2026ನೇ ಇಸವಿಯ ವರ್ಷಭವಿಷ್ಯದಲ್ಲಿ ಮಿಥುನ ರಾಶಿ ಫಲಾಫಲವನ್ನು ಈ ಲೇಖನದಲ್ಲಿ ತಿಳಿಸಲಾಗುವುದು. ಈ ಸರಣಿಯಲ್ಲಿ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳ ಜ್ಯೋತಿಷ್ಯ ರೀತಿಯಾದ ವರ್ಷಭವಿಷ್ಯವನ್ನು ನೀಡಲಾಗುತ್ತಿದೆ. ಇದಕ್ಕಾಗಿ ಗ್ರಹಗಳ ಗೋಚಾರ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಅದರಲ್ಲಿಯೂ ದೀರ್ಘಕಾಲ ಒಂದೇ ರಾಶಿಯಲ್ಲಿ ಇರುವಂಥ ಗ್ರಹಗಳಾದ ಶನಿ, ರಾಹು- ಕೇತು ಹಾಗೂ ಗುರು ಗ್ರಹದ ಸಂಚಾರವನ್ನು ಆಧರಿಸಿ, ಇಲ್ಲಿನ ಫಲಾಫಲವನ್ನು ತಿಳಿಸಲಾಗಿದೆ. ಇಲ್ಲಿ ನೀಡಲಾಗಿರುವ ವರ್ಷಫಲವು 2026ನೇ ಇಸವಿಯ ಜನವರಿ 1ನೇ ತಾರೀಕಿನಿಂದ ಡಿಸೆಂಬರ್ 31ನೇ ತಾರೀಕಿನ ತನಕ ಅನ್ವಯ ಆಗುತ್ತದೆ. ನೆನಪಿನಲ್ಲಿಡಿ, ಇದು ಯುಗಾದಿ ಸಂವತ್ಸರ ಫಲ ಅಥವಾ ಯುಗಾದಿ ಭವಿಷ್ಯ ಅಲ್ಲ, ಇದು ಹೆಚ್ಚು ಜನಪ್ರಿಯ ಆಗಿರುವ ಜನವರಿಯಿಂದ ಡಿಸೆಂಬರ್ ತನಕದ ಕ್ಯಾಲೆಂಡರ್ ವರ್ಷ ಭವಿಷ್ಯ.
ಗ್ರಹ ಸಂಚಾರದ ವಿವರ ಹೀಗಿದೆ:
ಶನಿ ಗ್ರಹ ಇಡೀ ವರ್ಷ ಮೀನ ರಾಶಿಯಲ್ಲಿ ಸಂಚರಿಸುತ್ತದೆ.
ರಾಹು- ಕೇತು: ಜನವರಿಯಿಂದ ಡಿಸೆಂಬರ್ 5ನೇ ತಾರೀಕಿನ ತನಕ ರಾಹು ಕುಂಭ ರಾಶಿಯಲ್ಲಿ, ಕೇತು ಸಿಂಹ ರಾಶಿಯಲ್ಲಿ ಇರುತ್ತದೆ. ಆ ನಂತರ ವರ್ಷಾಂತ್ಯದ ತನಕ ರಾಹು ಮಕರ ರಾಶಿಯಲ್ಲೂ ಕೇತು ಕರ್ಕಾಟಕ ರಾಶಿಯಲ್ಲಿ ಇರುತ್ತದೆ.
ಗುರು: ಜನವರಿಯಿಂದ ಜೂನ್ ಒಂದನೇ ತಾರೀಕಿನ ತನಕ ಗುರು ಗ್ರಹ ಮಿಥುನ ರಾಶಿಯಲ್ಲಿ ಸಂಚರಿಸುತ್ತದೆ. ಆ ನಂತರ ಅಕ್ಟೋಬರ್ 31ನೇ ತಾರೀಕಿನ ತನಕ ಕರ್ಕಾಟಕ ರಾಶಿಯಲ್ಲಿ ಬೃಹಸ್ಪತಿ ಸಂಚರಿಸುತ್ತದೆ, ಆ ಮೇಲೆ ವರ್ಷಾಂತ್ಯದ ತನಕ ಸಿಂಹ ರಾಶಿಯಲ್ಲಿ ಗುರು ಸಂಚಾರ ಇರುತ್ತದೆ.
