Sri Gurubhyo Logo

ಡಯಾಬಿಟೀಸ್ ನಿಯಂತ್ರಣಕ್ಕೆ ನಂಬಿಕೆಯ ದೇಗುಲ: ಸಾವಿರ ವರ್ಷಗಳ ಇತಿಹಾಸದ ಕರುಂಬೇಶ್ವರರ್ ದೇವಾಲಯ

diabetes-control-karumbeshwarar-temple
ತಮಿಳುನಾಡಿನ ತಿರುವರುರ್ ಜಿಲ್ಲೆಯ ಕೋವಿಲ್ ವೆನ್ನಿಯ ಐತಿಹಾಸಿಕ ಕರುಂಬೇಶ್ವರರ್ ಶಿವಾಲಯ

ಆ ದೇವಾಲಯದ ಮುಖ್ಯ ದೇವರು ಕರುಂಬೇಶ್ವರರ್. ತಮಿಳಿನಲ್ಲಿ ಕರುಂಬು ಅಂದರೆ ಕಬ್ಬು ಅಂತ ಅರ್ಥ. ತಮಿಳುನಾಡಿನ ತಿರುವಾರೂರ್ ಜಿಲ್ಲೆಯ ಕೋವಿಲ್ ವೆನ್ನಿ ಎಂಬಲ್ಲಿ ಇರುವಂಥ ಸಾವಿರ ವರ್ಷಕ್ಕೂ ಹೆಚ್ಚು ಹಳೇ ಈಶ್ವರನ ದೇವಸ್ಥಾನ ಇದು. ಅಲ್ಲಿಗೆ ತೆರಳಿ, ತಮ್ಮ ಬಾಧೆಯನ್ನು ಪರಿಹರಿಸು ಎಂದು ಬೇಡಿಕೊಳ್ಳುವ ನಂಬಿಕೆ ನಡೆದುಬಂದಿದೆ. ಅಂದಹಾಗೆ ಎಲ್ಲ ವೈದ್ಯಕೀಯ ಪ್ರಯತ್ನದ ಹೊರತಾಗಿಯೂ ‘ಮಧುಮೇಹ’ ನಿಯಂತ್ರಣಕ್ಕೆ (Diabetes Control) ಬರುತ್ತಿಲ್ಲ ಎಂದಾದಲ್ಲಿ ಈ ದೇವಾಲಯಕ್ಕೆ ಭೇಟಿ ಕೊಟ್ಟು, ಭಕ್ತರು ತಮ್ಮ ಬಾಧೆ ಪರಿಹರಿಸುವಂತೆ ಬೇಡಿಕೊಳ್ಳುತ್ತಾರೆ. ಹಾಗೆ ಬೇಡಿಕೊಂಡು ಬಂದ ನಂತರ ತಮ್ಮ ಮಧುಮೇಹವು ಔಷಧದ ಸಹಾಯದಿಂದ ನಿಯಂತ್ರಣಕ್ಕೆ ಬಂದಿದೆ, ಔಷಧದ ಪ್ರಮಾಣದಲ್ಲಿ ಇಳಿಕೆ ಆಗಿದೆ, ಒಂದು ವೇಳೆ ಮಧುಮೇಹ ಪೂರ್ವ (ಪ್ರಿ ಡಯಾಬಿಟಿಕ್) ಹಂತದಲ್ಲಿ ಇರುವವರಿಗೆ ಆ ಸ್ಥಿತಿಯಿಂದ ಹೊರಬರುವುದಕ್ಕೆ ಸಾಧ್ಯವಾಗಿದೆ ಎಂಬುದು ಇಲ್ಲಿಗೆ ಭೇಟಿ ನೀಡಿದ ಭಕ್ತರ ಮಾತಾಗಿದೆ.

