2026ನೇ ಇಸವಿಯ ವರ್ಷಭವಿಷ್ಯದಲ್ಲಿ ಮಕರ ರಾಶಿಯ ಫಲಾಫಲಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. 2026ರ ಜನವರಿ 1ನೇ ತಾರೀಕಿನಿಂದ ಡಿಸೆಂಬರ್ 31ರ ತನಕ ಗ್ರಹಗಳ ಗೋಚಾರ ಸ್ಥಿತಿಯನ್ನು ಆಧರಿಸಿ ಈ ಭವಿಷ್ಯವನ್ನು ಸಿದ್ಧಪಡಿಸಲಾಗಿದೆ.
2026ರ ಗ್ರಹ ಸಂಚಾರದ ವಿವರ:
ಶನಿ: ಇಡೀ ವರ್ಷ ಮೀನ ರಾಶಿಯಲ್ಲಿ (ಮಕರಕ್ಕೆ 3ನೇ ಮನೆಯಲ್ಲಿ) ಸಂಚರಿಸುತ್ತಾನೆ.
ರಾಹು-ಕೇತು: ಜನವರಿ ಒಂದರಿಂದ ಡಿಸೆಂಬರ್ 5ರವರೆಗೆ ರಾಹು ಕುಂಭದಲ್ಲಿ (2ನೇ ಮನೆ) ಮತ್ತು ಕೇತು ಸಿಂಹದಲ್ಲಿ (8ನೇ ಮನೆ) ಇರುತ್ತಾರೆ.
ಆ ನಂತರ ರಾಹು ನಿಮ್ಮದೇ ರಾಶಿಯಲ್ಲಿ (ಜನ್ಮ ರಾಶಿ- ಒಂದನೇ ಮನೆ) ಹಾಗೂ ಕೇತು ಕಳತ್ರ ಸ್ಥಾನಕ್ಕೆ (7ನೇ ಮನೆ) ಪ್ರವೇಶಿಸುತ್ತಾರೆ.
ಗುರು: ಜೂನ್ 1ರವರೆಗೆ ಮಿಥುನದಲ್ಲಿ (6ನೇ ಮನೆ), ಅಕ್ಟೋಬರ್ 31ರವರೆಗೆ ಕರ್ಕಾಟಕದಲ್ಲಿ (7ನೇ ಮನೆ), ಆ ನಂತರ ವರ್ಷಾಂತ್ಯದವರೆಗೆ ಸಿಂಹ ರಾಶಿಯಲ್ಲಿ (8ನೇ ಮನೆ) ಸಂಚರಿಸುತ್ತಾನೆ.
ಮಕರ ರಾಶಿಯು ಉತ್ತರಾಷಾಢ ನಕ್ಷತ್ರದ 2, 3, 4ನೇ ಪಾದ, ಶ್ರವಣ ನಕ್ಷತ್ರದ ನಾಲ್ಕೂ ಪಾದಗಳು ಹಾಗೂ ಧನಿಷ್ಠಾ ನಕ್ಷತ್ರದ 1 ಮತ್ತು 2ನೇ ಪಾದಗಳನ್ನು ಒಳಗೊಂಡಿದೆ. ಉತ್ತರಾಷಾಢ ನಕ್ಷತ್ರದ ಅಧಿಪತಿ ರವಿ, ಶ್ರವಣ ನಕ್ಷತ್ರಕ್ಕೆ ಚಂದ್ರ ಹಾಗೂ ಧನಿಷ್ಠಾ ನಕ್ಷತ್ರಕ್ಕೆ ಕುಜ ಅಧಿಪತಿ ಇನ್ನು ಮಕರ ರಾಶಿಯ ಅಧಿಪತಿ ಶನಿ ಗ್ರಹ. ಇದು ಪೃಥ್ವಿ ತತ್ವದ, ಚರ ರಾಶಿಯಾಗಿದ್ದು, ಕಾಲಪುರುಷನ ಚಕ್ರದ ಹತ್ತನೇ ರಾಶಿಯಾಗಿದೆ.