ಮಿಥುನ- ಮೃಗಶಿರಾ ನಕ್ಷತ್ರದ ಮೂರು, ನಾಲ್ಕನೇ ಪಾದ, ಆರಿದ್ರಾ ನಕ್ಷತ್ರದ ನಾಲ್ಕೂ ಪಾದ, ಪುನರ್ವಸು ನಕ್ಷತ್ರದ ಒಂದು, ಎರಡು, ಮೂರನೇ ಪಾದ ಸೇರಿ ಮಿಥುನ ರಾಶಿ ಆಗುತ್ತದೆ. ಮೃಗಶಿರಾ ನಕ್ಷತ್ರಕ್ಕೆ ಕುಜ, ಆರಿದ್ರಾ ನಕ್ಷತ್ರ ರಾಹು ಮತ್ತು ಪುನರ್ವಸು ನಕ್ಷತ್ರಕ್ಕೆ ಗುರು ಅಧಿಪತಿ ಆಗುತ್ತಾನೆ. ಇನ್ನು ಮಿಥುನ ರಾಶ್ಯಾಧಿಪತಿ ಬುಧ ಆಗುತ್ತದೆ. ದ್ವಿಸ್ವಭಾವ ರಾಶಿ, ವಾಯು ತತ್ವದ ಕಾಲಪುರುಷನ ಚಕ್ರದ ಮೂರನೇ ರಾಶಿ ಮಿಥುನ.
ಮಿಥುನ ರಾಶಿ ವರ್ಷ ಭವಿಷ್ಯ ಹೀಗಿದೆ:
ಶನಿ ಗೋಚಾರ ಫಲ: ನಿಮಗೆ ಎಂಟು ಮತ್ತು ಒಂಬತ್ತನೇ ಸ್ಥಾನದ, ಆಯುಷ್ಯ- ಪಿತೃ, ಅದೃಷ್ಟ ಸ್ಥಾನಕ್ಕೆ ಅಧಿಪತಿ ಶನೈಶ್ಚರ. ಇಡೀ ವರ್ಷ ಶನಿ ಹತ್ತನೇ ಮನೆಯಾದ ಕರ್ಮ ಸ್ಥಾನದಲ್ಲಿ ಸಂಚರಿಸುತ್ತದೆ. ದೂರ ಆಗುವುದನ್ನು ಈ ಸ್ಥಿತಿ ಸೂಚಿಸುತ್ತದೆ. ತಂದೆ- ತಂದೆ ಸಮಾನರಾದವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವೈದ್ಯಕೀಯ ಖರ್ಚುಗಳ ಪ್ರಮಾಣ ಹೆಚ್ಚಾಗುತ್ತದೆ. ಆಸ್ತಿ- ಹಣಕಾಸು ವಿಚಾರ ಹೀಗೆ ಯಾವುದಕ್ಕಾದರೂ ಅವರ ಜತೆ ಮನಸ್ತಾಪ, ಅಭಿಪ್ರಾಯ ಭೇದ ಕಾಣಿಸಿಕೊಂಡು, ಮಾತು ಬಿಡುವಂಥ ಮಟ್ಟಕ್ಕೆ ಹೋಗಬಹುದು. ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುವ ಆಲೋಚನೆ ಇದ್ದಲ್ಲಿ ಅಂಥವು ಕೈ ಹಿಡಿಯುವುದಿಲ್ಲ. ಅದೃಷ್ಟವನ್ನು ನಂಬಿಕೊಂಡು ಯಾವುದೇ ಕೆಲಸ ಮಾಡುವುದಕ್ಕೆ ಹೋಗಬೇಡಿ. ನಿಮ್ಮದೇ ಆರೋಗ್ಯ ಸ್ಥಿತಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯುವುದಕ್ಕೆ ಹತ್ತಾರು ಕಡೆ ವೈದ್ಯರನ್ನು ಭೇಟಿ ಮಾಬೇಕಾಗುತ್ತದೆ. ಉದ್ಯೋಗ- ವೃತ್ತಿ ಸಲುವಾಗಿ ಓಡಾಟ ಹೆಚ್ಚಿರುವವರು ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ನೀಡಬೇಕು. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಇರುತ್ತದೆ. ಜನ್ಮ ಜಾತಕದಲ್ಲಿ ಶನಿ ನೀಚ ಸ್ಥಿತಿಯೋ ಅಥವಾ ದುರ್ಬಲನಾಗಿಯೋ ಇದ್ದಲ್ಲಿ, ಸದ್ಯಕ್ಕೆ ನಡೆಯುತ್ತಿರುವ ದಶಾ- ಭುಕ್ತಿ ಅನುಕೂಲಕರವಾಗಿ ಇಲ್ಲ ಅಂತಾದರೆ ಉದ್ಯೋಗದಾತರೇ ಕೆಲಸದಿಂದ ತೆಗೆಯಬಹುದು ಅಥವಾ ನೀವಾಗಿಯೇ ಉದ್ಯೋಗ ಬಿಡುವ ಸನ್ನಿವೇಶ ಸೃಷ್ಟಿ ಆಗುತ್ತದೆ. ವೃತ್ತಿ ಮಾಡುತ್ತಿರುವವರಿಗೆ ಆದಾಯದಲ್ಲಿ ಭಾರೀ ಇಳಿಕೆ ಆಗಲಿದೆ.