ದೇವಾಲಯದ ಸಮಯ:

ಈ ದೇವಾಲಯದ ವೈಶಿಷ್ಟ್ಯಗಳು ಒಂದೆರಡಲ್ಲ. ಫಾಲ್ಗುಣ ಮಾಸದ ದ್ವಿತೀಯ, ತೃತೀಯ ಹಾಗೂ ಚತುರ್ಥಿ ದಿನದಂದು, ಅಂದರೆ ಮಾರ್ಚ್- ಏಪ್ರಿಲ್  ತಿಂಗಳಲ್ಲಿ ಸೂರ್ಯನ ಕಿರಣಗಳು ನೇರವಾಗಿ ಇಲ್ಲಿನ ಸ್ವಯಂವ್ಯಕ್ತ ಶಿವಲಿಂಗದ ಮೇಲೆ  ಬೀಳುತ್ತದೆ. ನವರಾತ್ರಿಯ ಒಂಬತ್ತು ದಿನ ತುಂಬ ವಿಶೇಷವಾಗಿ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಬೆಳಗ್ಗೆ 8ರಿಂದ ಮಧ್ಯಾಹ್ನ 12 ಗಂಟೆಯ ತನಕ ಹಾಗೂ ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯ ತನಕ ದೇವಸ್ಥಾನ ತೆರೆದಿರುತ್ತದೆ. ಪೂರ್ವ ದಿಕ್ಕಿನ ಮುಖ್ಯದ್ವಾರ ಹೊಂದಿರುವ ಈ ದೇವಸ್ಥಾನದ ಎದುರಿಗೇ ಸೂರ್ಯ ತೀರ್ಥ ಇದೆ.  ಇನ್ನು ಈ ಸ್ಥಳದಲ್ಲಿ ಒಂದು ಕಾಲಕ್ಕೆ ಬಹಳ ಒತ್ತೊತ್ತಾಗಿ ಕಬ್ಬು ಬೆಳೆಯಲಾಗುತ್ತಿತ್ತು. ಇಬ್ಬರು ಸಾಧುಗಳು ಇದೇ ದಾರಿಯಲ್ಲಿ ಹಾದು ಹೋಗುವಾಗ ಇದು ಈಶ್ವರನ ಸಾನ್ನಿಧ್ಯ ಎಂದೆನಿಸಿತಂತೆ. ಇಬ್ಬರ ಮಧ್ಯೆ ಇಲ್ಲಿ ಪವಿತ್ರವಾದದ್ದು ಕಬ್ಬು (ಕರುಂಬು) ಅಂತಲೂ ಇಲ್ಲ, ಮತ್ತೊಬ್ಬರು ಬನ್ನಿ (ವೆನ್ನಿ) ಅಂತಲೂ ಮಾತು ನಡೆದಿದೆ. ಆಗ ಸಾಕ್ಷಾತ್ ಶಿವನ ಧ್ವನಿಯೇ ಕೇಳಿಸಿತಂತೆ: ಈ ಎರಡೂ ಶ್ರೇಷ್ಠವಾದದ್ದು ಅಂತ. 

Kadandale Subrahmanya Swamy Temple: ತ್ರೇತಾಯುಗದ ವಾಲಿಯಿಂದ ಪೂಜೆ ಆಗಿರುವ ಕಡಂದಲೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಗ್ಗೆ ಇಲ್ಲಿದೆ ಮಾಹಿತಿ

ಕಬ್ಬಿನ ಹಾಲಿನ ಅಭಿಷೇಕ:

ಆಗಿನಿಂದ ಈ ದೇವರನ್ನು ಕರುಂಬೇಶ್ವರರ್ ಹಾಗೂ ರಸಪುರೀಶ‌್ವರರ್ ಎಂದು ಕರೆಯಲಾಗುತ್ತಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತರು ತಮ್ಮ ಮಧುಮೇಹ ನಿಯಂತ್ರಣಕ್ಕೆ ಬರಲಿ, ಔಷಧ ದೇಹದ ಮೇಲೆ ಪರಿಣಾಮ ಬೀರಲಿ ಎಂದು ಬೇಡಿಕೊಳ್ಳುತ್ತಾರೆ. ಮಧುಮೇಹಹರ ವಿಶೇಷ ಪೂಜೆಯನ್ನು ಮಾಡಿಸುತ್ತಾರೆ. ಸ್ಥಳೀಯ ಪೂಜಾ ಪದ್ಧತಿಯಂತೆ ಕೆಲವು ಸಿಹಿಯಾದ ದ್ರವ ಪದಾರ್ಥಗಳು ಅಥವಾ ಕಬ್ಬಿನ ಹಾಲಿನಿಂದ ಈಶ್ವರಿನಿಗೆ ಅಭಿಷೇಕ ಮಾಡಲಾಗುತ್ತದೆ. ಭಕ್ತರ ನಂಬಿಕೆ ಏನೆಂದರೆ, ಈ ಪೂಜೆಗಳನ್ನು ಮಾಡಿಸುವುದರಿಂದ ಔಷಧಗಳು ದೇಹಕ್ಕೆ ಒಗ್ಗಿ, ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಇನ್ನೂ ಕೆಲವರ ನಂಬಿಕೆ ಏನೆಂದರೆ, ಬೆಲ್ಲದ ಪುಡಿ ಅಥವಾ ಸಕ್ಕರೆಯನ್ನು ದೇವಾಲಯದ ಇಕ್ಕೆಲಗಳಲ್ಲಿ ಇರುವ ಇರುವೆಗಳಿಗೆ ಹಾಕಿದರೆ, ಅದು ಕೂಡ ಪರಿಣಾಮಕಾರಿಯಾದ ಫಲಿತಾಂಶವನ್ನು ನೀಡುತ್ತದೆ. ಆದರೆ ಇದಕ್ಕೆ ಯಾವುದೇ ಉಲ್ಲೇಖ ಇರುವಂತೆ ಕಂಡುಬರುವುದಿಲ್ಲ.

ಸಕ್ಕರೆ ಪೊಂಗಲ್ ನೈವೇದ್ಯ:

ಆದರೆ, ಇಲ್ಲಿನ ಶಿವಲಿಂಗದ ಬಳಿ ಕಬ್ಬನ್ನು ಇಟ್ಟು ಪೂಜೆ ಮಾಡುವ ಪರಿಪಾಠ ಇದೆ. ರವೆಯಿಂದ ಮಾಡಿದ ಸಿಹಿ ಖಾದ್ಯ ಹಾಗೂ ಸಕ್ಕರೆ ಪೊಂಗಲ್ ಅನ್ನು ನೈವೇದ್ಯವಾಗಿ ಬಳಸಲಾಗುತ್ತದೆ. ಇದು ಕೂಡ ಆ ಕರುಂಬೇಶ್ವರರ್ ಸಂಪ್ರೀತಿಗಾಗಿ ಮಾಡಲಾಗುತ್ತದೆ. ಇಲ್ಲಿಗೆ ಭೇಟಿ ನೀಡಬೇಕು ಅಂದುಕೊಳ್ಳುವವರು ಸಹ ಗಮನದಲ್ಲಿ ಇರಿಸಿಕೊಳ್ಳಬೇಕಾದದ್ದು ಏನೆಂದರೆ, ಈ ದೇಗುಲಕ್ಕೆ ಭೇಟಿ ನೀಡುವ ಭಕ್ತರಿಗೆ ಆ ಈಶ್ವರ ನಂಬಿಕೆಯನ್ನು ನೀಡುತ್ತಾನೆ. ಔಷಧವು ದೇಹದ ಮೇಲೆ ಪರಿಣಾಮ ಬೀರುವಂತೆಯೂ ಹಾಗೂ ಸಮಸ್ಯೆಯ ತೀವ್ರತೆಯನ್ನು ಕಡಿಮೆ ಆಗುವಂತೆಯೂ ಅನುಗ್ರಹಿಸುತ್ತಾನೆ ಎಂಬುದು ಇಲ್ಲಿಗೆ ನಡೆದುಕೊಳ್ಳುವವರ ಬಲವಾದ ನಂಬಿಕೆ. ಯಾರಾದರೂ ಇದನ್ನು ಉತ್ಪ್ರೇಕ್ಷೆ ಮಾಡಿ, ಮಧುಮೇಹ ಅಥವಾ ಡಯಾಬಿಟೀಸ್ ಸಂಪೂರ್ಣ ಹೋಗಲಾಡಿಸುವಂತೆ ಆಗುತ್ತದೆ ಎಂದು ಹೇಳಿದಲ್ಲಿ ಅಂಥ ಮಾತುಗಳನ್ನು ನಂಬುವ ಅಗತ್ಯ ಇಲ್ಲ. ಇದರಿಂದಾಗಿ ದೈವ ನಂಬಿಕೆಯನ್ನು ವಿನಾಕಾರಣ ಹೀಗಳೆಯುವುದಕ್ಕೆ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ.

ತಲುಪುವುದಕ್ಕೆ ವಿವಿಧ ಮಾರ್ಗ:

ಇನ್ನು ಈ ದೇವಸ್ಥಾನವು ಮನ್ನಾರ್ ಗುಡಿಗೆ ಹದಿನಾಲ್ಕು ಕಿಲೋಮೀಟರ್ ದೂರದಲ್ಲಿದೆ. ತಿರುವಾರೂರ್ ನಿಂದ ಇಪ್ಪತ್ತೆಂಟು ಕಿಲೋಮೀಟರ್ ಆಗುತ್ತದೆ. ತಂಜಾವೂರ್ ನಿಂದ ಐವತ್ತೈದು ಕಿಲೋಮೀಟರ್ ದೂರವಿದೆ. ಬೆಂಗಳೂರು ಅಥವಾ ಚೆನ್ನೈ ಮೂಲಕ ತೆರಳುವವರಿಗೆ ತಂಜಾವೂರ್- ಮನ್ನಾರ್ ಗುಡಿ ಮೂಲಕ ಕೋವಿಲ್ ವೆನ್ನಿ ತಲುಪುವುದು ಸಲೀಸು. ಮನ್ನಾರ್ ಗುಡಿ, ತಿರುವಾರೂರ್, ತಂಜಾವೂರ್, ಕುಂಭಕೋಣಂ ಮತ್ತರು ನಾಗರಪಟ್ಣಂನಿಂದ ಸರ್ಕಾರಿ- ಖಾಸಗಿ ಬಸ್ ಗಳು ನಿರಂತರವಾಗಿ ಸಂಚರಿಸುತ್ತವೆ. ಕೋವಿಲ್ ವೆನ್ನಿಗೆ ಹತ್ತಿರದ ರೈಲು ನಿಲ್ದಾಣ ಅಂದರೆ ಮನ್ನಾರ್ ಗುಡಿ ರೈಲ್ವೆ ಸ್ಟೇಷನ್. ದೇವಸ್ಥಾನದಿಂದ ಈ ರೈಲು ನಿಲ್ದಾಣಕ್ಕೆ ಹದಿನೈದು ಕಿಲೋಮೀಟರ್ ಆಗುತ್ತದೆ. ಮತ್ತೊಂದು ಆಯ್ಕೆ ಅಂತಾದರೆ ತಿರುವಾರೂರ್ ಜಂಕ್ಷನ್. ತಿರುಚಿರಾಪಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈ ದೇವಾಲಯಕ್ಕೆ ನೂರು ಕಿಲೋಮೀಟರ್ ದೂರದಲ್ಲಿದೆ. ಅಲ್ಲಿಂದ ಟ್ಯಾಕ್ಸಿ, ಬಸ್ ಗಳಲ್ಲಿ ಮನ್ನಾರ್ ಗುಡಿ ಮತ್ತು ಕೋವಿಲ್ ವೆನ್ನಿಗೆ ಬರಬೇಕಾಗುತ್ತದೆ. ಸ್ಥಳೀಯವಾಗಿ ಆಟೋ- ಟ್ಯಾಕ್ಸಿಗಳು ಸುಲಭವಾಗಿ ಸಿಗುತ್ತವೆ. 

(ಈ ಲೇಖನವು ಭಕ್ತರ ನಂಬಿಕೆ ಮತ್ತು ಧಾರ್ಮಿಕ ಪರಂಪರೆಯನ್ನು ಆಧರಿಸಿದೆ. ಡಯಾಬಿಟೀಸ್ ಚಿಕಿತ್ಸೆಗೆ ವೈದ್ಯರ ಸಲಹೆ ಅವಶ್ಯಕ.)

ಲೇಖನ: ಶ್ರೀನಿವಾಸ ಮಠ

 

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts