ಕರ್ನಾಟಕದ ಖ್ಯಾತ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರು ರಾಜ್ಯ ರಾಜಕೀಯದ ಬಗ್ಗೆ ಸ್ಫೋಟಕವಾದ ಭವಿಷ್ಯವನ್ನು ನುಡಿದಿದ್ದಾರೆ. ಅದಕ್ಕಾಗಿ ಅವರು ನಿರ್ದಿಷ್ಟವಾಗಿ ದಿನಾಂಕ ಸಹಿತ ತಿಳಿಸಿದ್ದಾರೆ. ಹಾಗೊಂದು ಸಾಧ್ಯತೆಯು ಹೇಗೆ ಆಗಬಹುದು ಎಂಬುದಕ್ಕೆ ಜ್ಯೋತಿಷ್ಯ ರೀತಿಯಾಗಿ ಗ್ರಹಗಳ ಸ್ಥಿತಿ- ಗತಿ ಹೇಗೆ ಕಾರಣ ಎಂಬುದನ್ನು ಸಹ ವಿವರಿಸಿದ್ದಾರೆ. ಇನ್ನು ಮುಂದೆ ಅವರದೇ ಮಾತುಗಳನ್ನು ಅಕ್ಷರ ರೂಪದಲ್ಲಿ ಓದಿಕೊಳ್ಳಿ.
ಗ್ರಹಸ್ಥಿತಿಗಳ ಆಧಾರದಲ್ಲಿ ಹೇಳಬೇಕೆಂದರೆ, ಡಿಸೆಂಬರ್ ಆರನೇ ತಾರೀಕಿನ ಒಳಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನವನ್ನು ತ್ಯಜಿಸಲಿದ್ದಾರೆ. ಆದರೆ ಅದಕ್ಕೆ ಖಂಡಿತಾ ‘ಮುಡಾ’ದ ಬಗ್ಗೆ ಈಗ ಕೇಳಿಬರುತ್ತಿರುವ ಆರೋಪಗಳು ಕಾರಣ ಅಲ್ಲ ಎಂಬುದನ್ನು ಖಡಾಖಂಡಿತವಾಗಿ ಹೇಳಬಹುದು. ಇನ್ನು ಅವರು ಹುದ್ದೆಯನ್ನು ತ್ಯಜಿಸುವಾಗ ತಮಗೆ ನಿಷ್ಠವಾದ ವ್ಯಕ್ತಿಯೊಬ್ಬರು ಅಥವಾ ಅನುಯಾಯಿಯೊಬ್ಬರನ್ನು ಗದ್ದುಗೆ ಮೇಲೆ ಕೂರಿಸಿಯೇ ನಿರ್ಗಮಿಸಲಿದ್ದಾರೆ.
ಹಾಗೆ ಅಧಿಕಾರವನ್ನು ಹಿಡಿಯುವಂಥ ವ್ಯಕ್ತಿಯು ಈಗಿನ ಐದು ಗ್ಯಾರಂಟಿಗಳನ್ನು ಕ್ರಮೇಣ ನಿಲ್ಲಿಸುತ್ತಾ ಬರಲಿದ್ದು, ಇದರಿಂದ ರಾಜ್ಯದ ಜನರಲ್ಲಿ ಆಕ್ರೋಶ ಉದ್ಭವಿಸಲಿದೆ. ಇಂಥ ಸನ್ನಿವೇಶದಲ್ಲಿ ವಿರೋಧ ಪಕ್ಷಗಳು ಆ ಮುಖ್ಯಮಂತ್ರಿಯ ವಿರುದ್ಧ ಯಾವುದೇ ಹೋರಾಟ ಮಾಡುವ ಅಗತ್ಯವೇ ಇಲ್ಲದಂತೆ ಹತ್ತರಿಂದ ಹದಿನಾರು ತಿಂಗಳ ಒಳಗಾಗಿ ಕಾಂಗ್ರೆಸ್ ಸರ್ಕಾರವನ್ನು ವಿಸರ್ಜನೆ ಮಾಡಿ, ಮತ್ತೆ ಚುನಾವಣೆಗೆ ಹೋಗುವ ಸಾಧ್ಯತೆ ಶೇಕಡಾ ತೊಂಬತ್ತೈದರಷ್ಟಿದೆ. ಏಕೆ ಇದನ್ನು ಸಾಧ್ಯತೆ ಅನ್ನಬೇಕಿದೆ ಅಂದರೆ, ಜ್ಯೋತಿಷ್ಯ ರೀತಿಯ ಯೋಗಗಳು ಹೇಗಾದರೂ ತಲೆ ಕಾಯಬಹುದು ಮತ್ತು ಯಾರದೋ ಪುಣ್ಯದ ಅಥವಾ ದೇವತಾ ಅನುಗ್ರಹದಿಂದ ದೊರೆಯ ಸಿಂಹಾಸನವನ್ನು ಗಟ್ಟಿ ಮಾಡಿಡಬಹುದು. ಆದರೆ ಜ್ಯೋತಿಷ್ಯವು ಸನ್ನಿವೇಶ- ಸೂಚನೆಯನ್ನಂತೂ ಖಂಡಿತಾ ನೀಡುತ್ತದೆ.
Sheikh Hasina Horoscope: ಹೊತ್ತಿ ಉರಿಯುತ್ತಿರುವ ಬಾಂಗ್ಲಾದೇಶದಿಂದ ಹೊರಟ ಶೇಖ್ ಹಸೀನಾ ಜಾತಕ ವಿಶ್ಲೇಷಣೆ
ಸಿದ್ದರಾಮಯ್ಯ ಅವರ ಜಾತಕ ಬಹಳ ವಿಚಿತ್ರವಾಗಿದೆ. ಅದನ್ನು ವಿವರಿಸಿ ಹೇಳಿದರೆ ಹೆಚ್ಚಿನ ಪ್ರಯೋಜನ ಏನಿಲ್ಲ. ಏಕೆಂದರೆ, ಅವರ ಜಾತಕದಲ್ಲಿನ ಯೋಗಗಳನ್ನು ತಮ್ಮದೇ ಸ್ವಭಾವದ ಕಾರಣಕ್ಕೆ ಕಳೆದುಕೊಂಡಿರುವುದು ಸಹ ಇದೆ. ಅದೇ ವೇಳೆ ಭಂಡತನದಲ್ಲಿ ಆ ಯೋಗವನ್ನು ಅನುಭವಿಸುವುದಕ್ಕೆ ಶತಪ್ರಯತ್ನ ಪಟ್ಟು, ನಾಲ್ಕು ಗೋಡೆಯ ಮಧ್ಯೆ, ತಮ್ಮದೇ ಕಟ್ಟಾ ಅನುಯಾಯಿಗಳು ಇರುವಾಗ ಅವಮಾನಗಳನ್ನು ನುಂಗಿಕೊಂಡಿರುವುದೂ ಇದೆ. ಆದರೆ ಇದನ್ನು ಜ್ಯೋತಿಷಿಯಾದವರು ಹೇಳಬೇಕೇ ವಿನಾ “ಹೌದಲ್ವೇನ್ರಿ ಸಿದ್ದರಾಮಯ್ಯ” ಎಂದು ಕೇಳುವುದಕ್ಕೆ ಸಾಧ್ಯವಾ? ಅಥವಾ ಅದನ್ನು ಮೀರಿ ಒಂದು ವೇಳೆ ಕೇಳಿದರೂ ಅವರು ಸತ್ಯ ಹೇಳುವಂಥ ಸಾಧ್ಯ ಎಷ್ಟಿದೆ ಎಂಬುದನ್ನು ಕೇಳಿಕೊಳ್ಳಬೇಕಾಗುತ್ತದೆ.
ಸಿದ್ದರಾಮಯ್ಯ ಮಹಾನಿರ್ಗಮನದ ಕಾಲ ಸನ್ನಿಹಿತವಾಗಿದೆ ಎಂದು ಹೇಳುವುದಕ್ಕೆ ಕಾರಣ ಏನೆಂದರೆ, ಗುರು ಗ್ರಹವು ಸಿಂಹಾಂಶದಲ್ಲಿ ಸಂಚರಿಸುವ ಕಾಲ ಇದ್ದು, ಅವರ ಜನ್ಮ ಜಾತಕದ ವಿಶ್ಲೇಷಣೆ ಮಾಡಿದ ಪ್ರಕಾರ ಕನ್ಯಾ ಲಗ್ನ ಆಗುತ್ತದೆ. ಇದಕ್ಕೆ ವ್ಯಯ ಸ್ಥಾನದಲ್ಲಿ ಗುರು ಸಿಂಹಾಂಶದಲ್ಲಿ ಇಂಥದ್ದೊಂದು ಸ್ಥಿತಿಯನ್ನು ತರುತ್ತದೆ. ಇನ್ನು ಜನನ ಕಾಲದಲ್ಲಿ ಸಿದ್ದರಾಮಯ್ಯ ಅವರಿಗೆ ಸಿಂಹ ರಾಶಿಯಲ್ಲಿ ಶನಿ ಸ್ಥಿತವಾಗಿದ್ದು, ಅಲ್ಲಿಂದ ಎಂಟನೇ ಮನೆಗೆ ಮುಂದಿನ ಯುಗಾದಿ ದಿನ ಮೀನ ರಾಶಿಗೆ ಶನಿ ಗ್ರಹದ ಪ್ರವೇಶ ಆಗುತ್ತದೆ. ಇದು ಅಧಿಕಾರ ಹೋಗುವ ಅಥವಾ ತ್ಯಜಿಸುವ ಸಮಯದ ಮುನ್ಸೂಚನೆಯಾಗಿ ಹೇಳಬಹುದಾಗಿದೆ. ಜನ್ಮ ಜಾತಕದ ವಿಶ್ಲೇಷಣೆ ಪ್ರಕಾರವಾಗಿ ಅವರಿಗಿರುವ ಸಾಮರ್ಥ್ಯ ಏನೆಂದರೆ, ತನಗೆ ಬೇಕಾದ ವ್ಯಕ್ತಿಗಳನ್ನು ಉನ್ನತ ಹುದ್ದೆಗೆ ಹಾಗೂ ಆಯಕಟ್ಟಿನ ಜಾಗದಲ್ಲಿ ಕೂರಿಸುವುದಕ್ಕೆ ನಿರ್ಧರಿಸಿದಲ್ಲಿ ಅದನ್ನು ಮಾಡಿಯೇ ತೀರುತ್ತಾರೆ ಹಾಗೂ ರಾಜಕೀಯವಾಗಿ ವ್ಯಕ್ತಿಗಳನ್ನು ಬೆಳೆಸುತ್ತಾರೆ. ಅದಕ್ಕೆ ಬೇಕಾದ ಚಾಣಾಕ್ಷತನ ಸಿದ್ದರಾಮಯ್ಯ ಅವರಲ್ಲಿದೆ.
ಸತೀಶ್ ಜಾರಕಿಹೊಳಿ ಅವರಿಗೆ ಮುಖ್ಯಮಂತ್ರಿ ಗಾದಿ ದೊರೆಯುವ ಸಾಧ್ಯತೆಯನ್ನು ತೆಗೆದು ಹಾಕುವಂತಿಲ್ಲ. ಒಂದು ವೇಳೆ ತುಂಬ ಬದಲಾವಣೆ ಎದುರಾದಲ್ಲಿ ಉಪಮುಖ್ಯಮಂತ್ರಿ ಹುದ್ದೆಯಾದರೂ ಒಲಿಯುವ ಅವಕಾಶಗಳಿವೆ. ಆತ ತುಂಬ ಪ್ರಭಾವಿಯಾಗುವ ಯೋಗ ನಿಚ್ಚಳವಾಗಿದೆ.
ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ ಜಿಲ್ಲೆ)