ರಾಹು- ಕೇತು ಗೋಚಾರ ಫಲ: ಒಂಬತ್ತನೇ ಮನೆಯಲ್ಲಿ ರಾಹು ಸಂಚಾರ ತಂದೆ, ಅದೃಷ್ಟದ ವಿಚಾರದ ಬಗೆಗಿನ ಎಚ್ಚರವನ್ನೇ ಸೂಚಿಸುತ್ತದೆ. ಷೇರು- ಕಮಾಡಿಟಿ ಮಾರ್ಕೆಟ್ ಇಂಥಲ್ಲಿ ಟ್ರೇಡಿಂಗ್ ಮಾಡುವಂಥವರಿಗೆ ಭಾರೀ ನಷ್ಟ ಆಗಲಿದೆ. ಹಿರಿಯರ ಸಲಹೆ- ಮಾರ್ಗದರ್ಶನ ಸರಿಯಾಗಿ ಪಾಲಿಸುವುದು ಮುಖ್ಯ. ಭೂಮಿ ವ್ಯವಹಾರಗಳು ಬಹಳ ಎಳೆದಾಡುತ್ತವೆ. ಕೋರ್ಟ್- ಕಚೇರಿ, ಪೊಲೀಸ್ ಸ್ಟೇಷನ್ ಅಂತ ಅಲೆದಾಡುವಂತೆ ಆಗಲಿದೆ. ಈ ಒಂಬತ್ತನೇ ಮನೆಯ ಕಾರಕತ್ವದ ಎಲ್ಲ ವಿಚಾರವೂ ದುಃಖವನ್ನು ನೀಡುತ್ತದೆ. ಹಣದ ವಿಚಾರಕ್ಕೆ ಮುಖ ಕೆಡಿಸಿಕೊಳ್ಳಬೇಡಿ. ಮೂರನೇ ಮನೆಯಲ್ಲಿನ ಕೇತು ಸಂಚಾರದ ಅವಧಿ ಧಾರ್ಮಿಕ ಪ್ರವೃತ್ತಿ ಹೆಚ್ಚು ಮಾಡುತ್ತದೆ. ದೇವರು, ಧರ್ಮ- ಕರ್ಮದ ಪ್ರಜ್ಞೆ ಹೆಚ್ಚಾಗಿ, ಈ ಹಿಂದೆ ನೀವೇನಾದರೂ ಹರಕೆ ಹೊತ್ತುಕೊಂಡಿದ್ದಲ್ಲಿ ಅಥವಾ ಮನೆ ದೇವರ ಪೂಜೆ- ಪುನಸ್ಕಾರ ಇಂಥವುಗಳಿಗೆ ಹಣದ ಸದ್ವಿನಿಯೋಗ ಆಗುತ್ತದೆ.
ಗುರು ಗೋಚಾರ ಫಲ: ನಿಮ್ಮದೇ ರಾಶಿಯಲ್ಲಿ ಗುರು ಸಂಚರಿಸುವಾಗ ಆರೋಗ್ಯ, ಮಕ್ಕಳು, ದಾಂಪತ್ಯ ವಿಚಾರಕ್ಕೆ ದುಃಖ ಅನುಭವಿಸುವಂತೆ ಆಗಲಿದೆ. ಜೂನ್ ನಿಂದ ಅಕ್ಟೋಬರ್ ಕೊನೆ ತನಕ ಎರಡನೇ ಮನೆಯಲ್ಲಿ ಗುರು ಸಂಚಾರದ ಅವಧಿ ವಿವಾಹ ವಯಸ್ಕರಾಗಿ ಮದುವೆಗಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ಸಮಾಚಾರ, ಒಳ್ಳೆ ಬೆಳವಣಿಗೆ ಆಗಲಿದೆ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಇರುತ್ತದೆ. ಹಣಕಾಸಿನ ಹರಿವು ಚೇತರಿಕೆ ಕಾಣಲಿದೆ. ನವೆಂಬರ್- ಡಿಸೆಂಬರ್ ತಿಂಗಳಲ್ಲಿ ಮಾನಸಿಕವಾಗಿ ಕುಗ್ಗುವಂತೆ, ನಿಮ್ಮ ವರ್ಚಸ್ಸು- ಹೆಸರಿಗೆ ಹಾನಿ ಆಗುವಂಥ ಬೆಳವಣಿಗೆಗಳು ಆಗಲಿವೆ. ವಾಹನ ಓಡಿಸುವಾಗ ಎಚ್ಚರಿಕೆ ವಹಿಸಿ.
ಪರಿಹಾರ: ನವಗ್ರಹ ಪೂಜೆಯನ್ನು ಮಾಡಿಕೊಂಡು, ನವ ಧಾನ್ಯವನ್ನು ದಾನ ಮಾಡಿ.
ಲೇಖನ- ಶ್ರೀನಿವಾಸ ಮಠ