ನಲ್ಲಮಲ ಕಾಡಿನ ಸಿದ್ಧರ ತಪೋಭೂಮಿಯಲ್ಲಿ ಇಷ್ಟಾರ್ಥ ನೆರವೇರಿಸುವ ಅಪೂರ್ವ ಶಕ್ತಿ ದೇವತೆ ಇಷ್ಟಕಾಮೇಶ್ವರಿ ದೇವಿ
ಮಕರ ರಾಶಿ ವರ್ಷ ಭವಿಷ್ಯ 2026:
ಶನಿ ಗೋಚಾರ ಫಲ: ನಿಮ್ಮ ರಾಶಿಗೆ ತನು ಭಾವ ಹಾಗೂ ಧನ- ವಾಕ್- ಕುಟುಂಬ ಸ್ಥಾನಕ್ಕೆ ಅಧಿಪತಿ ಆದಂಥ ಶನಿ ಗ್ರಹವು ಇಡೀ ವರ್ಷ ನಿಮಗೆ ಮೂರನೇ ಮನೆಯಲ್ಲಿ ಸಂಚರಿಸುತ್ತದೆ. ಮಕರ ರಾಶಿಯವರಿಗೆ ಅತ್ಯಂತ ಶುಭ ಫಲಗಳನ್ನು ನೀಡಲಿದೆ. ಏಳೂವರೆ ವರ್ಷದ ಸಾಡೇಸಾತಿ ಮುಗಿದಿರುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ. ಕಳೆದುಕೊಂಡ ಗೌರವ ಮತ್ತು ಹಣವನ್ನು ಮರಳಿ ಪಡೆಯುವಂಥ ಕಾಲವಿದು. ಶೌರ್ಯ, ಧೈರ್ಯ ಹೆಚ್ಚಾಗುತ್ತದೆ. ವಿದೇಶ ಪ್ರಯಾಣದ ಕನಸು ಕಾಣುತ್ತಿರುವವರಿಗೆ ಈ ವರ್ಷ ಯಶಸ್ಸು ಸಿಗಲಿದೆ. ಸಹೋದರ-ಸಹೋದರಿಯರಿಂದ ಸಹಕಾರ ದೊರೆಯುತ್ತದೆ. ಹಳೆಯ ಆಸ್ತಿ ವ್ಯಾಜ್ಯಗಳಿದ್ದರೆ ಅವುಗಳಲ್ಲಿ ಜಯ ಸಿಗುವ ಸಾಧ್ಯತೆ ಇದೆ.
ರಾಹು-ಕೇತು ಗೋಚಾರ ಫಲ: ಎರಡನೇ ಮನೆಯಲ್ಲಿ ರಾಹುವಿನ ಸಂಚಾರ ಇರುವುದರಿಂದ ಮಾತು ಮತ್ತು ಹಣಕಾಸಿನ ವಿಚಾರದಲ್ಲಿ ಹಿಡಿತ ಇರಲಿ. ಕುಟುಂಬದ ಸದಸ್ಯರೊಂದಿಗೆ ಸಣ್ಣಪುಟ್ಟ ಕಲಹಗಳು ಏರ್ಪಡಬಹುದು. ಎಂಟನೇ ಮನೆಯಲ್ಲಿ ಕೇತು ಸಂಚರಿಸುವುದರಿಂದ ಅನಿರೀಕ್ಷಿತ ಅಡೆತಡೆಗಳು ಎದುರಾಗಬಹುದು. ಆದರೆ ಆಧ್ಯಾತ್ಮಿಕ ಚಿಂತನೆ ಇರುವವರಿಗೆ ಇದು ಸಾಧನೆಯ ಕಾಲ. ವಾಹನ ಚಾಲನೆ ಮಾಡುವಾಗ ಮತ್ತು ರಸ್ತೆ ದಾಟುವಾಗ ಎಚ್ಚರಿಕೆ ಇರಲಿ. ಅನಗತ್ಯ ವಾದ-ವಿವಾದಗಳಿಂದ ದೂರವಿರುವುದು ನಿಮ್ಮ ನೆಮ್ಮದಿಗೆ ಒಳ್ಳೆಯದು.
ಗುರು ಗೋಚಾರ ಫಲ: ನಿಮ್ಮ ರಾಶಿಗೆ ವ್ಯಯ ಸ್ಥಾನ ಮತ್ತು ಸೋದರ ಸ್ಥಾನದ ಅಧಿಪತಿಯಾದ ಗುರುವು ಜೂನ್ 1ನೇ ತಾರೀಕಿನವರೆಗೆ ಆರನೇ ಮನೆಯಲ್ಲಿ ಇರುವುದರಿಂದ ಸಾಲದ ಹೊರೆ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಅದರಲ್ಲೂ ಮಧುಮೇಹ, ದೇಹದ ತೂಕ, ಕೊಲೆಸ್ಟ್ರಾಲ್, ಕಿವಿ ಇವುಗಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಶತ್ರುಗಳ ಕಾಟವಿದ್ದರೂ ನಿಮ್ಮ ಜಾಣ್ಮೆಯಿಂದ ಅದನ್ನು ಮೀರಿ ನಿಲ್ಲುವಿರಿ. ಜೂನ್ 2ನೇ ತಾರೀಕಿನಿಂದ ಅಕ್ಟೋಬರ್ 31ರ ವರೆಗೆ ಏಳನೇ ಮನೆಯಲ್ಲಿ ಗುರು ಸಂಚಾರವು ಅದ್ಭುತ ಬದಲಾವಣೆ ತರಲಿದೆ. ವಿವಾಹ ನಿಶ್ಚಯವಾಗುವ ಸಾಧ್ಯತೆ ಇದೆ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ನಿರೀಕ್ಷೆ ಮಾಡಬಹುದು. ವ್ಯಾಪಾರದಲ್ಲಿ ಲಾಭ ಮತ್ತು ಪಾಲುದಾರರೊಂದಿಗೆ ಉತ್ತಮ ಬಾಂಧವ್ಯ ಇರುತ್ತದೆ. ಈ ಅವಧಿಯು ಮನೆಯಲ್ಲಿ ಸಂಭ್ರಮದ ವಾತಾವರಣ ತರುತ್ತದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಎಂಟನೇ ಮನೆಯ ಗುರು ಸಂಚಾರವು ಸ್ವಲ್ಪ ಸವಾಲಿನಿಂದ ಕೂಡಿರಲಿದೆ. ಯಾವುದೇ ಪ್ರಮುಖ ನಿರ್ಧಾರಗಳನ್ನು ವರ್ಷದ ಈಕೊನೆಯ ಭಾಗದಲ್ಲಿ ತೆಗೆದುಕೊಳ್ಳುವುದು ಬೇಡ. ಗುಪ್ತ ಶತ್ರುಗಳ ಬಗ್ಗೆ ಎಚ್ಚರವಿರಲಿ. ಆರೋಗ್ಯ ವಿಚಾರ, ಕೋರ್ಟ್- ಕಚೇರಿ ವ್ಯಾಜ್ಯಗಳು, ನಿಮ್ಮ ಪ್ರತಿಸ್ಪರ್ಧಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು.
ಪರಿಹಾರ: ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಗುರುವಾರದಂದು ತೆರಳಿ. ದುರ್ಗಾದೇವಿ ಹಾಗೂ ಗಣಪತಿ ಆರಾಧನೆ ಮಾಡಿಕೊಳ್ಳಿ.
ಲೇಖನ- ಶ್ರೀನಿವಾಸ ಮಠ





