2026ನೇ ಇಸವಿಯ ವರ್ಷಭವಿಷ್ಯದಲ್ಲಿ ವೃಶ್ಚಿಕ ರಾಶಿಯ ಫಲಾಫಲವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಮೇಷದಿಂದ ಮೀನದವರೆಗೆ ಹನ್ನೆರಡು ರಾಶಿಗಳಿಗೆ ಗ್ರಹಗಳ ಗೋಚಾರ ಆಧಾರವಾಗಿ ವರ್ಷಭವಿಷ್ಯವನ್ನು ನೀಡಲಾಗುತ್ತಿದ್ದು, ಇಲ್ಲಿ ದೀರ್ಘಕಾಲ ಒಂದೇ ರಾಶಿಯಲ್ಲಿ ಸಂಚರಿಸುವ ಶನಿ, ರಾಹು–ಕೇತು ಹಾಗೂ ಗುರು ಗ್ರಹಗಳ ಸಂಚಾರವನ್ನು ಪ್ರಮುಖವಾಗಿ ಪರಿಗಣಿಸಲಾಗಿದೆ. ಈ ವರ್ಷಭವಿಷ್ಯವು 2026 ಜನವರಿ 1ರಿಂದ ಡಿಸೆಂಬರ್ 31ರವರೆಗೆ ಅನ್ವಯವಾಗುತ್ತದೆ. ಇದು ಯುಗಾದಿ ಸಂವತ್ಸರ ಫಲವಲ್ಲ; ಜನವರಿ–ಡಿಸೆಂಬರ್ ಕ್ಯಾಲೆಂಡರ್ ವರ್ಷಕ್ಕೆ ಅನ್ವಯಿಸುವ ಫಲವಾಗಿದೆ.
ಗ್ರಹ ಸಂಚಾರದ ವಿವರ:
ಶನಿ ಗ್ರಹ:
ಇಡೀ ವರ್ಷ ಶನಿ ಮೀನ ರಾಶಿಯಲ್ಲಿ ಸಂಚರಿಸುತ್ತದೆ.
ರಾಹು–ಕೇತು:
ಜನವರಿ 1ರಿಂದ ಡಿಸೆಂಬರ್ 5ರವರೆಗೆ
ರಾಹು: ಕುಂಭ ರಾಶಿ (ವೃಶ್ಚಿಕ ರಾಶಿಗೆ 4ನೇ ಮನೆ)
ಕೇತು: ಸಿಂಹ ರಾಶಿ (10ನೇ ಮನೆ)
ಡಿಸೆಂಬರ್ 6 ನಂತರ
ರಾಹು: ಮಕರ (3ನೇ ಮನೆ)
ಕೇತು: ಕರ್ಕಾಟಕ (9ನೇ ಮನೆ)
ಗುರು:
ಜನವರಿ 1 ರಿಂದ ಜೂನ್ 1ರ ತನಕ ಮಿಥುನ ರಾಶಿ (8ನೇ ಮನೆ)
ಜೂನ್ 2 ರಿಂದ ಅಕ್ಟೋಬರ್ 31ರ ತನಕ ಕರ್ಕಾಟಕ (9ನೇ ಮನೆ)
ನವೆಂಬರ್–ಡಿಸೆಂಬರ್ ಸಿಂಹದಲ್ಲಿ ಸಂಚಾರ (10ನೇ ಮನೆ – ಕರ್ಮ ಸ್ಥಾನ)
ವೃಶ್ಚಿಕ ರಾಶಿ: ವಿಶಾಖ ನಕ್ಷತ್ರದ 4ನೇ ಪಾದ, ಅನೂರಾಧಾ ನಕ್ಷತ್ರದ ನಾಲ್ಕೂ ಪಾದ, ಜ್ಯೇಷ್ಠಾ ನಕ್ಷತ್ರದ ನಾಲ್ಕೂ ಪಾದ ಸೇರಿ ವೃಶ್ಚಿಕ ರಾಶಿ ಆಗುತ್ತದೆ. ವಿಶಾಖ ನಕ್ಷತ್ರದ ಅಧಿಪತಿ ಗುರು, ಅನೂರಾಧಾ ನಕ್ಷತ್ರಕ್ಕೆ ಶನಿ ಹಾಗೂ ಜ್ಯೇಷ್ಠಾ ನಕ್ಷತ್ರಕ್ಕೆ ಬುಧ ಗ್ರಹ ಅಧಿಪತಿ. ಈ ರಾಶಿಯ ಅಧಿಪತಿ ಕುಜ. ಜಲ ತತ್ವದ, ಸ್ಥಿರ ರಾಶಿ, ಕಾಲಪುರುಷನ ಚಕ್ರದ ಎಂಟನೇ ರಾಶಿ ವೃಶ್ಚಿಕ.
ರುದ್ರಾಭಿಷೇಕದ ಮಹತ್ವ ಮತ್ತು ಫಲಗಳು: ಧನುರ್ಮಾಸದಲ್ಲಿ ಈಶ್ವರನ ಅಭಿಷೇಕದಿಂದ ಸಕಲ ಕಷ್ಟ ನಿವಾರಣೆ
ವೃಶ್ಚಿಕ ರಾಶಿ – ವರ್ಷಭವಿಷ್ಯ 2026
ಶನಿ ಗೋಚಾರ ಫಲ: ಶನಿ ಮೂರು ಹಾಗೂ ನಾಲ್ಕನೇ ಮನೆಯ ಅಧಿಪತಿಯಾಗಿ 5ನೇ ಸ್ಥಾನದಲ್ಲೇ ಸಂಚರಿಸುವುದರಿಂದ ಹೆಚ್ಚು ಹೊತ್ತು ಕೂತು ಕೆಲಸ ಮಾಡುವವರಿಗೆ ಆರೋಗ್ಯ ಸಮಸ್ಯೆಗಳು ತೀವ್ರವಾಗಲಿವೆ. ಇನ್ನು ತಾಯಿ ಅಥವಾ ತಾಯಿ ಸಮಾನರಾದವರ ಆರೋಗ್ಯ ಸ್ಥಿತಿ ಆತಂಕಕ್ಕೆ ಕಾರಣವಾಗುತ್ತದೆ. ಮನೆ, ಸೈಟು, ಜಮೀನು ವ್ಯವಹಾರಗಳು ವ್ಯಾಜ್ಯವಾಗಲಿದೆ. ಅಡ್ವಾನ್ ನೀಡುವ ಮುನ್ನ ಕಾನೂನು ವಿಚಾರಗಳನ್ನು ಸರಿಯಾಗಿ ಖಾತ್ರಿ ಮಾಡಿಕೊಳ್ಳಿ. ನಿಮ್ಮ ಹೆಸರು ಹಾಳಾಗುತ್ತದೆ. ಸೋದರ- ಸೋದರಿಯರಿಂದ ಕಿರಿಕಿರಿ- ಸಮಸ್ಯೆಗಳನ್ನು ಎದುರಿಸಲಿದ್ದೀರಿ. ಈ ಹಿಂದೆ ನೀವು ಮಾಡಿದ್ದಂಥ ಕೆಲಸಗಳು ತಪ್ಪುಗಳು ಹೊರಗೆ ಬಂದು, ನಾನಾ ಸಮಸ್ಯೆಗಳನ್ನು ಅನುಭವಿಸುತ್ತೀರಿ. ನಿಮ್ಮ ಆರೋಗ್ಯ ಸಮಸ್ಯೆಗೆ ಏನು ಕಾರಣ ಹಾಗೂ ಔಷಧೋಪಚಾರ ಏನು ಎಂಬುದನ್ನು ನಿರ್ಧರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಮಕ್ಕಳ ಆರೋಗ್ಯ, ಶಿಕ್ಷಣ, ಮದುವೆ ಇತ್ಯಾದಿ ವಿಚಾರಗಳು ಚಿಂತೆಯಾಗಿ ಕಾಡಲಿದೆ. ಸಂತಾನಕ್ಕೆ ಪ್ರಯತ್ನಿಸುತ್ತಾ ಇರುವವರಿಗೆ ನಾನಾ ಅಡೆತಡೆಗಳು ಆಗುತ್ತವೆ.
ರಾಹು–ಕೇತು ಗೋಚಾರ ಫಲ: ನಾಲ್ಕನೇ ಮನೆಯಲ್ಲಿ ರಾಹು ಸಂಚರಿಸುವಾಗ ಸಾಮರ್ಥ್ಯಕ್ಕೆ ಮೀರಿದ ವ್ಯವಹಾರಕ್ಕೆ ಕೈ ಹಾಕಬೇಡಿ. ಅದರಲ್ಲೂ ಜಮೀನಿನ ಅಭಿವೃದ್ಧಿಗೆ ಹಣ ಹಾಕಬೇಡಿ. ಮನೆಯ ರಿನೊವೇಷನ್ ಯಾವುದೇ ಕಾರಣಕ್ಕೂ ಬೇಡ. ಇನ್ನು ಹಳೇ ಕಾರು, ಸ್ಕೂಟರ್ ಕಡಿಮೆ ಬೆಲೆಗೆ ಸಿಕ್ಕಿದೆ ಎಂದೇನಾದರೂ ಖರೀದಿ ಮಾಡಿದಲ್ಲಿ ಆ ನಂತರ ಬಹಳ ನೊಂದುಕೊಳ್ಳುವಂತೆ ಆಗಲಿದೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಸಮಸ್ಯೆ ತೀವ್ರವಾಗಿ ಕಾಡಲಿದೆ. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿ. ಹತ್ತನೇ ಮನೆಯಲ್ಲಿ ಕೇತು ಸಂಚಾರ ಆಗುವುದರಿಂದ ಜನವರಿಯಿಂದ ಮೇ ಹಾಗೂ ನವೆಂಬರ್ – ಡಿಸೆಂಬರ್ ಮಧ್ಯೆ ನೀವಾಗಿಯೇ ಉದ್ಯೋಗ ಬಿಡುವ ಅಥವಾ ನಿಮ್ಮನ್ನು ಕೆಲಸದಿಂದ ಬಿಡಿಸುವ ಸಾಧ‌್ಯತೆ ಇದೆ. ಒಂದು ವೇಳೆ ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಉದ್ಯೋಗದಲ್ಲಿ ಬೇಜವಾಬ್ದಾರಿ- ನಿರ್ಲಕ್ಷ್ಯದ ಆರೋಪ ಹೊರಿಸಿ, ಅಮಾನತು ಮಾಡಬಹುದು ಅಥವಾ ಇಲಾಖೆ ವಿಚಾರಣೆಗಳು ಸಹ ನಡೆಯಬಹುದು. ಉದ್ಯೋಗದಲ್ಲಿ ಮೈ ಮರೆಯದಂತೆ ಎಚ್ಚರಿಕೆಯಿಂದ ಇರಬೇಕು.
ಗುರು ಗೋಚಾರ ಫಲ: ಜನವರಿಯಿಂದ ಜೂನ್ ತನಕ ಎಂಟನೇ ಮನೆಯಲ್ಲಿ ಗುರು ಸಂಚಾರದ ವೇಳೆ ಸಿಕ್ಕಾಪಟ್ಟೆ ಅನಗತ್ಯ ಖರ್ಚುಗಳು ಆಗುತ್ತವೆ. ಇನ್ನು ಮಕ್ಕಳಿಗೆ ಹಣ ವೆಚ್ಚ ಮಾಡುತ್ತಾ ಇದ್ದೀರಿ ಎಂದಾದಲ್ಲಿ ಪೂರ್ವಾಪರ ಆಲೋಚನೆ ಮಾಡಿ. ಏಕೆಂದರೆ ಅನವಶ್ಯಕ ವೆಚ್ಚಗಳು ಆಗುತ್ತವೆ. ರೋಗಬಾಧೆ, ಸಾಲ ಬಾಧೆ ಜಾಸ್ತಿ ಆಗುತ್ತದೆ. ಕಾನೂನು ವಿಚಾರಕ್ಕೆ ಈಗಾಗಲೇ ಅಲೆದಾಟ ಮಾಡುತ್ತಾ ಇದ್ದಲ್ಲಿ ಅದು ಜಟಿಲ ಆಗುತ್ತದೆ. ಇಲ್ಲದಿದ್ದರೆ ಈ ಅವಧಿಯಲ್ಲಿ ಪೊಲೀಸ್ ಸ್ಟೇಷನ್- ಕೋರ್ಟ್ ಮೆಟ್ಟಿಲು ಏರುವಂತೆ ಆಗಲಿದೆ. ಅದರಲ್ಲಿಯೂ ಹಣಕಾಸಿನ ವಿಚಾರಕ್ಕೆ, ಮಕ್ಕಳ ಸಲುವಾಗಿ, ಈ ಹಿಂದೆ ನಡೆದ ಘಟನೆಯೊಂದರ ಸಲುವಾಗಿ ವ್ಯಾಜ್ಯಗಳನ್ನು ಎದುರಿಸುತ್ತೀರಿ. ಜೂನ್‌ನಿಂದ ಅಕ್ಟೋಬರ್ ಅಂತ್ಯದವರೆಗೆ 9ನೇ ಮನೆಯಲ್ಲಿ ಗುರು ಸಂಚಾರದಿಂದ ಉದ್ಯೋಗ ಬದಲಾವಣೆ, ವಿವಾಹ ಪ್ರಯತ್ನಗಳಲ್ಲಿ ಯಶಸ್ಸು, ಸಂತಾನದಲ್ಲಿ ಶುಭ ಬೆಳವಣಿಗೆ, ಪಿತ್ರಾರ್ಜಿತ ಆಸ್ತಿ ವ್ಯವಹಾರಗಳು ಮೊದಲಾದವು ಇತ್ಯರ್ಥ ಆಗುತ್ತವೆ. ಈ ಅವಧಿಯಲ್ಲಿ ಹಲವು ರೀತಿಯಲ್ಲಿ ಅನುಕೂಲವಿದೆ. ನವೆಂಬರ್- ಡಿಸೆಂಬರ್ ನಲ್ಲಿ 10ನೇ ಮನೆಯಲ್ಲಿ ಗುರು ಸಂಚಾರ ವೇಳೆ ಉದ್ಯೋಗ, ವೃತ್ತಿ, ವ್ಯವಹಾರ- ವ್ಯಾಪಾರ ಎಲ್ಲ ಕ್ಷೇತ್ರದಲ್ಲಿಯೂ ಮಿಶ್ರ ಫಲಗಳನ್ನು ಅನುಭವಿಸುತ್ತೀರಿ.
ಪರಿಹಾರ: ನವಗ್ರಹ ಪೂಜೆ ಮಾಡಿ, ನವಧಾನ್ಯಗಳನ್ನು ದಾನ ಮಾಡಿ.
ಲೇಖನ- ಶ್ರೀನಿವಾಸ ಮಠ





