್ತದೆ. 

ಚಾಕ್ಷುಷೋಪನಿಷತ್ ಅಥವಾ ಚಾಕ್ಷುಷಿ ವಿದ್ಯಾ: ಇದು ಕೇವಲ ಕಣ್ಣಿನ ರೋಗಕ್ಕೆ ಮಾತ್ರವಲ್ಲ, ದೇಹದಲ್ಲಿನ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಸಕ್ಕರೆ ಕಾಯಿಲೆಯ ಅಡ್ಡ ಪರಿಣಾಮ ಅಂದರೆ, ದೃಷ್ಟಿ ಮಂದ ಆಗುವುದು. ಈ ಸೂಕ್ತ ಪಠಣ ಮಾಡುವುದರಿಂದ ಸೂರ್ಯನ ಅನುಗ್ರಹವಾಗಿ ದೃಷ್ಟಿಯು ತೀಕ್ಷ್ಣಗೊಳ್ಳುತ್ತದೆ. 

ಈ ಸೂಕ್ತವನ್ನು ಬೆಳಗ್ಗೆ ನಾಲ್ಕರಿಂದ ಆರು ಗಂಟೆಯ ಮಧ್ಯೆ ಪಠಿಸುವುದು ಅಥವಾ ಶ್ರವಣ ಮಾಡುವುದು ಪರಿಣಾಮಕಾರಿ ಆಗುತ್ತದೆ. ಆರಂಭಿಸುವ ಮೊದಲಿಗೆ, ಕರ್ಮಕ್ಷಯವಾಗಲಿ ಹಾಗೂ ದೇಹದಲ್ಲಿನ ಇನ್ಸುಲಿನ ಮಟ್ಟ ಸುಧಾರಿಸಲಿ ಎಂಬ ಪ್ರಾರ್ಥನೆಯನ್ನು ಮಾಡಿ. 

ಔಷಧ ಸೇವನೆ ಮಂತ್ರ: 

ಶರೀರೇ ಜರ್ಜರೀ ಭೂತೇ ವ್ಯಾಧಿಗ್ರಸ್ತೇ ಕಳೇವರೇ |

ಔಷಧೀ ಜಾಹ್ನವೀ ತೋಯಂ, ವೈದ್ಯೋ ನಾರಾಯಣೋ ಹರಿಃ ||

ಈ ಮಂತ್ರವನ್ನು ಪಠಿಸಿ, ಔಷಧ ಸೇವಿಸುವುದರಿಂದ ಅದು ಪ್ರಸಾದವಾಗಿ ಪರಿಣಮಿಸುತ್ತದೆ.

 ವೀರಸಿಂಹಾವಲೋಕನ ಉಲ್ಲೇಖದಂತೆ ಪಥ್ಯ ಮತ್ತು ಜೀವನಶೈಲಿ:

ಕಹಿ ಮತ್ತು ಒಗರು: ಕಹಿ ಬೇವು, ತ್ರಿಫಲ, ಅಮೃತಬಳ್ಳಿಗಳ ಬಳಕೆ.

ಧಾನ್ಯ: ಹಳೆಯ ಅಕ್ಕಿ ಮತ್ತು ಯವ (ಬಾರ್ಲಿ) ಸೇವನೆ.

ಮಾನಸಿಕ ಶಿಸ್ತು: ಪರನಿಂದೆ ಮತ್ತು ಅತಿಯಾದ ಕಾಮನೆಯನ್ನು ತ್ಯಜಿಸುವುದು ಮಧುಮೇಹ ನಿಯಂತ್ರಣಕ್ಕೆ ಪೂರಕ.

ಮಧುಮೇಹ ನಿಯಂತ್ರಣಕ್ಕೆ ಚಿಕಿತ್ಸೆ, ದೇವರ ಪ್ರಾರ್ಥನೆ, ಗ್ರಹದೋಷಗಳ ನಿವಾರಣೆ ಹಾಗೂ ಕರ್ಮ ಸವೆಯುವುದಕ್ಕಾಗಿ ದಾನ- ಧರ್ಮ ಮಾಡುವುದು ಮತ್ತು ಆಹಾರ ಪಥ್ಯವನ್ನೂ ಅನುಸರಿಸಿದಲ್ಲಿ ಪರಿಣಾಮಕಾರಿ ಫಲಿತಾಂಶ ದೊರೆಯುತ್ತದೆ. ಈ ಲೇಖನದಲ್ಲಿ ಪ್ರಕಟ ಆಗಿರುವುದು ಮಾಹಿತಿ ಉದ್ದೇಶದಿಂದ ಮಾತ್ರ. ಪರಿಣತ ವೈದ್ಯರ ನೆರವು- ಮಾರ್ಗದರ್ಶನದಲ್ಲಿಯೇ ಔಷಧ- ಪರಿಹಾರ ಕ್ರಮಗಳನ್ನು ಪಾಲಿಸಬೇಕು.  

ಕೊನೆಯ ಮಾತು: ವೀರಸಿಂಹಾವಲೋಕನದಲ್ಲಿ ಇರುವಂತೆ, ಚಿಕಿತ್ಸೆಯು ವೈದ್ಯರಿಂದ, ಕಾಯಿಲೆಯ ಗುಣವು ದೈವದಿಂದ ಎಂಬುದು ನೆನಪಿನಲ್ಲಿರಲಿ.

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts